ಗೋಣಿಕೊಪ್ಪ ವರದಿ, ಮೇ ೩೦: ಜಿಲ್ಲೆಯ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಖಾಯಂ ವಾಹನ ನಿರೀಕ್ಷಕರನ್ನು ನೇಮಕ ಮಾಡಲು ಸರ್ಕಾರವನ್ನು ಒತ್ತಾಯಿಸಲು ಸಾರ್ವಜನಿಕ ಹಿತ ರಕ್ಷಣಾ ಸಮಿತಿ ಸಭೆಯಲ್ಲಿ ನಿರ್ಧರಿಸಲಾಯಿತು.

ಸಿಲ್ವರ್ ಸ್ಕೆöÊ ಸಭಾಂಗಣದಲ್ಲಿ ಸಮಿತಿ ಅಧ್ಯಕ್ಷ ಅಜ್ಜಮಾಡ ಕಟ್ಟಿ ಮಂದಯ್ಯ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಜಿಲ್ಲೆಯಲ್ಲಿರುವ ಹಲವು ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು. ಸರ್ಕಾರದ ಸೇವೆ ಪಡೆದುಕೊಳ್ಳಲು ಸಾರ್ವಜನಿಕರು ಪಡುತ್ತಿರುವ ತೊಂದರೆ ನೀಗಿಸಲು ಆಯಾ ಇಲಾಖೆಯ ಮಂತ್ರಿಗಳನ್ನು ಒತ್ತಾಯಿಸಲು ಸದಸ್ಯರು ಸಲಹೆ ನೀಡಿದರು. ವಾಹನಗಳ ಸಂಖ್ಯೆ ಹೆಚ್ಚುತ್ತಿದ್ದರೂ, ವಾಹನ ನಿರೀಕ್ಷಕ ಹುದ್ದೆಗೆ ಖಾಯಂ ಅಧಿಕಾರಿ ನೇಮಕವಾಗಿಲ್ಲ. ವಾಹನಗಳ ನೋಂದಣಿ, ಹಳೆಯ ವಾಹನಗಳ ಪರಿವೀಕ್ಷಣೆ, ಅಪಘಾತ ಸಂದರ್ಭ ಸಮಯಕ್ಕೆ ಸರಿಯಾಗಿ ಪರಿಶೀಲನೆ ನಡೆಯುತ್ತಿಲ್ಲ. ಇದರಿಂದಾಗಿ ಮಧ್ಯವರ್ತಿಗಳ ಮೂಲಕ ಸಾರ್ವಜನಿಕರು ಹೆಚ್ಚು ಹಣ ನೀಡಿ ಸೇವೆ ಪಡೆದುಕೊಳ್ಳಬೇಕಾದ ಅನಿವಾರ್ಯತೆ ಬಂದಿದೆ ಈ ಬಗ್ಗೆ ಸಾರಿಗೆ ಸಚಿವರಿಗೆ ಪತ್ರ ಬರೆಯಲು ನಿರ್ಧರಿಸಲಾಯಿತು.

ಜಿಲ್ಲೆಯಲ್ಲಿ ೫ ತಾಲೂಕುಗಳು ರಚನೆಯಾಗಿದ್ದರೂ ಆಡಳಿತ ವ್ಯವಸ್ಥೆ ವಿಸ್ತಾರಗೊಂಡಿಲ್ಲ. ಒಬ್ಬರೇ ಉಪ ವಿಭಾಗಾಧಿಕಾರಿ ೫ ತಾಲೂಕುಗಳ ಕಡತ ವಿಲೇವಾರಿ ನೋಡಿಕೊಳ್ಳಬೇಕಿದೆ. ಸಾರ್ವಜನಿಕರಿಗೆ ಸಮಯಕ್ಕೆ ಸರಿಯಾಗಿ ಕಡತಗಳು ವಿಲೇವಾರಿಯಾಗದ ಕಾರಣ ಹೆಚ್ಚು ನಷ್ಟವಾಗುತ್ತಿದೆ. ಸಮಯ ವ್ಯರ್ಥವನ್ನು ಗಂಭೀರವಾಗಿ ಪರಿಗಣಿಸಿ ಕಂದಾಯ ಸಚಿವರು ತಕ್ಷಣ ದಕ್ಷಿಣ ಕೊಡಗಿನ ಪೊನ್ನಂಪೇಟೆ ಅಥವಾ ವೀರಾಜಪೇಟೆ ಕೇಂದ್ರದಲ್ಲಿ ಉಪ ವಿಭಾಗಾಧಿಕಾರಿಯನ್ನು ನೇಮಿಸಬೇಕು ಎಂದು ಒತ್ತಾಯಿಸಲು ನಿರ್ಣಯ ತೆಗೆದುಕೊಳ್ಳಲಾಯತು.

ಈ ಸಂದರ್ಭ ಕಾರ್ಯಾಧ್ಯಕ್ಷ ಬಿ. ಎಸ್. ಕಾರ್ಯಪ್ಪ, ಉಪಾಧ್ಯಕ್ಷ ಎನ್. ಡಿ. ಚರ್ಮಣ ಸಲಹೆಗಾರ ಸಿ. ಎನ್. ವಿಶ್ವನಾಥ್, ಪ್ರ. ಕಾರ್ಯದರ್ಶಿ ಸತೀಶ್ ದೇವಯ್ಯ, ಖಜಾಂಚಿ ಎ. ಎನ್ ಮಾದಯ್ಯ, ಜಂಟಿ ಕಾರ್ಯದರ್ಶಿ ಕೆ. ಕೆ. ಬೆಳ್ಯಪ್ಪ ಇದ್ದರು.