ಚೆಯ್ಯಂಡಾಣೆ, ಮೇ ೩೦: ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೀಡುಬಿಟ್ಟ ಕಾಡಾನೆಯನ್ನು ಹಿಡಿಯಲು ಇಂದು ಕೂಡ ಕಾರ್ಯಾಚರಣೆ ನಡೆಸಲಾಯಿತು. ಕಾರ್ಯಾಚರಣೆ ನಡೆಸುವ ಸಂದರ್ಭ ಆನೆ ಯವಕಪಾಡಿಗೆ ಲಗ್ಗೆ ಇಟ್ಟಿದ್ದು, ತಾ. ೩೧ರಂದು (ಇಂದು) ಕಾರ್ಯಾಚರಣೆ ಮುಂದುವರೆಯಲಿದೆ.
ನಿನ್ನೆ ಅರಣ್ಯ ಇಲಾಖೆ ಚೇಲಾವರ ಕ್ಯಾಂಪ್‌ನಲ್ಲಿದ್ದ ಸಾಕಾನೆಯನ್ನು ಬೇರೆಡೆ ಹುಲಿ ಕಾರ್ಯಾಚರಣೆಗೆ ಕೊಂಡೊಯ್ಯಲು ಸಿದ್ಧತೆ ನಡೆಸುತ್ತಿದ್ದ ಸಂದರ್ಭ ಮರಂದೋಡ, ನರಿಯಂದಡ, ಚೇಲಾವರ, ಕರಡ, ಕೋಕೇರಿ ಭಾಗದ ಗ್ರಾಮಸ್ಥರು ಕ್ಯಾಂಪ್ ಸ್ಥಳಕ್ಕೆ ಆಗಮಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ನಂತರ ಪ್ರತಿಭಟನೆ ನಡೆಸಿ ಅರಣ್ಯ ಇಲಾಖೆ ವಿರುದ್ಧ ಘೋಷಣೆ ಕೂಗಿದರು.
ಶಾಸಕರ ಭೇಟಿ
ನಿನ್ನೆ ರಾತ್ರಿ ಪ್ರತಿಭಟನೆ ನಡೆದ ಚೇಲಾವರ ಕ್ಯಾಂಪ್‌ಗೆ ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಹಾಗೂ ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ರವಿ ಕುಶಾಲಪ್ಪ ಭೇಟಿ ನೀಡಿದ್ದರು. ಕ್ಯಾಂಪ್‌ಗೆ ಡಿಎಫ್‌ಓ ಭೇಟಿ ನೀಡದ ಬಗ್ಗೆ ಶಾಸಕರ ಪ್ರಶ್ನೆಗೆ ಅಲ್ಲಿದ್ದ ಅಧಿಕಾರಿಗಳು ಪ್ರತಿಕ್ರಿಯಿಸಿ, ಅವರು ನಮ್ಮನ್ನು ಇಲ್ಲಿ ನೇಮಿಸಿದ್ದಾರೆ. ನಾವು ಕಾಡಾನೆಯನ್ನು ಹಿಡಿದೇ ಹಿಡಿಯುತ್ತೇವೆ. ನಿನ್ನೆ ಹುಲಿ ಕಾರ್ಯಾಚರಣೆ ಇದ್ದ ಕಾರಣ ಸಾಕಾನೆಯನ್ನು ಬೇರೆಡೆಗೆ ಕೊಂಡೊಯ್ಯಲು ಸಿದ್ಧತೆ ನಡೆಸುತ್ತಿದ್ದೆವು. ಆದರೆ, ಯಾವುದೇ ಕಾರಣಕ್ಕೂ ಕಾಡಾನೆ ಹಿಡಿಯುವ ಕಾರ್ಯಾಚರಣೆ ನಿಲ್ಲಿಸುವುದಿಲ್ಲ. ಮಳೆಗಾಲ ಶುರುವಾದರೂ ಕೂಡ ಬಿಸಿಲಿದ್ದ ಸಮಯದಲ್ಲಿ ಕಾರ್ಯಾಚರಣೆ ನಡೆಸಲಿದ್ದೇವೆ ಎಂದು ತಿಳಿಸಿದರು. ಶಾಸಕ ಕೆ.ಜಿ. ಬೋಪಯ್ಯ ಹಾಗೂ ಪಶ್ಚಿಮಘಟ್ಟ ಸಂರಕ್ಷಣಾ ಪಡೆ ಅಧ್ಯಕ್ಷ ರವಿ ಕುಶಾಲಪ್ಪ ಯಾವುದೇ ಕಾರಣಕ್ಕೂ ಕಾರ್ಯಾಚರಣೆ ಸ್ಥಗಿತಗೊಳಿಸದಂತೆ ಸೂಚಿಸಿದರು. - ಅಶ್ರಫ್