ಕಾರ್ಯಾಚರಣೆ ವೇಳೆ ಕುಸಿದು ಬಿದ್ದು ಮೃತಪಟ್ಟ ಕಾಡಾನೆ

(ವರದಿ : ಅಶ್ರಫ್)

ಚೆಯ್ಯಂಡಾಣೆ, ಮೇ ೩೧: ಚೆಯ್ಯಂಡಾಣೆ ವ್ಯಾಪ್ತಿಯಲ್ಲಿ ಕಳೆದ ಕೆಲವು ದಿನಗಳಿಂದ ಕಾಡಾನೆ ಸೆರೆ ಕಾರ್ಯಾಚರಣೆ ನಡೆಯುತ್ತಿದ್ದು, ಇಂದು ಮರಂದೋಡದಲ್ಲಿ ಕಾರ್ಯಾಚರಣೆ ಸಂದರ್ಭವೇ ಕಾಡಾನೆಯೊಂದು ಮೃತಪಟ್ಟ ಘಟನೆ ನಡೆದಿದೆ. ಭಾನುವಾರ ಕಾರ್ಯಾಚರಣೆಯಲ್ಲಿ ಸೆರೆಯಾದ ಕಾಡಾನೆಯೊಂದು ಕಾಲು ಮುರಿತಕ್ಕೆ ಒಳಗಾಗಿ ಇದೀಗ ದುಬಾರೆ ಸಾಕಾನೆ ಶಿಬಿರದಲ್ಲಿದೆ.

ಸೆರೆಹಿಡಿಯಲು ಅನುಮತಿ ದೊರೆತ ಮತ್ತೆರಡು ಕಾಡಾನೆಗಳನ್ನು ಸೆರೆಹಿಡಿಯುವ ಕಾರ್ಯಾಚರಣೆಯ ಮಧ್ಯೆ ನಿನ್ನೆ ಆನೆಗಳ ಹಿಂಡು ಯವಕಪಾಡಿಗೆ ಲಗ್ಗೆ ಇಟ್ಟವು. ಇಂದು ಬೆಳಿಗ್ಗೆ ೮ ಗಂಟೆಗೆ ಕಾರ್ಯಾಚರಣೆ ಆರಂಭಿಸಿದಾಗ ಆನೆಗಳು ಮರಂದೋಡ ವ್ಯಾಪ್ತಿಯಲ್ಲಿ ಇದ್ದುದರಿಂದ ಕಾರ್ಯಾಚರಣೆಯನ್ನು ಚುರುಕು ಗೊಳಿಸಲಾಯಿತು. ಮಧ್ಯಾಹ್ನ ೧೨ ಗಂಟೆಗೆ ಕಾರ್ಯಾಚರಣೆ ತಂಡಕ್ಕೆ ಎದುರಾದ ಆನೆಯೊಂದಕ್ಕೆ ಇಲಾಖೆಯ ರಮೇಶ್ ಅವರಿಂದ ಅರವಳಿಕೆ ನೀಡಲಾಯಿತು. ಪ್ರಜ್ಞೆ ತಪ್ಪಿದ ಬಳಿಕ `ರಿವೈವಲ್'(ಅರೆ ಪ್ರಜ್ಞೆ ಬರಿಸಲು ಮತ್ತೊಂದು ಮದ್ದಿನ ಬಳಕೆ) ಮಾಡಿದ ನಂತರ ಆನೆ ಚೇತರಿಸಿ ಕೊಂಡಿತ್ತಾದರೂ ಅಲ್ಲಿಂದ ೫ ಸಾಕಾನೆಗಳ ಮುಖಾಂತರ ಮುಖ್ಯ ರಸ್ತೆಗೆ ತರಲು ಹರಸಾಹಸಪಟ್ಟರೂ ಸಫಲತೆ ಕಾಣಲಿಲ್ಲ. ಬಳಿಕ ಆನೆಯು ಅನಿರೀಕ್ಷಿತವಾಗಿ ನೆಲಕ್ಕುರುಳಿ ಕೊನೆಯುಸಿರೆಳೆಯಿತು.

ಸ್ಥಳದಲ್ಲಿ ಜಮಾಯಿಸಿದ್ದ ಗ್ರಾಮಸ್ಥರು ಈ ಘಟನೆಗೆ ಸಾಕ್ಷಿಯಾದರು. ಅರಣ್ಯ ಇಲಾಖೆಯ ವೈದ್ಯರು ಆನೆಯ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಆನೆಯನ್ನು ಹೂಳÀಲಾಯಿತು.

`ಕಾರ್ಯಾಚರಣೆ ಮುಂದುವರಿಯಲಿದೆ'

ಸ್ಥಳದಲ್ಲಿದ್ದ ವೀರಾಜಪೇಟೆ ಅರಣ್ಯ ವಲಯ ಡಿ.ಎಫ್.ಓ ಚಕ್ರಪಾಣಿ ಮಾಹಿತಿ ನೀಡಿ ಕಾರ್ಯಾಚರಣೆ ಸಂದರ್ಭ ಹೆಣ್ಣಾನೆ ಬಲಿಯಾಗಿದ್ದು, ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಸಾವಿನ ನಿಖರ ಮಾಹಿತಿ ಲಭ್ಯವಾಗಲಿದೆ ಎಂದರು. ಯಾವುದೇ ಕಾರಣಕ್ಕೂ ನಾವು ಕಾರ್ಯಾಚರಣೆ ಸ್ಥಗಿತ ಗೊಳಿಸುವುದಿಲ್ಲ. ತಾ. ೧ರಂದು ಮತ್ತೆ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಭರವಸೆ ನೀಡಿದರು.

