ಗೋಣಿಕೊಪ್ಪಲು. ಮೇ ೩೦: ಬ್ರಹ್ಮಗಿರಿ ವನ್ಯಜೀವಿ ವಿಭಾಗದ ಅರಣ್ಯ ವ್ಯಾಪ್ತಿಯಿಂದ ಕೊಡಗಿನ ಬಿಟ್ಟಂಗಾಲ, ರುದ್ರಗುಪ್ಪೆ, ಬಿ.ಶೆಟ್ಟಿಗೇರಿ, ಕೊಂಗಣ, ಕುಂದ, ಈಚೂರು, ಹಾತೂರು ಬೈಗೋಡು ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ಕಳೆದ ಮೂರು ತಿಂಗಳಿನಿAದ ವಾಸವಾಗಿದ್ದ ೫ಕ್ಕೂ ಹೆಚ್ಚಿನ ಹುಲಿಗಳು ಗ್ರಾಮದ ಸುತ್ತಮುತ್ತಲಿನ ರೈತರ ಜಾನುವಾರುಗಳ ಮೇಲೆ ದಾಳಿ ನಡೆಸಿ ನಂತರ ಮಾನವನ ಹತ್ಯೆಗೆ ಕಾರಣವಾಗಿ ಕೊಂಚ ವಿರಾಮ ನೀಡಿತ್ತಾದರೂ ಮತ್ತೆ ಬಿ.ಶೆಟ್ಟಿಗೇರಿಯ ಕಂಡಮನೆ ಎಂಬ ಪ್ರದೇಶದ ಕಾಳೇಂಗಡ ಅಪ್ಪಯ್ಯನವರ ಹಸುವಿನ ಮೇಲೆ ದಾಳಿ ನಡೆಸಿ ಬಲಿ ಪಡೆಯುವ ಮೂಲಕ ಹುಲಿಯ ಕಾಟ ಮತ್ತೊಮ್ಮೆ ಎದುರಾಗಿದೆ.
ಹಲವಾರು ಜಾನುವಾರುಗಳ ಮೇಲೆ ದಾಳಿ ನಡೆಸಿ ತಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಹುಲಿಗಳು ಇದೀಗ ಬಿ.ಶೆಟ್ಟಿಗೇರಿ ಭಾಗದಲ್ಲಿ ಅಡಗಿರಬಹುದೆಂಬ ಮಾಹಿತಿಯ ಮೇರೆ ಅರಣ್ಯ ಇಲಾಖೆಯ ವಿವಿಧ ತಂಡ ಹಾಗೂ ವೈದ್ಯರು, ನುರಿತ ಶೂಟರ್ಸ್ ಕಾರ್ಯಾಚರಣೆ ಆರಂಭಿಸಿದ್ದಾರೆ. ಹಸುವಿನ ಕಳೇಬರದ ಬಳಿ ಹುಲಿಯು ಮಾಂಸಕ್ಕಾಗಿ ಆಗಮಿಸಬಹುದೆಂಬ ನಿರೀಕ್ಷೆಯಲ್ಲಿ ಸಮೀಪದ ಮರದ ಮೇಲೆ ಅಟ್ಟಣಿಗೆಯನ್ನು ನಿರ್ಮಿಸಿ ಇದರಲ್ಲಿ ವೈದ್ಯರು ಹಾಗೂ ಶೂಟರ್ಸ್ ಕಾರ್ಯನಿರ್ವಹಿಸುತ್ತಿದ್ದಾರೆ. ಆರ್.ಆರ್.ಟಿ. ತಂಡ ಸೇರಿದಂತೆ ೬೦ಕ್ಕೂ ಹೆಚ್ಚಿನ ಸಿಬ್ಬಂದಿ ಹುಲಿ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಕಳೆದ ೧೫ ದಿನಗಳ ಹಿಂದೆ ಜಿಲ್ಲೆಗೆ ಆಗಮಿಸಿದ್ದ ನೂತನ ಮುಖ್ಯ ಅರಣ್ಯಸಂರಕ್ಷಣಾ ಅಧಿಕಾರಿಗಳಾದ ಸಿಸಿಎಫ್ ಮೂರ್ತಿಯವರು ಹುಲಿ ಕಾರ್ಯಾಚರಣೆಗೆ ನೇತೃತ್ವ ವಹಿಸಿದ್ದು ಬಿ.ಶೆಟ್ಟಿಗೇರಿ ಬಳಿ ತೆರಳಿ ತಮ್ಮ ಸಹ ಸಿಬ್ಬಂದಿಗಳಿಗೆ ಹುಲಿಯನ್ನು ಸೆರೆ ಹಿಡಿಯಲು ಮಾರ್ಗದರ್ಶನ ನೀಡಿದ್ದಾರೆ. ವೀರಾಜಪೇಟೆ ಡಿಎಫ್ಒ ಚಕ್ರಪಾಣಿ ಹಾಗೂ ಇತರ ಅಧಿಕಾರಿಗಳು ಈ ಭಾಗದಲ್ಲಿ ಮೊಕಾಂ ಹೂಡಿದ್ದು ಹುಲಿಯನ್ನು ಸೆರೆ ಹಿಡಿಯುವ ಆಶಾ ಭಾವನೆಯಲ್ಲಿದ್ದಾರೆ.
