ಮಡಿಕೇರಿ, ಜೂ. ೩: ಉಮ್ಮತ್ ಒನ್ ಕೊಡಗು ಚಾರಿಟೇಬಲ್ ಟ್ರಸ್ಟ್ ವತಿಯಿಂದ ತಾ.೬ ರಂದು ಮಡಿಕೇರಿಯ ಕಾವೇರಿ ಕಲಾಕ್ಷೇತ್ರದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತ ವಿದ್ಯಾರ್ಥಿ ವೇತನ ಜಾಗೃತಿ ಮತ್ತು ವೃತ್ತಿ ಮಾರ್ಗದರ್ಶನ ಮಾಹಿತಿ ಕಾರ್ಯಾಗಾರ ನಡೆಯಲಿದೆ ಎಂದು ಟ್ರಸ್ಟ್ ಅಧ್ಯಕ್ಷ ಎಂ.ಬಿ ಬಶೀರ್ ಹಾಜಿ ತಿಳಿಸಿದರು.

ನಗರದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ ೯.೩೦ ರಿಂದ ಮಧ್ಯಾಹ್ನ ೧.೩೦ರವರೆಗೆ ಕಾರ್ಯಾಗಾರ ನಡೆಯಲಿದೆ. ಭಾರತದ ಪ್ರಸಿದ್ಧ ವೃತ್ತಿ ಸಲಹೆಗಾರರಾದ ಅಮೀನ್ ಇ ಮುದಸ್ಸರ್ ಅವರು ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ನಂತರದ ವಿದ್ಯಾಭ್ಯಾಸದ ಆಯ್ಕೆಗಳ ಬಗ್ಗೆ ವಿವರವಾದ ಮಾಹಿತಿ ಹಾಗೂ ವಿದ್ಯಾರ್ಥಿ ವೇತನದ ಬಗ್ಗೆ ಜಾಗೃತಿ ಮೂಡಿಸಲಿದ್ದಾರೆ ಎಂದು ತಿಳಿಸಿದರು.

ಎಸ್‌ಎಸ್‌ಎಲ್‌ಸಿ, ಪಿಯುಸಿ ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ವಿದ್ಯಾರ್ಥಿಗಳು ಮುಂದಿನ ಭವಿಷ್ಯವನ್ನು ಹೇಗೆ ರೂಪಿಸಿಕೊಳ್ಳಬಹುದು, ಪೋಷಕರ ಪಾತ್ರ ಹಾಗೂ ಜವಾಬ್ದಾರಿ ಏನು ಎಂಬುದರ ಕುರಿತು ಅರಿವು ಮೂಡಿಸಲಾಗುತ್ತದೆ. ಭಾಗವಹಿಸುವವರಿಗೆ ಗೈಡ್ ಮಾದರಿಯ ೮ ಪುಟದ ಮಾಹಿತಿ ಕೈಪಿಡಿ ನೀಡಲಾಗುವುದು ಎಂದ ಅವರು, ಕಾರ್ಯಾಗಾರದಲ್ಲಿ ಜಿಲ್ಲೆಯ ೪೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಪೋಷಕರು ಭಾಗವಹಿಸುವ ನಿರೀಕ್ಷೆ ಇದ್ದು, ಆಸಕ್ತ ವಿದ್ಯಾರ್ಥಿಗಳು ೯೬೧೧೫೫೪೦೧೦, ೯೪೪೯೬೨೭೫೬೫ ಗೆ ಕರೆ ಮಾಡಿ ತಾ.೫ರ ಒಳಗೆ ಹೆಸರು ನೋಂದಾಯಿಸಿಕೊಳ್ಳುವAತೆ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಉಮ್ಮತ್ ಒನ್ ಕೊಡಗು ಚಾರಿಟೇಬಲ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಪಿ.ಕೆ.ಖಾಲಿದ್ ಹಾಕತ್ತೂರು, ಸಲಹೆಗಾರರಾದ ಮೊಹಮ್ಮದ್ ಹನೀಫ್ ಎಂ.ಹೆಚ್, ಟ್ರಸ್ಟಿ ಸಲೀಂ ಎಂ.ಎಸ್ ಹಾಜರಿದ್ದರು.