ಕೊಡಗಿನ ಅತೀ ವಿಶಿಷ್ಟ ದೈವಿಕ ಕ್ಷೇತ್ರಗಳಲ್ಲಿ ತಲಕಾವೇರಿ - ಭಾಗಮಂಡಲ ಕ್ಷೇತ್ರವು ಮುಂಚೂಣಿಯಲ್ಲಿ ನಿಲ್ಲುತ್ತದೆ. ಕೊಡಗಿನ ಆದಿದೈವ ಅಲ್ಲದೆ ಕೊಡವರ ಕುಲದೇವರು ಎಂಬುದಾಗಿ ಅಗ್ರಪೂಜಿತಳಾದ ಕಾವೇರಿಯ ಮಹಾತ್ಮೆಯ ಬಗ್ಗೆ ‘ಶಕ್ತಿ’ಯ ಪ್ರಧಾನ ಸಂಪಾದಕರಾದ ಜಿ. ರಾಜೇಂದ್ರ ಅವರು ಪತ್ರಿಕೆಯಲ್ಲಿ ಹಲವು ವಾರಗಳಿಂದ ತಮ್ಮ ಲೇಖನಗಳನ್ನು ಪ್ರಕಟಿಸಿ ಜಿಲ್ಲೆಯ ಜನತೆಯ ಕಣ್ಣುತೆರೆಸುವ ಕೆಲಸವನ್ನು ಮಾಡುತ್ತಿರುವುದೇ ಅಲ್ಲದೇ ಹಲವು ಭಕ್ತರ ನಂಬಿಕೆಯ ನುಡಿಗಳನ್ನೂ ಅಳವಡಿಸಿಕೊಂಡು ಕಾವೇರಿಯ ಮಹಾತ್ಮೆಯನ್ನು ಜಗಜ್ಜಾಹೀರುಗೊಳಿಸುವಲ್ಲಿ ನಿರತರಾಗಿದ್ದಾರೆ. ಈ ಒಂದು ವಿಷಯದಲ್ಲಿ ಅವರು ನಿಜಕ್ಕೂ ಸ್ತುತ್ಸಾರ್ಹರು.

ಕೊಡಗು ಬಿಟ್ಟರೆ ಕಾವೇರಿ ಇಲ್ಲ - ಕಾವೇರಿ ಬಿಟ್ಟರೆ ಕೊಡಗಿಲ್ಲ ಎಂಬ ಮಾತಂತೂ ನಿತ್ಯನೂತನ ಎಂದರೆ ತಪ್ಪಾಗಲಾರದು. ಜಿಲ್ಲೆಯ ಜನತೆಯ ದೈವಿಕ ನಂಬಿಕೆಗೆ ಕಿಂಚಿತ್ತೂ ಚ್ಯುತಿ ಬಾರದಂತೆ ಆ ತಾಯಿ ನಂಬಿದ ಭಕ್ತರನ್ನು ಸಲಹುತ್ತಿರುವುದರಲ್ಲಿ ಎಳ್ಳಷ್ಟೂ ಸಂಶಯಕ್ಕೆ ಎಡೆಯಿಲ್ಲ. ಕಾಲಕ್ಕೆ ಸರಿಯಾಗಿ ಮಳೆ - ಬೆಳೆ ನೀಡಿ, ಆಶ್ರಯ ನೀಡಿ, ಹಾರೈಸಿ ತನ್ನ ಭಕ್ತರನ್ನು ಕಾಯುತ್ತಿರುವುದಂತೂ ನಿತ್ಯಸತ್ಯ ಎಂಬುದರಲ್ಲಿ ಅತಿಶಯೋಕ್ತಿ ಅಂತೂ ಇಲ್ಲವೇ ಇಲ್ಲ.

