ಕಣಿವೆ, ಮೇ ೩೧: ಕಳೆದ ಕೆಲವು ವರ್ಷಗಳ ಹಿಂದೆ ಆನ್‌ಲೈನ್ ವಂಚಕರ ಕರಾಮತ್ತಿಗೆ ಸಿಲುಕಿದ ವಿದ್ಯಾವಂತ ತರುಣನೊಬ್ಬ ಲಕ್ಷಾಂತರ ರೂಪಾಯಿಗಳ ಹಣ ಕಳೆದುಕೊಂಡು ಈಗ ಬೀದಿ ಪಾಲಾಗಿದ್ದಾನೆ.

ಈತನ ಹೆಸರು ಶಿವಶಂಕರ್. ಕಣಿವೆ ಗ್ರಾಮದ ನಿವಾಸಿ. ಈತ ಡಿಪ್ಲೊಮಾ ಓದಿಕೊಂಡು ಜೀವನಕ್ಕೆ ಉದ್ಯೋಗದ ಹುಡುಕಾಟದಲ್ಲಿದ್ದ. ಆದರೆ ಉದ್ಯೋಗ ಅರಸುವ ಆತುರಕ್ಕೆ ಬಿದ್ದ ಈತ ಆನ್‌ಲೈನ್ ಶೋಧದಲ್ಲಿ ನಿರತನಾಗಿದ್ದಾಗ ಯಾವುದೋ ಆನ್‌ಲೈನ್ ನಯವಂಚಕರು ಹಾಕಿದ ಮೋಸದ ಗಾಳಕ್ಕೆ ಸಿಲುಕಿದ. ತನ್ನ ಬಳಿ ಇದ್ದ ಲಕ್ಷಾಂತರ ರೂಪಾಯಿಗಳ ಹಣವನ್ನು ಕಳೆದುಕೊಂಡ. ಈಗ ದಿಕ್ಕೇ ತೋಚದಾಗಿದ್ದಾನೆ.

ಸ್ವಚ್ಛವಾಗಿ ಬಟ್ಟೆ ಧರಿಸುವ ಈತ ಮುಂಜಾನೆ ಮನೆ ಬಿಟ್ಟರೆ ರಾತ್ರಿಯಾದರೂ ಮನೆ ಸೇರುವುದಿಲ್ಲ. ಕಣಿವೆ ಗ್ರಾಮದ ತನ್ನ ಮನೆಯ ಮುಂದಿನ ರಾಜ್ಯ ಹೆದ್ದಾರಿಯಲ್ಲಿ ಸುತ್ತುತ್ತಿರುತ್ತಾನೆ. ಈತ ತಾನು ಎಲ್ಲಿ ಹೋಗುತ್ತೇನೆ? ಏನು ಮಾಡುತ್ತೇನೆ? ಎಂಬ ಪರಿಜ್ಞಾನವೂ ಇಲ್ಲದೆಯೇ ಸುಮ್ಮನೆ ಹೆದ್ದಾರಿಯಲ್ಲಿ ಒಬ್ಬೊಬ್ಬನೇ ಪಾದಚಾರಿಯಾಗುತ್ತಾನೆ.

ಕೂಡಿಗೆ-ಹೆಬ್ಬಾಲೆ ರಾಜ್ಯ ಹೆದ್ದಾರಿ, ಕುಶಾಲನಗರ-ಮಡಿಕೇರಿ ರಾಷ್ಟಿçÃಯ ಹೆದ್ದಾರಿ... ಹೀಗೆ ಎಲ್ಲೆಂದರಲ್ಲಿ ರಸ್ತೆ ಬದಿಯಲ್ಲಿ ತಾನೊಬ್ಬನೇ ಒಂದು ಸೂಟ್‌ಕೇಸ್ ಹಿಡಿದುಕೊಂಡು ತಿರುಗುತ್ತಾನೆ.

