ಮಡಿಕೇರಿ, ಮೇ ೩೦: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಕೃಷ್ಣಪ್ಪ ಸ್ಥಾಪಿತ) ಕೊಡಗು ಜಿಲ್ಲಾ ಘಟಕ ವತಿಯಿಂದ ಡಾ. ಬಿ.ಆರ್. ಅಂಬೇಡ್ಕರ್‌ರವರ ೧೩೧ನೇ ಜಯಂತಿ ಹಾಗೂ ದಲಿತ ಜಾಗೃತಿ ಸಮಾವೇಶ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಕೊಡಗು ಜಿಲ್ಲಾ ಸಂಚಾಲಕ ಹೆಚ್.ಎಲ್. ದಿವಾಕರ್ ಅಧ್ಯಕ್ಷತೆಯಲ್ಲಿ ನಡೆಯಿತು.
ಪ್ರಾಸ್ತಾವಿಕವಾಗಿ ಮಾತನಾಡಿದ ತಾಲೂಕು ಸಂಚಾಲಕ ದೀಪಕ್ ಪೊನ್ನಪ್ಪ ಸಂಘಟನೆಯು ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತನ್ನು ನೀಡುತ್ತಿದ್ದು ಅನೇಕ ಕಾರ್ಯಕ್ರಮಗಳ ಮೂಲಕ ಜಿಲ್ಲೆಯನ್ನು ವಿದ್ಯಾವಂತ ಜಿಲ್ಲೆಯನ್ನಾಗಿಸುವಲ್ಲಿ ಪ್ರಯತ್ನ ಪಡುತ್ತಿದೆ. ಬಹುತೇಕ ಯಶಸ್ವಿಯೂ ಆಗಿದೆ. ಆದರೆ ಅಂಬೇಡ್ಕರ್ ಭವನ ಮತ್ತು ಪ್ರತಿಮೆ ನಿರ್ಮಾಣದಲ್ಲಿ ನಮ್ಮ ಜಿಲ್ಲೆಯ ಇಡೀ ಜನತೆ ತಲೆತಗ್ಗಿಸುವ ಸ್ಥಿತಿ ನಿರ್ಮಾಣವಾಗಿದ್ದು, ಮುಂದಿನ ದಿನವಾದರೂ ಈ ಹೋರಾಟವನ್ನು ಯಶಸ್ವಿಗೊಳಿಸಲು ಕೈ ಜೋಡಿಸಬೇಕಿದೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕನ್ನಡ ಚಲನಚಿತ್ರ ನಟ ಮತ್ತು ಹೋರಾಟಗಾರ ಚೇತನ್ ಅಹಿಂಸಾ ಅಂಬೇಡ್ಕರ್ ಜಯಂತಿ ಕೇವಲ ಆಚರಣೆಯಾಗಿರದೇ ಬಾಬಾಸಾಹೇಬರ, ಭಗವಾನ್ ಬುದ್ಧರ, ಸ್ವಾಮಿ ಪೆರಿಯಾರ್ ಅವರ ಸಿದ್ಧಾಂತಗಳು ಭಾರತೀಯರ ಜೀವನದಲ್ಲಿ ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ. ದ್ವೇಶದ ಜಗತ್ತಿನಲ್ಲಿ ಅಂಬೇಡ್ಕರ್ ಅವರ ಸಿದ್ಧಾಂತಗಳು ಮಾತನಾಡಬೇಕಾಗಿದೆ, ಸಮಾನತೆಯ ಸಮಾಜವನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ನಾವೆಲ್ಲರೂ ಹೋರಾಡಬೇಕಿದೆ ಎಂದರು.
