ಗೋಣಿಕೊಪ್ಪ ವರದಿ, ಮೇ ೩೦: ಮಣ್ಣಿನಲ್ಲಿ ಹುಳಿ ಅಂಶ ಹೆಚ್ಚಾಗದಂತೆ ಕಾಫಿ ಬೆಳೆಗಾರರು ಮಣ್ಣಿನ ಆರೋಗ್ಯಕ್ಕೆ ಆದ್ಯತೆ ನೀಡುವ ಕೃಷಿ ಪದ್ದತಿ ಅಳವಡಿಸಿಕೊಳ್ಳಬೇಕಿದೆ ಎಂಬ ಅಭಿಪ್ರಾಯ ಅಗ್ರಿಕಲ್ಚರಲ್ ಸೈನ್ಸಸ್ ಫಾರಂ ಆಫ್ ಕೊಡಗು ಸಂಸ್ಥೆ ವತಿಯಿಂದ ಅಮ್ಮತ್ತಿ ಕೊಡವ ಸಮಾಜ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಮಣ್ಣಿನ ಆರೋಗ್ಯದ ಸಂರಕ್ಷಣೆ ವಿಷಯದ ಕಾರ್ಯಾಗಾರ ದಲ್ಲಿ ತಜ್ಞರಿಂದ ವ್ಯಕ್ತವಾಯಿತು.
ಮಣ್ಣಿನಲ್ಲಿ ಹುಳಿಯ ಅಂಶ ಹೆಚ್ಚುತ್ತಿರುವ ಬಗ್ಗೆ ತಜ್ಞರು ಕಳವಳ ವ್ಯಕ್ತಪಡಿಸಿದರು. ಮಣ್ಣು ಪರೀಕ್ಷೆ ಮೂಲಕ ಸಮರ್ಪಕ ಪೋಷಕಾಂಶ ನೀಡಲು ಮುಂದಾಗಬೇಕು. ಅನಾವಶ್ಯಕ ರಸ ಗೊಬ್ಬರ ಪೋಲಾಗದಂತೆ ಜಾಗೃತರಾಗಬೇಕಿದೆ ಎಂದು ಹೇಳಿದರು.
ಬೆಂಗಳೂರು ಯುಎಎಸ್ ಮಣ್ಣು ವಿಜ್ಞಾನ ವಿಭಾಗದ ನಿವೃತ್ತ ಪ್ರೊಫೆಸರ್ ಡಾ. ವಿ. ಆರ್. ರಾಮಕೃಷ್ಣ ಪರಮ ಮಾತನಾಡಿ, ಮಗುವಿನಂತೆ ಮಣ್ಣನ್ನು ಪಾಲನೆ ಮಾಡಬೇಕು. ಮಣ್ಣಿನ ಆರೋಗ್ಯಕ್ಕೆ ಆದ್ಯತೆ ನೀಡುವ ಕೃಷಿ ಪದ್ದತಿ ಅಳವಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಕೊಡಗಿನ ಕಾಫಿ ಕೃಷಿ ಪದ್ದತಿಯಲ್ಲಿ ಮಣ್ಣಿನ ಅರೋಗ್ಯಕ್ಕೆ ಹೆಚ್ಚು ಒತ್ತು ನೀಡುವಂತಾಗಬೇಕು. ಅನಾವಶ್ಯಕ ರಾಸಾಯನಿಕ ಗೊಬ್ಬರ ನೀಡುವ ಪ್ರಮಾಣ ಹೆಚ್ಚುತ್ತಿರುವ ಬಗ್ಗೆ ಆತಂಕ ವ್ಯಕ್ತ ಪಡಿಸಿದರು. ಪೋಶಕಾಂಶಗಳ ಪ್ರಮಾಣ, ಸಮಯ, ಹವಾಗುಣ ಅರಿತು ಗೊಬ್ಬರ ನೀಡುವುದು ಒಳಿತು. ಮಣ್ಣು ಪರೀಕ್ಷೆ ವರದಿ ಆಧರಿಸಿ ನೀಡುವ ಪೋಶಕಾಂಶ ಮಣ್ಣಿಗೆ ಬೇಕು. ಇದರಿಂದ ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಬಹುದಾಗಿದೆ. ಹೆಚ್ಚು ರಸ ಗೊಬ್ಬರ ಬಳಕೆಯಿಂದ ಆರ್ಥಿಕ ನಷ್ಟದೊಂದಿಗೆ ಮಣ್ಣಿನ ಭವಿಷ್ಯ ಕೂಡ ನಾಶವಾಗುತ್ತದೆ. ಭವಿಷ್ಯದಲ್ಲಿ ಕೃಷಿಯಿಂದ ದೂರ ಉಳಿಯುವಂತೆ ನಾವೇ ತಪ್ಪೆಸಗಬಾರದು ಎಂದು ಎಚ್ಚರಿಸಿದರು. ಮಣ್ಣಿನಲ್ಲಿ ಹುಳಿಯ ಪ್ರಮಾಣ ಹೆಚ್ಚಾಗದಂತೆ ನೋಡಿಕೊಳ್ಳಲು ಕೃಷಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕಿದೆ ಎಂದರು.