ಇಂತಹ ಒಂದು ಶ್ರೇಷ್ಠವಾದ ಧಾರ್ಮಿಕ ಕ್ಷೇತ್ರದಲ್ಲಿ ಇಂದಿಗೂ ಅನೇಕ ನ್ಯೂನತೆಗಳು, ಗೊಂದಲಗಳು ಮುಂದುವರಿಯುತ್ತಲೇ ಇದೆ ಎಂಬುದನ್ನು ಅವಲೋಕಿಸಿದಾಗ ನಾವು ಹುಲು ಮಾನವರು ಆ ತಾಯಿಗೆ ಅದೇಕೆ ಅನ್ಯಾಯವನ್ನು ಮಾಡುತ್ತಿದ್ದೇವೆ ಎಂಬುದು ಮನನೋಯಿಸುತ್ತಿದೆ. ಇದೀಗ ಭಾಗಮಂಡಲ ಹಾಗೂ ತಲಕಾವೇರಿ ಕ್ಷೇತ್ರಗಳಲ್ಲಿ ಒಂದಷ್ಟು ಧಾರ್ಮಿಕ ಆಚರಣೆಗಳು, ಹಿಡಕಟ್ಟುಗಳು ಹಿಂದಿನ ರೀತಿಯಲ್ಲಿ ಆಚರಣೆಯಲ್ಲಿ ಇಲ್ಲ ಎಂಬುದು ನೋವಿನ ವಿಚಾರವಾಗಿ ಕಂಡುಬರುತ್ತಿದೆ. ಭಾಗಮಂಡಲ ಕ್ಷೇತ್ರಕ್ಕೆ ಬಂದಾಗ, ಅಭಿವೃದ್ಧಿಯ ಹೆಸರಿನಲ್ಲಿ ಸಾಕಷ್ಟು ಕಟ್ಟಡಗಳನ್ನು ಗೊತ್ತುಗುರಿ ಇಲ್ಲದೇ ಕಟ್ಟಿ ಇದೀಗ ಅದನ್ನು ಪಾಳುಬಿಟ್ಟಿರುವುದು ಕಂಡಾಗ ನೋವುಂಟು ಮಾಡುತ್ತದೆ. ಕೇಶಮುಂಡನಕ್ಕಾಗಿ ದೊಡ್ಡದೊಂದು ಕಟ್ಟಡವನ್ನು ಕೋಟಿ ರೂಪಾಯಿಗಳ ವೆಚ್ಚದಲ್ಲಿ ಈ ಹಿಂದೆ ಕಟ್ಟಿದ್ದು, ಇದೀಗ ಹಾಳು ಕೊಂಪೆಯAತೆ ಕ್ಷೇತ್ರವನ್ನು ಅಂದಗೆಡಿಸುವAತೆ ಭಾಸವಾಗುತ್ತಿದೆ. ಶುಚಿತ್ವ ಎಂಬುದು ಅಲ್ಲಿ ಪೂರ್ತಿಯಾಗಿ ಕಾಣೆಯಾಗಿದೆ. ಸಂಬAಧಪಟ್ಟವರಾಗಲೀ ಯಾ ಪಂಚಾಯಿತಿಯವರಾಗಲೀ ಅದರ ಬಗ್ಗೆ ಕಾಳಜಿ ವಹಿಸಿರುವಂತೆ ಗೋಚರವಾಗುತ್ತಿಲ್ಲ! ಕ್ಷೇತ್ರದ ಪ್ರವೇಶ ದ್ವಾರದಲ್ಲೇ ಸಿಗುವ ಆ ಅಂದಗೆಟ್ಟ ಕಟ್ಟಡ ಇದೀಗ ಪವಿತ್ರ ಕ್ಷೇತ್ರಕ್ಕೊಂದು ‘ಕಪ್ಪುಬೊಟ್ಟು’ ಅನ್ನುವಂತೆ ಭಾಸವಾಗುತ್ತಲಿದೆ.

ಅಂತೆಯೇ ಕ್ಷೇತ್ರದಲ್ಲಿ ನಿರ್ಮಾಣವಾಗಿರುವ ಶೌಚಾಲಯಗಳು ಸರಿಯಾದ ನಿರ್ವಹಣೆ ಇಲ್ಲದೆ ಅಶುಚಿತ್ವ ತಾಂಡವವಾಡುತ್ತಲಿದೆ. ಇದೂ ಕೂಡ ಧಾರ್ಮಿಕ ಕ್ಷೇತ್ರಕ್ಕೊಂದು ‘ಐಬು’ ಎಂದರೆ ತಪ್ಪಾಗಲಾರದು. ಸಂಬAಧಪಟ್ಟವರು ಈ ಬಗ್ಗೆ ವಿಶೇಷ ಕಾಳಜಿವಹಿಸಬೇಕಾದುದು ಸೂಕ್ತ. ಕೇಶಮುಂಡನ, ಪಿಂಡ ಪ್ರಧಾನ ಮತ್ತು ಸ್ಥಳೀಯರ ನಂಬಿಕೆಯ ಕೆಲವು ವಿಧಿವಿಧಾನಗಳನ್ನು ನೆರವೇರಿಸಲು ಇದೀಗ ಹೊಳೆಯ ಒಂದೇ ಕಡೆ ಕ್ರಮ ಕೈಗೊಂಡಿರುವುದು ನಿಜಕ್ಕೂ ಸ್ತುತ್ಯಾರ್ಹ ಕ್ರಮ. ಇರುವುದರಲ್ಲಿ ಈ ಕಡೆಗಳಲ್ಲಿ ಸಾಕಷ್ಟು ಶುಚಿತ್ವವನ್ನು ಕಾಪಾಡಿಕೊಂಡಿರುವುದು ನಿಜಕ್ಕೂ ಪ್ರಶಂಸನೀಯ ಎನ್ನುವಂತಿದೆ.

