ಕೂಡಿಗೆ, ಮೇ ೨೮: ತೊರೆನೂರು ಶ್ರೀ ಬಸವೇಶ್ವರ ದೇವಸ್ಥಾನ ಟ್ರಸ್ಟ್ ವತಿಯಿಂದ ಗ್ರಾಮದ ದೊಡ್ಡಮ್ಮ ಮತ್ತು ಚಿಕ್ಕಮ್ಮ ತಾಯಿಯ ಗ್ರಾಮ ದೇವತೆ ಹಬ್ಬವು ಮಿನಿ ದಸರಾ ಮಾದರಿಯಲ್ಲಿ ವಿವಿಧ ಸ್ತಬ್ಧ ಚಿತ್ರಗಳ ಮೆರವಣಿಗೆ ಪೂಜೆಯೊಂದಿಗೆ ಅದ್ಧೂರಿಯಾಗಿ ಆಚರಿಸಲ್ಪಟ್ಟಿತು.

ದೇವಾಲಯ ಸಮಿತಿಯ ಮಂಟಪ ಸೇರಿದಂತೆ ವೀರಶೈವ ಸಮಾಜ, ಒಕ್ಕಲಿಗರ ಸಮಾಜ ಚಿಕ್ಕ ನಾಯಕಹೊಸಳ್ಳಿ ಗ್ರಾಮಸ್ಥರು ಹಾಗೂ ವಿನಾಯಕ ಬಡಾವಣೆ ಯುವಕ ತಂಡಗಳ ವತಿಯಿಂದ ಅದ್ಧೂರಿಯಾಗಿ ಮಂಟಪಗಳ ರಚನೆ ಮಾಡಲಾಗಿತ್ತು.

ಗ್ರಾಮ ದೇವತೆ ಹಬ್ಬದ ಅಂಗವಾಗಿ ದೇವಾಲಯದಲ್ಲಿ ಬೆಳಿಗ್ಗೆ ೭ ಗಂಟೆಯಿAದಲೇ ಬಸವಕುಮಾರ್ ಶಾಸ್ತಿç ಮತ್ತು ವೇದ ಆಗಮನ ಪ್ರಮೀಣ ವಿದ್ವತ್ ಅವರಿಂದ ಶುದ್ಧ ಪುಣ್ಯ, ಪೂಜೆ, ಗಣಪತಿ ಹೋಮ ಅಮ್ಮನವರಿಗೆ ಫಲ ಪಂಚಾಮೃತ, ಅಭಿಷೇಕ ಪೂರ್ಣಾಹುತಿ ಪೂಜೆ, ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ಎರಡು ದಿನಗಳ ಕಾಲ ನಡೆಯಿತು.

ನಂತರ ೩ ಗಂಟೆಗೆ ಬಸವೇಶ್ವರ ದೇವರ ವಿಗ್ರಹವನ್ನು ಕಾವೇರಿ ನದಿಯಲ್ಲಿ ಪುಣ್ಯ ಸ್ನಾನದೊಂದಿಗೆ ನದಿ ಪೂಜೆ ನಡೆದ ನಂತರ ವಾದ್ಯ ಗೋಷ್ಠಿ ಸಹಿತ ಬಸವೇಶ್ವರ ದೇವಾಲಯಕ್ಕೆ ಬಂದು ಬಸವಣ್ಣ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ನಂತರ ರಾತ್ರಿ ೧೦ ಗಂಟೆಗೆ ಅಲಂಕೃತ ಮಂಟಪದಲ್ಲಿ ಗ್ರಾಮದ ವಿವಿಧ ಉತ್ಸವ ಮೂರ್ತಿಗಳ ಮೆರವಣಿಗೆ ನಡೆಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಡೊಳ್ಳು ಕುಣಿತ, ಜಾನಪದ ಕಲಾತಂಡ, ವೀರಗಾಸೆ ತಂಡಗಳು ಪಾಲ್ಗೊಂಡಿದ್ದವು.

ಮೆರವಣಿಗೆಯು ದೊಡ್ಡಮ್ಮ ಮತ್ತು ಚಿಕ್ಕಮ್ಮ ತಾಯಿಯ ಸನ್ನಿಧಿಗೆ ತಲುಪಿದ ನಂತರ ವಿವಿಧ ಹರಕೆ ಸೇವೆಗಳು ನಡೆದವು. ಮಹಾಮಂಗಳಾರತಿ ಯೊಂದಿಗೆ ಆಕರ್ಷಕ ಮದ್ದು ಗುಂಡುಗಳ ಪ್ರದರ್ಶನ ನಡೆಯಿತು.

ಮರುದಿನ ದೇವಾಲಯ ಅವರಣದಲ್ಲಿ ಅಮ್ಮನ ಸನ್ನಿಧಿಯಲ್ಲಿ ಪೂಜಾ ಕಾರ್ಯಕ್ರಮದೊಂದಿಗೆ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ನಡೆಯಿತು.

ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೂಪ ಮಹೇಶ್, ಬಸವೇಶ್ವರ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಹೆಚ್.ಬಿ. ಚಂದ್ರಪ್ಪ ಉಪಾಧ್ಯಕ್ಷ ಟಿ.ವಿ. ಪ್ರಕಾಶ್, ಗೌರವಾಧ್ಯಕ್ಷ ಟಿ.ಎಸ್. ಚಂದ್ರಶೇಖರ, ಖಜಾಂಚಿ ಟಿ.ಸಿ. ಶಿವಕುಮಾರ್, ಕಾರ್ಯದರ್ಶಿ ಟಿ.ಹೆಚ್. ಸೋಮಾಚಾರಿ ಸೇರಿದಂತೆ ಸಮಿತಿಯ ನಿರ್ದೇಶಕರು, ಸಲಹಾ ಸಮಿತಿಯವರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು ಸದಸ್ಯರುಗಳು, ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುತ್ತ ಮುತ್ತಲಿನ ಸಾವಿರಾರು ಭಕ್ತಾದಿಗಳು ಭಾಗವಹಿಸಿದ್ದರು.