ಗೋಣಿಕೊಪ್ಪಲು, ಜೂ. ೪: ದ .ಕೊಡಗಿನ ಬಿ.ಶೆಟ್ಟಿಗೇರಿ ಭಾಗದಲ್ಲಿ ಹುಲಿ ಸೆರೆಗೆ ಕಾರ್ಯಾಚರಣೆ ನಡೆಸುತ್ತಿರುವ ಅರಣ್ಯ ಇಲಾಖೆ ತಂಡಕ್ಕೆ ಹುಲಿಯ ದರ್ಶನವಾಗುತ್ತಿಲ್ಲ. ಜಿಲ್ಲೆಗೆ ಆಗಮಿಸಿದ ನೂತನ ಅರಣ್ಯ ಸಂರಕ್ಷಣಾಧಿಕಾರಿ ಮೂರ್ತಿ ಅವರು ಹುಲಿಯನ್ನು ಸೆರೆ ಹಿಡಿಯಲು ವಿನೂತನ ಪ್ರಯತ್ನ ನಡೆಸಿದ್ದರು.

ತಾವೇ ಖುದ್ದಾಗಿ ಬಿ.ಶೆಟ್ಟಿಗೇರಿ ಭಾಗದ ಕಂಡೆಮನೆ ಸ್ಥಳಕ್ಕೆ ತೆರಳಿ ಹಲವು ಸಮಯದಿಂದ ಗ್ರಾಮಸ್ಥರನ್ನು ಬೆಚ್ಚಿ ಬೀಳಿಸಿ ರೈತರ ಜಾನುವಾರುಗಳನ್ನು ಭಕ್ಷಿಸುತ್ತಿದ್ದ ಹುಲಿಯನ್ನು ಸೆರೆ ಹಿಡಿಯಲು ಅಟ್ಟಣಿಗೆ ಕಟ್ಟಿ ಇದರಲ್ಲಿ ನುರಿತ ಮೈಸೂರಿನ ಮೃಗಾಲಯದ ವೈದ್ಯರನ್ನು ಹಾಗೂ ದುಬಾರೆಯಿಂದ ಶೂರ‍್ಸ್ಗಳನ್ನು ಕರೆಸಿ ಹುಲಿ ಸೆರೆಗೆ ಸರ್ವ ಪ್ರಯತ್ನ ನಡೆಸಿದ್ದರು. ಆದರೆ ಕಾರ್ಯಾಚರಣೆ ಸ್ಥಳದಲ್ಲಿ ಹುಲಿ ಮಾತ್ರ ಬರಲೇ ಇಲ್ಲ. ಇದರಿಂದ ಸಹಜವಾಗಿಯೇ ಹಗಲು ರಾತ್ರಿ ಎನ್ನದೆ ಕಾರ್ಯಾಚರಣೆಯಲ್ಲಿ ತೊಡಗಿದ್ದ ಸಿಬ್ಬಂದಿಗಳಿಗೆ ನಿರಾಸೆ ಉಂಟಾಗಿದೆ.

ಈ ಭಾಗದಲ್ಲಿ ಕಳೆದ ಮೂರು ದಿನಗಳಿಂದ ಹುಲಿಯ ಸಂಚಾರದ ಬಗ್ಗೆ ಯಾವುದೇ ಮಾಹಿತಿ ಇನ್ನೂ ಕೂಡ ತಂಡಕ್ಕೆ ಸಿಕ್ಕಿಲ್ಲ ಹಾಗೂ ರೈತರ ಜಾನುವಾರುಗಳ ಮೇಲೆ ದಾಳಿ ನಡೆಸಿದ ಬಗ್ಗೆ ವರದಿ ಆಗಿಲ್ಲ. ಆದರೂ ಸಂಜೆಯ ವೇಳೆಯಲ್ಲಿ ನುರಿತ ವೈದ್ಯರು ಹಾಗೂ ಶೂರ‍್ಸ್ಗಳು ಸಿಸಿಎಫ್ ಬಿ.ಎನ್. ಮೂರ್ತಿ, ಇವರ ಮಾರ್ಗದರ್ಶನ ಮೇರೆ ಅಟ್ಟಣಿಗೆಯಲ್ಲಿ ಕುಳಿತು ಹುಲಿಯ ಆಗಮನದ ನಿರೀಕ್ಷೆಯಲ್ಲಿದ್ದಾರೆ. ಮೈಸೂರಿನ ಚಾಮರಾಜೇಂದ್ರ ಮೃಗಾಲಯದ ವೈದ್ಯರಾದ ಡಾ. ಪ್ರಶಾಂತ್ ಹಾಗೂ ದುಬಾರೆಯ ಶೂರ‍್ಸ್ ರಂಜನ್, ತಿತಿಮತಿ ಆರ್‌ಎಫ್‌ಓ ಅಶೋಕ್ ಹುನಗುಂದ, ಪೊನ್ನಂಪೇಟೆಯ ದಿವಾಕರ್ ಹಾಗೂ ಇತರ ಸಿಬ್ಬಂದಿಗಳು ಸ್ಥಳದಲ್ಲಿ ಮೊಖಂ ಮಾಡಿದ್ದಾರೆ.

ಈ ಭಾಗದಲ್ಲಿ ಹುಲಿಯ ಸಂಚಾರ ಹೆಚ್ಚಿರುವುದು ಅನೇಕ ನಿದರ್ಶನಗಳಿಂದ ಕಂಡು ಬಂದಿವೆ. ಗ್ರಾಮದ ರೈತರ ಜಾನುವಾರುಗಳು ಹುಲಿಯ ಬಾಯಿಗೆ ಆಹಾರವಾಗುತ್ತಿವೆ. ಇಲಾಖೆ ನೀಡುವ ಪರಿಹಾರ ಏನೇನೂ ಸಾಲದು, ಹುಲಿಯನ್ನು ಸೆರೆ ಹಿಡಿಯಲು ಇಲಾಖೆ ಸಿಬ್ಬಂದಿಗಳು ಹೆಚ್ಚಿನ ಶ್ರಮ ವಹಿಸಬೇಕು. ಮುಂದೆ ಈ ಭಾಗದಲ್ಲಿ ಯಾವುದೇ ರೈತರ ಜಾನುವಾರುಗಳ ಹಾಗೂ ಮಾನವನಿಗೆ ಹಾನಿ ಆಗದಂತೆ ಇಲಾಖೆ ಕ್ರಮಕೈಗೊಳ್ಳಬೇಕು ಎಂದು ಕುಟ್ಟಂದಿಯ ರೈತ ಮುಖಂಡ ಚೇರಂಡ ಜಗನ್ ಒತ್ತಾಯಿಸಿದ್ದಾರೆ. -ಹೆಚ್.ಕೆ. ಜಗದೀಶ್