ಕುಶಾಲನಗರ, ಜೂ. ೬: ಕುಶಾಲನಗರ ತಾಲೂಕು ಕೇಂದ್ರ ಸ್ಥಾನದ ಪಟ್ಟಣ ವ್ಯಾಪ್ತಿಯಲ್ಲಿ ವಾಹನಗಳ ಸಂಚಾರದಟ್ಟಣೆ ಏರಿಕೆಯಿಂದ ಸಂಚಾರ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ಅಪಾಯಕಾರಿಯಾಗಿ ಪರಿಣಮಿಸಿ ರುವುದನ್ನು ಕಾಣಬಹುದು. ಮೈಸೂರು -ಮಡಿಕೇರಿ, ಹಾಸನ- ಮಡಿಕೇರಿ ಸೇರಿದಂತೆ ಅಂತರರಾಜ್ಯ ಸಂಪರ್ಕ ಕಲ್ಪಿಸುವ ಕುಶಾಲನಗರ ಕೇಂದ್ರದ ಮೂಲಕ ನಿತ್ಯ ಸುಮಾರು ಮೂವತ್ತು ಸಾವಿರಕ್ಕೂ ಅಧಿಕ ವಾಹನ ಸಂಚರಿಸುತ್ತಿವೆ. ಈ ನಡುವೆ ಕುಶಾಲನಗರದ ಮೂಲಕ ನೆರೆ ಜಿಲ್ಲೆಗಳು ಹಾಗೂ ನೆರೆ ರಾಜ್ಯಗಳಿಗೆ ಅಂದಾಜು ೫೦೦ಕ್ಕೂ ಅಧಿಕ ಸರಕಾರಿ ಮತ್ತು ಖಾಸಗಿ ಬಸ್ಸುಗಳು ತೆರಳುತ್ತಿವೆ. ಈ ಮೂಲಕ ಸುಮಾರು ೨೫ ಸಾವಿರಕ್ಕೂ ಅಧಿಕ ಪ್ರಯಾಣಿಕರು ಕುಶಾಲನಗರ ಸರ್ಕಾರಿ ಬಸ್ ನಿಲ್ದಾಣದ ಮೂಲಕ ತೆರಳುತ್ತಿರುವು ದಾಗಿ ಅಂಕಿ-ಅAಶಗಳ ಮೂಲಕ ತಿಳಿದು ಬಂದಿದೆ. ರಾಷ್ಟಿçÃಯ ಹೆದ್ದಾರಿ ಪಟ್ಟಣದ ಮೂಲಕ ಹಾದು ಹೋಗುತ್ತಿದ್ದು ಭಾರಿ ಗಾತ್ರದ ವಾಹನಗಳು ಹಗಲು ರಾತ್ರಿ ಕುಶಾಲನಗರ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಸಾಗುತ್ತಿವೆ. ಈ ನಡುವೆ ಪಟ್ಟಣದ ಮೂಲಕ ಓಡಾಡುವ ಜನರು ಮಾತ್ರ ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಹೋಗಬೇಕಾದ ಅಪಾಯಕಾರಿ ಪರಿಸ್ಥಿತಿ ಕೆಲವೊಮ್ಮೆ ಸೃಷ್ಟಿಯಾಗು ತ್ತಿರುವುದನ್ನು ಕಾಣಬಹುದಾಗಿದೆ.

