ಚಿತ್ರ, ವರದಿ: ಎ.ಎನ್. ವಾಸು ಸಿದ್ದಾಪುರ, ಜೂ. ೫: ಮಾನವನ ಮೇಲೆ ಹಾಗೂ ತೋಟಗಳ ಮೇಲೆ ದಾಳಿ ನಡೆಸಿ ಫಸಲು ನಾಶ ಮಾಡುತ್ತಿದ್ದ ಒಂಟಿ ಸಲಗವನ್ನು ಸೆರೆ ಹಿಡಿಯುವಲ್ಲಿ ಕೊನೆಗೂ ಅರಣ್ಯ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಸಿದ್ದಾಪುರ ಸಮೀಪದ ಬೀಟಿಕಾಡು ಕಾಫಿ ತೋಟದಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳ ಹಿಂಡಿನ ಪೈಕಿ ಉಪಟಳ ನೀಡುತ್ತಿದ್ದ ಅಂದಾಜು ೨೨ ವರ್ಷ ಪ್ರಾಯದ ಒಂಟಿ ಸಲಗವನ್ನು ತಾ. ೫ ರಂದು ಅರಣ್ಯ ಇಲಾಖಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಸೆರೆಹಿಡಿದರು. ಸಿದ್ದಾಪುರ ಸುತ್ತಮುತ್ತಲ ಪ್ರದೇಶದ ಕಾಫಿ ತೋಟದಲ್ಲಿ ಕಾಡಾನೆಗಳು ಬೀಡುಬಿಟ್ಟು ದಾಂಧಲೆ ನಡೆಸುತ್ತಾ, ಕೃಷಿ ಫಸಲುಗಳನ್ನು ನಾಶಗೊಳಿಸುತ್ತಿತ್ತು. ಅದಲ್ಲದೇ ಬಿ.ಬಿ.ಟಿ.ಸಿ ಸಂಸ್ಥೆಯ ಕಾಫಿ ಕಣದಲ್ಲಿ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೋರ್ವನ ಮೇಲೆ ಇದೇ ಒಂಟಿ ಸಲಗ ದಾಳಿ ನಡೆಸಿ ಕೊಂದುಹಾಕಿತ್ತು. ನಿರಂತರ ಕಾಡಾನೆ ದಾಳಿಯಿಂದ ಬೇಸತ್ತಿದ್ದ ಗ್ರಾಮಸ್ಥರು ಕಾಡಾನೆ ಸೆರೆಗೆ ಒತ್ತಾಯ ಮಾಡಿದ್ದರು.
ಇತ್ತೀಚೆಗೆ ಜಿಲ್ಲೆಯಲ್ಲಿ ೫ ಕಾಡಾನೆಯನ್ನು ಸೆರೆಹಿಡಿಯಲು ಅನುಮತಿ ದೊರೆತಿತ್ತು, ಈ ಹಿನ್ನೆಲೆ ಸಿದ್ದಾಪುರ ಭಾಗದಲ್ಲಿ ಉಪಟಳ ನೀಡುತ್ತಿದ್ದ ಸಲಗವೊಂದನ್ನು ಸೆರೆಹಿಡಿ ಯಲು ಕಳೆದ ಎರಡು ದಿನಗಳಿಂದ ಅರಣ್ಯ ಇಲಾಖೆಯ ಸಿಬ್ಬಂದಿಗಳು ಕಾರ್ಯಾಚರಣೆಗೆ ಮುಂದಾದರು. ಆದರೆ
(ಮೊದಲ ಪುಟದಿಂದ) ಶನಿವಾರದಂದು ಕಾಣಿಸಿಕೊಂಡ ಪುಂಡಾನೆ ಕಾಫಿ ತೋಟದ ಒಳಗೆ ನುಸುಳಿ ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಸುತ್ತಾಡಿಸುತ್ತಾ, ಕಾರ್ಯಾಚರಣೆ ತಂಡವನ್ನು ಸುಸ್ತುಗೊಳಿಸಿತ್ತು. ಶನಿವಾರ ಸಂಜೆಯವರೆಗೆ ಕಾರ್ಯಾಚರಣೆ ನಡೆಸಿದ ತಂಡಕ್ಕೆ ಆನೆ ಕಾಣಿಸಿಕೊಂಡರೂ, ಅರವಳಿಕೆ ಪ್ರಯೋಗಿಸಲು ಸಾಧ್ಯವಾಗಿರಲಿಲ್ಲ.
ಭಾನುವಾರದಂದು ಬೆಳಿಗ್ಗೆ ೭ ಗಂಟೆಗೆ ಕಾರ್ಯಾಚರಣೆಗಿಳಿದ ತಂಡ ಸಾಕಾನೆಗಳಾದ ಅಭಿಮನ್ಯು, ಅರ್ಜುನ, ಪ್ರಶಾಂತ್, ಅಜಯ್, ಧನಂಜಯ ನೆರವಿನೊಂದಿಗೆ ಸಿದ್ದಾಪುರ ಸಮೀಪದ ಬೀಟಿಕಾಡು ಕಾಫಿ ತೋಟದಿಂದ ಕಾರ್ಯಾಚರಣೆ ಪ್ರಾರಂಭಿಸಿದರು. ಆದರೆ ಸೆರೆಹಿಡಿಯಲು ಗುರುತಿಸಿದ್ದ ಸಲಗವು ಕಾರ್ಯಾಚರಣೆ ತಂಡದ ಹಾದಿ ತಪ್ಪಿಸುತ್ತಾ, ಕಾಫಿ ತೋಟದ ಒಳಗೆ ಸುತ್ತಾಡಿಸುತ್ತಿತ್ತು. ಮಧ್ಯಾಹ್ನ ಸುಮಾರು ೧ ಗಂಟೆಯ ವೇಳೆಗೆ ಬೀಟಿಕಾಡು ತೋಟಿಕಾಡು ತೋಟದಲ್ಲಿ ಪುಂಡಾನೆ ಗೋಚರಿಸಿತು. ಅರಣ್ಯ ವೈದ್ಯಾಧಿಕಾರಿ ಡಾ. ಮುಜೀಬ್ ಹಾಗೂ ಶೂಟರ್ ಅಕ್ರಂ ಪುಂಡಾನೆಗೆ ಅರವಳಿಕೆ ಪ್ರಯೋಗಿಸುವಲ್ಲಿ ಯಶಸ್ವಿಯಾದರು.