ಭಕ್ತರಿಗಿAತ ಪ್ರವಾಸಿಗರೇ ಅಧಿಕ

ಕ್ಷೇತ್ರಕ್ಕೆ ಭೇಟಿ ನೀಡುವವರಲ್ಲಿ ಇದೀಗ ಭಕ್ತಗಣಕ್ಕಿಂತ ಪ್ರವಾಸಿಗರೇ ಅಧಿಕ ಎಂಬುದು ಇತ್ತೀಚೆಗೆ ಧಾರ್ಮಿಕ ಕಾರ್ಯಗಳಿಗಾಗಿ ಅಲ್ಲಿಗೆ ಭೇಟಿ ನೀಡಿದ ನನಗೆ ಆದ ಅನುಭವ. ಶೇ. ೯೫ ರಷ್ಟು ಮಂದಿಯೂ ಬರೇ ಪ್ರವಾಸಿಗರೆ ಆಗಿದ್ದರು. ಕ್ಷೇತ್ರದ ಆಚಾರ, ವಿಚಾರ, ವಿಧಿ-ವಿಧಾನಗಳ ಗಂಧ - ಗಾಳಿಯೂ ಅರಿಯದೇ ಬೇಕಾಬಿಟ್ಟಿ ನಡೆದುಕೊಳ್ಳುತ್ತಿದ್ದುದು ಮನಸ್ಸಿಗೆ ಖೇದವನ್ನುಂಟು ಮಾಡುತ್ತಿತ್ತು. ಕಪಿಚೇಷ್ಟೆಗಳಲ್ಲಿ ನಿರತರಾಗಿದ್ದ ತಮ್ಮ ಮಕ್ಕಳನ್ನು ನಿಯಂತ್ರಿಸದೇ ಅವರಿಗೆ ಇನ್ನಷ್ಟು ಇಂಬು ನೀಡುತ್ತಿದ್ದ ಪೋಷಕರನ್ನು ಕಂಡಾಗ ಮನಸ್ಸಿಗೆ ಬೇಸರವಾಗಿ ಅಯ್ಯೋ ಅನ್ನುವಂತ ಅನುಭವ ನನ್ನದಾಗಿತ್ತು. ಅಂತೆಯೇ ಇಲ್ಲಿಗೆ ಭೇಟಿ ನೀಡುವ ಸ್ಥಳೀಯ ಭಕ್ತರಿಗೂ ಆಗುತ್ತಿರುವುದು ಸಹಿಸಲಸದಳ. ಇದೆಲ್ಲವನ್ನೂ ಒಡನೇ ನಿಯಂತ್ರಣಕ್ಕೆ ತರಬೇಕಾದ ಅಗತ್ಯವಂತೂ ಇದೆ.

ಮಳೆಗಾಲದಲ್ಲಿ ಆಗುತ್ತಿರುವ ತೊಂದರೆ ತಾಪತ್ರಯಗಳನ್ನು ಪರಿಗಣಿಸಿ ಅಲ್ಲೀಗ ಮೇಲುಸೇತುವೆಯ ನಿರ್ಮಾಣ ಜರೂರಾಗಿತ್ತು ಎಂದು ಭಾವಿಸಿದರೂ, ಕಾಮಗಾರಿ ಮಾತ್ರ ಹಲವು ವರ್ಷಗಳಿಂದ ಕುಂಟುತ್ತಲೇ ಸಾಗುತ್ತಿರುವುದು ವಿಪರ್ಯಾಸವೇ ಸರಿ. ಹಲವು ವರ್ಷಗಳಿಂದ ಅದರ ಸಂಕಷ್ಟವನ್ನು ಅನುಭವಿಸುತ್ತಲೇ ಬಂದಿರುವ ಸ್ಥಳೀಯರು ಹಾಗೂ ಭಕ್ತ ಜನರು ಇನ್ನೂ ಕನಿಷ್ಟವೆಂದರೂ ಎರಡು ವರ್ಷಗಳ ಕಾಲ ಅದನ್ನು ಅನುಭವಿಸಲೇ ಬೇಕಾಗಿದೆ ಎನ್ನುವಂತೆ ಗೋಚರವಾಗುತ್ತಲಿದೆ. ಸದ್ಯದಮಟ್ಟಿಗೆ ಕ್ಷೇತ್ರದಲ್ಲಿ ಶುಚಿತ್ವ ಎನ್ನುವುದು ಕನಸಿನ ಮಾತೇ ಸರಿ. ಕೆಸರು ಮತ್ತು ಧೂಳಿನಾಟ ಇದೀಗ ಅಲ್ಲೀಗ ಜನರು ಅನುಭವಿಸುತ್ತಿರುವ ‘ಸಂಕಷ್ಟ’ ಎಂದರೆ ತಪ್ಪಾಗಲಾರದು.

