ಮಡಿಕೇರಿ, ಮೇ. ೩೦: ತಾಳಕ್ಕೆ ತಕ್ಕ ನೃತ್ಯ., ಹರಿಸೇವೆ ಹಾಡು., ಕೋಲಾಟ., ನೃತ್ಯ., ಯಕ್ಷಗಾನ., ಮೀನು ಬೇಟೆ.., ಹೀಗೇ ವಿವಿಧ ಬಗೆಯ ಅರೆಭಾಷೆ ಸಾಂಸ್ಕೃತಿಕ ಕಾರ್ಯಕ್ರಮಗಳು ಅರೆಭಾಷೆ ಸಂಸ್ಕೃತಿಯೊAದಿಗೆ ಸಾಮಾಜಿಕ ಕಳಕಳಿಯನ್ನು ಬಿಂಬಿಸಿದವು.

ಕೊಡಗು ಗೌಡ ಮಹಿಳಾ ಒಕ್ಕೂಟದ ಬೆಳ್ಳಿ ಮಹೋತ್ಸವದ ಅಂಗವಾಗಿ ಗೌಡ ಸಮಾಜದಲ್ಲಿ ನಡೆದ ಅರೆಭಾಷೆ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಜನ ಮನ ಸೂರೆಗೊಂಡವು. ಮಹಿಳಾ ಒಕ್ಕೂಟದ ಸದಸ್ಯರುಗಳಿಂದ ಸ್ವಾಗತ ನೃತ್ಯದೊಂದಿಗೆ ಆರಂಭಗೊAಡ ಕಾರ್ಯಕ್ರಮದಲ್ಲಿ ತಣ್ಣಿಮಾನಿ ಗ್ರಾಮದ ತಂಡದವರು ಸಬ್ಬಮ್ಮ ದೇವಿಗೆ ಹರಕೆ ಹಣ ಕಟ್ಟುವ ಸೋಬಾನೆ ಪದ ಹಾಡಿದರು. ಗಾಳಿಬೀಡು ತಂಡದವರು ತಾಳಕ್ಕೆ ತಕ್ಕಂತೆ ತಾಳ ನೃತ್ಯ ಪ್ರದರ್ಶಿಸಿದರೆ, ಭಾಗಮಂಡಲ ತಂಡದವರ ಅರೆಭಾಷೆ ನೃತ್ಯ ಆಕರ್ಷಕವಾಗಿತ್ತು. ಗೌಡ ಮಹಿಳಾ ಒಕ್ಕೂಟದ ತಂಡದವರು ಶ್ರೀ ವೆಂಕಟರಮಣ ಹರಿಸೇವೆಯಲ್ಲಿ ಬಳಸುವ ಹರಿಸೇವೆ ಹಾಡನ್ನು ಹಾಡಿದರು. ಅವಂದೂರು ತಂಡದವರು ‘ಕೋಲುತ್ತೇಳೋನೋ’ ಹಾಡಿಗೆ ಕೋಲಾಟ ಮಾಡಿದರು. ಗಾಳಿಬೀಡು ತಂಡವರು ನಡೆಸಿಕೊಟ್ಟ ‘ಕಿಡ್ಡಾಸಲಿ ಮೀನು ಬೇಟೆ’ ಪದ್ಧತಿಯನ್ನು ಹಾಸ್ಯಭರಿತವಾಗಿ ತೆರೆದಿಟ್ಟರಲ್ಲದೆ, ಆಸೆಗೋಸ್ಕರ ಅನವಶ್ಯಕವಾಗಿ ಇತರ ಜೀವರಾಶಿಗಳನ್ನು ಸಾಯಿಸಬಾರದು ಎಂಬ ಸಾಮಾಜಿಕ ಕಳಕಳಿಯನ್ನು ಪ್ರೇಕ್ಷಕರ ಗಮನಕ್ಕೆ ತಂದರು. ಯುವಕ-ಯುವತಿಯರು ತಮ್ಮ ಪಾತ್ರಗಳಿಗೆ ಜೀವ ತುಂಬಿದರು. ಮುತ್ತಾರ್ಮುಡಿ ತಂಡದವರು ಅರೆಬಾಷೆ ಜನಾಂಗದ ಹಬ್ಬ, ಹರಿದಿನ., ಸಾಂಸ್ಕೃತಿಕ ಪದ್ಧತಿಗಳನ್ನು ಅನಾವರಣ ಮಾಡಿದರಲ್ಲದೆ, ಜನಾಂಗದವರಲ್ಲಿ ಸಂಸ್ಕೃತಿಯ ಅರಿವು ಮೂಡಿಸಿದರು. ಮಡಿಕೇರಿಯ ವಿಜಯ ವಿನಾಯಕ ಗೌಡ ಒಕ್ಕೂಟದ ತಂಡದವರು ಪ್ರದರ್ಶಿಸಿದ ‘ಕುರುಡು ಕಾಂಚಣ ಕೊಣಿಯತ್ತಿತ್ತ್’ ಹಾಡಿನಲ್ಲಿ ‘ಲಂಚಾವತಾರದ ಮಜಲುಗಳನ್ನು’ ಪ್ರದರ್ಶಿಸಿದರಲ್ಲದೆ, ಲಂಚಾವತಾರದ ಬಗ್ಗೆ ಜಾಗೃತಿ ಮೂಡಿಸಿದರು. ಐಗೂರು ತಂಡದವರು ಪ್ರದರ್ಶನ ಮಾಡಿದ ಯಕ್ಷಗಾನ ದಕ್ಷಿಣ ಕನ್ನಡ ಜಿಲ್ಲೆಯ ವರ್ಣಮಯ ಕಲೆಯನ್ನು ಕಣ್ತುಂಬಿಕೊಳ್ಳುವAತೆ ಮಾಡಿತು.

