ಮಡಿಕೇರಿ, ಮೇ ೩೧: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕುಶಾಲನಗರ ತಾಲೂಕು ಘಟಕದ ವತಿಯಿಂದ ಭಾನುವಾರ ಕುಶಾಲನಗರ ದಲ್ಲಿ ಏರ್ಪಡಿಸಿದ್ದ ಪತ್ರಕರ್ತರ ಜಿಲ್ಲಾ ಮಟ್ಟದ ಪ್ರಥಮ ವರ್ಷದ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮೀಡಿಯಾ ಕಿಂಗ್ಸ್ ತಂಡ ಚಾಂಪಿಯನ್ ತಂಡವಾಗಿ ಹೊರಹೊಮ್ಮಿತು.

ಫೈನಲ್ ಪಂದ್ಯದಲ್ಲಿ ಟಾಸ್ ಸೋತ ಡ್ರೀಮ್ ಇಲೆವೆನ್ ತಂಡ ನಿಗದಿತ ೬ ಓವರ್‌ನಲ್ಲಿ ೬೧ ರನ್ ಕಲೆ ಹಾಕಿತ್ತು. ತಂಡದ ಪರ ಆದರ್ಶ್ ಅದ್ಕಲೇಗಾರ್ ೨೦ ಎಸೆತದಲ್ಲಿ ೩೬, ಮಂಜು ಸುವರ್ಣ ೧೮ ರನ್ ದಾಖಲಿಸಿದರು. ಗುರಿಬೆನ್ನಟ್ಟಿದ ಮೀಡಿಯಾ ಕಿಂಗ್ಸ್ ವಿಕೆಟ್ ನಷ್ಟವಿಲ್ಲದೇ ಗೆಲುವು ಸಾಧಿಸಿತು. ತಂಡದ ಪರ ಹೇಮಂತ್ ೧೯ ಎಸೆತದಲ್ಲಿ ೩೬, ಜಯಪ್ರಕಾಶ್ ೧೬ ರನ್ ದಾಖಲಿಸಿದರು. ಪರಿಣಾಮ ಪ್ರಥಮ ವರ್ಷದ ಪ್ರೀಮಿಯರ್ ಲೀಗ್‌ನಲ್ಲಿ ಮೀಡಿಯಾ ಕಿಂಗ್ಸ್ ಚಾಂಪಿಯನ್ ತಂಡವಾಗಿ ಹೊರ ಹೊಮ್ಮಿದರೆ, ಡ್ರೀಮ್ ಇಲೆವೆನ್ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟು ಕೊಂಡಿತ್ತು. ಇದಕ್ಕೂ ಮುಂಚಿತವಾಗಿ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಸೋತ ಮೀಡಿಯಾ ಕಿಂಗ್ಸ್ ತಂಡ ನಿಗದಿತ ೬ ಓವರ್‌ನಲ್ಲಿ ವಿಕೆಟ್ ನಷ್ಟವಿಲ್ಲದೇ ೮೦ ರನ್ ಕಲೆ ಹಾಕಿತ್ತು. ತಂಡದ ಪರ ಜಯಪ್ರಕಾಶ್ ೨೬ ಎಸೆತದಲ್ಲಿ ೫೯ ರನ್ ಕಲೆ ಹಾಕಿದರು. ಗುರಿಬೆನ್ನಟ್ಟಿದ ಟೀಂ ರಾಕ್ ಸ್ಟಾರ್ಸ್ ತಂಡ ೫ ವಿಕೆಟ್‌ಗೆ ೪೨ ರನ್ ಗಳಿಸಿ ೩೮ ರನ್‌ಗಳ ಅಂತರದಲ್ಲಿ ಸೋಲುಂಡಿತು.

ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಸೋತ ಡ್ರೀಂ ೧೧ ತಂಡ ೬ ಓವರ್‌ನಲ್ಲಿ ೪೭ರನ್ ಕಲೆ ಹಾಕಿತ್ತು. ಗುರಿಬೆನ್ನಟ್ಟಿದ ಮೀಡಿಯಾ ಕ್ಯಾಪ್ಟನ್ ೧೨ ತಂಡ ೩೮ ರನ್‌ಗಳಿಗೆ ಸರ್ವಪತನ ಕಂಡಿತ್ತು. ಡ್ರೀಂ ೧೧ ತಂಡದ ತರ ಸಂತೋಷ್ ರೈ ೩, ಪಾರ್ಥ ಚಿಣ್ಣಪ್ಪ, ಮಂಜು ಸುವರ್ಣ ತಲಾ ೨ ವಿಕೆಟ್ ಪಡೆದುಕೊಂಡರು.

