ಶ್ರೀಮಂಗಲ, ಜೂ. ೧: ಬಿರುನಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ೫ ಗ್ರಾಮಗಳಲ್ಲಿ ದಿನನಿತ್ಯ ವಿದ್ಯುತ್ ವ್ಯತ್ಯಯ ಉಂಟಾಗುತ್ತಿದೆ. ಇದರಿಂದ ನಾಗರಿಕರಿಗೆ ತೀವ್ರ ಅನಾನುಕೂಲ ವಾಗುತ್ತಿದ್ದು, ಈ ಸಮಸ್ಯೆಯನ್ನು ಮುಂದಿನ ೧೫ ದಿನಗಳಲ್ಲಿ ಸರಿಪಡಿಸದಿದ್ದರೆ ಶ್ರೀಮಂಗಲ ಸೆಸ್ಕ್ ಕಚೇರಿಗೆ ಬೀಗ ಜಡಿದು ಅನಿರ್ದಿಷ್ಟಾಧಿ ಅಹೋರಾತ್ರಿ ಧರಣಿ ನಡೆಸುವುದಾಗಿ ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಶ್ರೀಮಂಗಲ ಸೆಸ್ಕ್ ಜೂನಿಯರ್ ಇಂಜಿನಿಯರ್ ಮನುಕುಮಾರ್ ಅವರಿಗೆ ಗ್ರಾಮಸ್ಥರ ಪರವಾಗಿ ಬಿರುನಾಣಿ ವಲಯ ಕಾಂಗ್ರೆಸ್ ಅಧ್ಯಕ್ಷ ಕುಪ್ಪಣಮಾಡ ಪ್ರೀತಮ್, ಗ್ರಾ.ಪಂ. ಸದಸ್ಯ ಬುಟ್ಟಿಯಂಡ ತಂಬಿ ನಾಣಯ್ಯ, ಗ್ರಾಮಸ್ಥರಾದ ಕರ್ತಮಾಡ ರಾಯ್, ಕಾಳಿಮಾಡ ಸಚಿನ್ ನೇತೃತ್ವದಲ್ಲಿ ಲಿಖಿತವಾಗಿ ಮನವಿ ಪತ್ರ ನೀಡಿ ಗಮನ ಸೆಳೆದಿದ್ದಾರೆ.
ವಿದ್ಯುತ್ ವ್ಯತ್ಯಯದಿಂದ ಸ್ಥಿರ ದೂರವಾಣಿ ಮತ್ತು ಮೊಬೈಲ್ ದೂರವಾಣಿ ವ್ಯವಸ್ಥೆ ಸ್ಥಗಿತ ವಾಗುತ್ತಿದೆ. ನ್ಯಾಯಬೆಲೆ ಅಂಗಡಿಗಳಲ್ಲಿ ಸಕಾಲದಲ್ಲಿ ಪಡಿತರ ಸಿಗುತ್ತಿಲ್ಲ. ದೂರವಾಣಿ ಸ್ಥಗಿತವಾಗುವುದರಿಂದ ಸಂಪರ್ಕ ವ್ಯವಸ್ಥೆ ಇಲ್ಲದೇ ಗ್ರಾಮೀಣ ಭಾಗದ ಜನತೆ ತೀವ್ರ ತೊಂದರೆ ಅನುಭವಿಸುವಂತಾಗಿದೆ. ತುರ್ತು ಸಂದರ್ಭ ಹಾಗೂ ಅನಾರೋಗ್ಯ ಪೀಡಿತರು ಸಂಪರ್ಕ ವ್ಯವಸ್ಥೆ ಇಲ್ಲದೇ ಯಾತನೆ ಪಡುತ್ತಿದ್ದು, ಶ್ರೀಮಂಗಲ ದಿಂದ ಬಿರುನಾಣಿಗೆ ಸಂಪರ್ಕಿಸುವ ೧೧ ಕೆ.ವಿ. ವಿದ್ಯುತ್ ಮಾರ್ಗದಲ್ಲಿ ಬಿದಿರಿನ ವಿದ್ಯುತ್ ಕಂಬ ಹಾಕ ಲಾಗಿದ್ದು, ಅತ್ಯಂತ ಅಪಾಯಕಾರಿ ಯಾಗಿ ಪರಿಣಮಿಸಿದೆ. ಇದು ಸೆಸ್ಕ್ ಇಲಾಖೆಯ ಅವ್ಯವಸ್ಥೆಯನ್ನು ತೋರಿಸುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.