ಕಣಿವೆ, ಮೇ ೩೦: ಕೂಡಿಗೆ ಬಳಿಯ ಹೆಗ್ಗಡಹಳ್ಳಿಯಲ್ಲಿರುವ ಶ್ರೀ ಶನೀಶ್ವರ ದೇವಾಲಯದಲ್ಲಿ ವಾರ್ಷಿಕ ರಥೋತ್ಸವ ಸೋಮವಾರ ಶ್ರದ್ಧಾ ಭಕ್ತಿಯಿಂದ ನೆರವೇರಿತು. ಬೆಳಿಗ್ಗೆ ೭ ಗಂಟೆಯಿAದಲೇ ದೇಗುಲದಲ್ಲಿ ಧರ್ಮಸ್ಥಳದ ಉಜಿರೆಯ ರಾಮಚಂದ್ರ ಭಟ್ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಪೂಜೆ ಮತ್ತು ಹೋಮ ಹವನಗಳು ಜರುಗಿದವು. ದೇವರಿಗೆ ಸ್ವಸ್ತಿಶ್ರೀ ಪಂಚಗವ್ಯ, ಪುಣ್ಯಾಹ ವಾಚನ, ಗಣಯಾನ, ಶನಿಶಾಂತಿ ಹೋಮ, ಪ್ರಧಾನ ಹೋಮ ನೆರವೇರಿತು. ಬಳಿಕ ಶ್ರೀ ಸ್ವಾಮಿಗೆ ಪಂಚಾಮೃತ ಅಭಿಷೇಕ ಮಹಾ ಕುಂಭಾಭಿಷೇಕ ಪ್ರಸನ್ನಪೂಜೆ ಶನಿಶಾಂತಿ ಹೋಮದ ಪುಣ್ಯಾಹುತಿ ನಡೆದ ಬಳಿಕ ಮಹಾಮಂಗಳಾರತಿ ನೆರವೇರಿತು.
ಬಳಿಕ ಪೂರ್ವಾಹ್ನ ೧೧ ಗಂಟೆ ೩೦ ನಿಮಿಷಕ್ಕೆ ಶನೀಶ್ವರ ಸ್ವಾಮಿಯನ್ನು ಪುಷ್ಪಗಳ ಅಲಂಕೃತ ರಥದ ಮೇಲೆ ಕುಳ್ಳಿರಿಸಿ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಸಲಾಯಿತು. ನೆರೆದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಮತ್ತು ಪ್ರಸಾದ ವಿನಿಯೋಗ ನಡೆಯಿತು. ಪೂಜೋತ್ಸವ ಹಾಗೂ ರಥೋತ್ಸವದ ಅಂಗವಾಗಿ ಕೂಡಿಗೆ ಸುತ್ತ ಮುತ್ತಲಿನ ಹತ್ತಾರು ಗ್ರಾಮಗಳಿಂದ ಹೆಚ್ಚಿನ ಭಕ್ತಾದಿಗಳು ಧಾವಿಸಿದ್ದರು. ದೇವಾಲಯದ ಧರ್ಮದರ್ಶಿ ಎಲ್ಲೂಬಾಯಿ ಭಕ್ತರಿಗೆ ಆಶೀರ್ವಚನ ನಡೆಸಿದರು.