ಮಡಿಕೇರಿ, ಜೂ. ೩: ಆತ್ಮೀಯರೇ., ನಾನು ಡಾ. ವಿಜಯ್ ಅಂಗಡಿ ಮಡಿಕೇರಿ ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಾಹಕನಾಗಿ ಕೆಲಸ ಮಾಡುತ್ತಿದ್ದು , ೧೯೮೨ರಿಂದ ಸೈಕಲನ್ನು ಇಷ್ಟಪಟ್ಟು ಬಳಸುತಿದ್ದೇನೆ. ವರ್ಷಕ್ಕೆ ಏನಿಲ್ಲವೆಂದರೂ ೫೦೦ ಕಿ.ಮೀ. ವರೆಗೆ ನನ್ನಲ್ಲಿರುವ ಎರಡು ಸೈಕಲ್ಲುಗಳು ಬಳಕೆಯಾಗುತ್ತವೆ . ಇಂಧನದ ಅಗತ್ಯತೆ ಇಲ್ಲ , ಲೈಸನ್ಸ್ ಬೇಡ, ತೆರಿಗೆ ಇಲ್ಲ, ಪೊಲೀಸರು ತಡೆಯುವುದಿಲ್ಲ, ದೇಹಕ್ಕೆ ಒಳ್ಳೆಯದು, ನಿಲ್ಲಿಸಲು ಹೆಚ್ಚು ಜಾಗ ಬೇಕಾಗಿಲ್ಲ, ಆಗಾಗ್ಗೆ ರೀಪೇರಿಗೆ ಬರಲ್ಲ, ಪೇಟೆಗಳಲ್ಲಂತೂ ಕೆಲಸಗಳನ್ನು ಸಲೀಸಾಗಿ ಮಾಡಿಕೊಂಡು ಬರಬಹುದು, ಟ್ರಾಫಿಕ್ ಸಮಸ್ಯೆ ಪಾರ್ಕಿಂಗ್ ಸಮಸ್ಯೆ ಇದ್ದರೂ ನಮ್ಮ ಕೆಲಸಗಳಿಗೆ ಅಡ್ಡಿ ಆಗಲ್ಲ. ಬಂಡವಾಳ ಹೆಚ್ಚು ಬೇಕಾಗಿಲ್ಲ, ಮನೆಯಲ್ಲಿ ನಿಲ್ಲಿಸಲು ಹೆಚ್ಚು ಜಾಗ ಬೇಕಾಗಿಲ್ಲ, ತೊಳೆಯಲು ಸ್ವಲ್ಪವೇ ನೀರು ಸಾಕು, ಹೀಗೆ ಎಷ್ಟೊಂದು ಅನುಕೂಲಗಳು. ತಾವೆಲ್ಲರೂ ಸೈಕಲ್ಲು ಬಳಸಿದರೆ ಪರಿಸರಕ್ಕೂ ಪ್ರಯೋಜನ. ಇಂಧನ ಸುಡುವ ಕೆಲಸ ತಪ್ಪುತ್ತದೆ, ಹಣವೂ ಉಳಿಯುತ್ತದೆ, ಆರೋಗ್ಯಕ್ಕೂ ಪ್ರಯೋಜನ. ಮಾಲಿನ್ಯ ತಡೆಯಲು ಈ ರೀತಿಯ ಕ್ರಮಗಳನ್ನು ಪಾಲಿಸೋಣ.