ಮುಖ್ಯ ಭಾಷಣಕಾರರಾಗಿ ಆಗಮಿಸಿ ಪತ್ರಕರ್ತ ಮತ್ತು ಸಾಮಾಜಿಕ ಹೋರಾಟಗಾರ ಚಿಂತನ್ ಮಾತನಾಡಿ ದಲಿತ ಸಮುದಾಯದಲ್ಲಿ ಮನುವಾದಿಗಳಿಂದ ಸಂಕಷ್ಟಕ್ಕೆ ಸಿಲುಕಿರುವವರು ಅನೇಕರಿದ್ದು ಬೆಳಕಿಗೆ ಬರದಂತಾಗಿದೆ. ಇಂದಿನ ಯುವಜನತೆ ದಲಿತರ ಮೇಲಿನ ದೌರ್ಜನ್ಯದ ಬಗ್ಗೆ ಮಾಧ್ಯಮದ ಮೂಲಕ ನಾಡಿಗೆ ತಿಳಿಸುವ ನೂತನವಾದ ಹೋರಾಟ ಮಾಡಬೇಕಿದೆಯೆಂದರು.
ಜಿಲ್ಲಾ ಸಂಚಾಲಕ ದಿವಾಕರ್ ಹೆಚ್.ಎಲ್. ಮಾತನಾಡಿ ಅಂಬೇಡ್ಕರ್ ಜಯಂತಿಯAದು ಭಾಷಣ ಮಾಡಿ ಮನೆ ಸೇರಿಕೊಳ್ಳುವ ಮಹನೀಯರಿಗಿಂತ ದಲಿತ ಹಾಗೂ ಬಡ ಸಮುದಾಯದ ಏಳಿಗೆಗೆ ದುಡಿಯುವವರೇ ಧನ್ಯರು. ಅಂತಹವರಿAದ ಅಂಬೇಡ್ಕರ್ ಅವರ ವಿಚಾರಗಳನ್ನು ಸಮಾಜದಲ್ಲಿ ಪಸರಿಸುವ ಕೆಲಸವಾಗಬೇಕಿದೆ ಎಂದರು.
"ಮಹಿಳೆಯರಿಗೆ ಅಂಬೇಡ್ಕರ್ ಕೊಡುಗೆ" ಎಂಬ ವಿಚಾರದ ಬಗ್ಗೆ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯ ವಿಜೇತರಾದ ತೃಪ್ತಿ, ಭೂಮಿಕಾ ಮತ್ತು ಕಶನ್ ಅವರಿಗೆ ಬಹುಮಾನ ವಿತರಿಸಲಾಯಿತು.
ವೇದಿಕೆಯಲ್ಲಿ ದ.ಸಂ. ಸಮಿತಿಯ ರಾಜ್ಯ ಮುಖಂಡ ವೆಂಕಟಗಿರಿ, ವಿಭಾಗೀಯ ಸಂಚಾಲಕ ಎನ್. ವೀರಭದ್ರಯ್ಯ, ಜಿಲ್ಲಾ ಸಂಘಟನಾ ಸಂಚಾಲಕÀ ಡಿ.ಜೆ.ಈರಪ್ಪ , ಹೆಚ್.ಕೆ.ಗಣೇಶ್, ಸೋಮವಾರಪೇಟೆ ತಾಲೂಕು ಸಂಚಾಲಕ ಕುಮಾರ್, ವಿದ್ಯಾರ್ಥಿ ಒಕ್ಕೂಟದ ಸೋಮವಾರಪೇಟೆ ಸಂಚಾಲಕÀ ಸಂತೋಷ್ ಉಪಸ್ಥಿತರಿದ್ದರು. ಗಾಳಿಬೀಡು ಶಾಲೆಯ ಶಿಕ್ಷಕ ರಮೇಶ್ ನಿರೂಪಿಸಿ, ವಿದ್ಯಾರ್ಥಿ ಒಕ್ಕೂಟದ ಜಿಲ್ಲಾ ಸಂಚಾಲಕ ಸಂತೋಷ್‌ಕುಮಾರ್ ಸ್ವಾಗತಿಸಿ, ಮೇಘ ವಂದಿಸಿದರು. ಕಾವೇರಿ ಕಲಾಕ್ಷೇತ್ರದಿಂದ ಅಶೋಕಪುರದವರೆಗೆ ಅಂಬೇಡ್ಕರ್ ಅವರ ಭಾವಚಿತ್ರವನ್ನು ಬೆಳ್ಳಿರಥದಲ್ಲಿ ಮೆರವಣಿಗೆ ಮಾಡಲಾಯಿತು.