ಯಾರಾದರೂ ಪರಿಚಯಸ್ಥರು ಈತನನ್ನು ನೋಡಿ ಬಾ ವಾಹನ ಹತ್ತು, ಎಲ್ಲಿಗೆ ಹೋಗಬೇಕು ಬಿಡ್ತೇನೆ, ಅಂದರೆ ಇಲ್ಲ ಇಲ್ಲ ಅಂತ ಓಡುತ್ತಾನೆ. ಅಷ್ಟೇ ಅಲ್ಲ ತಗೋ ಊಟ - ತಿಂಡಿ ಮಾಡು ಅಂತ ಹಣ ಕೊಡೋಕೆ ಹೋದರೆ ಬೇಡ ಬೇಡ ಅಂತಾ ಓಡುತ್ತಾನೆ.

ಇದೀಗ ಕಳೆದ ಕೆಲವು ದಿನಗಳಿಂದ ಒಂದು ಸೂಟ್‌ಕೇಸ್ ಕೈಯಲ್ಲಿ ಹಿಡಿದು ಸಾಗುತ್ತಾ ಇದ್ದಾನೆ. ಈತನ ನತದೃಷ್ಟ ಬದುಕು ಕಂಡು ಅತ್ತ ಮಮ್ಮಲ ಮರುಗಿ ಕಣ್ಣೀರಾಗುವ ಈತನ ತಾಯಿ ಮನೆಯಲ್ಲಿ ಊಟ ನೀರು ಸರಿಯಾಗಿ ಸೇವಿಸದೆ ಈತನ ದಯನೀಯ ಬದುಕನ್ನು ಕಂಡು ಗೋಳಿಡುತ್ತಿದ್ದಾರೆ.

‘ಶಕ್ತಿ'ಗೆ ಎದುರಾದ ಈತ, ಎಲ್ಲಿಗೆ ಹೋಗ್ತಾ ಇದ್ದೀಯೋ ಶಿವಶಂಕರ ಎಂದರೆ, ನನ್ನ ಮನೆ ನಾಳೆ ಓಪನ್ ಇದೆ. ಅದಕ್ಕೆ ಹೋಗ್ತಾ ಇದ್ದೇನೆ ಎಂದ.

ಹಿAದಿನ ಘಟನೆ

ಕುಶಾಲನಗರದ ಸೈಬರ್ ಸೆಂಟರ್ ಒಂದರಲ್ಲಿ ತಾನು ಏನೋ ಸರ್ಚ್ ಮಾಡುತ್ತಿದ್ದಾಗ, ನನ್ನ ಬಳಿ ಕೋಟ್ಯಾಂತರ ರೂಪಾಯಿ ಹಣ ಇದೆ. ಅದನ್ನು ಇಂಡಿಯನ್ ಕರೆನ್ಸಿಯಾಗಿ ಮಾಡಿಕೊಡ್ತೇನೆ. ತಾವು ದಿಢೀರ್ ಶ್ರೀಮಂತರಾಗುವ ಕನಸು ಹೊಂದಿದ್ದರೆ ನನಗೆ ಒಂದು ಲಕ್ಷ ಇಂಡಿಯನ್ ಕರೆನ್ಸಿ ಕಳಿಸಿ ಎಂಬ ಮೋಸದ ಇಂಟರ್‌ನೆಟ್ ಮೆಸೇಜ್‌ಗೆ ಮಾರುಹೋದ ಈ ಶಿವಶಂಕರ್, ಯಾರಿಗೂ ಹೇಳದೆಯೇ, ಏನನ್ನು ಯೋಚಿಸದೆಯೇ ತನ್ನ ಬಳಿ ಇದ್ದ ಹಣವನ್ನು ತಂದು ಆ ಇಂಟರ್‌ನೆಟ್ ನಯವಂಚಕ ಕಳಿಸಿದ್ದ ಅಕೌಂಟ್ ನಂಬರ್‌ಗೆ ಕಳಿಸಿಯೇ ಬಿಟ್ಟ.

