(ವಿಶೇಷ ವರದಿ : ಹೆಚ್.ಕೆ.ಜಗದೀಶ್)

ಗೋಣಿಕೊಪ್ಪಲು, ಮೇ ೩೧ : ಕಾಡಾನೆಗಳು ಸಂಚರಿಸುವ ಮಾರ್ಗದಲ್ಲಿ ಸೋಲಾರ್ ಬೇಲಿ ಹಾಗೂ ಆನೆ ಕಂದಕಗಳನ್ನು ನಿರ್ಮಾಣ ಮಾಡಿರುವುದರಿಂದ ಕಾಡಾನೆಗಳು ಅರಣ್ಯ ಪ್ರದೇಶಕ್ಕೆ ತೆರಳಲಾಗದೆ ಬ್ರಹ್ಮಗಿರಿ ತಪ್ಪಲಿನ ಪ್ರದೇಶಗಳಾದ ಕುಟ್ಟ, ಮಂಚಳ್ಳಿ, ಕುರ್ಚಿ, ಕಾಯಿಮಾನಿ, ಕುಮಟೂರು, ಬೀರುಗ, ತೆರಾಲು ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿರುವ ರೈತರ ಕಾಫಿ ತೋಟಗಳಿಗೆ ನುಗ್ಗಿ ಇವುಗಳನ್ನೇ ವಾಸಸ್ಥಳವನ್ನಾಗಿ ಮಾಡಿಕೊಂಡಿವೆ.

ಕರ್ನಾಟಕ - ಕೇರಳ ಗಡಿಭಾಗ ವಾದ ನಾಗರಹೊಳೆ ವೈನಾಡು ಅರಣ್ಯ ಪ್ರದೇಶದ ಬ್ರಹ್ಮಗಿರಿ ಅರಣ್ಯಕ್ಕೆ ಸಂಚರಿಸಲು ಕಾಡಾನೆಗಳು ತಮ್ಮ ಮಾರ್ಗವನ್ನು ಈ ಹಿಂದಿನಿAದಲೂ ಕಂಡುಕೊAಡಿದ್ದವು. ಇದೀಗ ಕೇರಳದ ಭಾಗವಾದ ತೋಲ್ಪಟ್ಟಿ ಬಳಿ ಇರುವ ಖಾಸಗಿ ಮಾಲೀಕತ್ವದ ಕಾಫಿ ತೋಟದ ಮಾಲೀಕರು ತಮ್ಮ ವ್ಯಾಪ್ತಿಯಲ್ಲಿ ಬರುವ ಕಾಫಿ ತೋಟಕ್ಕೆ ಕಾಡಾನೆಗಳು ನಿರಂತರ ದಾಳಿ ಇಡುವುದನ್ನು ಗಮನಿಸಿ ತಮ್ಮ ತೋಟದ ಸುತ್ತಲಿನ ಪ್ರದೇಶದಲ್ಲಿ ಕಂದಕ ನಿರ್ಮಾಣ ಹಾಗೂ ಸೋಲಾರ್ ಬೇಲಿಯನ್ನು ಅಳವಡಿಸಿದ್ದಾರೆ. ಇದರಿಂದ ಬಹುಮುಖ್ಯವಾದ ಕಾಡಾನೆಗಳ ಸಂಚಾರಕ್ಕೆ ತೊಂದರೆಯಾಗಿದೆ. ಆನೆ ಕಾರಿಡಾರಿಗೆ ತೊಂದರೆ ಆದ ಹಿನ್ನೆಲೆಯಲ್ಲಿ ಕೇರಳ ರಾಜ್ಯದ ಕಾಡಾನೆಗಳು ಹಾಗೂ ಕರ್ನಾಟಕ ರಾಜ್ಯದ ಕಾಡಾನೆಗಳು ಅನ್ಯ ಮಾರ್ಗವಿಲ್ಲದೆ ಬ್ರಹ್ಮಗಿರಿ ತಪ್ಪಲಿನ ಪ್ರದೇಶಗಳಿಗೆ ಲಗ್ಗೆ ಇಟ್ಟು ಕಾಫಿ ಬೆಳೆಗಾರರ ತೋಟದಲ್ಲಿ ತಮ್ಮ ಸಂಸಾರ ವೃದ್ದಿಸಿಕೊಳ್ಳುತ್ತಿವೆ.

