*ಸಿದ್ದಾಪುರ, ಜೂ. ೪: ವಾಲ್ನೂರು- ತ್ಯಾಗತ್ತೂರು ಭಾಗದಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದೆ. ವಾಲ್ನೂರಿನಲ್ಲಿ ಗಜಹಿಂಡಿನ ದಾಳಿಯಿಂದ ನೂರಾರು ಅಡಿಕೆ ಗಿಡಗಳು ನಾಶವಾಗಿವೆ.
ಗ್ರಾಮದ ಬೆಳೆಗಾರ ಹೆಚ್.ಎನ್.ಕೃಷ್ಣಪ್ಪ ಅವರ ತೋಟಕ್ಕೆ ಲಗ್ಗೆ ಇಟ್ಟಿರುವ ಕಾಡಾನೆಗಳು ಅಡಿಕೆ ಕೃಷಿಗೆ ಹಾನಿ ಮಾಡಿವೆ. ಸುಮಾರು ೪ ವರ್ಷಗಳ ಹಿಂದೆ ನೆಡಲಾಗಿದ್ದ ಅಡಿಕೆ ಗಿಡಗಳು ನಾಶವಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದಾಗಿದೆ ಎಂದು ಕೃಷ್ಣಪ್ಪ ಬೇಸರ ವ್ಯಕ್ತಪಡಿಸಿದ್ದಾರೆ. ಅಕ್ಕಪಕ್ಕದ ತೋಟಗಳಿಗೂ ನುಗ್ಗಿರುವ ಕಾಡಾನೆಗಳು ಅಪಾರ ನಷ್ಟ ಉಂಟು ಮಾಡಿವೆ. ತಕ್ಷಣ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.