ಆಗ ೨೦೦೨. ತಲಕಾವೇರಿಯಲ್ಲಿ ಕ್ಷೇತ್ರ ತಂತ್ರಿಯವರಿAದ ನೂರಾರು ವರ್ಷಗಳ ಹಿಂದಿನ ದೋಷಗಳ ಪರಿಹಾರ ಕಾರ್ಯ ನಡೆಯುತ್ತಿದ್ದ ಸನ್ನಿವೇಶ. ಒಂದೆಡೆ ಹೋಮ ಹವನಾದಿಗಳು, ಮತ್ತೊಂದೆಡೆ ತಾಂತ್ರಿಕ ವಿಧಾನದಲ್ಲಿ ಹಸ್ತ ಮುದ್ರಾ ವಿಧಾನ, ಮಂತ್ರ ಪೂರ್ವಕ ಆವಾಹಾನಾದಿಗಳೊಂದಿಗೆ ಸ್ಥಳದ ದೋಷಗಳ ನಿವಾರಣೆಯಾಗುತ್ತಿತ್ತು. ರಾತ್ರಿ ೧೨ ಗಂಟೆ ವೇಳೆಗೂ ದೊಂದಿ ದೀಪಗಳೊಂದಿಗೆ ವಿವಿಧ ಧಾರ್ಮಿಕ ಕಾರ್ಯಗಳು ಜರುಗುತ್ತಿದ್ದವು. ಆಗಲೇ ನನ್ನ ಮನಸ್ಸಿನಲ್ಲಿ ವಿಚಿತ್ರ ಚಿಂತನೆಗಳು ಬಂದು ಹೋದವು. ಏನಿದು? ನಾವು ಯಾವ ಲೋಕದಲ್ಲಿದ್ದೇವೆ. ಈ ಕ್ಷೇತ್ರದ ಮಹಿಮೆಯೇನು? ನಾನು ಕೊಡಗಿನಲ್ಲಿಲ್ಲ, ಬೇರೆ ಯಾವದೋ ಲೊಕದಲ್ಲಿದ್ದೇನೆ ಎಂಬ ಭಾವನೆ ಸ್ಫುರಣವಾಗತೊಡಗಿತು.
ಹೀಗೆ ಮೂರು ದಿನ ಹಗಲು ರಾತ್ರಿ ನಿರಂತರ ಪರಿಹಾರ ಕಾರ್ಯಗಳು ನಡೆದವು. ಕೊನೆ ದಿನ ರಾತ್ರಿ ಸ್ವಲ್ಪ ತಡವಾದುದರಿಂದ ಎಂದಿನAತೆ ಭಾಗಮಂಡಲಕ್ಕೆ ತೆರಳಿ ಉಳಿದು ಮರು ದಿನ ಬರುತ್ತಿದ್ದುದನ್ನು ಬಿಟ್ಟು ಅಂದು ಸ್ಥಳೀಯರ ಸಲಹೆಯಂತೆ ತಲಕಾವೇರಿಯಲ್ಲಿಯೇ ಉಳಿಯಲು ತೀರ್ಮಾನಿಸಿದೆ. ನನ್ನೊಂದಿಗೆ ಎಸ್ ಎಸ್. ಸಂಪತ್ಕುಮಾರ್ ಕೂಡ ಇದ್ದರು.
ನಾವು ಅಂದು ತಲಕಾವೇರಿಯಲ್ಲಿ ಹಿರಿಯ ಅರ್ಚಕರಾಗಿದ್ದ ಶ್ರೀಪತಿ ಆಚಾರ್ (ಈಗ ದಿವಂಗತರು) ಅವರ ಮನೆಯಲ್ಲಿ ಉಳಿಯಲೆಂದು ತಲಕಾವೇರಿ ದೇವಾಲಯದಿಂದ ತೆರಳಿದೆವು. ನಮಗೆ ಹಾಸಿಗೆ ರೆಡಿಯಾಯಿತು. ಒಳಗೆ ಒಂದು ಗಳಿಗೆ ಮಲಗಿದೆ. ಮನಸ್ಸು ಕೇಳಲಿಲ್ಲ. ಹೊರಗೆ ಬಂದೆ. ನೋಡುತ್ತೇನೆ ಇಡೀ ಆಗಸ ಮಂಜಿನಿAದ ಆವೃತವಾಗಿದೆ. ಏನೂ ಕಾಣುತ್ತಿರಲಿಲ್ಲ. ಕುಳಿತಲ್ಲಿಂದಲೇ ಕುಂಡಿಕೆಯತ್ತ ದೃಷ್ಟಿ ಹರಿಸಿದೆ. ಕಾಣದಿದ್ದರೂ ಮಿಂಚಿನ ಬೆಳಕು ಚಲಿಸುತ್ತಿರುವಂತೆ ಗೋಚರಿಸಿತು, ಆದರೆ, ನೈಜವಾಗಿ ಮಿಂಚು ಇರಲಿಲ್ಲ. ಆಗಸವೆಲ್ಲ ಬಿಳಿ ಮುಗಿಲಿನಂತೆ ಕಂಡು ಬಂದಿತು, ಒಮ್ಮೆ ಚಲನೆಯಿದ್ದಂತೆ ಮತ್ತೊಮ್ಮೆ ನಿಶ್ಚಲವಿದ್ದಂತೆ ಕಂಡು ಬಂದಿತು. ಕಣ್ಣು ಮುಚ್ಚಿ ಪದ್ಮಾಸನದಲ್ಲಿ ಕುಳಿತೆ. ಅಷ್ಟರಲ್ಲಿ ಸಂಪತ್ ಮಲಗುವುದಿಲ್ಲವಾ ? ಎಂದು ಕೇಳಿ ಹೊರ ಬಂದರು. ಸ್ವಲ್ಪ ಹೊತ್ತು ಕೂತಿರುತ್ತೇನೆ ಸಂಪತ್ಜಿ ಏನೋ ಭಾವನೆ ಬರುತ್ತಿದೆ ಎಂದೆ. ಸ್ವಲ್ಪ್ಪ ಹೊತ್ತಿಗೆ ಶ್ರೀಪತಿ ಆಚಾರ್ ಹೊರ ಬಂದು ಕೇಳಿದರು. ಏನು ಹೊರಗಿದ್ದೀಯಾ? ಎಂದು ಇಲ್ಲೆ ಇರುತ್ತೇನೆ, ಮತ್ತೆ ಬರುತ್ತೇನೆ ಎಂದೆ. ಬೇಕೆಂದರೆ ವೆರಾಂಡದಲ್ಲಿಯೇ ಮಲಗು, ನಿನ್ನ ಅಪ್ಪನೂ ಅವರಿದ್ದಾಗ ಮನೆಗೆ ಬಂದಿದ್ದು ಹೀಗೆ ಧ್ಯಾನ ಮಾಡುತ್ತಿದ್ದರು ಎಂದು ನೆನಪಿಸಿಕೊಂಡರು. ಧ್ಯಾನ ಮಾಡಲು ಕುಳಿತರೆ ಅದೂ ಮನಸ್ಸಾಗಲಿಲ್ಲ. ಏಕೆಂದರೆ, ಪ್ರಕೃತಿಯನ್ನೂ ಮೀರಿದ ಚೈತನ್ಯ ಶಕ್ತಿ ಕಾವೇರಿ ಸನ್ನಿಧಿಯಲ್ಲಿ ಹರಿದಾಡುತ್ತಿದೆ ಎನ್ನುವದು ಸ್ಪಷ್ಟ ಗೋಚರವಾಗುತ್ತಿತ್ತು. ಆಗ ನೆನಪಾಯಿತು ತಲಕಾವೇರಿ ಕೈಲಾಸಾಶ್ರಮದ ತಿರುಚಿ ಮಹಾಸ್ವಾಮಿಗಳು(ಈಗ ದೈವಾಧೀನರು) ನನ್ನೊಂದಿಗೆ ಹೇಳಿದ್ದ ಮಾತು. ನಾವು ಸಮಿತಿಯಿಂದ ಆಶೀರ್ವಾದ ಪಡೆಯಲು ಬೆಂಗಳೂರಿನ ರಾಜರಾಜೇಶ್ವರಿ ನಗರದ ಅವರ ಸಂಸ್ಥಾನಕ್ಕೆ ತೆರಳಿದ್ದೆವು. ಆಗ ಸಿದ್ದಾಪುರದ ಕಂಬೀರAಡ ನಂಜಪ್ಪ (ಈಗ ದಿವಂಗತರು) ಅವರೂ ನಮ್ಮೊಂದಿಗಿದ್ದರು. ಅವರು ಹೇಳುತ್ತಿದ್ದರು, ಈ ಸ್ವಾಮೀಜಿ ಸಾಮಾನ್ಯರಲ್ಲ. ಮಹಾತಪಸ್ವಿ. ಅವರಿಗೆ ತುಂಬಾ ವಯಸ್ಸಾಗಿದೆ, ಅನಾರೋಗ್ಯವೂ ತಲೆದೋರಿದೆ, ಆಶೀರ್ವಾದ ಪಡೆಯೋಣ ಎಂದರು. ಅವರಿಂದ ಆಶೀರ್ವಾದ ಪಡೆದು ನಾವು ಬಳಿಕ ಅವರ ಶಿಷ್ಯಂದಿರಾದ ಈಗ ಪೀಠಾಧಿಪತಿಗಳಾಗಿರುವ ಶ್ರೀ ಜಯೀಂದ್ರಪುರಿ ಮಹಾಸ್ವಾಮೀಜಿ ಬಳಿ ತೆರಳಿದೆವು. ಅವರು ಕೊಡವ ಭಾಷೆಯಲ್ಲಿ ಸ್ಪಷ್ಟವಾಗಿ ಕಾವೇರಿ ಮೇಲಿನ ಭಕ್ತಿಗೀತೆಯನ್ನು ಸುಸ್ವರ ರಾಗದಿಂದ ಹಾಡಿ ನಾವು ಮೈ ಮರೆಯುವಂತೆ ಮಾಡಿದರು. ಬಳಿಕ ಕೆಲವು ದಿನಗಳಲ್ಲೇ ಹಿರಿಯ ತಿರುಚಿ ಸ್ವಾಮೀಜಿಗಳು ತಲಕಾವೇರಿ ಕೈಲಾಸಾಶ್ರಮಕ್ಕೆ ಬಂದರು. ಬಹುಶ: ಅದು ಅವರ ಕೊನೆಯ ಭೇಟಿಯಿರಬೇಕು. ಏಕೆಂದರೆ ಕೆಲಕಾಲದಲ್ಲೇ ಅವರು ಬೆಂಗಳೂರಿನ ಆಶ್ರಮದಲ್ಲಿ ದೈವಾಧೀನರಾದರು. ಅವರು ತಲಕಾವೇರಿಗೆ ಬಂದಾಗ ಅಲ್ಲಿನ ಕೈಲಾಸಾಶ್ರಮದ ಉಸ್ತುವಾರಿಯಾಗಿರುವ ರವಿ ನನಗೆ ತಿಳಿಸಿ ಅಲ್ಲಿಗೆ ಬಂದು ಆಶೀರ್ವಾದ ಪಡೆಯುವಂತೆ ಸಲಹೆಯಿತ್ತಿದ್ದರು. ನಾನು ತೆರಳಿ ಅವರ ಆಶೀರ್ವಾದ ಪಡೆದ ಬಳಿಕ ಅವರು ಕಾವೇರಿಯ ಮಹಿಮೆಯನ್ನು ಕೊಂಡಾಡಿದರು. ‘‘ಕಾವೇರಿ ಮಾತೆ ಸಾಕ್ಷಾತ್ ಲಕ್ಷಿö್ಮ, ಪಾರ್ವತಿಯರ ಶಕ್ತಿಯ ಅವತಾರಿಣಿ. ನಾನು ಕಿರಿಯ ವಯಸ್ಸ್ಸಿನಲ್ಲಿದ್ದಾಗ ಈ ಕೈಲಾಸಾಶ್ರಮಕ್ಕೆ ಬಂದು ತಂಗುತ್ತ್ತಿದ್ದೆ. ಆಗ ತಲಕಾವೇರಿಯಲ್ಲಿ ಜನ ಸಂಚಾರವೇ ಇರುತ್ತಿರಲಿಲ್ಲ. ರಾತ್ರಿಯಂತೂ ನೀರವ ಮೌನ ಇರುತ್ತಿತ್ತು. ಒಂದೊಮ್ಮೆ ಇಲ್ಲಿ ತಂಗಿದ್ದಾಗ ರಾತ್ರಿ ವೇಳೆ ಕುಂಡಿಕೆ ಬಳಿಯ ಕೊಳದಿಂದ ಗುಳು ಗುಳು ನಾದ ಕೇಳಿಬರುತ್ತಿತ್ತು. ಆದರೆ. ಕುಂಡಿಕೆ ಬಳಿ ತೆರಳಿ ನೋಡುವುದು ಸರಿಯಲ್ಲ ಎಂದು ಭಾವಿಸಿದೆ. ನನ್ನೊಳಗೇ ಶಿವನನ್ನು ನೆನೆದು ಧ್ಯಾನಾಸಕ್ತನಾದೆ. ಆಗ ನನಗೆ ಅದ್ಭುತ ಅನುಭವವಾಯಿತು. ಪವಿತ್ರ ಕಾವೇರಿ ಕೊಳದಲ್ಲಿ ಸ್ನಾನಕ್ಕೆ ದೇವ ಕನ್ಯೆಯರು ಬರುತ್ತಾರೆ ಎಂಬ ಆಂತರಿಕ ದಿವ್ಯ ಪ್ರೇರಣೆ ಉಂಟಾಯಿತು. ಅನೇಕ ಸಂದರ್ಭಗಳಲ್ಲಿ ಮಹಾನ್ ಋಷಿಮುನಿಗಳೂ ಬಂದು ಅಲ್ಲಿ ಪವಿತ್ರರಾಗುತ್ತಾರೆ., ಅಗಸ್ತೆö್ಯÃಶ್ವರನ ದರ್ಶನ ಪಡೆಯುತ್ತಾರೆ ಎನ್ನುವ ಆಂತರಿಕ ಪ್ರೇರಣೆಯುಂಟಾಯಿತು. ಹೀಗಾಗಿಯೇ ರಾತ್ರಿ ವೇಳೆ ಅಲ್ಲಿ ಯಾರೂ ತಂಗಬಾರದು ಎಂದು ನಿರ್ಬಂಧಿಸಲಾಗಿದೆ” ಎಂದು ತಿರುಚಿ ಸ್ವಾಮೀಜಿ ನನ್ನೊಂದಿಗೆ ಭಾವನಾತ್ಮಕವಾಗಿ ನುಡಿದರು. ಸ್ವಾಮೀಜಿ ಅವರು ಅಂದು ನನ್ನೊಂದಿಗೆ ಹೇಳಿದ್ದ ಮಾತು ತಲಕಾವೇರಿಯಲ್ಲಿ ಅರ್ಚಕರ ಮನೆ ಹೊರ ಭಾಗದಲ್ಲಿ ಕುಳಿತಿದ್ದ ನನಗೆ ನೆನಪಾಯಿತು. ಅಲ್ಲಿನ ಹೊರ ದೃಶ್ಯವನ್ನು ಕಂಡು, ಅಲ್ಲ್ಲಿನ ವಿಚಿತ್ರ ದೈವೀ ಸ್ಪಂದನವನ್ನು ಗಮನಿಸಿದಾಗ ಅವರು ಹೇಳಿದ್ದು ಸತ್ಯ ಎಂದು ಅನುಭವವೇದ್ಯವಾಯಿತು.
ಇದೇ ರೀತಿಯ ಮಾತನ್ನು ಹಿಂದೆ ಮಂಗಳೂರು ಸನಿಹ ಮರಕಡದ ಶ್ರೀ ನರೇಂದ್ರನಾಥಯೋಗೀಶ್ವರ ಸ್ವಾಮೀಜಿ ಅವರನ್ನು ನಾನು, ಕಂಬೀರAಡ ನಂಜಪ್ಪ ಹಾಗೂ ಸಂಪತ್ಕುಮಾರ್ ದರ್ಶಿಸಿ ಆಶೀರ್ವಾದ ಪಡೆದಾಗ ಅವರು ಕೂಡ ನುಡಿದಿದ್ದರು. ಕಾವೇರಿಯ ವಿಚಾರ ಬಂದಾಗ ಅವರ ಮೈಮೇಲೆ ಆವಾಹನೆಯಾದಂತಾಗಿ “ಕೊಡಗಿನ ಜನರು, ಕೊಡವರು ಭಾಗ್ಯವಂತರು, ಏಕೆಂದರೆ. ಮಹಾನ್ ಶಕ್ತಿಯ ಅವತಾರಿಣಿ ಕಾವೇರಿ ಕೊಡಗಿನ ಘಟ್ಟ ಪ್ರದೇಶದಲ್ಲಿ ನೆಲೆ ನಿಂತಿದ್ದಾಳೆ. ಆದರೆ, ಅಲ್ಲಿನ ಪರಿಸರ ಮಾಲಿನ್ಯಗೊಂಡಿದ್ದು ಅಲ್ಲಿ ನಿತ್ಯ ನೈರ್ಮಲ್ಯವನ್ನು ಕಾಪಾಡಬೇಕು. ಅಲ್ಲಿ ಸದಾ ದೈವೀ ಕಾರ್ಯಗಳ ಮೂಲಕ ಆ ಶಕ್ತಿಯನ್ನು ಭಕ್ತಿ, ಶ್ರದ್ಧೆಯಿಂದ ಪೂಜೆ, ಧ್ಯಾನಗಳಿಂದ ಆರಾಧಿಸಿ ಸ್ಮರಣೆ ಮಾಡುತ್ತಿರಬೇಕು. ಅದೇ ರೀತಿ ಅಗಸ್ತೆö್ಯÃಶ್ವರನ ಶಕ್ತಿಯೂ ಅಗಾಧವಾಗಿದೆ. ಜೊತೆಗೆ ಮಹಾನ್ ಗಣಪತಿಯ ನೆಲೆಯೂ ಇದೆ. ಚಾಮುಂಡೇಶ್ವರಿಯ ಆವಾಸಸ್ಥಾನವೂ ಇದೆ. ಶಾಸ್ತಾನ ಅಸ್ತಿತ್ವವಿದೆ. ಅದ್ಭುತವಾಗಿದೆ. ಮಹಾಮಹಿಮರಾದ ಅಗಸ್ತö್ಯ ಮಹರ್ಷಿಗಳ ಪ್ರಭಾವವೂ ಬಲವಾಗಿದೆ. ಅಗಸ್ತö್ಯರನ್ನು ಸ್ಮರಿಸಿಕೊಳ್ಳುತ್ತ ಮಹಾಶಿವನನ್ನು ಆರಾಧಿಸುವ, ಧ್ಯಾನಿಸುವ ಕಾರ್ಯಗಳು ನಿರಂತರವಾಗಿ ನಡೆಯುತ್ತಿರಬೇಕು. ಎಂದು ಅವರು ಅತ್ಯಂತ ಭಾವನಾತ್ಮಕವಾಗಿ ಸೂಚಿಸಿದ್ದರು. ಅದೇ ಸಂದರ್ಭ ಆ ಸ್ಥಳದಲ್ಲಿ ಸ್ವಾಮೀಜಿ ಅವರ ಸುತ್ತಲೂ ಇದ್ದ ಸಾವಿರಾರು ಮಂದಿ ಭಕ್ತರ ಪೈಕಿ ಶಿಷ್ಯೆಯ ರೂಪದಲ್ಲಿ ಅತಿ ಸುಂದರಿಯಾದ ಯುವತಿಯೋರ್ವಳು ಅವರ ಬಳಿ ಬಂದು ಕೆಲಕಾಲ ಭರತ ನಾಟ್ಯ ರೂಪದಲ್ಲಿ ನೃತ್ಯ ಮಾಡಿ ‘‘ಕಾವೇರಿ ಕ್ಷೇತ್ರದಲ್ಲಿ ಸರ್ವರೂ ಪಾವಿತ್ರö್ಯವನ್ನು ಕಾಪಾಡಿಕೊಂಡು ಬರಬೇಕು. ಅಲ್ಲಿನ ಶಕ್ತಿ ಅತ್ಯದ್ಭುತ, ಆದರೆ, ಅಲ್ಲಿನ ನ್ಯೂನತೆ, ನಿರ್ಲಕ್ಷö್ಯದಿಂದಾಗಿ ಅನೇಕ ತೊಂದರೆಗಳುAಟಾಗುತ್ತಿದ್ದು ಇದರಿಂದ ನಾಡಿಗೇ ಕಂಟಕವುAಟಾಗಲಿದ್ದು, ಯಾತ್ರಾರ್ಥಿಗಳೂ ಭಕ್ತಿ-ಶ್ರದ್ಧೆಯಿಂದ ವರ್ತಿಸಬೇಕು; ಭಕ್ತ ಜನತೆ ಜಾಗೃತಿಗೊಂಡು