ಇದಕ್ಕೂ ಮೊದಲು ನಡೆದ ೫ ಓವರ್‌ನ ಲೀಗ್ ಪಂದ್ಯದಲ್ಲಿ ಮೀಡಿಯಾ ಸ್ಟಾರ್ಸ್ ತಂಡವನ್ನು ಟೀಂ ರಾಕ್ ಸ್ಟಾರ್ಸ್ ತಂಡ ಮಣಿಸಿತು. ಮತ್ತೊಂದು ಪಂದ್ಯದಲ್ಲಿ ಇಂಚರ ನ್ಯೂಸ್ ತಂಡವನ್ನು ಮೀಡಿಯಾ ಕಿಂಗ್ಸ್ ತಂಡ ಮಣಿಸಿತು. ಟೀಂ ರಾಕ್ ಸ್ಟಾರ್ಸ್ ಮತ್ತು ಮೀಡಿಯಾ ಕ್ಯಾಪ್ಟನ್ ೧೨ ತಂಡಗಳ ನಡುವಿನ ಪಂದ್ಯದಲ್ಲಿ ಮೀಡಿಯಾ ಕ್ಯಾಪ್ಟನ್ ೧೨ ಜಯಬೇರಿ ಬಾರಿಸಿದರೆ, ಡ್ರೀಂ ೧೧ ತಂಡ ಇಂಚರ ನ್ಯೂಸ್ ತಂಡವನ್ನು ೧೦ ವಿಕೆಟ್‌ಗಳಿಂದ ಸೋಲಿಸಿತು. ಮೀಡಿಯಾ ಸ್ಟಾರ್ಸ್ ಮತ್ತು ಮೀಡಿಯಾ ಕ್ಯಾಪ್ಟನ್ ೧೨ ತಂಡಗಳ ನಡುವಿನ ಪಂದ್ಯದಲ್ಲಿ ಮೀಡಿಯಾ ಕ್ಯಾಪ್ಟನ್ ೧೨ ತಂಡ ವಿಕೆಟ್ ನಷ್ಟವಿಲ್ಲದೇ ಜಯ ಸಾಧಿಸಿದರೆ, ಮತ್ತೊಂದು ಪಂದ್ಯದಲ್ಲಿ ಮೀಡಿಯಾ ಕಿಂಗ್ಸ್ ತಂಡ ಡ್ರೀಂ ೧೧ ತಂಡವನ್ನು ೩ ರನ್‌ಗಳ ಅಂತರದಲ್ಲಿ ಸೋಲಿಸಿತು.