ಇದು ಕ್ಷೇತ್ರದ ಹೊರ ಆವರಣದ ನೋಟವಾದರೆ, ಒಳ ಆವರಣದಲ್ಲಿ ಎಲ್ಲಾ ದೇವಾಲಯಗಳಲ್ಲಿಯೂ ದೈವಿಕ ಕಾರ್ಯಗಳು ಸುಲಲಿತವಾಗಿ ನಡೆಯುತ್ತಿರುವುದು ಮೆಚ್ಚತಕ್ಕ ವಿಚಾರ. ಅಂತೆಯೇ ಶುದ್ಧ ಮುದ್ರಿಕೆಗೆ ಆಸಕ್ತಿವಹಿಸಿ, ಕಟ್ಟಡಗಳನ್ನು ಸಾಕಷ್ಟು ದುರಸ್ತಿಗೊಳಿಸಿ ಅರ್ಚಕರು ನಂಬಿಬAದ ಭಕ್ತರ ಅಭಿಷ್ಟದಂತೆ ಪೂಜಾ ಕಾರ್ಯಗಳನ್ನು ನಡೆಸಿಕೊಡುತ್ತಿರುವುದು ಸ್ತುತ್ಯಾರ್ಹವೇ ಸರಿ. ಆದರೆ ಇಲ್ಲಿಯೂ ಹಲವಷ್ಟು ಪ್ರವಾಸಿಗರು ಸ್ಥಳೀಯ ಆಚರಣೆಗೆ ತದ್ವಿರುದ್ಧವಾಗಿ ನಡೆದುಕೊಂಡು ಅರ್ಚಕರಿಗೆ ಕಿರಿಕಿರಿಯನ್ನುಂಟು ಮಾಡುತ್ತಿರುವುದು ಗೋಚರವಾಯಿತು. ದೈವ ನೆಲೆಗಳಲ್ಲಿ ಹೇಗೆ ನಡೆದುಕೊಳ್ಳಬೇಕೆಂಬುದೂ ಅರಿಯದ ಆ ಮಂದಿ ಅದ್ಯಾವ ಉಮೇದಿನಿಂದ ಇಂತಹ ಪವಿತ್ರ ಕ್ಷೇತ್ರಗಳಿಗೆ ಭೇಟಿ ನೀಡುತ್ತಾರೋ ತಿಳಿಯದಾಗಿದೆ. ಇಂತಹವರನ್ನು ನಿಯಂತ್ರಿಸಲು ಕ್ಷೇತ್ರದಲ್ಲಿ ಸಾಕಷ್ಟು ಭದ್ರತಾ ಸಿಬ್ಬಂದಿಯ ಕೊರತೆ ಇರುವುದು ಎದ್ದುಕಾಣುವಂತಿದೆ.

ಧಾರ್ಮಿಕ ವಿಧಾನಗಳಿಗೆ ಆದ್ಯೆತೆಯಿರಲಿ

ಕಾವೇರಿ ಮಾತೆಯ ಉಗಮಸ್ಥಾನ ತಲಕಾವೇರಿಯಲ್ಲಂತೂ ಇದೀಗ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿದೆ ಮತ್ತು ನಡೆಯುತ್ತಲೇ ಇದೆ. ಅಂತೆಯೇ ಭಾಗಮಂಡಲದಿAದ ಕ್ಷೇತ್ರಕ್ಕೆ ತೆರಳುವ ರಸ್ತೆಯನ್ನು ಸಾಕಷ್ಟು ಉತ್ತಮ ರೀತಿಯಲ್ಲಿ ನಿರ್ವಹಿಸುತ್ತಿರುವುದು ನಿಜಕ್ಕೂ ಮೆಚ್ಚತಕ್ಕ ವಿಚಾರ.

ಕುಟುಂಬದ ಹಿರಿಯರೊಬ್ಬರು ವಿಧಿವಶರಾದ್ದರಿಂದ ನಮ್ಮಲ್ಲಿನ ಸಂಪ್ರದಾಯದAತೆ ಕೆಲವೊಂದು ಸಾಂಪ್ರದಾಯಿಕ ವಿಧಿವಿಧಾನಗಳನ್ನು ನೆರವೇರಿಸಲು ವಾರಾಂತ್ಯದ ‘ಕಪಿಸೈನ್ಯ’ದಿಂದ ಕಷ್ಟಸಾಧ್ಯ ಎಂಬುದನ್ನು ಅರಿತು ವಾರದ ಗುರುವಾರದಂದು ಕ್ಷೇತ್ರಕ್ಕೆ ತೆರಳಿದರೂ ಅಪಾರವಾಗಿ ನೆರೆದಿದ್ದ ಕಪಿಸೈನ್ಯವನ್ನು ಎದುರಿಸಿದ ‘ಕಹಿಸತ್ಯ’ವನ್ನು ಓದುಗರೊಂದಿಗೆ ಹಂಚಿಕೊಳ್ಳುವ ಸಲುವಾಗಿ ಈ ಲೇಖನವನ್ನು ನಿಮ್ಮೆದುರಿಗೆ ಇಟ್ಟಿದ್ದೇನೆ. ಭಾಗಮಂಡಲದಲ್ಲಿ ಕಂಡುಬಾರದಷ್ಟು ಅಪಾರ ಜನಜಂಗುಳಿ ತಲಕಾವೇರಿಯಲ್ಲಿ ಗೋಚರವಾಯಿತು. ಕಾಲಿಡಲೂ ಜಾಗ ಇಲ್ಲದಂತೆ ಜನಜಾತ್ರೆಯೇ ಮೆರೆದಿತ್ತು. ‘ಚಿಳ್ಳೆ ಪಿಳ್ಳೆ’ಗಳಂತೂ ಎಲ್ಲೆಂದರಲ್ಲಿ ಕುಣಿದು ಕುಪ್ಪಳಿಸುತ್ತಿದ್ದವು. ಪ್ರವೇಶದಲ್ಲಿಯೇ ಇದೊಂದು ಧಾರ್ಮಿಕ ಕ್ಷೇತ್ರ, ಪವಿತ್ರ ತಾಣ ಎಂಬ ಅನುಭವ ಆಗದಂತೆ ಭಾಸವಾಯಿತು. ವಾಹನ ನಿಲ್ಲಿಸಲಂತೂ ಪರದಾಟವೇ ನಡೆಸಬೇಕಾಯಿತು. ಪ್ರವಾಸಿಗರೊಂದಿಗೆ ಕೆಲವೊಂದುಗಳಿಗೆ ಜಗಳಕ್ಕೂ ನಿಲ್ಲಬೇಕಾದ ಕಹಿ ಅನುಭವ ನನಗಾಯಿತು! ಅಲ್ಲಿದ್ದ ಇಬ್ಬರು ಪೊಲೀಸರಲ್ಲಿ ವಿಷಯ ತಿಳಿಸಿದಾಗ ಯಾವುದೇ ಪ್ರಯೋಜನವೂ ಆಗಲಿಲ್ಲ! ‘ಅಯ್ಯೋ ದಿನಾ ಇದೇ ಪ್ರಾರಾಬ್ಧ ಸಾರ್’ ಎನ್ನುವುದು ಅವರ ಉತ್ತರವಾಗಿತ್ತು. ಬರೀ ಕಂದು ವರ್ಣದ (ಙeಟಟoತಿ ಃoಚಿಡಿಜ) ನಂಬರ್ ಪ್ಲೇಟಿನ ಟ್ಯಾಕ್ಸಿಗಳಿಂದ ನಿಲ್ದಾಣ ತುಂಬಿಹೋಗಿತ್ತು ಮತ್ತು ಕೆಳಗಿನಿಂದ ಇನ್ನು ಸಾಲುಗಟ್ಟಿ ಬರುತ್ತಲೇ ಇದ್ದವು! ನಾವುಗಳು ಬಂದ ಕಾರ್ಯಗಳನ್ನು ನೆರವೇರಿಸಲು ಒಳ ತೆರಳಬೇಕಾದರೆ ತುಂಬಾ ಪ್ರಯಾಸವನ್ನೇ ಪಡಬೇಕಾಯಿತು. ಬೋಳು ತಲೆಯ ನಮ್ಮನ್ನು ಕಂಡಾಗ ಅದ್ಯಾವುದೋ ಅನ್ಯಲೋಕದ ಪ್ರಾಣಿಗಳನ್ನು ಕಂಡAತೆ ನಮ್ಮತ್ತ ನೋಟ ಬೀರುತ್ತಲಿದ್ದರು! ಅವರೆಲ್ಲರ ವರ್ತನೆಯಂತೆ ಅದು ನಿಜಕ್ಕೂ ಪವಿತ್ರ ತೀರ್ಥಕ್ಷೇತ್ರ ಆಗಿರಲಿಲ್ಲ! ಅದೊಂದು ಪ್ರವಾಸೀ ಕೇಂದ್ರ ಎಂತಲೇ ಅವರೆಲ್ಲಾ ತಿಳಿದುಕೊಂಡAತೆ ಇತ್ತು! ಧಾರ್ಮಿಕ ಕ್ಷೇತ್ರದ ನೀತಿ ನಿಯಮಗಳೆಲ್ಲಾ ಗಾಳಿಗೆ ತೂರಿಹೋದಂತೆ ಭಾಸವಾಗುತ್ತಲಿತ್ತು. ಕಣ್ಣು ಹಾಯಿಸಿದಲ್ಲೆಲ್ಲಾ ಫೋಟೋ ಕ್ಲಿಕ್ಕಿಸುವರೆ, ಸೆಲ್ಫಿ ಹೊಡೆಯುವವರೆ ತುಂಬಿ ಹೋಗಿದ್ದರು. ನಡೆಯಲು ಆಸ್ಪದ ಇಲ್ಲದಂತೆ ಮೆಟ್ಟಿಲುಗಳ ಮೇಲೆಲ್ಲಾ ಪ್ರವಾಸಿ ಮಂದಿ ಆಸೀನರಾಗಿ ಬಿಟ್ಟಿದ್ದರು. ವಾರದ ಸಂತೆ ನಡೆಯುತ್ತಿದೆ ಏನೋ ಎಂಬAತೆ ಪವಿತ್ರ ಕ್ಷೇತ್ರ ಗಿಜಿಗುಡುತ್ತಿತ್ತು. ನಿಶಬ್ಧತೆಯನ್ನು ಕಾಪಾಡಬೇಕಾದ ಆ ಪವಿತ್ರ ಕ್ಷೇತ್ರದಲ್ಲಿ ಮಾತಿನ ಭರಾಟೆ, ಕೂಗಾಟ, ಓಡಾಟ, ಹೆಗ್ಗಿಲ್ಲದೆ ನಡೆಯುತ್ತಿತ್ತು. ಅವರನ್ನು ನಿಯಂತ್ರಿಸುವಲ್ಲಿ ಅಲ್ಲಿದ್ದ ಭದ್ರತಾ ಸಿಬ್ಬಂದಿ ಸೋತಂತೆ ಎದ್ದು ಕಾಣುತ್ತಿತ್ತು. ಪಾಪ ಬೆರಳೆಣಿಕೆಯಷ್ಟಿದ್ದ ಅವರು ತಾನೇ ಆ ಮಂಗನಾಟದ ಮಂದಿಯ ಮುಂದೆ ಏನು ಮಾಡಿಯಾರು? ಇದ್ದುದರಲ್ಲಿ ಪವಿತ್ರ ಕೊಳಕ್ಕೆ ಇಳಿಯದಂತೆ ಪ್ರವಾಸಿಗರನ್ನು ನಿಯಂತ್ರಿಸಿರುವುದAತೂ ಪ್ರಶಂಸನೀಯ. ಅದಕ್ಕೂ ಆಸ್ಪದ ಕಲ್ಪಿಸಿದ್ದರೆ ಕೊಳದ ಪರಿಸ್ಥಿತಿ ಅಯೋಮಯ ಆಗುತ್ತಿದ್ದುದರಲ್ಲಿ ಸಂಶಯವಿಲ್ಲ. ಅಷ್ಟಕ್ಕೂ ನಾವು ನಮ್ಮ ಧಾರ್ಮಿಕ ವಿಧಿವಿಧಾನ ಪವಿತ್ರ ಸ್ನಾನಕ್ಕಾಗಿ ಕೊಳಕ್ಕೆ ಇಳಿದಾಗ ಮೇಲೆ ಸುತ್ತನಿಂತ ಪ್ರವಾಸಿಗರ ಫೋಟೋ ಶೂಟ್ ಎಗ್ಗಿಲ್ಲದೇ ನಡೆಯುತ್ತಿದ್ದುದು ‘ಮುಜುಗರದ’ ವಿಚಾರ ಎನ್ನುವಂತೆ ಭಾಸವಾಗುತ್ತಲಿತ್ತು.

