ಸೋಮವಾರಪೇಟೆ,ಜೂ.೬: ಇಲ್ಲಿನ ಮಹಿಳಾ ಸಮಾಜದಲ್ಲಿ ನಡೆಯುತ್ತಿರುವ ಬಸವೇಶ್ವರ ರಸ್ತೆ ಅಂಗನವಾಡಿ ಕೇಂದ್ರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರು, ಕೇಂದ್ರದ ಪುಟಾಣಿ ಮಕ್ಕಳೊಂದಿಗೆ ಊಟ ಸವಿದು ಕೆಲಕಾಲ ಮಕ್ಕಳೊಂದಿಗೆ ಬೆರೆತರು.
ಬಸವೇಶ್ವರ ರಸ್ತೆಯಲ್ಲಿ ಕಾರ್ಯಾಚರಿಸುತ್ತಿದ್ದ ಅಂಗನವಾಡಿ ಕಟ್ಟಡ ಶಿಥಿಲಾವಸ್ಥೆಯಲ್ಲಿ ಇದ್ದುದರಿಂದ ವಾರ್ಡ್ ಸದಸ್ಯ ಮೃತ್ಯುಂಜಯ ಅವರ ಕೋರಿಕೆ ಮೇರೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾಧಿಕಾರಿಗಳ ಸಹಕಾರದಿಂದ ಮಹಿಳಾ ಸಮಾಜಕ್ಕೆ ಸ್ಥಳಾಂತರಿಸಲಾಗಿದ್ದು, ಇಂದು ಶಾಸಕರು ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದರು.
ಶಾಸಕರ ಭೇಟಿ ಹಿನ್ನೆಲೆ ಅಂಗನವಾಡಿ ಕಾರ್ಯಕರ್ತೆಯರು ಪೋಷಣ್ ಅಭಿಯಾನ ಹಾಗೂ ಸೀಮಂತ ಕಾರ್ಯಕ್ರಮವನ್ನೂ ಆಯೋಜಿಸಿದ್ದರು. ಕಾರ್ಯಕ್ರಮ ಮುಗಿಯುವಷ್ಟರಲ್ಲಿ ಊಟದ ಸಮಯವಾಗಿತ್ತು. ಈ ಹಿನ್ನೆಲೆ ಶಾಸಕರು ಕೇಂದ್ರದ ಮಕ್ಕಳಿಗೆ ತಯಾರಿಸಿದ್ದ ಅಡುಗೆಯನ್ನೇ ಊಟ ಮಾಡುವ ಮೂಲಕ ಎಲ್ಲರ ಗಮನ ಸೆಳೆದರು.
ಕೆಲಕಾಲ ಮಕ್ಕಳೊಂದಿಗೆ ಬೆರೆತ ಅಪ್ಪಚ್ಚು ರಂಜನ್ ಅವರು, ಅಂಗನವಾಡಿ ಕೇಂದ್ರದಲ್ಲಿ ಶುಚಿರುಚಿಯಾದ ಆಹಾರ ಲಭಿಸುತ್ತಿದೆ ಎಂದು ಮೆಚ್ಚುಗೆ
(ಮೊದಲ ಪುಟದಿಂದ) ವ್ಯಕ್ತಪಡಿಸಿದರಲ್ಲದೆ, ಮಕ್ಕಳಿಗೆ ನೀಡುವ ಆಹಾರದ ಗುಣಮಟ್ಟವನ್ನು ಪ್ರತಿದಿನ ಕಾಯ್ದುಕೊಳ್ಳಬೇಕು. ಪೌಷ್ಠಿಕಾಂಶಯುಕ್ತ ಆಹಾರವನ್ನೇ ನೀಡಬೇಕು. ಕೇಂದ್ರದಲ್ಲಿ ಶುಚಿತ್ವಕ್ಕೆ ಆದ್ಯತೆ ನೀಡಬೇಕು ಎಂದು ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.
ಈ ಸಂದರ್ಭ ಪ.ಪಂ. ಅಧ್ಯಕ್ಷ ಪಿ.ಕೆ. ಚಂದ್ರು, ವಾರ್ಡ್ ಸದಸ್ಯ ಮೃತ್ಯುಂಜಯ, ಸದಸ್ಯ ಬಿ.ಆರ್. ಮಹೇಶ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅಣ್ಣಯ್ಯ, ಅಂಗನವಾಡಿ ಕಾರ್ಯಕರ್ತೆ ಜಗದಾಂಭ ಸೇರಿದಂತೆ ಇತರರು ಉಪಸ್ಥಿತರಿದ್ದರು.