ಇದಕ್ಕೆ ಪುಷ್ಠಿ ನೀಡುವಂತೆ ಇತ್ತೀಚೆಗೆ ನಾಗರಹೊಳೆ ವ್ಯಾಪ್ತಿಗೆ ಬರುವ ಇರ್ಪು ಜಲಪಾತದ ಸಮೀಪ ಕಾಡಾನೆಯೊಂದು ಮರಿಗಳಿಗೆ ಜನ್ಮ ನೀಡಿದ್ದು ಅನೇಕ ದಿನಗಳು ಈ ಭಾಗದಲ್ಲಿ ಜನರ ಓಡಾಟವನ್ನು ನಿಷೇಧಗೊಳಿಸಲಾಗಿತ್ತು. ಈ ಭಾಗದ ರೈತರು ತಮ್ಮ ತೋಟ ಗಳಿಗೆ ಕಾಡಾನೆಗಳ ನಿಯಂತ್ರಣಕ್ಕೆ ಸೋಲಾರ್ ಬೇಲಿಗಳನ್ನು ಅಳವಡಿಸಿ ದ್ದರೂ ಕಾಡಾನೆಗಳು ಇವುಗಳನ್ನು ಮುರಿದು ತೋಟದಲ್ಲಿಯೇ ನೆಲೆಸುತ್ತಿವೆ. ಇದರಿಂದ ಈ ಭಾಗದ ರೈತರಿಗೆ ತೋಟಗಳಿಗೆ ತೆರಳಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ತೋಟದಲ್ಲಿ ಬೆಳೆಯಲಾಗುತ್ತಿರುವ ಕಾಫಿ, ಮೆಣಸು, ತೆಂಗು, ಅಡಿಕೆ, ಬಾಳೆ, ಇತ್ಯಾದಿ ಬೆಳೆಗಳು ಕಾಡಾನೆಗಳ ಹಾವಳಿಗೆ ತುತ್ತಾಗುತ್ತಿವೆ.

(ಮೊದಲ ಪುಟದಿಂದ) ತೋಟಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳು ಒಂದು ತೋಟದಿಂದ ಮತ್ತೊಂದು ಕಾಫಿ ತೋಟಕ್ಕೆ ಲಗ್ಗೆ ಇಡುತ್ತಿದ್ದು ರೈತರು ಭತ್ತದ ಗದ್ದೆಗಳನ್ನು ನೆಟ್ಟ ವೇಳೆ ಹಾಗೂ ಕೊಯ್ಲು ಬಂದ ಸಂದರ್ಭದಲ್ಲಿ ಕಾಡಾನೆಗಳು ಗದ್ದೆಗಳಿಗೆ ಧಾಂಗುಡಿ ಇಟ್ಟು ಹಾಳು ಮಾಡುತ್ತಿವೆ. ಈ ವೇಳೆ ಸಮೀಪದಲ್ಲಿರುವ ರೈತರ ಗದ್ದೆ ಬದಿಯ ಕೆರೆಗಳಿಗೆ ಇಳಿದು ಅಲ್ಲಿ ಅಳವಡಿಸಿರುವ ಪಂಪ್ ಸೆಟ್‌ಗಳನ್ನು ದ್ವಂಸಗೊಳಿಸುವುದಲ್ಲದೆ ಕೆರೆಯ ದಂಡೆಗಳನ್ನು ಹಾಳು ಗೆಡುವುತ್ತಿವೆ.

ಬ್ರಹ್ಮಗಿರಿ ತಪ್ಪಲಿನ ಅರಣ್ಯ ಪ್ರದೇಶದ ಈ ಭಾಗದಲ್ಲಿ ಕಳೆದ ಹತ್ತು ವರ್ಷಗಳ ಹಿಂದೆ ಆರೇಳು ಕಾಡಾನೆಗಳ ಸಂಚಾರವಿತ್ತೆAದು ಈ ಭಾಗದ ರೈತರು ತಮ್ಮ ಅನುಭವಗಳನ್ನು ಹಂಚಿಕೊAಡಿದ್ದಾರೆ. ಇದೀಗ ಈ ಭಾಗದಲ್ಲಿ ಕನಿಷ್ಟ ೪೦ರಿಂದ ೫೦ಕ್ಕೂ ಹೆಚ್ಚು ಕಾಡಾನೆಗಳು ಕಾಫಿ ತೋಟಗಳನ್ನೇ ತಮ್ಮ ವಾಸ ಸ್ಥಳವಾಗಿಸಿಕೊಂಡಿವೆ.

ಕಾಡಾನೆಗಳ ಭಯದಿಂದ ಕಾಫಿ ತೋಟಗಳಿಗೆ ಕಾರ್ಮಿಕರು ತೆರಳಲು ಸಹಜವಾಗಿಯೇ ಹಿಂದೇಟು ಹಾಕುತ್ತಿದ್ದಾರೆ. ಆಗೊಮ್ಮೆ ಈಗೊಮ್ಮೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಕಾಫಿ ತೋಟದಲ್ಲಿ ನೆಲೆ ನಿಂತಿರುವ ಕಾಡಾನೆಗಳನ್ನು ಓಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಒಂದು ತೋಟದಿಂದ ಮತ್ತೊಂದು ತೋಟದ ಮಾರ್ಗವಾಗಿ ಕಾಡಾನೆಗಳನ್ನು ಓಡಿಸಬೇಕಾದ ಸಂದರ್ಭದಲ್ಲಿ ತೋಟದ ಮಾಲೀಕರು ತಮ್ಮ ತೋಟದ ಮೂಲಕ ಕಾಡಾನೆಗಳನ್ನು ಓಡಿಸದಂತೆ ಅರಣ್ಯ ಅಧಿಕಾರಿಗಳಿಗೆ ತಾಕೀತು ಮಾಡುತ್ತಿದ್ದಾರೆ. ಇದರಿಂದ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಏನೂ ಮಾಡಲು ಸಾಧ್ಯವಾಗದ ಪರಿಸ್ಥಿತಿ ಮುಂದುವರೆದಿದೆ.