ಪವಿತ್ರ ಕೊಳಕ್ಕೆ ಪ್ರವಾಸಿಗರಿಗೆ ಪ್ರವೇಶ ಇಲ್ಲದಿದ್ದರೂ ಕೆಲವೊಂದು ಮಂದಿ ಸಿಕ್ಕ ‘ಸೆರೆ’ಯಲ್ಲಿ ತಮ್ಮ ‘ಪವಿತ್ರಪಾದ’ಗಳನ್ನು ತೊಳೆಯಲು ಪ್ರಯತ್ನಿಸಿ ಭದ್ರತಾ ಸಿಬ್ಬಂದಿಯಿAದ ‘ಬೈಗುಳ’ವನ್ನು ತಿನ್ನಲೂ ಹಿಂಜರಿಯದ ಮಂದಿಯ ಬಗ್ಗೆ ಕನಿಕರ ಪಡಬೇಕೋ, ತೆಗಳಬೇಕೋ ತಿಳಿಯದಾಗಿದೆ! ಅಷ್ಟಕ್ಕೂ ನಾವು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲು ಪವಿತ್ರ ಕ್ಷೇತ್ರಕ್ಕೆ ತೆರಳಿದವರು ಪ್ರವಾಸಿ ಜನರ ಮುಂದೆ ನಗೆಪಾಟಲಿಗೆ ಈಡಾಗ ಬೇಕಾದಂತೆಯೇ ಭಾಸವಾಗುತ್ತಿರುವುದಂತೂ ಸಹಿಸಲಾರದ ‘ಕಟುಸತ್ಯ’ದಂತೆ ಭಾಸವಾಗುವುದಂತೂ ಕಠೋರ ಸತ್ಯ!

