ಮಡಿಕೇರಿ, ಜೂ. ೮: ರೆಡ್‌ಕ್ರಾಸ್ ಸಂಸ್ಥೆಯಿAದ ರೋಗಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ರಕ್ತನಿಧಿ ಘಟಕವನ್ನು ಸ್ಥಾಪನೆ ಮಾಡಲಾಗುವುದೆಂದು ರೆಡ್‌ಕ್ರಾಸ್ ಜಿಲ್ಲಾ ಸಭಾಪತಿ ರವೀಂದ್ರ ರೈ ಹೇಳಿದರು.
ಕೂರ್ಗ್ ಬ್ಲಡ್ ಫೌಂಡೇಶನ್ ಕರ್ನಾಟಕ ಸಂಸ್ಥೆಯ ಮೊದಲನೇ ವಾರ್ಷಿಕೋತ್ಸವದ ಪ್ರಯುಕ್ತ ಮಡಿಕೇರಿ ಸ್ನೇಹಿತರ ಬಳಗದ ಸಂಯುಕ್ತಾಶ್ರಯದಲ್ಲಿ ನಗರದ ಬಾಲಭವನದಲ್ಲಿ ಆಯೋಜಿಸಲಾಗಿದ್ದ ಬೃಹತ್ ರಕ್ತದಾನ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿ, ರಕ್ತದಾನದಿಂದ ಅದೆಷ್ಟೋ ಜೀವಗಳು ಉಳಿದಿವೆ. ರಕ್ತಕ್ಕೆ ಅಷ್ಟೊಂದು ಮಹತ್ವವಿದ್ದು, ಈ ನಿಟ್ಟಿನಲ್ಲಿ ರಕ್ತನಿಧಿ ಘಟಕ ಸ್ಥಾಪನೆ ಮಾಡುವುದಾಗಿ ರವೀಂದ್ರ ರೈ ನುಡಿದರು.
ಜಿಲ್ಲಾಸ್ಪತ್ರೆಯ ರಕ್ತನಿಧಿ ಘಟಕದ ಮುಖ್ಯಾಧಿಕಾರಿ ಡಾ. ಕರುಂಬಯ್ಯ ಅವರು ಮಾತನಾಡಿ, ರೋಗಿಗಳಿಗೆ ಬೇಕಾಗಿರುವ ರಕ್ತದ ಅವಶ್ಯಕತೆಗನುಗುಣವಾಗಿ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ರಕ್ತನಿಧಿ ಘಟಕಕ್ಕೆ ರಕ್ತವನ್ನು ಸಂಗ್ರಹಿಸಲಾಗುತ್ತದೆ. ರಕ್ತದಾನ ಶಿಬಿರಗಳನ್ನು ನಡೆಸುವ ಸಂಘ ಸಂಸ್ಥೆಗಳಿAದ ರಕ್ತನಿಧಿ ಘಟಕದ ಮೂಲಕ ರೋಗಿಗಳಿಗೆ ಅಗತ್ಯ ರಕ್ತವನ್ನು ಒದಗಿಸಲು ಸಹಕಾರಿಯಾಗಿದೆ ಎಂದು ಹೇಳಿದರು. ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಎ. ಮುರಳೀಧರ್ ಮಾತನಾಡಿ, ಆರೋಗ್ಯ ಸುಸ್ಥಿತಿಯಲ್ಲಿರುವಾಗಲೇ ಪ್ರತಿಯೊಬ್ಬರು ರಕ್ತದಾನದಂತಹ ಪವಿತ್ರ ಕಾರ್ಯಕ್ಕೆ ಮುಂದಾಗಬೇಕು. ಇದರಿಂದ ಆರೋಗ್ಯಕ್ಕೂ ಒಳ್ಳೆಯದು. ಆರೋಗ್ಯ ಹದಗೆಟ್ಟ ನಂತರ ರಕ್ತದಾನ ಮಾಡಲು ಸಾಧ್ಯವಾಗುವುದಿಲ್ಲ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಚಿಂತಿಸಬೇಕೆAದರು. ಕೂರ್ಗ್ ಎಕ್ಸ್ಪ್ರೆಸ್ ಪ್ರಧಾನ ಸಂಪಾದಕ ಶ್ರೀಧರ್ ನೆಲ್ಲಿತ್ತಾಯ ಮಾತನಾಡಿ, ರಕ್ತದಾನ ಎನ್ನುವುದು ದಾನವಲ್ಲ; ಅದೊಂದು ಸಮರ್ಪಣೆ. ಪರೋಪಕಾರ ಗುಣವಿಲ್ಲದೇ ಯಾವುದೇ ಗುಡಿಗಳಿಗೆ ಪ್ರದಕ್ಷಿಣೆ ಹಾಕಿ ಪ್ರಯೋಜನವಿಲ್ಲ ಎಂದ ಅವರು, ಮತ್ತೊಬ್ಬರಿಗೆ ನೆರವಾಗುವ ಗುಣವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳ ಬೇಕೆಂದರು.