ಅತ್ತ ತಾನು ಬೀಸಿದ ಗಾಳಕ್ಕೆ ಅಂಗಾತ ಬಿದ್ದ ಈತನ ಮನಸ್ಥಿತಿಯನ್ನು ಅರಿತ ನಯವಂಚಕರು, ಮತ್ತೆ ಮರು ದಿನ ನನ್ನ ಬಳಿ ಇರುವ ಕೋಟ್ಯಾಂತರ ರೂಪಾಯಿಗಳನ್ನು ಇಂಡಿಯನ್ ಕರೆನ್ಸಿಯಾಗಿ ಪರಿವರ್ತಿಸಿ ನಿಮ್ಮ ಅಕೌಂಟ್ ನಂಬರಿಗೆ ಕಳಿಸಲು ಮತ್ತೆ ಎರಡು ಲಕ್ಷ ಹಣ ಹಾಕಿ ಎಂದಾಗ, ಮತ್ತೆ ಎರಡನೇ ಬಾರಿಗೆ ತನ್ನ ತಾಯಿಯ ಬಳಿ ಠೇವಣಿ ಇದ್ದ ಲಕ್ಷಗಳನ್ನು ಒಯ್ದ ಈ ಶಿವಶಂಕರ ಇದ್ದುದೆಲ್ಲವನ್ನು ಕಳಿಸಿ ಕಳಿಸಿ ಜೇಬು ಖಾಲಿಯಾಗಿ ಕೈ ತೊಳೆದುಕೊಂಡ ನಂತರ ಮೋಸ ಹೋದ ಬಗ್ಗೆ ಈತನಿಗೆ ಅರಿವಾಗುತ್ತದೆ.

ಬಳಿಕ ಪೊಲೀಸರಿಗೆ ದೂರು ನೀಡಿದರೆ ಯಾವುದೇ ಪ್ರಯೋಜನವೂ ಆಗಲಿಲ್ಲ. ರಾತ್ರಿ-ಹಗಲು ಊಟ, ನಿದ್ರೆ ಬಿಟ್ಟು ತಲೆ ಮೇಲೆ ಕೈ ಇಟ್ಟುಕೊಂಡ ಈತ ಮಾನಸಿಕವಾಗಿ, ದೈಹಿಕವಾಗಿ ಸಾಕಷ್ಟು ಬಳಲಿ ಹೋದ.

ಇದೀಗ ತನ್ನ ಸೋದರ ಹಾಗೂ ತಾಯಿಯ ಮಾತು ಕೇಳದೆಯೇ ಮಾನಸಿಕವಾಗಿ ವಿಚಲಿತನಾಗಿ ಈತ ತನಗರಿವಿಲ್ಲದಂತೆ ಎಲ್ಲೆಲ್ಲೋ ಓಡಾಡುತ್ತಿದ್ದಾನೆ. ಈತನಿಗೆ ಆದ ಆನ್‌ಲೈನ್ ವಂಚನೆ ಇತರರಿಗೆ ಬಹು ದೊಡ್ಡ ಪಾಠವಾಗಬೇಕಿದೆ ಎಂಬುದು ಈ ಲೇಖನದ ಉದ್ದೇಶ.

ಸಹೃದಯರು ಮಾನವೀಯತೆ ಮೆರೆಯುವ ಮೂಲಕ ಈತನನ್ನು ಕೌನ್ಸೆಲಿಂಗ್‌ಗೆ ಒಳಪಡಿಸಿ ಸೂಕ್ತ ಚಿಕಿತ್ಸೆ ಕೊಡಿಸಿದಲ್ಲಿ ಮೊದಲಿನ ಶಿವಶಂಕರ ಆಗುತ್ತಾನಾ; ಪ್ರಯತ್ನ ಮಾಡಬಹುದಲ್ಲವೇ...?

- ಕೆ.ಎಸ್. ಮೂರ್ತಿ