ಸಂಚಾರಿ ದಟ್ಟನೆಯ ಪರಿಸ್ಥಿತಿ ಯನ್ನು ಮನಗಂಡು ಕೊಡಗು ಜಿಲ್ಲಾ ಪೊಲೀಸ್ ಇಲಾಖೆ ಕೆಲವು ವರ್ಷಗಳ ಹಿಂದೆ ಕುಶಾಲನಗರ ಪಟ್ಟಣದಲ್ಲಿ ಸಿಗ್ನಲ್ ಲೈಟ್ ವ್ಯವಸ್ಥೆಯನ್ನು ಕಲ್ಪಿಸಿತ್ತು. ಅಂದಾಜು ರೂ. ೨೫ ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ನಿರ್ಮಾಣಗೊಂಡ ಪಟ್ಟಣದ ಹೃದಯ ಭಾಗದ ಸಂಚಾರಿ ವೃತ್ತದ ಸಿಗ್ನಲ್ ಲೈಟ್ ಎರಡು ವರ್ಷಗಳ ಕಾಲ ಕಾರ್ಯನಿರ್ವಹಿಸಿದರೂ ನಂತರ ಸ್ಥಳೀಯರ ವಿರೋಧದಿಂದ ಅದು ಸ್ಥಗಿತಗೊಂಡಿದೆ ಎಂದು ಹೇಳಲಾಗಿದೆ. ವಾರಾಂತ್ಯದ ದಿನಗಳಲ್ಲಿ ಸಿಗ್ನಲ್ ಲೈಟ್ ಕಾರ್ಯಾಚರಣೆ ಸಂದರ್ಭ ಕಿಲೋಮೀಟರ್ ಉದ್ದಕ್ಕೂ ವಾಹನ ಗಳ ನಿಲುಗಡೆಗೊಂಡು ಸ್ಥಳೀಯ ವ್ಯಾಪಾರಿಗಳ ಸಮಸ್ಯೆ ಉಂಟಾಗುತ್ತದೆ ಎನ್ನುವ ದೂರುಗಳು ಸ್ಥಳೀಯ ಕೆಲವು ಉದ್ಯಮಿಗಳಿಂದ ಕೇಳಿ ಬಂದು ಈ ಬಗ್ಗೆ ಹಿಂದಿನ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಕೂಡ ಸಲ್ಲಿಕೆಯಾಗಿತ್ತು. ಸ್ಥಳೀಯರ ಸಂಚಾರಿ ಮತ್ತು ವ್ಯಾಪಾರ-ವಹಿವಾಟು ವ್ಯವಸ್ಥೆಗೆ ಇದರಿಂದ ಭಾರಿ ತೊಡಕು ಎದುರಾಗುತ್ತಿತ್ತು ಎನ್ನುವ ದೂರುಗಳು ಕೇಳಿ ಬಂದಿದ್ದವು.

ಇದೀಗ ಸಿಗ್ನಲ್ ಲೈಟ್ ಕಾರ್ಯನಿರ್ವಹಿಸದೆ ಕಳೆದ ಎರಡು ವರ್ಷಗಳಿಂದ ಸಂಚಾರಿ ಪೊಲೀಸರು ಹಲವು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದು ಈ ನಡುವೆ ಕುಶಾಲನಗರದಲ್ಲಿ ಓಡಾಡುವ ವಾಹನ ಚಾಲಕರಿಗೆ ಹಾಗೂ ಪಾದಚಾರಿಗಳಿಗೆ ಹೆಚ್ಚಿನ ಸಂಕಷ್ಟ ಉಂಟುಮಾಡಿದೆ. ಪಟ್ಟಣದ ಹೃದಯ ಭಾಗದಲ್ಲಿ ಎಲ್ಲೆಂದರಲ್ಲಿ ವಾಹನ ನಿಲುಗಡೆ, ಕುಶಾಲನಗರ ಗಣಪತಿ ದೇವಾಲಯ, ಸರ್ಕಾರಿ ಬಸ್ ನಿಲ್ದಾಣ ಬಳಿ ಕೆಲವು ಬೀದಿಬದಿ ವ್ಯಾಪಾರಿಗಳು ರಸ್ತೆ ಬದಿಯಲ್ಲಿ ಎಲ್ಲೆಂದರಲ್ಲಿ ವ್ಯಾಪಾರ, ಆಟೋ ರಿಕ್ಷಾಗಳ ಸಂಖ್ಯೆ ಹೆಚ್ಚಳ ಹೃದಯಭಾಗದಲ್ಲಿ ನಿಲುಗಡೆ, ವ್ಯಾಪಾರಸ್ಥರ ವಾಹನಗಳು ಹೆದ್ದಾರಿ ರಸ್ತೆಯಲ್ಲಿ ನಿಲ್ಲೋದು, ಇನ್ನೊಂದೆಡೆ ಖಾಸಗಿ ಬಸ್ಸುಗಳು ಕೂಡ ಹೃದಯಭಾಗದಲ್ಲಿ ಹೆದ್ದಾರಿಯಲ್ಲಿ ನಿಲುಗಡೆ.. ಇವೆಲ್ಲದರಿಂದಾಗಿ ಪಟ್ಟಣದಲ್ಲಿ ಅಪಾಯಕಾರಿ ಸನ್ನಿವೇಶ ಎದುರಾಗುತ್ತಿದೆ ಎನ್ನುವ ಆರೋಪ ನಿತ್ಯ ಕೇಳಿಬರುತ್ತಿದೆ.

ಕುಶಾಲನಗರ ಪಟ್ಟಣದಲ್ಲಿ ಶಾಲೆ-ಕಾಲೇಜುಗಳಿಗೆ ತೆರಳುವ ಸಾವಿರಾರು ವಿದ್ಯಾರ್ಥಿಗಳು ಕೂಡ ಬೆಳಗಿನ ವೇಳೆ ಮತ್ತು ಸಂಜೆ ಸಂಚಾರ ವ್ಯವಸ್ಥೆಯ ಸಮಸ್ಯೆಗೆ ಒಳಗಾಗುವುದು ಸಾಮಾನ್ಯವಾಗಿದೆ. ಪೋಷಕರು ಶಾಲಾ ಕಾಲೇಜಿಗೆ ತಮ್ಮ ಮಕ್ಕಳನ್ನು ಕಳಿಸುವುದು ಅವರನ್ನು ಕರೆದುಕೊಂಡು ಬರುವುದು ತ್ರಾಸದಾಯಕ ಎನ್ನುವುದು ಹಲವು ಪೋಷಕರ ಅಳಲಾಗಿದೆ.

ಈ ಬಗ್ಗೆ ಕುಶಾಲನಗರ ಪೊಲೀಸ್ ವೃತ್ತ ನಿರೀಕ್ಷಕ ಮಹೇಶ್ ಅವರು ಶಕ್ತಿಯೊಂದಿಗೆ ಪ್ರತಿಕ್ರಿಯಿಸಿದ್ದು ಕುಶಾಲನಗರ ಮೂಲಕ ತೆರಳುವ ವಾಹನಗಳ ಸಂಖ್ಯೆ ದಿನೇ ದಿನೇ ಏರುತ್ತಿರುವುದು ಸಹಜ ಸಂಚಾರಿ ಪೊಲೀಸರಿಗೆ ಇದೊಂದು ಕಠಿಣ ಸವಾಲಾಗಿ ಮಾರ್ಪಟ್ಟಿದೆ. ಈ ಬಗ್ಗೆ ಪಟ್ಟಣ ಪಂಚಾಯಿತಿ ಅಧಿಕಾರಿ ಗಳಿಗೂ ಮಾಹಿತಿ ನೀಡಲಾಗಿದೆ. ಆದರೆ ಯಾವುದೇ ಶಾಶ್ವತ ಕ್ರಮ ಕೈಗೊಳ್ಳದ ಕಾರಣ ಪಟ್ಟಣದ ಹೃದಯಭಾಗದಲ್ಲಿ ಸಮರ್ಪಕ ಸಂಚಾರ ವ್ಯವಸ್ಥೆಗೆ ಅಡಚಣೆ ಉಂಟಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ಸಂಚಾರಿ ಪೊಲೀಸರು ನಿಯಮ ಉಲ್ಲಂಘಿಸಿದ ವಾಹನ ಸವಾರರ ಮೇಲೆ ನಿಯಮಾನುಸಾರ ಕ್ರಮ ಕೈಗೊಂಡಾಗ ಸ್ಥಳೀಯ ಕೆಲವು ಪ್ರಮುಖರ ಹಸ್ತಕ್ಷೇಪ ಹಿನ್ನೆಲೆಯಲ್ಲಿ ನಿಯಮಾನುಸಾರ ಕಾನೂನು ಕ್ರಮ ಕೈಗೊಳ್ಳಲು ಅಡ್ಡಿ ಉಂಟಾಗುತ್ತಿದೆ ಎಂದು ಅವರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಮರ್ಪಕ ಸಂಚಾರಿ ವ್ಯವಸ್ಥೆಯ ಬಗ್ಗೆ ಕುಶಾಲನಗರ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಹಲವು ಬಾರಿ ಪೊಲೀಸ್ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿದರೂ ಕುಶಾಲನಗರ ಸಂಚಾರ ರಸ್ತೆಗೆ ಯಾವುದೇ ಶಾಶ್ವತ ಪರಿಹಾರ ಇನ್ನೂ ಲಭ್ಯವಾಗಿಲ್ಲ. ಕುಶಾಲನಗರ ಪಟ್ಟಣದಲ್ಲಿ ನಿರ್ಮಾಣಗೊಂಡಿರುವ ಬಹುತೇಕ ವಸತಿಗೃಹಗಳು ಬೃಹತ್ ವಾಣಿಜ್ಯ ಕಟ್ಟಡಗಳಿಗೆ ವಾಹನ ನಿಲುಗಡೆ ವ್ಯವಸ್ಥೆಗೆ ಸ್ಥಳವಕಾಶ ಇಲ್ಲದೆ ಬಹುತೇಕ ಪ್ರವಾಸಿಗರು ತಮ್ಮ ವಾಹನಗಳನ್ನು ಹೆದ್ದಾರಿ ರಸ್ತೆಯಲ್ಲಿ ನಿಲುಗಡೆಗೊಳಿ ಸುತ್ತಿರುವುದು ನಿತ್ಯ ಕಂಡುಬರುವ ದೃಶ್ಯವಾಗಿದೆ. ಇದರಿಂದ ಹೆದ್ದಾರಿ ರಸ್ತೆಯ ಸಂಚಾರ ವ್ಯವಸ್ಥೆಗೆ ತೊಡಕು ಉಂಟಾಗುತ್ತಿದ್ದು ಆಗಾಗ ಹೆದ್ದಾರಿಯಲ್ಲಿ ವಾಹನಗಳು ಕಿಲೋಮೀಟರ್ ಗಟ್ಟಲೆ ಉದ್ದಕ್ಕೆ ನಿಲುಗಡೆಗೊಳ್ಳುತ್ತಿರುವುದು ವಾರಾಂತ್ಯದ ಸಾಮಾನ್ಯ ವಿಷಯ ವಾಗಿದೆ. ಕುಶಾಲನಗರ ಪಟ್ಟಣ ಹೊರವಲಯದಲ್ಲಿ ಆದಷ್ಟು ಬೇಗನೆ ಹೊರವರ್ತುಲ ರಸ್ತೆ ನಿರ್ಮಾಣ ಯೋಜನೆ ರೂಪಿಸುವುದು ಒಳಿತು ಎನ್ನುವುದು ಹಲವರ ವಾದವಾಗಿದೆ.

ಈ ಬಗ್ಗೆ ಆದಷ್ಟು ಬೇಗನೆ ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿ ಸಭೆ ಕರೆದು ಸಂಚಾರಿ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸಲು ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಸದ್ಯದಲ್ಲಿಯೇ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಜೈವರ್ಧನ್ ಪ್ರತಿಕ್ರಿಯಿಸಿದ್ದಾರೆ. ಪಟ್ಟಣದ ಮೂಲಕ ಹಾದು ಹೋಗುವ ಹೆದ್ದಾರಿ ಅಗಲೀಕರಣ ಅಥವಾ ಹೊರ ವರ್ತುಲ ರಸ್ತೆ ನಿರ್ಮಾಣ ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲು ಸಾಧ್ಯ ಎಂದು ಸ್ಥಳೀಯ ವಾಹನ ಮಾಲೀಕರು ಅಭಿ ಪ್ರಾಯ ವ್ಯಕ್ತಪಡಿಸಿ ದ್ದಾರೆ.

-ಚಂದ್ರಮೋಹನ್