ನ್ಯೂನ್ಯತೆಗಳನ್ನು ಸರಿ ಪಡಿಸಬೇಕು’’ ಎಂದು ಸುಲಲಿತವಾಗಿ ನುಡಿದಳು. ಅಷ್ಟರಲ್ಲಿ ಸ್ವಾಮೀಜಿ ಶಾಂತಳಾಗು ಎಂದು ತೀರ್ಥವನ್ನು ಪ್ರೋಕ್ಷಿಸಿದಾಗ ಆಕೆ ತನ್ನ ನೃತ್ಯ ನಿಲ್ಲಿಸಿದಳು. ಬಳಿಕ ಆಕೆ ಕ್ಷಿಪ್ರವಾಗಿ ಭಕ್ತಾದಿಗಳ ಮಧ್ಯೆ ಮರೆಯಾಗಿ ಮತ್ತೆ ಗೋಚರವಾಗದೆ ತೆರಳಿದ ದೃಶ್ಯ ಇನ್ನೂ ನನ್ನ ಸ್ಮೃತಿ ಪಟಲದಿಂದ ಅಳಿಸಿಲ್ಲ. ನಾನು, ಕಂಬೀರAಡ ನಂಜಪ್ಪ, ಸಂಪತ್ಕುಮಾರ್ ಇದನ್ನು ನೋಡಿ ಕೆಲ ಕಾಲ ದಿಗ್ಭಾçಂತರಾಗಿದ್ದೆವು. ಇದೂ ಕಾವೇರಿ-ಅಗಸ್ತö್ಯರ ಮಹಿಮೆ ಎಂದು ಭಾವಿಸಿದೆವು. ಈಗ ಸಿದ್ದಾಪುರದ ಕಂಬೀರAಡ ನಂಜಪ್ಪ ಅವರು ನಮ್ಮೊಂದಿಗೆ ಇಲ್ಲದಿದ್ದರೂ ಅವರೊಂದಿಗಿನ ಈ ರೀತಿಯ ಒಡನಾಟ ಸದಾ ನನ್ನ ನೆನಪಿನಲ್ಲಿದೆ. ಹೀಗೆ ಈ ಎಲ್ಲ ಸವಿ ನೆನಪುಗಳು ನಾನು ತಲಕಾವೇರಿಯಲ್ಲಿ ತಂಗಿದ್ದಾಗ ಮರುಕಳಿಸಿ ನನ್ನ ಮುಂದೆ ಸುಳಿದವು.
ಆ ರಾತ್ರಿ ತಲಕಾವೇರಿಯಲ್ಲಿನ ವಾತಾವರಣ ನಾನು ಯಾವದೋ ಶಕ್ತಿಯ ಸುಳಿಯಲ್ಲಿ ಎಳೆದೊಯ್ಯಲ್ಪಟ್ಟಂತೆ ಕಾವೇರಿ ಕ್ಷೇತ್ರದ ನೈಜ ದರ್ಶನಕ್ಕೆ ಅವಕಾಶ ಕಲ್ಪಿಸಿತು. ನಮ್ಮ ಜಿಲ್ಲೆಯಲ್ಲಿಯೇ ಇಂತಹ ಮಹಾನ್ ಕ್ಷೇತ್ರವಿರುವಾಗ ಕೊಡಗಿನ ಭಕ್ತಾದಿಗಳು, ಹಾಗೂ ಕುಲದೈವಳೆಂದು ಪರಿಗಣಿಸಿ ಆಕೆಯನ್ನು ಆರಾಧಿಸುವ ಕೊಡವ ಜನಾಂಗದ ಮಂದಿ ಈ ಕ್ಷೇತ್ರದ ಪಾವಿತ್ರö್ಯತೆಯನ್ನು ನಮ್ರತಾ ಭಾವದಿಂದ ಉಳಿಸಿಕೊಂಡು ಹೋಗಲು ಸದಾ ಯತ್ನಶೀಲರಾಗಬೇಕು ಎಂಬದು ನನ್ನ ಸವಿನಯ ವಿನಂತಿ. ಈ ದಿಸೆಯಲ್ಲಿ ಕ್ಷೇತ್ರದಲ್ಲಿರುವ ಗೌಡ ಜನಾಂಗದ ತಕ್ಕ ಮುಖ್ಯಸ್ಥರು, ಬಾಹ್ಮಣ ಅರ್ಚಕರೂ ಸರಕಾರೀ ನೇಮಿತ ಆಡಳಿತ ನಿರ್ವಾಹಕರು ಕೈ ಜೋಡಿಸಲಿ. ಕಾವೇರಿ ಮಾತೆ ಉದ್ಭವಗೊಂಡ ತಳ ಪ್ರದೇಶದಲ್ಲಿರುವ ಭಾಗಮಂಡಲದಲ್ಲಿ ಅಧಿಕ ಸಂಖ್ಯೆಯಲ್ಲಿರುವ ಗೌಡ ಜನಾಂಗದ ನಿವಾಸಿಗಳೂ ಈ ಕುರಿತು ಸದಾ ಕಾರ್ಯಶೀಲರಾಗಲಿ. ದೇವಾಲಯದ ಪಾವಿತ್ರö್ಯತೆ ಉಳಿಸುವಲ್ಲಿ ಗೌಡ, ಕೊಡವ ಜನಾಂಗದವರೆನ್ನುವ ಭೇದಭಾವ ಮರೆತು, ಕಾವೇರಿಯನ್ನು ಆರಾಧ್ಯ ದೈವವೆಂದು ಪೂಜಿಸುವ ೧೮ ಮಂದಿ ಮೂಲನಿವಾಸಿಗಳೂ ಕೈಜೋಡಿಸಬೇಕು. ಈ ಮೂಲಕ ಕಾವೇರಿ ಕ್ಷೇತ್ರವು ಸದಾ ಪ್ರಕಾಶಮಾನ ವಾಗಿರುವಂತೆ ಗಮನಿಸಲಿ. ವೈಷಮ್ಯರಹಿತವಾಗಿ ಪ್ರತಿಷ್ಠೆಗಳನ್ನು ಬದಿಗಿಟ್ಟು ಭಕ್ತಾದಿಗಳೆಂಬ ಏಕತಾ ಮನೋಭಾವದಿಂದ ಸೇವೆ ಸಲ್ಲ್ಲಿಸುವಂತಾಗಲಿ ಎಂದು ನಾನು ಈ ಮೂಲಕ ವಿನಮ್ರ ಪ್ರಾರ್ಥನೆಗೈಯ್ಯುತ್ತೇನೆ. ಸನಾತನ ಭಾರತದ ಮಲೆನಾಡು, ಪಶ್ಚಿಮಘಟ್ಟಗಳ ನಡುವೆ, ಸಹ್ಯಾದ್ರಿ ಪರ್ವತ ಶ್ರೇಣಿಯ ಮಧ್ಯೆ ನೆಲೆಗೊಂಡಿರುವ ಮಹಾನ್ ಕ್ಷೇತ್ರವಾದ ತಲಕಾವೇರಿಯಲ್ಲಿ ಉದ್ಭವಗೊಂಡ ಪ್ರತ್ಯಕ್ಷ ಜಲದೇವಿ ಕಾವೇರಿಯ ಅದ್ಭುತ ಚರಿತ್ರೆ ಅಜರಾಮರವಾಗಿರಲಿ ಎನ್ನುವ ಅಂತರಾಳದ ನುಡಿಗಳೊಂದಿಗೆ ಕಾವೇರಿ ಕಥನ ಸರಣಿಯನ್ನು ಮುಕ್ತಾಯಗೊಳಿಸುತ್ತಿದ್ದೇನೆ. ಈ ಸಂದರ್ಭ ತಪ್ಪುಗಳಾಗಿದ್ದರೆ ಕ್ಷಮಿಸಿ. ಮುಂದೆ ಪುಸ್ತಕ ರೂಪದಲ್ಲಿ ಪ್ರಕಟಿಸುವಾಗ ತಿದ್ದುಪಡಿ ಮಾಡಿಕೊಳ್ಳಲು ಇದು ಅನುಕೂಲವಾಗಲಿದೆ. ಭಕ್ತಾದಿಗಳು ಈ ಕುರಿತು ಸಲಹೆ ಸೂಚನೆಯನ್ನು ನೇರವಾಗಿ ನನಗೆ ಕಳುಹಿಸಿಕೊಡಿ. ಮೊಬೈಲ್ ಮತ್ತು ವಾಟ್ಸಾಪ್ ಸಂಖ್ಯೆ ೯೪೪೮೦೪೮೨೪೪.
-ಜಿ. ರಾಜೇಂದ್ರ, ಮಡಿಕೇರಿ.