ಚುಚ್ಚುಮದ್ದು ತಗುಲಿದ ಸಲಗವು ಸುಮಾರು ದೂರದ ತನಕ ಓಡಿದೆ. ನಂತರ ಆಲಿತೋಪು ಕಾಫಿ ತೋಟದಲ್ಲಿ ಕುಸಿದಿದೆ. ಕೂಡಲೇ ಎಚ್ಚೆತ್ತುಕೊಂಡ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಸೆರೆಯಾದ ಪುಂಡಾನೆಯನ್ನು ಸಾಕಾನೆಗಳ ಸಹಾಯದಿಂದ ಹಗ್ಗಗಳಿಂದ ಕಟ್ಟಿಹಾಕಿ ಬಳಿಕ ತಲೆಗೆ ನೀರು ಸುರಿದರು. ಬಳಿಕ ಸಾಕಾನೆಗಳ ನೆರವಿನಿಂದ ಮೇಲಕ್ಕೆ ತರಲು ಸಾಕಷ್ಟು ಪ್ರಯತ್ನ ನಡೆಸಲಾಯಿತು. ಆದರೆ ಸಲಗವು ಕಾಫಿ ತೋಟದಿಂದ ಬರಲು ಹಿಂದೇಟು ಹಾಕುತ್ತಿದ್ದ ವೇಳೆ ಅಭಿಮನ್ಯು ಸಾಕಾನೆ ದಂತದಿAದ ಪುಂಡಾನೆಯನ್ನು ದೂಡಿ ಮುಂದಕ್ಕೆ ಸಾಗಿಸಿತು. ಅರ್ಜುನ ಕೂಡ ಇದಕ್ಕೆ ಸಾಥ್ ನೀಡಿತು. ಬಳಿಕ ಐದು ಕಾಡಾನೆಗಳ ಸಹಕಾರದಿಂದ ಪುಂಡಾನೆಯನ್ನು ಕರೆತಂದು ಬಳಿಕ ಕ್ರೇನ್ ಮೂಲಕ ಲಾರಿಗೆ ಹತ್ತಿಸಲಾಯಿತು. ನಂತರ ಪುಂಡಾನೆಯನ್ನು ಬಂಡೀಪುರ ಸಾಕಾನೆ ಶಿಬಿರಕ್ಕೆ ಸಾಗಿಸಲಾಯಿತು.
ಕಳೆದ ಒಂದು ವಾರದಿಂದ ಚೆಯ್ಯಂಡಾಣೆ ಗ್ರಾಮದಲ್ಲಿ ಎರಡು ಕಾಡಾನೆಗಳನ್ನು ಹಿಡಿದು, ಇದಾದ ಬಳಿಕ ಸಿದ್ದಾಪುರದಲ್ಲಿ ಕಳೆದ ಎರಡು ದಿನಗಳಿಂದ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು, ಆರ್.ಆರ್.ಟಿ ಸಿಬ್ಬಂದಿಗಳು ಸುಸ್ತಾದರು.
ಕಾರ್ಯಾಚರಣೆಯ ಸಂದರ್ಭ ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎನ್. ಮೂರ್ತಿ, ವೀರಾಜಪೇಟೆ ತಾಲೂಕು ಡಿ.ಸಿ.ಎಫ್. ಚಕ್ರಪಾಣಿ, ಎ.ಸಿ.ಎಫ್. ಕೋಣೇರಿರ ರೋಶಿನಿ, ವಲಯ ಅರಣ್ಯಾಧಿಕಾರಿ ಕಳ್ಳೀರ ದೇವಯ್ಯ, ಉಪವಲಯ ಅರಣ್ಯಾಧಿಕಾರಿಗಳಾದ ಸಂಜೀತ್ ಸೋಮಯ್ಯ, ಕನ್ನಂಡ ರಂಜನ್, ಅರುಣ್, ಹೆರಾಳ್ಡ್, ಅರಣ್ಯ ವೈದ್ಯಾಧಿಕಾರಿ ಡಾ. ಮುಜೀಬ್, ಶೂಟರ್ ಅಕ್ರಂ, ಪಶು ವೈದ್ಯಾಧಿಕಾರಿ ಡಾ. ತಮ್ಮಯ್ಯ, ಡಾ. ಚಿಟ್ಟಿಯಪ್ಪ, ಠಾಣಾಧಿಕಾರಿ ಮೋಹನ್ ರಾಜ್ ಸೇರಿದಂತೆ ಸಿಬ್ಬಂದಿಗಳು ಭಾಗವಹಿಸಿದ್ದರು.