ಸೋಮವಾರಪೇಟೆ, ಮೇ ೩೦: ಕೊಡಗು ಜಿಲ್ಲೆಯಲ್ಲಿ ಕಂದಾಯ ಇಲಾಖೆಗೆ ಸಂಬAಧಿಸಿದAತೆ ಜಾಗದ ದಾಖಲಾತಿಗಳಲ್ಲಿ ಸಾಕಷ್ಟು ಸಮಸ್ಯೆಗಳಿದ್ದು, ಒಂದೊAದಾಗಿ ಬಗೆಹರಿಸಲು ಪ್ರಯತ್ನ ಸಾಗಿದೆ. ಆರ್.ಟಿ.ಸಿ. ಸಂಬAಧಿತ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸಲು ಸಮರೋಪಾದಿ ಕಾರ್ಯ ಪ್ರಗತಿಯಲ್ಲಿದೆ ಎಂದು ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ್ ಹೇಳಿದರು.

ಕಂದಾಯ ಇಲಾಖೆ, ಜಿಲ್ಲಾಧಿಕಾರಿಗಳ ಕಚೇರಿ ಹಾಗೂ ತಾಲೂಕು ಆಡಳಿತದ ವತಿಯಿಂದ ಇಲ್ಲಿನ ತಾಲೂಕು ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾಧಿಕಾರಿಗಳ ನಡೆ-ತಾಲೂಕು ಕಡೆ ಅಭಿಯಾನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯ ಸರ್ಕಾರದ ಕಂದಾಯ ಇಲಾಖೆ, ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆಯಂತೆ ಜಿಲ್ಲಾಧಿಕಾರಿಗಳ ನಡೆ-ತಾಲೂಕು ಕಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸರ್ಕಾರಿ ಕಚೇರಿಗಳಿಗೆ ಜನ ಸಾಮಾನ್ಯರ ಅಲೆದಾಟವನ್ನು

(ಮೊದಲ ಪುಟದಿಂದ) ತಪ್ಪಿಸಿ; ಸರ್ಕಾರವೇ ಜನತೆಯ ಬಳಿಗೆ ತೆರಳಿ ಅವರ ಕುಂದುಕೊರತೆಗಳನ್ನು ಆಲಿಸಿ, ತಕ್ಷಣ ಸಮಸ್ಯೆ ಬಗೆಹರಿಸುವ ಉದ್ದೇಶದಿಂದ ಅಭಿಯಾನ ನಡೆಯುತ್ತಿದ್ದು, ಪ್ರಥಮ ಕಾರ್ಯಕ್ರಮ ವಾಗಿ ಸೋಮವಾರಪೇಟೆಯಲ್ಲಿ ಚಾಲನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ವಾರದ ಮಂಗಳವಾರ ಮತ್ತು ಶುಕ್ರವಾರ ಜಿಲ್ಲಾಧಿಕಾರಿಗಳು ಕೇಂದ್ರ ಕಚೇರಿಯಲ್ಲಿರಬೇಕಿದೆ. ಉಳಿದ ದಿನಗಳಲ್ಲಿ ೫ ತಾಲೂಕುಗಳಲ್ಲಿ ಜಿಲ್ಲಾಧಿಕಾರಿಗಳ ನಡೆ ಕಾರ್ಯಕ್ರಮ ಜರುಗಲಿದೆ. ಜನ ಸಾಮಾನ್ಯರ ಸಮಸ್ಯೆಗಳಿಗೆ ಸ್ಥಳದಲ್ಲೇ ಸ್ಪಂದಿಸುವ ಕಾರ್ಯವನ್ನು ಜಿಲ್ಲಾಡಳಿತ ಮಾಡಲಿದೆ. ಕಂದಾಯ ಇಲಾಖೆಯಲ್ಲಿರುವ ಸಮಸ್ಯೆಗಳನ್ನು ಬಗೆಹರಿಸುವ ಕಾರ್ಯ ನಡೆಯುತ್ತಿದೆ ಎಂದರು.

ಜಿಲ್ಲೆಯಲ್ಲಿ ೮೬,೪೫೪ ‘ಪೈಕಿ ಆರ್‌ಟಿಸಿ’ಗಳಿದ್ದು, ರೈತರು ಸೂಕ್ತ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಇದನ್ನು ಪ್ರತ್ಯೇಕಿಸಿ ವೈಯುಕ್ತಿಕ ಖಾತೆಗೆ ಆರ್‌ಟಿಸಿ ನೀಡುವ ಪ್ರಕ್ರಿಯೆಗೆ ವೇಗ ನೀಡಲಾಗಿದೆ. ತಿಂಗಳಿಗೆ ಪ್ರತಿ ತಾಲೂಕಿನಲ್ಲಿ ೧ ಸಾವಿರ ಆರ್‌ಟಿಸಿ ಪ್ರತ್ಯೇಕಿಸುವ ಗುರಿ ಹೊಂದಲಾಗಿದೆ. ಇಂತಹ ಕ್ರಮದಿಂದ ೮೬ ಸಾವಿರ ಆರ್‌ಟಿಸಿಗಳ ಪೈಕಿ ೨೧ ಸಾವಿರ ‘ಪೈಕಿ ಆರ್‌ಟಿಸಿ’ಗಳನ್ನು ಪ್ರತ್ಯೇಕಿಸಲಾಗಿದೆ. ಆಕಾರಬಂಧು ಮತ್ತು ಆರ್‌ಟಿಸಿ ವಿಸ್ತೀರ್ಣವನ್ನು ತಾಳೆ ಮಾಡಲಾಗುತ್ತಿದೆ. ಆರ್‌ಟಿಸಿಯಲ್ಲಿನ ಸಣ್ಣಪುಟ್ಟ ತಿದ್ದುಪಡಿಗಳಿಗೆ ಈ ವರ್ಷದ ಕೊನೆಯವರೆಗೂ ತಹಶೀಲ್ದಾರ್‌ಗೆ ಅಧಿಕಾರ ನೀಡಲಾಗಿದೆ. ಉಳಿದ ಸಮಸ್ಯೆಗಳ ಬಗ್ಗೆ ಉಪವಿಭಾಗಾಧಿಕಾರಿಗಳ ಮಟ್ಟದಲ್ಲಿ ಕ್ರಮವಹಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು.

ನಂತರ ಸಾರ್ವಜನಿಕರ ಕುಂದು ಕೊರತೆಗಳನ್ನು ಜಿಲ್ಲಾಧಿಕಾರಿಗಳು ಆಲಿಸಿದರು. ಕಾಫಿ ಬೆಳೆಗಾರರ ಹೋರಾಟ ಸಮಿತಿ ಅಧ್ಯಕ್ಷ ಎಂ.ಸಿ. ಮುದ್ದಪ್ಪ ಮಾತನಾಡಿ, ಒಂದೂವರೆ ಕೋಟಿ ವೆಚ್ಚದಲ್ಲಿ ತಾಲೂಕು ಆಡಳಿತ ಭವನ ನಿರ್ಮಾಣಗೊಂಡಿದ್ದರೂ ಕೆಲವೊಂದು ಕಚೇರಿಗಳು ಇಂದಿಗೂ ಖಾಸಗಿ ಕಟ್ಟಡದಲ್ಲಿ ಕೆಲಸ ಮಾಡುತ್ತಿವೆ. ಉಪ ನೋಂದಣಾಧಿಕಾರಿಗಳ ಕಚೇರಿಯನ್ನು ಇಂದಿಗೂ ತಾಲೂಕು ಕಚೇರಿ ಕಟ್ಟಡಕ್ಕೆ ಸ್ಥಳಾಂತರಿಸಿಲ್ಲ ಎಂದು ಜಿಲ್ಲಾಧಿಕಾರಿಗಳ ಗಮನ ಸೆಳೆದರು.

