ಮಡಿಕೇರಿ, ಜೂ. ೩: ಹಣ್ಣಿನ ರಾಜ ಮಾವು ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ..ಹೀಗಂತೂ ಮಾವಿನ ಹಣ್ಣಿನ ‘ಸೀಜನ್’, ಸ್ವಾದಿಷ್ಟ ಹಾಗೂ ರುಚಿಕರ ಮಾವಿನ ಹಣ್ಣಿಗೆ ಬೇಡಿಕೆ ಹೆಚ್ಚಾಗಿದೆ. ಕೊಡಗು ಜಿಲ್ಲೆಯಲ್ಲಿ ಮೂರು-ನಾಲ್ಕು ಬಗೆಯ ಮಾವಿನ ಹಣ್ಣುಗಳು ಮಾತ್ರ ದೊರೆಯುತಿತ್ತು. ಇದೀಗ ಹತ್ತು ಹಲವು ಬಗೆಯ ಮಾವಿನ ಹಣ್ಣುಗಳು ಮಾವು ಪ್ರಿಯರನ್ನು ಕೈಬೀಸಿ ಕರೆಯುತ್ತಿದೆ.
ಹೌದು..ಮಂಜಿನ ನಗರಿ ಮಡಿಕೇರಿಯಲ್ಲಿ ಹಣ್ಣಿನ ರಾಜ ಎಂದು ಕರೆಸಿಕೊಳ್ಳುವ ಮಾವಿನ ದರ್ಬಾರ್ ಶುರುವಾಗಿದೆ. ಒಂದೆ ಕಡೆಯಲ್ಲಿ ತರಾವರಿ ‘ಮ್ಯಾಂಗೋ’ ತಳಿ ದೊರೆಯುತ್ತಿದ್ದು, ಗ್ರಾಹಕರು ಮುಗಿಬಿದ್ದು ಖರೀದಿಯಲ್ಲಿ ತೊಡಗಿಸಿಕೊಂಡಿದ್ದಾರೆ.
ಕೊಡಗು ಜಿಲ್ಲಾ ಹಾಪ್ಕಾಮ್ಸ್, ತೋಟಗಾರಿಕೆ ಇಲಾಖೆ ಹಾಗೂ ಜಿಲ್ಲಾ ಪಂಚಾಯ್ತಿ ವತಿಯಿಂದ ತಾ. ೩ ರಿಂದ ನಾಲ್ಕು ದಿನಗಳ ಕಾಲ ನಗರದ ಹಾಪ್ಕಾಮ್ಸ್ ಆವರಣದಲ್ಲಿ ಹಮ್ಮಿಕೊಂಡಿರುವ ‘ಮಾವು ಮೇಳ’ಕ್ಕೆ ಚಾಲನೆ ನೀಡಲಾಯಿತು.
ತರಾವರಿ ‘ಮ್ಯಾಂಗೋ’ಗಳು
ಮಾವು ಮೇಳದಲ್ಲಿ ವಿವಿಧ ತಳಿಯ ಮಾವಿನ ಹಣ್ಣುಗಳು ಸೊಜಿಗಲ್ಲಿನಂತೆ ಸೆಳೆಯುತ್ತಿವೆ. ಒಂದಕ್ಕೊAದು ರುಚಿ ಇರುವ ಮಾವಿನ ಹಣ್ಣುಗಳ ಭಂಡಾರವೇ ಹಾಪ್ಕಾಮ್ಸ್ ಆವರಣದಲ್ಲಿ ಸೃಷ್ಟಿಯಾಗಿದೆ. ಇದುವರೆಗೂ ಕೇಳದ ಮಾವಿನ ತಳಿಗಳು ಜಿಲ್ಲೆಯಲ್ಲಿ ಪರಿಚಯ ಗೊಂಡಿವೆ.
ಕೊಡಗಿನ ಮನೆಮಾತಾದ, ಈ ಅವಧಿಯಲ್ಲಿ ಜಿಲ್ಲೆಯ ಮನೆಮನೆಗಳಲ್ಲಿ ಘಮಘಮಿಸುವ ಕಾಡುಮಾವು ಸೇರಿದಂತೆ ಹೆಸರಾಂತ ತೋತಾಪುರಿ, ಮಲಗೋವ, ಬಾದಾಮಿ, ರಸಪುರಿ ಜೊತೆಗೆ ದಾಶೇರಿ, ಕಾಲಕಲ್, ಸಿಂಧೂರದAತಹ ಅಪರೂಪದ ಮಾವಿನ ಹಣ್ಣುಗಳು ಮೇಳದ ಆಕರ್ಷಣೆಯಾಗಿವೆ.
ಮಂಡ್ಯ, ಮದ್ದೂರು, ಮಾಗಡಿ, ಕುಣಿಗಲ್ಲು, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ವಿವಿಧೆಡೆಗಳಿಂದ ಮಾವಿನ ಮಾರಾಟಗಾರರು ಮೇಳಕ್ಕೆ ಆಗಮಿಸಿದ್ದಾರೆ.
