ಕುಶಾಲನಗರ, ಜೂ. ೪: ಶ್ರೀ ವಾಸವಿ ಕನ್ನಿಕಾ ಪರಮೇಶ್ವರಿ ಅಮ್ಮನವರ ಪುರಮೆರವಣಿಗೆ ನಡೆಯುವುದರೊಂದಿಗೆ ಕಳೆದ ನಾಲ್ಕು ದಿನಗಳಿಂದ ಅದ್ಧೂರಿಯಾಗಿ ನಡೆಯುತ್ತಿದ್ದ ಕುಶಾಲನಗರ ವಾಸವಿ ಕನ್ನಿಕಾ ಪರಮೇಶ್ವರಿ ಟ್ರಸ್ಟ್ ಪ್ರತಿಷ್ಠಾಪನಾ ಅಮೃತಮಹೋತ್ಸವ ಕುಂಭಾಭಿಷೇಕ ಸಮಾರಂಭ ತೆರೆಕಂಡಿತು. ಶನಿವಾರ ದೇವಾಲಯದಲ್ಲಿ ಎಲ್ಲ ದೇವರುಗಳಿಗೆ ಪಂಚಾಮೃತ ಅಭಿಷೇಕ, ಪ್ರಧಾನ ಮೂಲ ಮಂತ್ರ ಹೋಮ, ದೇವರಿಗೆ ಕಲಶಾಭಿಷೇಕ ಮತ್ತು ಕುಂಭಾಭಿಷೇಕ ಮಹಾಪೂಜೆ ನಂತರ ಸಂಜೆ ವೇಳೆಗೆ ಪುರ ಮೆರವಣಿಗೆಗೆ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ ಪಿ ಅಪ್ಪಚ್ಚು ರಂಜನ್ ಕಾಯಿ ಒಡೆಯುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭ ವಿಧಾನಪರಿಷತ್ ಸದಸ್ಯ ಡಿ.ಎಸ್. ಅರುಣ್ ಅವರು ಅಮ್ಮನವರ ಮೆರವಣಿಗೆಗೆ ಶುಭ ಕೋರಿದರು.
ಈ ಸಂದರ್ಭ ಮಾತನಾಡಿದ ಕ್ಷೇತ್ರದ ಶಾಸಕರಾದ ರಂಜನ್, ಕಳೆದ ೭೫ ಸಂವತ್ಸರಗಳನ್ನು ದಾಟಿಬಂದ ವಾಸವಿ ಕನ್ನಿಕಾಪರಮೇಶ್ವರಿ ಟ್ರಸ್ಟ್ ಮತ್ತು ಆರ್ಯವೈಶ್ಯ ಮಂಡಳಿ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
(ಮೊದಲ ಪುಟದಿಂದ) ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಪಟ್ಟಣ ಮತ್ತು ನಾಡಿಗೆ ಏಳಿಗೆಯಾಗಲಿ ಎಂದು ಶುಭ ಹಾರೈಸಿದರು. ಪ್ರಾರಂಭದಲ್ಲಿ ಶಾಸಕ ರಂಜನ್ ದೇವಾಲಯದಲ್ಲಿ ಪೂಜೆಯಲ್ಲಿ ಪಾಲ್ಗೊಂಡರು.
೭೫ ಸಂವತ್ಸರಗಳನ್ನು ಕಂಡ ಕುಶಾಲನಗರ ಆರ್ಯವೈಶ್ಯ ಮಂಡಳಿ ಕಳೆದ ನಾಲ್ಕು ದಿನಗಳಿಂದ ವಿವಿಧ-ವಿಶೇಷ ಧಾರ್ಮಿಕ ಕಾರ್ಯಕ್ರಮ ಗಳೊಂದಿಗೆ ವೇದಿಕೆ ಕಾರ್ಯಕ್ರಮಗಳನ್ನು ನಡೆಸಿಕೊಂಡು ಅದ್ಧೂರಿಯಾಗಿ ಪ್ರತಿಷ್ಠಾಪನ ಅಮೃತ ಮಹೋತ್ಸವ ಆಚರಣೆ ನಡೆಸಿದರು. ಶನಿವಾರ ಸಂಜೆ ಶ್ರೀ ವಾಸವಿ ಕನ್ನಿಕಾ ಪರಮೇಶ್ವರಿ ಅಮ್ಮನವರ ಮೂರ್ತಿಯನ್ನು ವಿದ್ಯುತ್ ಅಲಂಕಾರದ ಭವ್ಯ ಮಂಟಪದಲ್ಲಿ ಕುಶಾಲನಗರದ ಮುಖ್ಯರಸ್ತೆಯಲ್ಲಿ ಮೆರವಣಿಗೆ ಮೂಲಕ ಬೈಚನಹಳ್ಳಿ ತನಕ ನಂತರ ಹಿಂತಿರುಗಿ ದೇವಾಲಯಕ್ಕೆ ಮೆರವಣಿಗೆ ಆಗಮಿಸಿತು.
ವಿದ್ಯುತ್ ಅಲಂಕೃತ ಮಂಟಪದಲ್ಲಿ ವಿಶೇಷವಾಗಿ ವಾಸವಿ ಕನ್ನಿಕಾ ಪರಮೇಶ್ವರಿ ಸೇರಿದಂತೆ ವಿವಿಧ ದೇವರುಗಳ ಕಲಾಕೃತಿಯನ್ನು ಅತ್ಯಾಧುನಿಕ ತಂತ್ರಜ್ಞಾನದೊAದಿಗೆ ಅಳವಡಿಸಿ ಮಂಟಪದಲ್ಲಿ ಮೆರವಣಿಗೆ ತೆರಳಿ ನೆರೆದವರನ್ನು ಆಕರ್ಷಿಸಿತ್ತು.
ಈ ಸಂದರ್ಭ ಆರ್ಯವೈಶ್ಯ ಮಂಡಳಿಯ ಅಧ್ಯಕ್ಷ ಬಿ.ಎಲ್. ಉದಯಕುಮಾರ್, ಮಹಿಳಾ ಮಂಡಳಿಯ ಅಧ್ಯಕ್ಷೆÀ ಶೋಭಾ ಸತ್ಯ, ಆರ್ಯವೈಶ್ಯ ಮಹಾಸಭಾದ ಜಿಲ್ಲಾಧ್ಯಕ್ಷ ಬಿ.ಆರ್. ನಾಗೇಂದ್ರಪ್ರಸಾದ್, ವಾಸವಿ ಯುವಜನ ಸಂಘದ ಅಧ್ಯಕ್ಷ ಕೆ. ಪ್ರವೀಣ್, ಪ್ರಮುಖರಾದ ವಿ.ಎನ್. ವಸಂತ್ ಕುಮಾರ್, ಅಮೃತರಾಜ್, ವೈಶಾಕ್, ಆರ್ಯವೈಶ್ಯ ಮಂಡಳಿಯ ಪದಾಧಿಕಾರಿಗಳು, ಮಾಜಿ ಅಧ್ಯಕ್ಷರುಗಳು, ಮಹಿಳಾ ಮಂಡಳಿ ಹಾಗೂ ವಾಸವಿ ಯುವಜನ ಸಂಘದ ಪದಾಧಿಕಾರಿಗಳು ಮತ್ತು ಸಮುದಾಯದ ಸದಸ್ಯರುಗಳು ಪಾಲ್ಗೊಂಡಿದ್ದರು.