ಈ ಸಂದರ್ಭ ಉಪ ನೋಂದಣಾಧಿಕಾರಿ ಕಚೇರಿ ಅಧಿಕಾರಿಯನ್ನು ಸಭೆಗೆ ಕರೆಯಿಸಿದ ಜಿಲ್ಲಾಧಿಕಾರಿಗಳು, ಇಲಾಖೆಯ ಮೇಲಧಿಕಾರಿಗಳ ನಿರ್ದೇಶನದಂತೆ ತಕ್ಷಣ ಕಚೇರಿ ಸ್ಥಳಾಂತರ ಮಾಡುವಂತೆ ಸೂಚಿಸಿದರು. ಮಳೆಗಾಲ ಆರಂಭವಾಗುತ್ತಿದ್ದು, ಸೆಸ್ಕ್ ಇಲಾಖೆ ಹೆಚ್ಚಿನ ಜವಾಬ್ದಾರಿಯಿಂದ ಕೆಲಸ ಮಾಡಬೇಕಿದೆ. ಅಗತ್ಯ ಉಪಕರಣಗಳನ್ನು ದಾಸ್ತಾನಿರಿಸಿ ಕೊಂಡು, ತುರ್ತು ನಿರ್ವಹಣೆಗೆ ಸಿದ್ಧವಿರುವಂತೆ ಸೂಚಿಸಬೇಕೆಂದು ಮುದ್ದಪ್ಪ ಮನವಿ ಮಾಡಿದರು.

ತಾಲೂಕು ರೈತ ಸಂಘದ ಅಧ್ಯಕ್ಷ ದಿನೇಶ್ ಮಾತನಾಡಿ, ತಾಲೂಕಿನ ೩೦೦ ರೈತರಿಗೆ ಇಂದಿಗೂ ಪರಿಹಾರ ಹಣ ಬಂದಿಲ್ಲ. ೯೪೦ ಮಂದಿಗೆ ಸಾಲಮನ್ನಾ ಯೋಜನೆಯ ಲಾಭ ಸಿಕ್ಕಿಲ್ಲ. ಸೋಮವಾರಪೇಟೆ-ತೋಳೂರುಶೆಟ್ಟಳ್ಳಿ ಮುಖ್ಯರಸ್ತೆ ಅಗಲೀಕರಣ ಕಾರ್ಯ ನಡೆದಿಲ್ಲ. ಇದರಿಂದಾಗಿ ಈ ರಸ್ತೆಯಲ್ಲಿ ಸಂಚಾರ ದುಸ್ತರವಾಗಿದೆ ಎಂದು ಜಿಲ್ಲಾಧಿಕಾರಿಗಳ ಗಮನ ಸೆಳೆದರು.

ಈ ಸಂದರ್ಭ ಮಾತನಾಡಿದ ಜಿಲ್ಲಾಧಿಕಾರಿಗಳು, ಜಿಲ್ಲೆಯಲ್ಲಿ ೩೦೦ ಮಂದಿಗೆ ಪರಿಹಾರ ಬಾಕಿಯಿದೆ. ಸೋಮವಾರಪೇಟೆ ತಾಲೂಕಿನ ೨ ಗ್ರಾಮಗಳ ರೈತರಿಗೆ ಪರಿಹಾರ ಬಂದಿಲ್ಲ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಸಂದರ್ಭ ಕೆಲವೊಂದು ಆರ್‌ಟಿಸಿ ಸಂಖ್ಯೆ ಪ್ರದರ್ಶನಗೊಂಡಿಲ್ಲ. ಇನ್ನು ಕೆಲ ಪ್ರಕರಣಗಳಲ್ಲಿ ಗ್ರಾಮ ಲೆಕ್ಕಾಧಿಕಾರಿಗಳು ಅರ್ಜಿಯನ್ನು ನಮೂದಿಸಿಲ್ಲ. ಕೆಲವರ ಆಧಾರ್ ಸಂಖ್ಯೆ ಹಾಗೂ ಬ್ಯಾಂಕ್ ಖಾತೆಗಳು ಬದಲಾಗಿದೆ. ಈ ಬಗ್ಗೆ ಮತ್ತೊಮ್ಮೆ ಪರಿಶೀಲಿಸಲು ಕ್ರಮವಹಿಸಲಾಗಿದೆ ಎಂದರು.

