ಮಡಿಕೇರಿ, ಜೂ. ೭: ವೀರಾಜಪೇಟೆ ಪಟ್ಟಣ ವ್ಯಾಪ್ತಿಯ ಮಲೆತಿರಿಕೆ ಹಾಗೂ ಅಯ್ಯಪ್ಪ ಬೆಟ್ಟದಲ್ಲಿ ಮನೆ ನಿರ್ಮಿಸಿಕೊಂಡು ವಾಸಿಸುತ್ತಿರುವವರ ಸಮೀಕ್ಷೆ ನಡೆಸುವಂತೆ ವೀರಾಜಪೇಟೆ ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಅವರು ಸೂಚನೆ ನೀಡಿದರು.
ತಾ. ೫ ರಂದು ಶಕ್ತಿ ದಿನಪತ್ರಿಕೆಯಲ್ಲಿ ಮಲೆತಿರಿಕೆ ಬೆಟ್ಟ ನಿವಾಸಿಗಳ ಆತಂಕ ದೂರು ಎಂದು? ಎಂಬ ಶೀರ್ಷಿಕೆಯಡಿ ಪ್ರಕಟಗೊಂಡ ವರದಿಯ ಬಗ್ಗೆ ವೀರಾಜಪೇಟೆಗೆ ಜಿಲ್ಲಾಧಿಕಾರಿ ಭೇಟಿ ನೀಡಿದ ಸಂದರ್ಭ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಬೆಟ್ಟದ ಅಂಚಿನಲ್ಲಿ ವಾಸ ಮಾಡುವುದು ಅಪಾಯಕಾರಿ ಯಾಗಿದ್ದು, ಈ ಹಿನ್ನೆಲೆ ಜಿ.ಎಸ್.ಐ. ವರದಿ ಕೂಡ ನೀಡಿದೆ. ಈ ನಿಟ್ಟಿನಲ್ಲಿ ಅಲ್ಲಿನ ನಿವಾಸಿಗಳ ಸ್ಥಳಾಂತರಿಸಲು ಕ್ರಮ ವಹಿಸುವುದು ಅನಿವಾರ್ಯವಾಗಿದೆ. ಆದರೆ, ಅಧಿಕೃತ ಮನೆಗಳ ಜೊತೆ ಅನಧಿಕೃತವಾಗಿ ಮನೆ ನಿರ್ಮಿಸಿಕೊಂಡವರಿದ್ದಾರೆ. ಇದಕ್ಕಾಗಿ ನಿವಾಸಿಗಳ ಸಮೀಕ್ಷೆ ನಡೆಸಲು ಸೂಚಿಸಿದ್ದೇನೆ ಎಂದು ಜಿಲ್ಲಾಧಿಕಾರಿ ಸತೀಶ ಅವರು ‘ಶಕ್ತಿ’ಗೆ ತಿಳಿಸಿದ್ದಾರೆ.
ಪಟ್ಟಣ ವ್ಯಾಪ್ತಿಯಲ್ಲಿ ನಿವೇಶನ ದರ ಹೆಚ್ಚಿದೆ. ಸರಕಾರದ ಬೆಲೆಗೆ ನಿವೇಶನ ದೊರೆಯುತ್ತಿಲ್ಲ. ಅಲ್ಲಿನವರಿಗೆ ಪುನರ್ವಸತಿ ಕಲ್ಪಿಸುವ ಉದ್ದೇಶದಿಂದ ವರದಿ ತಯಾರಿಸಿ ಸರಕಾರಕ್ಕೆ ಕಳುಹಿಸಲಾಗುವುದು. ನಿವೇಶನ ಪ್ರಕ್ರಿಯೆ ತಡವಾದರು ಇದಕ್ಕೆ ಶಾಶ್ವತ ಪರಿಹಾರಕ್ಕೆ ಕ್ರಮವಹಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಹೊಸದಾಗಿ ಬೆಟ್ಟದಲ್ಲಿ ಮನೆ ನಿರ್ಮಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.