ವೈಯುಕ್ತಿಕ ಪ್ರಶಸ್ತಿ ವಿತರಣೆ

ಪ್ರಥಮ ಸ್ಥಾನ ಪಡೆದ ಮೀಡಿಯಾ ಕಿಂಗ್ಸ್ ತಂಡಕ್ಕೆ ರೂ.೫೦ ಸಾವಿರ ನಗದು ಮತ್ತು ಆಕರ್ಷಕ ಟ್ರೋಫಿ ಹಾಗೂ ನಾಯಕನಿಗೆ ರೂ.೩ ಸಾವಿರ, ಆಟಗಾರರಿಗೆ ತಲಾ ರೂ. ೨ಸಾವಿರ ನಗದು, ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟ ಡ್ರೀಂ ೧೧ ತಂಡಕ್ಕೆ ರೂ. ೨೫ಸಾವಿರ ನಗದು ಮತ್ತು ಆಕರ್ಷಕ ಟ್ರೋಫಿ ಹಾಗೂ ನಾಯಕನಿಗೆ ರೂ. ೨ಸಾವಿರ, ಆಟಗಾರರಿಗೆ ತಲಾ ಒಂದು ಸಾವಿರ ನಗದನ್ನು ವಿತರಿಸಲಾಯಿತು. ಬೆಸ್ಟ್ ಬ್ಯಾಟ್ಸ್ಮೆನ್ ಮತ್ತು ಸರಣಿ ಪುರುಷೋತ್ತಮ ಟ್ರೋಫಿಯನ್ನು ಮೀಡಿಯಾ ಕಿಂಗ್ಸ್ ತಂಡದ ಜಯಪ್ರಕಾಶ್ ಪಡೆದುಕೊಂಡರೆ, ಬೆಸ್ಟ್ ಬೌಲರ್ ಪ್ರಶಸ್ತಿಯನ್ನು ಮೀಡಿಯಾ ಕ್ಯಾಪ್ಟನ್ ೧೨ ತಂಡದ ಇಸ್ಮಾಯಿಲ್ ಕಂಡಕೆರೆ ಪಡೆದುಕೊಂಡರು. ಬೆಸ್ಟ್ ಆಲ್ ರೌಂಡರ್- ಡ್ರೀಂ ೧೧ ತಂಡದ ಮಂಜು ಸುವರ್ಣ, ಬೆಸ್ಟ್ ಕೀಪರ್-ಡ್ರೀಮ್ ೧೧ ತಂಡದ ಪಾರ್ಥ ಚಿಣ್ಣಪ್ಪ, ಬೆಸ್ಟ್ ಫೀಲ್ಡರ್ ಪ್ರಶಸ್ತಿಯನ್ನು ಮೀಡಿಯಾ ಕ್ಯಾಪ್ಟನ್ ೧೨ ತಂಡದ ಮುಸ್ತಫಾ ಪಡೆದುಕೊಂಡರು.

ಸಮಾರೋಪ ಸಮಾರಂಭ

ಜಡಗಟ್ಟಿದ ಮನಸ್ಸು, ದೇಹಕ್ಕೆ ಹುರುಪು ತುಂಬಲು ಕ್ರೀಡೆಯಂತಹ ಚಟುವಟಿಕೆಗಳು ಅಗತ್ಯ ಎಂದು ಜೆಡಿಎಸ್ ಮುಖಂಡ ನಾಪಂಡ ಮುತ್ತಪ್ಪ ಹೇಳಿದರು. ಪತ್ರಕರ್ತರ ಜಿಲ್ಲಾ ಮಟ್ಟದ ಪ್ರಥಮ ವರ್ಷದ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಕರೊನಾ ಆತಂಕ ಸ್ವಲ್ಪ ದೂರವಾಗುತ್ತಿ ದ್ದಂತೆಯೇ ಎಲ್ಲಾ ರೀತಿಯ ಚಟುವಟಿಕೆಗಳು ಗರಿಗೆದರಿದೆ. ಎಲ್ಲಾ ಕಡೆಯೂ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದೆ. ಪತ್ರಕರ್ತರೂ ಕ್ರಿಕೆಟ್ ಮೂಲಕ ಒಂದಾಗುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ ಎಂದರು.

ಕುಶಾಲನಗರ ತಾಲೂಕು ಕ್ರೀಡಾ ಸಮಿತಿ ಅಧ್ಯಕ್ಷ ಕೆ.ಜೆ.ಶಿವರಾಜ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದ ವೇದಿಕೆಯಲ್ಲಿ ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯವರ್ಧನ, ಉದ್ಯಮಿ ಬಾಷಾ, ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಸವಿತಾ ರೈ, ಕುಶಾಲನಗರ ತಾಲೂಕು ಘಟಕದ ಅಧ್ಯಕ್ಷ ಚಂದ್ರಮೋಹನ್, ಉಪಾಧ್ಯಕ್ಷ ರಾಜು ರೈ, ಪ್ರಧಾನ ಕಾರ್ಯದರ್ಶಿ ವನಿತಾ ಚಂದ್ರಮೋಹನ್, ರಾಷ್ಟಿçÃಯ ಪತ್ರಕರ್ತರ ಒಕ್ಕೂಟದ ನಿರ್ದೇಶಕ ಸುನಿಲ್ ಪೊನ್ನೇಟಿ, ಪೊನ್ನಂಪೇಟೆ ತಾಲೂಕು ಘಟಕದ ಅಧ್ಯಕ್ಷ ಕಿಶೋರ್ ನಾಚಪ್ಪ ಇತರರಿದ್ದರು.