ಸಾಲಮನ್ನಾದ ಬಗ್ಗೆ ಸಹಕಾರ ಸಂಘಗಳ ಉಪ ನಿಬಂಧಕರ ಕಚೇರಿಯಿಂದ ಸಮಗ್ರ ಮಾಹಿತಿ ತರಿಸಿಕೊಂಡು ಪರಿಶೀಲಿಸಲಾಗುವುದು. ಸೋಮವಾರಪೇಟೆ-ಕೂತಿ ಮುಖ್ಯರಸ್ತೆಯ ಅಗಲೀಕರಣಕ್ಕೆ ಸಂಬAಧಿಸಿದ ಪ್ರಾಧಿಕಾರದ ಗಮನ ಸೆಳೆಯಲಾಗುವುದು ಎಂದು ಜಿಲ್ಲಾಧಿಕಾರಿಗಳು ಭರವಸೆಯಿತ್ತರು.

ಸೆಸ್ಕ್ ಕಾರ್ಯಪಾಲಕ ಅಭಿಯಂತರ ಅಶೋಕ್ ಮಾತನಾಡಿ, ಮಳೆಗಾಲದ ವಿದ್ಯುತ್ ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸಲು ಸೆಸ್ಕ್ ಸಿದ್ಧವಾಗಿದೆ. ಈಗಾಗಲೇ ನೂತನವಾಗಿ ೧೧೦ ಸಿಬ್ಬಂದಿಗಳ ನೇಮಕಾತಿ ಪ್ರಕ್ರಿಯೆ ನಡೆದಿದ್ದು, ೬೦ ಮಂದಿ ಜಿಲ್ಲೆಗೆ ನಿಯೋಜನೆಯಾಗಲಿದ್ದಾರೆ. ಪ್ರತಿ ವಿಭಾಗದಲ್ಲೂ ಫೀಡರ್ ನಿರ್ವಹಣೆಗೆ ಗ್ಯಾಂಗ್‌ಮೆನ್‌ಗಳನ್ನು ನಿಯೋಜಿಸಲಾಗಿದೆ. ಮಳೆಗಾಲದಲ್ಲೂ ದಿನದ ೨೪ ಗಂಟೆ ವಿದ್ಯುತ್ ನೀಡಲು ಸೆಸ್ಕ್ ಸಿದ್ಧತೆ ನಡೆಸಿದೆ ಎಂದರು.

ಸೋಮವಾರಪೇಟೆ ಭಾಗದಲ್ಲಿ ವೋಲ್ಟೇಜ್‌ಗೆ ಸಂಬAಧಿಸಿದAತೆ ಯಾವುದೇ ಸಮಸ್ಯೆಯಿಲ್ಲ. ಈಗಾಗಲೇ ಉಪ ವಿಭಾಗಕ್ಕೆ ೧೪ ವಾಹನಗಳ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿಯಿತ್ತರು.

ರೈತರ ಪಂಪ್‌ಸೆಟ್‌ಗಳಿಗೆ ೧೦ ಹೆಚ್‌ಪಿವರೆಗೆ ಉಚಿತ ವಿದ್ಯುತ್ ನೀಡುವ ಬಗ್ಗೆ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ಈ ನಡುವೆ ಕೆಲ ಲೈನ್‌ಮೆನ್‌ಗಳು ರೈತರ ವಿದ್ಯುತ್ ಸಂಪರ್ಕ ಕಡಿತಕ್ಕೆ ಮುಂದಾಗಿದ್ದಾರೆ ಎಂದು ರೈತ ಸಂಘದ ಅಧ್ಯಕ್ಷ ದಿನೇಶ್ ಅಸಮಾಧಾನ ವ್ಯಕ್ತಪಡಿಸಿದರು.