ಜಿಲ್ಲೆಗೆ ಹೊಸ ತಳಿಗಳ ಪರಿಚಯ
ಮಾವು ಮೇಳದ ಮೂಲಕ ಕೊಡಗಿಗೆ ಹೊಸ ಮಾವಿನ ಹಣ್ಣಿನ ತಳಿಗಳನ್ನು ಪರಿಚಯಿಸುವ ಮೂಲ ಉದ್ದೇಶ ಹೊಂದಲಾಗಿದೆ. ಜಿಲ್ಲೆಯಲ್ಲಿ ಮಾವಿನ ಬೇಸಾಯ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಇದು ಸಹಕಾರಿಯಾಗಿದೆ.
ಜಿಲ್ಲೆಯಲ್ಲಿ ಮಾವಿನ ಉತ್ಪಾದನ ಕಡಿಮೆ ಇದೆ. ಈ ಹಿನ್ನೆಲೆ ಮೇಳ ಬೆಳೆಗಾರರಿಗೆ ಸಹಕಾರಿಯಾಗಲಿದೆ. ಅಲ್ಲದೆ ಮಾವಿನ ಬೇಸಾಯದಿಂದ ಆದಾಯವೂ ಹೆಚ್ಚಾಗಲಿದೆ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಚೆಕ್ಕೇರ ಪ್ರಮೋದ್ ತಿಳಿಸಿದ್ದಾರೆ.
ಗಣ್ಯರಿಂದ ಚಾಲನೆ
ಮಾವಿನ ಮೇಳಕ್ಕೆ ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಚಾಲನೆ ನೀಡಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ರೈತರು ಬೆಳೆದ ಬೆಳೆಗೆ ಸೂಕ್ತ ಮಾರುಕಟ್ಟೆ ಒದಗಿಸಲು ಹಾಪ್ಕಾಮ್ಸ್ ಶ್ರಮಿಸುತ್ತಿದೆ. ಮಾವು ಮೇಳದ ಮೂಲಕ ರೈತರಿಗೆ ನೇರ ಮಾರುಕಟ್ಟೆ ದೊರೆತಿದೆ. ಉತ್ಕೃಷ್ಟ ಗುಣಮಟ್ಟದ ಹಣ್ಣುಗಳು ಇಲ್ಲಿ ದೊರೆಯುತ್ತವೆ. ಇದರ ಪ್ರಯೋಜನವನ್ನು ಜಿಲ್ಲೆಯ ಜನ ಪಡೆದುಕೊಳ್ಳಬೇಕೆಂದರು.
ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾವಿನ ಮಳಿಗೆ ಉದ್ಘಾಟಿಸಿ ಮಾತನಾಡಿ, ಮೇಳದ ಮೂಲಕ ಮಾವು ಬೆಳೆಗಾರರಿಗೆ ನೇರ ಮಾರುಕಟ್ಟೆ ಜೊತೆಗೆ ಉತ್ತಮ ಬೆಲೆ ದೊರೆಯಲಿದೆ. ಬೆಳೆಗಾರರು ಬೆಳೆದ ಮಾವನ್ನು ಜನರಿಗೆ ಪರಿಚಯಿಸಲು ಮೇಳ ವರದಾನವಾಗಿದೆ ಎಂದರು.
ಹಾಪ್ಕಾಮ್ಸ್ ಅಧ್ಯಕ್ಷ ಬಿದ್ದಾಟಂಡ ರಮೇಶ್ ಚಂಗಪ್ಪ ಮಾತನಾಡಿ, ರಾಸಾಯನಿಕ ವಸ್ತು ಬಳಸದೆ ನೈಸರ್ಗಿಕವಾಗಿ ಬೆಳೆದ ಮಾವುಗಳನ್ನು ಇಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಮೇಳದಲ್ಲಿ ಪಶ್ಚಿಮಘಟ್ಟ ಕಾರ್ಯಪಡೆ ಅಧ್ಯಕ್ಷ ಶಾಂತೆಯAಡ ರವಿಕುಶಾಲಪ್ಪ, ಹಾಪ್ಕಾಮ್ಸ್ ಉಪಾಧ್ಯಕ್ಷ ಮಲ್ಲಂಡ ಮಧು ದೇವಯ್ಯ, ನಿರ್ದೇಶಕರಾದ ಮನು ಮನೋಹರ್, ನಂಜರಾಜೇಅರಸ್, ತಾಕೇರಿ ಪೊನ್ನಪ್ಪ, ಸುವಿನ್ ಗಣಪತಿ, ಸುಧೀರ್, ಬೇಬಿ ಪೂವಯ್ಯ ಸೇರಿದಂತೆ ಇನ್ನಿತರರು ಹಾಜರಿದ್ದರು.