ನಗರಸಭಾ ಆಯುಕ್ತ ರಾಮದಾಸ್ ಮಾತನಾಡಿ, ದಾನಗಳಲ್ಲಿ ಮಹಾದಾನ ರಕ್ತದಾನವಾಗಿದ್ದು, ಪ್ರತಿಯೊಬ್ಬರು ರಕ್ತದಾನ ಮಾಡುವಂತಾಗ ಬೇಕೆಂದರಲ್ಲದೆ, ಸ್ವತಃ ಶಿಬಿರದಲ್ಲಿ ಅವರು ರಕ್ತದಾನ ಮಾಡಿದರು. ಕಾರುಣ್ಯ ನಿಧಿ ಚಾರಿಟೇಬಲ್ ಟ್ರಸ್ಟ್ ಪ್ರಮುಖ ಅಬ್ದುಲ್ ಜಲೀಲ್ ಮಾತನಾಡಿ, ರಕ್ತದಾನದ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಿ ಸ್ವಯಂಪ್ರೇರಿತರಾಗಿ ಅವರು ರಕ್ತದಾನ ಮಾಡುವಂತೆ ಪ್ರೇರೇಪಿಸುವ ಕೆಲಸವಾಗಬೇಕೆಂದು ಹೇಳಿದರು.
ಲೇಖಕ ನೌಷಾದ್ ಜನ್ನತ್ ಮಾತನಾಡಿದರು. ಮಡಿಕೇರಿ ಗ್ರಾಮಾಂತರ ಠಾಣಾ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಶಿಬಿರವನ್ನು ಉದ್ಘಾಟಿಸಿ ರಕ್ತದಾನ ಮಾಡಿದರು. ಕೂರ್ಗ್ ಬ್ಲಡ್ ಫೌಂಡೇಶನ್ ಕರ್ನಾಟಕದ ಸಂಸ್ಥಾಪಕ ಸಮೀರ್ ಅಧ್ಯಕ್ಷತೆ ವಹಿಸಿದ್ದರು. ವಿಕ್ರಂ ಶೆಟ್ಟಿ, ಸತೀಶ್ ನಿರೂಪಿಸಿ, ಸಹಲ ಪ್ರಾಸ್ತಾವಿಕ ನುಡಿಯಾಡಿದರು. ಇದೇ ಸಂದರ್ಭ ಮಾನವ ಹಕ್ಕು ಭ್ರಷ್ಟರ ವಿರೋಧಿ ಸಂಘಟನೆಯ ಜಿಲ್ಲಾ ಅಧ್ಯಕ್ಷೆ ರಶ್ಮಿ ಶೆಟ್ಟಿ, ನಗರಸಭೆ ಶಾಲಾ ಮಕ್ಕಳಿಗೆ ಪುಸ್ತಕ, ಕೊಡೆಗಳನ್ನು ವಿತರಿಸಿದರು. ೧೪೭ ಬಾರಿ ರಕ್ತದಾನ ಮಾಡಿರುವ ಬೆಂಗಳೂರಿನ ಪ್ರಭುದೇವ್ ಅವರು ಪ್ರತಿಯೊಬ್ಬರೂ ನಿರಾತಂಕವಾಗಿ ರಕ್ತದಾನ ಮಾಡುವಂತೆಯೂ; ಅದರಿಂದ ಆರೋಗ್ಯಕ್ಕೂ ಒಳಿತಾಗಲಿದೆ ಎಂದು ಹೇಳಿದರು.