(ಮೊದಲ ಪುಟದಿಂದ) ಇದೇ ಭಾಗದಲ್ಲಿ ಆಗಿಂದಾಗ್ಗೆ ರೈತರ ಜಾನುವಾರುಗಳ ಮೇಲೆ ಹುಲಿ ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಜಾಗೃತಗೊಂಡ ಅರಣ್ಯ ಇಲಾಖೆಯ ಅಧಿಕಾರಿಗಳು ಜಿಲ್ಲೆಗೆ ಆಗಮಿಸಿದ ಸಿಸಿಎಫ್ ಮೂರ್ತಿಯವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ಮುಂದುವರೆಸಿದ್ದಾರೆ.
ಕಳೆದ ಮಾ.೨೮ರ ಮಧ್ಯಾಹ್ನದ ವೇಳೆ ಬಿಟ್ಟಂಗಾಲದ ಸಮೀಪದ ಒಂದನೇ ರುದ್ರಗುಪ್ಪೆ ಗ್ರಾಮದಲ್ಲಿ ಕಾರ್ಮಿಕ ಗಣೇಶ್ ಎಂಬಾತನ ಮೇಲೆ ಹುಲಿಯೊಂದು ದಾಳಿ ಮಾಡಿ ಬಲಿ ತೆಗೆದುಕೊಂಡಿತ್ತು. ಈ ಘಟನೆಯಿಂದಾಗಿ ಸುತ್ತಮುತ್ತಲಿನ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದರು. ಗಣೇಶನ ಮೃತದೇಹ ಇಟ್ಟು ಗ್ರಾಮಸ್ಥರು ಹಾಗೂ ರೈತ ಸಂಘದ ಪದಾಧಿಕಾರಿಗಳು ಅಹೋರಾತ್ರಿ ಚಳುವಳಿ ನÀಡೆಸಿದ್ದರು. ನರಬಲಿಯನ್ನು ತೆಗೆದುಕೊಂಡ ಹುಲಿಯನ್ನು ಕೊಲ್ಲುವಂತೆ ಪ್ರತಿಭಟನಾಕಾರರು ಒತ್ತಡ ಹೇರಿದ್ದರು. ಪ್ರತಿಭಟನೆ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ತಿತಿಮತಿ, ಪೊನ್ನಂಪೇಟೆ, ನಾಗರಹೊಳೆ, ವೀರಾಜಪೇಟೆ ಸೇರಿದಂತೆ ಇನ್ನಿತರ ವಿಭಾಗದಿಂದ ಅರಣ್ಯ ಸಿಬ್ಬಂದಿಗಳನ್ನು ಕರೆಸಿಕೊಂಡು ಕಾರ್ಯಾಚರಣೆ ಆರಂಭಿಸಿದ್ದರು.
ಪ್ರತಿನಿತ್ಯ ಅರಣ್ಯ ವ್ಯಾಪ್ತಿಯ ಪ್ರದೇಶದಲ್ಲಿ ಕೂಬಿಂಗ್ ಕಾರ್ಯಾಚರಣೆ ನಡೆದಿತ್ತು. ಕುಟ್ಟಂದಿ ಬಳಿ ಅಧಿಕಾರಿಗಳು ಕ್ಯಾಂಪ್ ತೆರೆದು ಪ್ರತಿನಿತ್ಯ ಹುಲಿ ಕಾರ್ಯಾಚರಣೆಗೆ ವಿವಿಧ ತಂಡಗಳನ್ನು ರಚಿಸಿ ಕಾರ್ಯಪ್ರವೃತ್ತರಾಗಿದ್ದರು. ನಾಗರಹೊಳೆ ವನ್ಯಜೀವಿ ವಿಭಾಗದಡಿ ಎಫ್ಒ, ಶಿವರಾಮ್ ಬಾಬು, ಮಡಿಕೇರಿ ಡಿಎಫ್ಒ ಎ.ಟಿ.ಪೂವಯ್ಯ ಹಾಗೂ ವೀರಾಜಪೇಟೆ ಡಿಎಫ್ಒ ಚಕ್ರಪಾಣಿ, ಕುಟ್ಟಂದಿ ಬಳಿ ಕ್ಯಾಂಪ್ ಆರಂಭಿಸಿ ಸ್ಥಳದಲ್ಲಿಯೇ ಮೊಕಾಂ ಹೂಡಿ ಕಾರ್ಯಾಚರಣೆ ಆರಂಭಿಸಿದ್ದರು.
ಹುಲಿ ಸಂಚಾರದ ಗ್ರಾಮಗಳಲ್ಲಿ ೮೦ಕ್ಕೂ ಅಧಿಕ ಕ್ಯಾಮೆರಾಗಳನ್ನು ಅಳವಡಿಸಿ ಹುಲಿಯ ಸಂಚಾರದ ಬಗ್ಗೆ ಪ್ರತಿನಿತ್ಯ ತಿತಿಮತಿ ಎಸಿಎಫ್ ಉತ್ತಪ್ಪ, ಪೊನ್ನಂಪೇಟೆ ವಲಯ ಅರಣ್ಯ ಅಧಿಕಾರಿ ಅಶೋಕ್ ಹುನಗುಂದ, ದಿವಾಕರ್ ಸೇರಿದಂತೆ ನುರಿತ ಸಿಬ್ಬಂದಿಗಳು ಮಾಹಿತಿ ಪಡೆದು ಮುಂದಿನ ಕಾರ್ಯಾಚರಣೆಯ ರೂಪುರೇಷೆ ನಿರ್ವಹಿಸುತ್ತಿದ್ದರು. ಆದರೆ ಹುಲಿಯು ಪ್ರತಿದಿನ ತನ್ನ ಸ್ಥಳವನ್ನು ಬದಲಾಯಿಸುತ್ತ ಸುರಕ್ಷಿತ ಸ್ಥಳದಲ್ಲಿ ವಾಸವಾಗುತ್ತಿದ್ದವು. ಅರಣ್ಯ ಇಲಾಖೆಯು ಸತತ ೨ ತಿಂಗಳ ಕಾಲ ನಿರಂತರ ಹುಲಿ ಕಾರ್ಯಾಚರಣೆ ನಡೆಸಿತ್ತು. ನಂತರ ಹುಲಿಯು ಬಿ.ಶೆಟ್ಟಿಗೇರಿ ಬಳಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕ್ಯಾಂಪನ್ನು ಈ ಭಾಗಕ್ಕೆ ಸ್ಥಳಾಂತರಗೊಳಿಸಿ ಕಾರ್ಯಾಚರಣೆ ಆರಂಭಿಸಿತ್ತು. ಆದರೆ ಹುಲಿಯ ಸೆರೆ ಮಾತ್ರ ಸಾಧ್ಯವಾಗಿರಲಿಲ್ಲ.
ಇದೀಗ ಜಿಲ್ಲೆಗೆ ಆಗಮಿಸಿದ ನೂತನ ಅಧಿಕಾರಿ ಸಿಸಿಎಫ್ ಮೂರ್ತಿಯವರು ಹುಲಿಯ ಸೆರೆ ಕಾರ್ಯಾಚರಣೆಯನ್ನು ತಾವೇ ಖುದ್ದಾಗಿ ಪರಿಶೀಲನೆ ನಡೆಸಿ ಸೂಕ್ತ ನಿರ್ದೇಶನ ನೀಡಿದ್ದಾರೆ. ಈ ಭಾಗದಲ್ಲಿ ನಾಗರಿಕರಿಗೆ ಭಯವನ್ನುಂಟು ಮಾಡಿರುವ ಹಾಗೂ ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿರುವ ಹುಲಿಯನ್ನು ಸೆರೆ ಹಿಡಿಯಲು ಬೇಕಾದ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ.
-ಚಿತ್ರ ವರದಿ, ಹೆಚ್.ಕೆ. ಜಗದೀಶ್