ಕೊಡಗಿನ ಜನತೆಯ ಧಾರ್ಮಿಕ ಭಾವನೆಯ ಈ ಪುಣ್ಯ ಕ್ಷೇತ್ರಕ್ಕೆ ಈ ದುರ್ವಿಧಿ ಏಕೆ ಬಂತು ಎಂದು ಆಲೋಚಿಸಿದರೆ ‘ಖೇದಕರ’ ವೆನ್ನಿಸುತ್ತದೆ. ಪವಿತ್ರ ಕ್ಷೇತ್ರವೊಂದನ್ನು ಪ್ರವಾಸಿ ತಾಣವನ್ನಾಗಿ ಭೂಪಟದಲ್ಲಿ ಗುರುತಿಸಿದರೆ ಯಾವ ದುರ್ಗತಿ ಬರುತ್ತದೆ ಎಂಬುದಕ್ಕೆ ತಲಕಾವೇರಿ ಕ್ಷೇತ್ರ ‘ಜ್ವಲಂತ’ ಸಾಕ್ಷಿ ಎನ್ನುವಂತಿದೆ. ಹಲವು ರೀತಿಯಲ್ಲಿ ಇದನ್ನು ಖಂಡಿಸಿದರೂ ಅದು ಹಾಗೆಯೇ ಮುಂದುವರಿಸುತ್ತಿರುವುದು ಸರಿಯಲ್ಲ. ಇದನ್ನು ಪ್ರವಾಸೀ ಭೂಪಟದಿಂದ ತೆರವುಗೊಳಿಸಲೇ ಬೇಕಾಗಿದೆ. ಇಲ್ಲದಿದ್ದರೆ ಈ ಪವಿತ್ರ ಕ್ಷೇತ್ರ ಇನ್ನಷ್ಟು ನರಕಸದೃಶ್ಯವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಹಿಂದೊAದು ದಿನ ಕಾವೇರಿ ತಾಯಿ ತನ್ನ ಮುನಿಸನ್ನು ಹೊರಹಾಕಿ ಮುನ್ನೆಚ್ಚರಿಕೆಯನ್ನು ನೀಡಿದ್ದಾಗಿದೆ. ನಾವು ಇನ್ನೂ ಎಚ್ಚೆತ್ತುಕೊಳ್ಳದಿದ್ದಲ್ಲಿ ಮುಂದೊAದು ದಿನ ಆ ಮಾತೆ ಇನ್ನಷ್ಟು ಕಠೋರ ರೀತಿಯಲ್ಲಿ ನಮ್ಮನ್ನು ಶಿಕ್ಷಿಸುವುದರಲ್ಲಿ ಯಾವುದೇ ಸಂಶಯವಿಲ್ಲ ಎಂಬುದಾಗಿ ಗೋಚರವಾಗುತ್ತಲಿದೆ. ಕೈಮೀರಿ ಹೋಗುವ ಮುನ್ನ ನಾವೆಲ್ಲ ಎಚ್ಚೆತ್ತುಕೊಳ್ಳುವುದು ಒಳಿತು ಎಂಬುದು ನನ್ನ ಮನಸ್ಸಿನ ಭಾವನೆಯಾಗಿದೆ. ಬೆರಳೆಣಿಕೆಯ ಕೆಲವೊಂದು ವ್ಯಾಪಾರೀ ಮನೋಭಾವದ ಸ್ಥಳೀಯ ಮಂದಿ ಪ್ರವಾಸಿಗರ ಹಣದ ಹೊಳೆಯ ಮೋಹಕ್ಕೆ ಬಲಿಯಾಗಿ ಇಂತದಕ್ಕೆಲ್ಲಾ ಇಂಬು ನೀಡುತ್ತಿರುವುದಂತೂ ಸತ್ಯ. ಆದರೆ ಪವಿತ್ರ ಧಾರ್ಮಿಕ ಕ್ಷೇತ್ರವೊಂದನ್ನು ಈ ರೀತಿ ವ್ಯಾಪಾರೀ ಕೇಂದ್ರವನ್ನಾಗಿ ಪರಿವರ್ತಿಸುತ್ತಿದ್ದರೆ ಅದರ ಪ್ರತಿಫಲವಂತೂ ಭವಿಷ್ಯದಲ್ಲಿ ‘ಕಟ್ಟಿಟ್ಟಬುತ್ತಿ’ ಎಂಬುದನ್ನು ಆ ಅಮಾಯಕ ಮಂದಿ ಅರಿತು ನಡೆಯುವುದು ಸರ್ವರಿಗೂ ಒಳಿತು ಎಂಬುದರಲ್ಲಿ ಎಳ್ಳಷ್ಟು ಸಂಶಯವಿಲ್ಲ.