ಕುಂಜಿಲ-ಕಕ್ಕಬೆ ಗ್ರಾಮ ಪಂಚಾಯಿತಿ ಸದಸ್ಯ ಹರೀಶ್ ಮೊಣ್ಣಪ್ಪ ಮಾತನಾಡಿ ಈ ಭಾಗದ ಗ್ರಾಮಸ್ಥರು ಕಾಡಾನೆ ಹಾವಳಿಯಿಂದ ತತ್ತರಿಸಿದ್ದಾರೆ. ಮೊನ್ನೆ ಒಂದು ಕಾಡಾನೆ ಯನ್ನು ಹಿಡಿದು ಸ್ಥಳಾಂತರಿಸಿದ್ದಾರೆ. ಇಂದು ಕಾರ್ಯಾಚರಣೆ ಸಂದರ್ಭ ಆನೆಯೊಂದು ಬಲಿಯಾಗಿದ್ದು ದುಃಖಕರ. ಆದರೆ ಅರಣ್ಯಾಧಿಕಾರಿಗಳು ಕಾರ್ಯಾಚರಣೆ ಸ್ಥಗಿತಗೊಳಿಸದೆ ಮುಂದುವರಿಸಬೇಕೆAದು ಒತ್ತಾಯಿಸಿದರು. ಕಾರ್ಯಾಚರಣೆ ವೇಳೆ ಹಾನಿಗೊಳಗಾದ ತೋಟದ ಮಾಲೀಕರಿಗೆ ಪರಿಹಾರ ಒದಗಿಸ ಬೇಕೆಂದು ಆಗ್ರಹಿಸಿದರು.

ಗ್ರಾಮಸ್ಥರಾದ ಪೊಕ್ಕುಳಂಡ್ರ ದನೋಜ್ ಮಾತನಾಡಿ ಗ್ರಾಮಸ್ಥರು ಅರಣ್ಯ

(ಮೊದಲ ಪುಟದಿಂದ) ಇಲಾಖೆಯೊಂದಿಗೆ ೩, ೪ ದಿನಗಳಿಂದ ಸಂಪೂರ್ಣ ಸಹಕರಿಸುತ್ತಿದ್ದಾರೆ. ಕಳೆದ ೧೨ ವರ್ಷಗಳಿಂದ ಕಾಡಾನೆ ಹಾವಳಿಯಿಂದ ರೈತರು ನಿರಂತರ ನಷ್ಟ ಅನುಭವಿಸುತ್ತಿದ್ದು ಶಾಲಾ ಕಾಲೇಜು ವಿದ್ಯಾರ್ಥಿಗಳು ಹೊರಬರಲು ಹೆದರುವಂತಹ ಪರಿಸ್ಥಿತಿಯಿದೆ. ಹಲವಾರು ವರ್ಷಗಳಿಂದ ಮನವಿ ಕೊಟ್ಟರೂ ಕಾಡಾನೆ ಹಿಡಿಯುವ ಕಾರ್ಯಕ್ಕೆ ಅರಣ್ಯಾಧಿಕಾರಿಗಳು ಮುಂದೆ ಬರುತ್ತಿರಲಿಲ್ಲ. ಆದರೆ ಪ್ರಸಕ್ತ ಸಾಲಿನಲ್ಲಿ ಅನುಮತಿ ಸಿಕ್ಕಿ ಒಂದು ಆನೆಯನ್ನು ಸೆರೆಹಿಡಿದಿದ್ದಾರೆ. ಇಂದಿನ ಕಾರ್ಯಾಚರಣೆಯಲ್ಲಿ ಆನೆ ಬಲಿಯಾಗಿದ್ದು ಬೇಸರ. ಆದರೆ ಕಾರ್ಯಾಚರಣೆ ಸ್ಥಗಿತ ಗೊಳಿಸದೇ ಮುಂದುವರಿಸಿ ಉಳಿದ ಆನೆಯನ್ನು ಹಿಡಿಯಬೇಕೆಂದು ಹಾಗೂ ನಷ್ಟ ಅನುಭವಿಸಿದ ತೋಟದ ಮಾಲೀಕನಿಗೆ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು. ಕಾರ್ಯಾಚರಣೆ ವೇಳೆ ಡಿ.ಸಿ.ಎಫ್. ಶಿವರಾಂ ಬಾಬು, ಸಿ.ಸಿ.ಎಫ್. ಬಿ.ಎನ್. ಮೂರ್ತಿ, ರೋಶ್ನಿ, ಮೋನಿಷಾ ಹಾಗೂ ಇತರರು ಇದ್ದರು.