ಬೆAಗಳೂರು ಕಾಫಿ ಮಂಡಳಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ. ಜಿ ಜಗದೀಶ ಮಾತನಾಡಿ, ಕಾಫಿ ಉತ್ಪಾದನೆಯಲ್ಲಿ ಮಣ್ಣಿನ ರಕ್ಷಣೆಗೆ ಪೂರಕ ಮಾಹಿತಿ ಅಗತ್ಯವಿದೆ. ಕಾಫಿ ಮಂಡಳಿ ಪೂರಕ ಮಾಹಿತಿ ನೀಡುತ್ತಿದೆ. ಅಗತ್ಯತೆಗಿಂತ ಹೆಚ್ಚು ಪೋಶಕಾಂಶ ಬಳಕೆ ಬೇಡ ಎಂದರು.
ಕ್ರಿಯಾಜೆನ್ ಅಗ್ರಿ, ಬಯೋಟೆಕ್ ಲಿಮಿಟೆಡ್ ಆಡಳಿತ ನಿರ್ದೇಶಕ ಡಾ. ಬಸವರಾಜ ಗಿರೆಣ್ಣವರ್ ಮಾತನಾಡಿ, ಕೃಷಿ ವಿಜ್ಞಾನ ಮತ್ತು ತಂತ್ರಜ್ಞಾನ ಬಳಕೆಯಿಂದ ಮಾತ್ರ ಕೃಷಿ ಉಳಿಯಲು ಸಾಧ್ಯ. ನಾವು ಮುಂದುವರಿದAತೆ ಯಂತ್ರೋಪಕರಣ ಬಳಕೆ, ಮಾನವ ರಹಿತ ತಂತ್ರಜ್ಞಾನ ಕೂಡ ಹೆಚ್ಚು ಪ್ರಯೋಜನಕ್ಕೆ ಬರುತ್ತದೆ. ಮುಂದುವರಿದ ರಾಷ್ಟçದಲ್ಲಿ ರೋಬೊಟ್, ಡ್ರೋಣ್ ಕ್ಯಾಮೆರಾ ಕೂಡ ಬಳಕೆಯಾಗುತ್ತಿದೆ. ಕಾಫಿ ಬೆಳೆಗೆ ಕೂಡ ಇಂತಹ ತಂತ್ರಜ್ಞಾನದ ಅನಿವಾರ್ಯತೆ ಇದೆ. ಮೂಲಭೂತ ಸಮಸ್ಯೆ ಅರಿತು ತಂತ್ರಜ್ಞಾನ ಬಳಕೆಗೆ ಮುಂದಾಗಬೇಕು ಎಂದರು.
ಇಶಾ ಫೌಂಡೇಷನ್ ಕಾರ್ಯಕರ್ತ ಅಭಿನಂದನ್ ಮಾತನಾಡಿ, ಇಶಾ ಫೌಂಡೇಷನ್ ಕೂಡ ವಿಶ್ವಾದ್ಯಂತ ಮಣ್ಣಿನ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುತ್ತಿದೆ. ಸದ್ಗುರು ಜಗ್ಗಿ ವಾಸುದೇವ್ ಈ ಬಗ್ಗೆ ನಿರ್ದಿಷ್ಠ ಯೋಜನೆ ಅನುಷ್ಠಾಗೊಳಿಸಲು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಮನವಿ ಮಾಡಿಕೊಳ್ಳುವ ಚಿಂತನೆ ಕೂಡ ಇದೆ ಎಂದರು.
ಕಾರ್ಯಾಗಾರದಲ್ಲಿ ಮಣ್ಣಿನ ರಕ್ಷಣೆಗೆ ಪೂರಕ ಯೋಜನೆ, ರಸಗೊಬ್ಬರದ ದುರ್ಬಳಕೆ ಬಗ್ಗೆ ಗಮನ ಸೆಳೆಯಲಾಯಿತು. ಮಳಿಗೆಗಳಲ್ಲಿ ಕೃಷಿ ಪೂರಕ ಪರಿಕರ, ಶಿಕ್ಷಣ, ಮಾಹಿತಿ ನೀಡಲಾಯಿತು.
ಅಗ್ರಿಕಲ್ಚರಲ್ ಸೈನ್ಸಸ್ ಫಾರಂ ಆಫ್ ಕೊಡಗು ಸಂಸ್ಥೆ ಅಧ್ಯಕ್ಷ ಡಾ. ಜಿ.ಎಂ. ದೇವಗಿರಿ ಇದ್ದರು.