ಮಡಿಕೇರಿ, ಜೂ. ೧: ಭತ್ತ ಕೇವಲ ಬೆಳೆಯಲ್ಲ, ಅದು ರೈತನಿಗಷ್ಟೇ ಅಲ್ಲ ಇಡೀ ಜೀವ ಸಂಕುಲ ಬದುಕಿನ ಅವಿಬಾಜ್ಯ ಅಂಗ, ಭತ್ತವನ್ನು ಕೇವಲ ಲಾಭ ನಷ್ಟದ ಲೆಕ್ಕಚಾರದಲ್ಲಿ ನೋಡದೆ, ಬದುಕಿನ ಭಾಗವಾಗಿ ನೋಡಬೇಕು, ಎಂದು ಪ್ರಗತಿಪರ ಭತ್ತ ಬೆಳೆಗಾರ, ಕೊಡವಾಮೆರ ಕೊಂಡಾಟ ಸಂಘಟನೆಯ ಸದಸ್ಯರೂ ಆಗಿರುವ, ಕಳ್ಳಿಚಂಡ ರಾಬಿನ್ ಸುಬ್ಬಯ್ಯ ಅಭಿಪ್ರಾಯಿಸಿದರು... ಭತ್ತ ಬೆಳೆಯು ಕೇವಲ ಮನುಷ್ಯನಿಗೆ ಮಾತ್ರ ಅಲ್ಲ, ಎಲ್ಲಾ ಜೀವರಾಶಿಗಳು ಹಾಗೂ ಭೂಮಿಯ ಉಳಿವಿಕೆಗೂ ಅನಿವಾರ್ಯ ಅವಶ್ಯ ಎಂದರು. ಭತ್ತ ಬೆಳೆಯುವುದರಿಂದ ನೀರು ನಿಂತು ಭೂಮಿಯ ಅಂತರ್ಜಲ ಮಟ್ಟ ವೃದ್ದಿಯಾಗಿ, ಮಳೆಬೆಳೆ ಸಮತೋಲನವಾಗಲು ಕಾರಣವಾಗುತ್ತದೆ ಎಂದರು. ಭತ್ತ ಬೆಳೆಯಿಂದ ಆಯಾ ಪ್ರದೇಶವಾರು ಇಳುವರಿಯಲ್ಲಿ ಏರಿಳಿತವಾಗುತ್ತದೆ ಆದರೆ ಇದು ನಷ್ಟದ ಬೆಳೆಯಲ್ಲ, ಇತರ ಆರ್ಥಿಕ ಬೆಳೆಗಳಿಗೆ ಹೋಲಿಸಿದರೆ ಲಾಭ ಕಡಿಮೆ ಇರಬಹುದು, ಆದರೆ ಯಾವುದೇ ಕಾರಣಕ್ಕೂ ನಷ್ಟದ ಬೆಳೆಯಲ್ಲ, ಕೊಡಗಿನಲ್ಲಿ ಪ್ರತೀ ಗದ್ದೆಯಲ್ಲಿಯೂ ವ್ಯವಸ್ಥಿತ ವೈಜ್ಞಾನಿಕ ಭತ್ತ ಬೆಳೆಯುವತ್ತ ಯುವಜನರು ಮುಖ ಮಾಡಬೇಕು. ಮುಂದೊAದು ದಿನ ಭತ್ತದ ಬೆಳೆಯು ಪ್ರಮುಖ ಆರ್ಥಿಕ ಬೆಳೆಯಾಗಲಿದೆ ಎಂಬುದನ್ನು ಅರಿತು ನಾವು ಇಂದಿನಿAದಲೇ ತಯಾರಾಗಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಡವಾಮೆರ ಕೊಂಡಾಟ ಸಂಘಟನೆಯ ಸಂಘಟನಾ ಕಾರ್ಯದರ್ಶಿ ತೀತಿಮಾಡ ಸೋಮಣ್ಣ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಭತ್ತ ಬೆಳೆಯ ಅನಿವಾರ್ಯತೆಯ ಬಗ್ಗೆ ಪ್ರತಿಯೊಬ್ಬ ಪೋಷಕರೂ ತಮ್ಮ ಮಕ್ಕಳಿಗೆ ಅರಿವು ಕೊಡಬೇಕು, ಗದ್ದೆಯ ಮಹತ್ವ ಮತ್ತು ಭತ್ತದ ಅನಿವಾರ್ಯತೆಯ ಬಗೆ ಮಾಹಿತಿ ನೀಡಿದರೆ ಮುಂದಿನ ಪೀಳಿಗೆ ಭತ್ತದ ಕೃಷಿಯಲ್ಲಿ ತೊಡಗಿಕೊಳ್ಳಲು ಉತ್ಸಾಹ ಮೂಡುತ್ತದೆ ಎಂದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾತನಾಡಿದ ಐತಿಚಂಡ ರಮೇಶ್ ಉತ್ತಪ್ಪ ಅವರು, ಭತ್ತ ಬೆಳೆ ಇಂದಿನ ಕಾಲಮಾನದಲ್ಲಿ ಹಲವಷ್ಟು ಸವಾಲಿನ ಕಾರ್ಯ, ಪ್ರ‍್ರಾಕೃತಿಕ ವೈಪರಿತ್ಯ, ಕಾಡು ಪ್ರಾಣಿಗಳ ಅದರಲ್ಲೂ ಆನೆ ಹಾವಳಿಯಿಂದಾಗಿ ರೈತರು ಭತ್ತ ಬೆಳೆಯಿಂದ ವಿಮುಖರಾಗುತಿದ್ದಾರೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಸಮಸ್ಯೆ ಪರಿಹರಿಸಿದರೆ ಮುಂದೆ ಭತ್ತ ಬೆಳೆಯತ್ತ ರೈತರು ಆಕರ್ಷಿತರಾಗುತ್ತಾರೆ ಎಂದರು. ಪೋಡಮಾಡ ಭವಾನಿ ನಾಣಯ್ಯ ಅವರು ಭತ್ತ ಬೆಳೆಯುವುದಷ್ಟೇ ಅಲ್ಲ, ಅದರ ಸದ್ಬಳಕೆಯೂ ಆಗಬೇಕು, ಪ್ರತಿಯೊಬ್ಬರೂ ನಿತ್ಯದ ಊಟದಲ್ಲಿ ಕೆಂಪು ಅಕ್ಕಿ ಇಲ್ಲವೇ ಕಡಿಮೆ ಪಾಲಿಶ್ ಆಗಿರುವ ಅಕ್ಕಿಯಿಂದ ಖಾದ್ಯಗಳನ್ನು ಸೇವಿಸುವುದರಿಂದ ನಮ್ಮ ಆರೋಗ್ಯಕರ ಬದುಕು ಲಭ್ಯವಾಗುತ್ತದೆ ಎಂದರು. ನಂಬಿಯಪAಡ ರಂಜುನಾಣಯ್ಯ ಮಾತನಾಡಿ, ಕೊಡಗಿನಿಂದ ಹೊರಗೆ ಉದ್ಯೋಗ ಮಾಡುತ್ತಿರುವವರೂ ಕೂಡ ತಮ್ಮ ಸಾಂಪ್ರದಾಯಿಕ ಭತ್ತ ಕೃಷಿಯನ್ನ ಕೈಬಿಡದೆ ಉಳಿಸಿಕೊಂಡು ಹೋಗುವತ್ತ ಚಿತ್ತ ಹರಿಸುವಂತಾಗಬೇಕು ಎಂದರು. ಚಿರಿಯಪಂಡ ವಿಶುಕಾಳಪ್ಪ ಅವರು ಮಾತನಾಡಿ ಈಗಿನ ಖರ್ಚು ವೆಚ್ಚವನ್ನು ತುಲನೆ ಮಾಡಿದರೆ ಭತ್ತ ಬೆಳೆ ಕಷ್ಟ ಅಥವಾ ನಷ್ಟ ಎಂದು ಅನಿಸಬಹುದು. ನಮಗೆ ಬೆಳೆಯಲು ಸಾದ್ಯವಾಗದೇ ಇದ್ದಾಗಲೂ ಕೂಡ, ಬೆಳೆಯುವ ಹುಮ್ಮಸ್ಸಿರುವವರಿಗೆ ಗದ್ದೆ ನೀಡುವ ಮೂಲಕ ಕೃಷಿ ಉಳಿಯುವಂತೆ ನೋಡಿಕೊಂಡಾಗ ನಮ್ಮ ಅಗತ್ಯ ಪೂರೈಕೆಯಾಗಬಹುದು ಎಂದರು. ನೂರೆರ ಬಬಿತ ಅವರು ಮಾತನಾಡಿ, ಕೆಲವೊಮ್ಮೆ ಅನಿವಾರ್ಯವಾಗಿ ಗದ್ದೆ ಪಾಳುಬಿಡುವ ಪರಿಸ್ಥಿತಿ ನಿರ್ಮಾಣವಾದರೂ, ಮರಳಿ ಹಸನು ಮಾಡುವ ಮೂಲಕ ಮರಳಿ ಬೆಳೆಯತ್ತ ಗಮನ ಹರಿಸಿದರೆ ಉತ್ತಮ ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾತನಾಡಿದ ಸಂಘಟನೆಯ ಅಧ್ಯಕ್ಷ ಚಾಮೆರ ದಿನೇಶ್ ಬೆಳ್ಯಪ್ಪ ಅವರು ಭತ್ತ ಕೊಡವರಿಗೆ ಬೆಳೆ ಮಾತ್ರ ಅಲ್ಲ ಸಂಸ್ಕೃತಿ ಮತ್ತು ಸಂಪ್ರದಾಯದ ಅವಿಭಾಜ್ಯ ಅಂಗ, ಕೊಡವ ಸಂಸ್ಕೃತಿಯ ಬೇರು ನಿಂತಿರುವುದೇ ಭತ್ತದ ಗದ್ದೆಗಳಲ್ಲಿ, ನಮ್ಮ ಬದುಕಿನ ಪ್ರತಿಯೊಂದು ಹಂತವೂ ಗದ್ದೆ ಮತ್ತು ಭತ್ತದೊಳಗೆ ಸುತ್ತಿಕೊಂಡಿದೆ. ಭತ್ತ ಬೆಳೆಯನ್ನು ಕೇವಲ ವೃತ್ತಿ ಅಥವಾ ಕೃಷಿಯಾಗಿ ನೋಡದೆ, ಇದೊಂದು ಸಂಪ್ರದಾಯ, ಸಂಸ್ಕೃತಿಯಾಗಿ ಸಂಭ್ರಮ ಪಡುವಂತಾಗಬೇಕು. ಪ್ರತೀ ಕೊಡವನೂ ಕನಿಷ್ಟ ಒಂದು ಗದ್ದೆ ನೆಡುವಂತಾಗಬೇಕು, ಹಾಗಾದಾಗ ಮಾತ್ರ ನಮ್ಮ ಪೂರ್ವಜರು ಉಳಿಸಿಹೋದ ಸಂಸ್ಕೃತಿ ಬೆಳೆಯಲು ಸಾಧ್ಯ, ಆಧುನಿಕತೆಯ ಹೆಸರಿನಲ್ಲಿ ದುಂದುವೆಚ್ಚಕ್ಕಿAತ ಸಾಂಪ್ರದಾಯಿಕ, ಸ್ವಸಹಾಯ ಪದ್ದತಿಯ ಕೃಷಿಗೆ ಒತ್ತುಕೊಡುವಂತಾಗಬೇಕು ಎಂದರು. ಸಂಘಟನೆಯ ಉಪಾಧ್ಯಕ್ಷ ಮಾಳೇಟಿರ ಅಜಿತ್ ಪೂವಣ್ಣ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರೆ, ಉಪಾಧ್ಯಕ್ಷೆ ಕುಲ್ಲಚಂಡ ವಿನುತ ಕೇಸರಿ ಅವರು ವಂದಿಸಿ, ಸದಸ್ಯೆ ಕುಲ್ಲಚಂಡ ದೇಚಮ್ಮ ಕೇಸರಿ ಅವರು ಫೇಸ್ಬುಕ್ ಲೈವ್ ಪಡೆಸಿದರು.