*ಗೋಣಿಕೊಪ್ಪ, ಜೂ. ೫: ಮನುಷ್ಯನ ಬದುಕಿಗೆ ನೀರು ಅಮೂಲ್ಯವಾದದ್ದು. ಅದನ್ನು ಮಿತವಾಗಿ ಬಳಸಿ ನೀರನ್ನು ಉಳಿಸುವ ಪ್ರಯತ್ನಕ್ಕೆ ಪ್ರತಿಯೊಬ್ಬರು ಮುಂದಾಗಬೇಕು ಎಂದು ರಾಜ್ಯ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷ, ಶಾಸಕ ಕೆ.ಜಿ. ಬೋಪಯ್ಯ ಕರೆ ನೀಡಿದರು.
ಹಾತೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಕುಡಿಯುವ ನೀರು ಟ್ಯಾಂಕ್ ನಿರ್ಮಾಣದ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಪ್ರಕೃತಿಯ ವ್ಯತ್ಯಾಸದಿಂದ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಮುಂದಿನ ಪೀಳಿಗೆಗೆ ನೀರನ್ನು ಉಳಿಸುವ ಪ್ರಯತ್ನ ನಡೆಯಬೇಕಾಗಿದೆ. ಪಂಚಾಯಿತಿ ವ್ಯಾಪ್ತಿಯಲ್ಲಿ ೧ ಕೋಟಿ ೮೨ ಲಕ್ಷ ಅನುದಾನದಲ್ಲಿ ಜಲ್ಜೀವನ್ ಯೋಜನೆ ಅನುಷ್ಠಾನಗೊಳಿಸ ಲಾಗುತ್ತಿದೆ. ಈಚೂರು ಗ್ರಾಮದಲ್ಲಿ ೪೩.೫೨ ಲಕ್ಷದಲ್ಲಿ ೮೬ ಮನೆಗಳಿಗೆ ೨೦೦೦ ಲೀ. ಟ್ಯಾಂಕ್ ನಿರ್ಮಿಸಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡುವುದರ ಜೊತೆಗೆ ಕುಂದ ಗ್ರಾಮದಲ್ಲಿ ೪೯.೫೮ ಲಕ್ಷದಲ್ಲಿ ೫೧ ಮನೆಗಳಿಗೆ ೩೨೦೦ ಮೀ. ಪೈಪ್ಲೈನ್ಗಳನ್ನು ಅಳವಡಿಸಿ ಮನೆ ಮನೆಗೆ ನಲ್ಲಿ ಸಂಪರ್ಕವನ್ನು ಒದಗಿಸಲಾಗುತ್ತಿದೆ.
ಅದೇ ರೀತಿಯಲ್ಲಿ ಕೊಳತೋಡು -ಬೈಗೋಡು ಗ್ರಾಮದಲ್ಲಿ ರೂ. ೩೬.೧೮ ಲಕ್ಷ ವೆಚ್ಚದಲ್ಲಿ ೯೫ ಮನೆಗಳಿಗೆ ಮತ್ತು ಹಾತೂರು ಗ್ರಾಮದಲ್ಲಿ ೫೨.೯೨ ಲಕ್ಷ ಅನುದಾನದಲ್ಲಿ ೧೬೦ ಮನೆಗಳಿಗೆ ಯೋಜನೆಯನ್ನು ಸಮರ್ಪಕವಾಗಿ ತಲುಪಿಸುವ ವ್ಯವಸ್ಥೆ ಮೊದಲ ಹಂತವಾಗಿ ನಡೆಯುತ್ತಿವೆೆ ಎಂದು ತಿಳಿಸಿದರು.
ತಾಲೂಕು ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಪ್ಪಂಡ ಗಿರಿಪೂವಣ್ಣ, ಸದಸ್ಯರಾದ ಗುಮ್ಮಟೀರ ದರ್ಶನ್, ಮುರುವಂಡ ಕುಟ್ಟಪ್ಪ, ಜಿ.ಪಂ. ಇಂಜಿನಿಯರ್ ಮಹಾದೇವ್, ಜಲ್ಜೀವನ್ ಯೋಜನೆ ಇಂಜಿನಿಯರ್ ಯೋಗೇಶ್ಗೌಡ, ಸಹಾಯಕ ಇಂಜಿನಿಯರ್ ಸುನೀಲ್, ಶಾಸಕರ ಆಪ್ತ ಕಾರ್ಯದರ್ಶಿ ಮಲ್ಲಂಗಡ ಮಧುದೇವಯ್ಯ ಇದ್ದರು.