ವಿದ್ಯುತ್ ಸಂಪರ್ಕ ಕಡಿತವನ್ನು ಯಾವ ಲೈನ್‌ಮೆನ್ ಸಹ ಮಾಡುತ್ತಿಲ್ಲ ಎಂದು ಅಭಿಯಂತರ ಅಶೋಕ್ ತಿಳಿಸಿದರೆ, ೧೦ ಹೆಚ್‌ಪಿವರೆಗಿನ ಉಚಿತ ವಿದ್ಯುತ್ ಬಗ್ಗೆ ಸರ್ಕಾರದ ಮಟ್ಟದಲ್ಲಿ ಪರಿಶೀಲನೆಯಲ್ಲಿದೆ ಎಂದು ಜಿಲ್ಲಾಧಿಕಾರಿಗಳು ಮನವರಿಕೆ ಮಾಡಿಕೊಟ್ಟರು.

ಕುಮಾರಳ್ಳಿ ಗ್ರಾಮ ವ್ಯಾಪ್ತಿಯಲ್ಲಿ ಕಂದಾಯ ಇಲಾಖೆ, ವೈಲ್ಡ್ ಲೈಫ್ ಮತ್ತು ಫಾರೆಸ್ಟ್ ಇಲಾಖೆಯಿಂದ ಸರ್ವೆ ಕಾರ್ಯ ಆಗಿದ್ದು, ಇದರ ಸ್ಕೆಚ್ ಕೇಳಿದರೆ ಅಧಿಕಾರಿಗಳು ನೀಡುತ್ತಿಲ್ಲ ಎಂದು ಕುಮಾರಳ್ಳಿ ಪ್ರದೀಪ್ ಆರೋಪಿಸಿದರು. ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿಗಳು, ಸರ್ವೆ ಕಾರ್ಯ ಮುಗಿದ ಕೆಲ ದಿನಗಳಲ್ಲಿ ಕರಡು ಸ್ಕೆಚ್ ಬಿಡುಗಡೆಯಾಗಲಿದೆ. ನಂತರ ಅಧಿಕೃತ ಸ್ಕೆಚ್ ನೀಡಲಾಗುವುದು ಎಂದರು.

ಕAದಾಯ ಇಲಾಖೆಯಿಂದ ನಡೆಯುವ ಸರ್ವೆ ಕಾರ್ಯಕ್ಕೆ ಯಾರೇ ಅಡ್ಡಿಪಡಿಸಿದರೂ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು. ಒಂದು ವೇಳೆ ಸರ್ವೆಗೆ ತಕರಾರು ಇದ್ದರೆ ಅಧಿಕಾರಿಗಳಿಗೆ ತಿಳಿಸಿ ಆಕ್ಷೇಪ ಸಲ್ಲಿಸಬಹುದು. ಸರ್ವೆ ಸ್ಕೆಚ್‌ನಲ್ಲಿ ಸಹಿ ಇಲ್ಲದಿದ್ದರೆ ಅದು ಅಧಿಕೃತವಾಗುವುದಿಲ್ಲ. ಆ ನಂತರ ತಕರಾರು ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು.

ಸಾರ್ವಜನಿಕರ ಸಮಸ್ಯೆಗಳನ್ನು ಸಾವಧಾನದಿಂದಲೇ ಆಲಿಸಿದ ಜಿಲ್ಲಾಧಿಕಾರಿ ಸತೀಶ್ ಅವರು, ಸಮಸ್ಯೆಗಳ ಪರಿಹಾರದ ಭರವಸೆ ನೀಡಿದರು. ಕೆಲವೊಂದು ಸಮಸ್ಯೆಗಳನ್ನು ತಕ್ಷಣ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ತಾಲೂಕು ತಹಶಿಲ್ದಾರ್ ಗೋವಿಂದರಾಜು, ಸೆಸ್ಕ್ ಕಾರ್ಯಪಾಲಕ ಅಭಿಯಂತರ ಅಶೋಕ್, ಎಇಇ ಧನಂಜಯ್, ಮಾಜೀ ಸೈನಿಕರ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಜಂಟಿ ನಿರ್ದೇಶಕ ಬಾಲಸುಬ್ರಮಣ್ಯ ಅವರುಗಳು ಉಪಸ್ಥಿತರಿದ್ದರು.