ನಿರೂಪಣೆಯ ಕಿರಿಕಿರಿ..!

ಸಾಂಸ್ಕೃತಿಕ ಕಾರ್ಯಕ್ರಮ ಆರಂಭವಾಗುವದಕ್ಕೂ ಮುನ್ನ ನಿರೂಪಣೆ ಮಾಡುತ್ತಿದ್ದವರು ‘ಕಾರ್ಯಕ್ರಮ ಆರಂಭವಾಗಲು ಸ್ವಲ್ಪ ಸಮಯ ಇದೆ, ಯಾರಾದರೂ ಹಾಡುವವರಿದ್ದರೆ ಹಾಡಬಹುದು’ ಎಂದು ಘೋಷಿಸಿದರು. ಒಬ್ಬೊಬ್ಬರಾಗಿ ವೇದಿಕೆಯೇರಿ ಸೋಬಾನೆ, ಹಾಡು ಹಾಡಲಾರಂಭಿಸಿದರು. ಹಾಡು ಹಾಡುತ್ತಿರುವಂತೆಯೇ ನಿರೂಪಕರು ‘ಹಾಡನ್ನು ಶಾರ್ಟ್ ಮಾಡಿ., ಕಟ್ ಮಾಡಿ., ನಿಲ್ಲಿಸಿ..’ ಎಂದು ಜೋರಾಗಿ ಕಿರುಚಿಕೊಳ್ಳುತ್ತಿದ್ದುದರಿಂದ ಹಾಡು ಹೇಳುತ್ತಿದ್ದವರಿಗೂ., ಕೇಳುತ್ತಿದ್ದವರಿಗೂ ಕಿರಿಕಿರಿ ಉಂಟು ಮಾಡಿತು..! ಬೆಳಗ್ಗಿನ ಸಭಾ ಕಾರ್ಯಕ್ರಮ ಮುಕ್ತಾಯಗೊಳ್ಳುತ್ತಿದ್ದಂತೆ ಅತಿಥಿಗಳಿಗೆ ವಂದನಾರ್ಪಣೆ ಸಲ್ಲಿಸುವ ಸಂದರ್ಭ ಒಕ್ಕೂಟದ ಸದಸ್ಯರು ಗಳು ನೆನಪಿನ ಕಾಣಿಕೆ ನೀಡಲು ಅಣಿಯಾಗಿದ್ದರು. ಆದರೆ, ವಂದನಾರ್ಪಣೆ ಮಾಡಿದವರು ಅತಿಥಿಗಳನ್ನು ಹೊರತುಪಡಿಸಿ ಬಂದಿದ್ದ ವರಿಗೆ., ಸಹಕಾರ ಮಾಡಿದವರಿಗೆಲ್ಲ ವಂದಿಸುತ್ತಾ ಹೋದರು. ಅಷ್ಟರಲ್ಲಿ ಅತಿಥಿಗಳಿಗೆ ಮೊದಲು ಹೇಳಿ ಎಂದಾಗ ಎಲ್ಲರಿಗೂ ವಂದನೆ ಎಂದು ಮುಗಿಸಿಯೇ ಬಿಟ್ಟರು. ಅತಿಥಿಗಳು ಎದ್ದು ಹೋಗುತ್ತಿರುವಾಗ ಸದಸ್ಯರು ವೇದಿಕೆಯಿಡೀ ಓಡಾಡಿ ಅತಿಥಿಗಳನ್ನು ಬೆನ್ನಟ್ಟಿ ನೆನೆಪಿನ ಕಾಣಿಕೆಗಳನ್ನು ನೀಡಬೇಕಾಯಿತು...!

-ಕುಡೆಕಲ್ ಸಂತೋಷ್