ಸುಧಾರಣೆ ಅಗತ್ಯ

ಧಾರ್ಮಿಕ ವಿಧಿವಿಧಾನಗಳನ್ನು ನಡೆಸಲು ಬರುವ ‘ನೈಜಭಕ್ತರ’ ಹಿತದೃಷ್ಟಿಯಿಂದ ಜಿಲ್ಲಾಡಳಿತ ಮತ್ತು ಸಂಬAಧಪಟ್ಟವರು ಕ್ಷೇತ್ರದಲ್ಲಿ ಕೆಲವೊಂದು ಸುಧಾರಣಾ ವ್ಯವಸ್ಥೆಗಳನ್ನು ಕೈಗೊಳ್ಳಬೇಕಾದ ಅತೀ ಅನಿವಾರ್ಯತೆ ಇದೀಗ ಎದ್ದು ಕಾಣುತ್ತಲಿದೆ. ಪ್ರವಾಸಿ ವಾಹನಗಳನ್ನು ಕ್ಷೇತ್ರದ ಮುಖ್ಯ ದ್ವಾರದವರೆಗೆ ತೆರಳಲು ಬಿಡುವುದನ್ನು ನಿಯಂತ್ರಿಸಲೇ ಬೇಕಾಗಿದೆ. ದೈವಿಕ ಕೈಂಕರ್ಯಗಳನ್ನು ನಡೆಸಲು ಬರುವ ‘ನೈಜಭಕ್ತರನ್ನು’ ಗುರುತಿಸಿ ಅವರ ವಾಹನಗಳನ್ನು ನಿಲುಗಡೆಗೊಳಿಸಲು ತುರ್ತು ಕ್ರಮ ಜರುಗಿಸಬೇಕಾಗಿದೆ. ನಿಲ್ಲಿಸಿದ ವಾಹನಗಳನ್ನು ಅನಿಯಂತ್ರಿತ ಸಮಯದವರೆಗೆ ಬೇಕಾಬಿಟ್ಟಿ ನಿಲ್ಲುವುದನ್ನು ನಿಯಂತ್ರಿಸಬೇಕಾಗಿದೆ. ಇದೀಗ ‘ಗಣ್ಯರಿಗೆ’ ಎಂಬುದಾಗಿ ಮೀಸಲಾಗಿ ಇಟ್ಟಿರುವ ವಾಹನ ನಿಲುಗಡೆ ಪ್ರದೇಶದ ಪಕ್ಕದಲ್ಲೇ ಕನಿಷ್ಟ ಐದು ಅಥವಾ ಹತ್ತು ನೈಜ ಭಕ್ತರ ವಾಹನಗಳನ್ನು ಗುರುತಿಸಿ ನಿಲುಗಡೆಗೊಳಿಸಲು ಕ್ರಮ ಕೈಗೊಳ್ಳುವುದು ಒಳಿತು. ಅದಕ್ಕೂ ಸಮಯ ನಿಗದಿಗೊಳಿಸಿದರೆ ಖಂಡಿತವಾಗಿಯೂ ನೈಜ ಭಕ್ತರು ಸೂಕ್ತ ಸಮಯದಲ್ಲಿ ತಮ್ಮ ಪೂಜಾ ವಿಧಿವಿಧಾನಗಳನ್ನು ಮುಗಿಸಿ ಹಿಂತೆರಳುವುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ ಎಂಬುದು ನನ್ನ ಭಾವನೆ. ಸೂಕ್ತ ಭದ್ರತಾ ಸಿಬ್ಬಂದಿಯ ಸಂಖ್ಯೆಯನ್ನAತೂ ಹೆಚ್ಚಿಸಲೇ ಬೇಕಾಗಿದೆ.

ಕ್ಷೇತ್ರವನ್ನು ಮುಜರಾಯಿ ಇಲಾಖೆ ಎಂಬ ‘ಕದಂಬ ಬಾಹು’ವಿನಿಂದ ಮುಕ್ತಗೊಳಿಸಿ ಸ್ಥಳೀಯರನ್ನೊಳಗೊಂಡ ಸ್ಥಾನೀಯ ಸಮಿತಿಯ ಸುಪರ್ದಿಗೆ ವಹಿಸಬೇಕಾಗಿದೆ. ಯಾತ್ರಿಕರ ನಿಯಂತ್ರಣಕ್ಕೆ ಎಲ್ಲಾ ಸೂಕ್ತ ಕ್ರಮಗಳನ್ನು ಜರುಗಿಸಬೇಕಾದ ಅನಿವಾರ್ಯತೆ ಎದ್ದು ಕಾಣುತ್ತಿದೆ. ವ್ಯವಸ್ಥಾಪನಾ ಸಮಿತಿಯಲ್ಲಿ ರಾಜಕೀಯ, ಜಾತೀಯತೆಯ ಗಂಧ-ಗಾಳಿ ಬೀಸದಂತೆ ನಿಗಾವಹಿಸಿ ಕೇವಲ ಕ್ಷೇತ್ರದ ಹಿತರಕ್ಷಣೆಯೊಂದೇ ಮುಖ್ಯ ಎನ್ನುವಂತೆ ನಡೆದುಕೊಳ್ಳಬೇಕಾದ ಅನಿವಾರ್ಯತೆ ಸಂಬAಧಪಟ್ಟವರದ್ದಾಗಬೇಕಾಗಿದೆ. ಸ್ಥಳೀಯರಿಗೆ ಮತ್ತು ಅತೀ ಪಕ್ಕದವರಿಗೆ ಸ್ಥಾನಮಾನ ನೀಡುವುದು ಉತ್ತಮ.

ಎಲ್ಲವೂ ಒಳಿತಾಗಲಿ. ಎಲ್ಲರಿಗೂ ಒಳಿತಾಗಿ, ತಾಯಿ ಕಾವೇರಿ ಸರ್ವರನ್ನೂ ಹರಸಲಿ ಎಂಬುದಾಗಿ ಹಾರೈಸೋಣ.

- ಸಣ್ಣುವಂಡ ವಿಶ್ವನಾಥ್, ಮಾಯಮುಡಿ, ಮೊ. ೯೯೮೦೨೭೬೭೨೪