ಸೋಮವಾರಪೇಟೆ, ಮೇ ೩೦: ಸೋಮವಾರಪೇಟೆ ಭಾಗದಲ್ಲಿರುವ ಮಾಜಿ ಸೈನಿಕರ ಕುಂದುಕೊರತೆಗಳನ್ನು ಆಲಿಸಿದ ಜಿಲ್ಲಾಧಿಕಾರಿಗಳು, ಕೆಲವೊಂದು ಸಮಸ್ಯೆಗಳಿಗೆ ಪರಿಹಾರದ ಭರವಸೆ ನೀಡಿದರಲ್ಲದೇ ಕಂದಾಯ ಇಲಾಖೆಯಿಂದ ಮಾಜಿ ಸೈನಿಕರಿಗೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದರು.

ಇಲ್ಲಿನ ತಾಲೂಕು ಕಚೇರಿಯಲ್ಲಿ ಆಯೋಜಿಸಿದ್ದ ಮಾಜಿ ಸೈನಿಕರು ಹಾಗೂ ಅವಲಂಭಿತರ ಕುಂದುಕೊರತೆ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು, ಮಾಜಿ ಸೈನಿಕರಿಗೆ ಜಾಗ ನೀಡುವ ಸಂಬAಧ ಸರ್ಕಾರ ವಿಧಿಸಿರುವ ನಿಬಂಧನೆಗಳಿಗೆ ಅನುಗುಣವಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು. ಸಭೆಯಲ್ಲಿ ಭಾಗಿಯಾಗಿದ್ದ ಮಾಜಿ ಸೈನಿಕರಿಂದ ಕುಂದುಕೊರತೆಗಳನ್ನು ಸ್ವೀಕರಿಸಿದರು.

ಮಾಜಿ ಸೈನಿಕ ಎ.ಕೆ. ಮಾಚಯ್ಯ ಅವರು ಮಾತನಾಡಿ, ಆರ್‌ಟಿಸಿಯಲ್ಲಿ ಜಂಟಿ ಖಾತೆ ಇರುವುದರಿಂದ ಸಾಕಷ್ಟು ಸಮಸ್ಯೆಯಾಗುತ್ತಿದೆ. ಇದನ್ನು ಪ್ರತ್ಯೇಕಿಸುವಂತೆ ೨ ವರ್ಷಗಳ ಹಿಂದೆಯೇ ತಾಲೂಕು ಕಚೇರಿಗೆ ಅರ್ಜಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ ಎಂದರು. ಈ ಬಗ್ಗೆ ತಕ್ಷಣ ಕ್ರಮವಹಿಸುವಂತೆ ಜಿಲ್ಲಾಧಿಕಾರಿಗಳು ತಾಲೂಕು ತºಶೀಲ್ದಾರ್‌ಗೆ ಸೂಚಿಸಿದರು.

ಇಗ್ಗೋಡ್ಲು ಗ್ರಾಮದ ರಾಮಪ್ಪ ಮಾತನಾಡಿ, ತನ್ನ ಮನೆ ಹಾಗೂ ಬೋರ್‌ವೆಲ್‌ಗೆ ವಿದ್ಯುತ್ ಸಂಪರ್ಕ ನೀಡದೇ ಅಧಿಕಾರಿಗಳು ಸತಾಯಿಸುತ್ತಿದ್ದಾರೆ. ಮೀಟರ್ ಅಳವಡಿಸುತ್ತಿಲ್ಲ. ೨ ವರ್ಷದಿಂದ ಅಲೆದಾಡುತ್ತಿದ್ದರೂ ಸಮಸ್ಯೆ ಬಗೆಹರಿದಿಲ್ಲ ಎಂದರು.

ಸೆಸ್ಕ್ ಕಾರ್ಯಪಾಲಕ ಅಭಿಯಂತರ ಅಶೋಕ್ ಮಾತನಾಡಿ, ಮೀಟರ್ ಖರೀದಿಸಿದರೆ ಇಂದೇ ಸಂಪರ್ಕ ನೀಡಲಾಗುವುದು ಎಂದರು. ಮಾಜಿ ಸೈನಿಕ ಸುದೀಪ್ ಮಾತನಾಡಿ, ಕಳೆದ ೨೦ ವರ್ಷಗಳಿಂದ ಅನುಭವ ಸ್ವಾಧೀನದಲ್ಲಿರುವ ಜಾಗಕ್ಕೆ ಈವರೆಗೆ ದಾಖಲೆಗಳನ್ನು ನೀಡಿಲ್ಲ ಎಂದರೆ, ಚಂದ್ರಪ್ಪ ಮಾತನಾಡಿ, ತಾನು ಕರ್ತವ್ಯದಲ್ಲಿದ್ದ ಸಂದರ್ಭ ತನ್ನ ಸಂಬAಧಿಕರು ನಕಲಿ ದಾಖಲೆ ಸೃಷ್ಟಿಸಿ ಜಾಗವನ್ನು ಕಬಳಿಸಿದ್ದಾರೆ. ನಮಗೆ ಜಾಗ ನೀಡುತ್ತಿಲ್ಲ ಎಂದು ಸಮಸ್ಯೆ ತೆರೆದಿಟ್ಟರು.

ಕಂದಾಯ ಇಲಾಖೆ ವ್ಯಾಪ್ತಿಯಲ್ಲಿ ಬಗೆಹರಿಸಬಹುದಾದ ಸಮಸ್ಯೆಗಳನ್ನು ನಾವುಗಳು ಬಗೆಹರಿಸುತ್ತೇವೆ. ನ್ಯಾಯಾಲಯದ ವ್ಯಾಜ್ಯಗಳಿದ್ದರೆ ಅಲ್ಲೇ ಬಗೆಹರಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಶಾಂತಳ್ಳಿ ಗ್ರಾಮದ ಬಸವರಾಜು ಮಾತನಾಡಿ, ಅಕ್ರಮ ಸಕ್ರಮ ಯೋಜನೆಯಡಿ ಸಲ್ಲಿಸಿದ್ದ ಅರ್ಜಿ ತಾಲೂಕು ಕಚೇರಿಯಿಂದ ನಾಪತ್ತೆಯಾಗಿದ್ದು, ಇದೀಗ ಮತ್ತೊಮ್ಮೆ ೫೭ರಡಿ ಅರ್ಜಿ ಸಲ್ಲಿಸಲಾಗಿದೆ. ಮಂಜೂರಾತಿ ನೀಡಬೇಕೆಂದು ಮನವಿ ಮಾಡಿದರು.

ಕಾವೇರಪ್ಪ ಮಾತನಾಡಿ, ಸೋಮವಾರಪೇಟೆ ಸರ್ವೆ ಇಲಾಖೆಯಲ್ಲಿ ದಾಖಲಾತಿಗಳೇ ಕಾಣೆಯಾಗುತ್ತಿವೆ. ತನ್ನ ಜಾಗಕ್ಕೆ ಕಂದಾಯ ನಿಗದಿ ಮಾಡುವಂತೆ ಕಳೆದ ೮ವರ್ಷಗಳಿಂದ ಮನವಿ ಸಲ್ಲಿಸುತ್ತಾ ಬಂದರೂ ಪ್ರಯೋಜನವಾಗಿಲ್ಲ. ೨ ಬಾರಿ ಸರ್ವೆ ಮಾಡಿದ್ದರೂ ಸ್ಕೆಚ್ ಕೊಟ್ಟಿಲ್ಲ. ಸರ್ವೆಯರ್ ರವಿ ಎಂಬವರು ವಿನಾಕಾರಣ ವಿಳಂಬ ಮಾಡುತ್ತಿದ್ದಾರೆ ಎಂದು ದೂರಿದರು. ಸರ್ವೆ ಸ್ಕೆಚ್ ಪರಿಶೀಲಿಸಿ ಆದಷ್ಟು ಶೀಘ್ರ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದರು.

ಜಗನ್ನಾಥ್ ಮಾತನಾಡಿ, ತಾಲೂಕು ಕಚೇರಿಯಲ್ಲಿ ಜಾಗದ ದಾಖಲಾತಿಗಳನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಮ್ಯಾಪ್‌ಗಳು ಸಿಗುತ್ತಿಲ್ಲ ಎಂದು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು ಕಂದಾಯ ಇಲಾಖೆಯ ದಾಖಲೆಗಳನ್ನು ಡಿಜಿಟಲೀಕರಣ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಈಗಾಗಲೇ ಕೆಲವೊಂದು ದಾಖಲೆಗಳು ಆನ್‌ಲೈನ್‌ನಲ್ಲಿ ಪಡೆಯಬಹುದಾಗಿದೆ. ಉಳಿದ ದಾಖಲೆಗಳನ್ನೂ ಶೀಘ್ರವಾಗಿ ಡಿಜಿಟಲೀಕರಣ ಮಾಡುತ್ತೇವೆ. ಆಗ ಸಮಸ್ಯೆ ಬಗೆಹರಿಯುತ್ತದೆ ಎಂದರು.

ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಮಾಜಿ ಸೈನಿಕರು, ಅವಲಂಬಿತರ ಅಹವಾಲುಗಳನ್ನು ಆಲಿಸಿದ ಜಿಲ್ಲಾಧಿಕಾರಿಗಳು, ಕೆಲವೊಂದು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ನೀಡಿದರು. ಕ್ಲಿಷ್ಟಕರ ಪ್ರಕರಣಗಳನ್ನು ಬಗೆಹರಿಸಿಕೊಳ್ಳುವ ಬಗ್ಗೆ ಮಾಜಿ ಸೈನಿಕರಿಗೆ ಸಲಹೆಗಳನ್ನು ನೀಡಿದರು.

ವೇದಿಕೆಯಲ್ಲಿ ಮಾಜಿ ಸೈನಿಕರ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಜಂಟಿ ನಿರ್ದೇಶಕ ಬಾಲಸುಬ್ರಮಣ್ಯ, ತಹಶೀಲ್ದಾರ್ ಗೋವಿಂದರಾಜು, ಸೆಸ್ಕ್ ಇಲಾಖೆಯ ಅಶೋಕ್, ಧನಂಜಯ್ ಅವರುಗಳು ಉಪಸ್ಥಿತರಿದ್ದರು.