ಶನಿವಾರಸಂತೆ, ಮೇ ೨೮: ತೋಟದಲ್ಲಿ ನಾಲ್ವರು ಕೂಲಿ ಕಾರ್ಮಿಕರು ಮರದ ದಿಮ್ಮಿ ಹೊತ್ತು ಸಾಗಿಸುತ್ತಿದ್ದಾಗ ಜಾರಿ ಕೆಳಗೆ ಕಾರ್ಮಿಕರೊಬ್ಬರ ಮೇಲೆ ದಿಮ್ಮಿ ಬಿದ್ದು ಗಂಭೀರವಾಗಿ ಗಾಯಗೊಂಡ ಘಟನೆ ಸಮೀಪದ ಗಂಗಾವರ ಗ್ರಾಮದಲ್ಲಿ ನಡೆದಿದೆ.
ತ್ಯಾಗರಾಜ ಕಾಲೋನಿಯ ವಸಂತಕುಮಾರ್ ಗಾಯಗೊಂಡ ಕೂಲಿ ಕಾರ್ಮಿಕ. ಈತ ತನ್ನ ಜತೆ ಕಾರ್ಮಿಕರಾದ ಬಡುಬನ ಹಳ್ಳಿಯ ಬಿ.ಎಚ್. ಆದರ್ಶ, ಉಮೇಶ್ ಹಾಗೂ ಯಸಳೂರಿನ ಉದಯ್ ಅವರೊಂದಿಗೆ ಮೇಸ್ತಿç ಬೆಟ್ಟದಳ್ಳಿಯ ಶಿವಣ್ಣ ಎಂಬವರು ಖರೀದಿಸಿದ್ದ ಗಂಗಾವರ ಗ್ರಾಮದ ಆನಂದ್ ಅವರ ತೋಟದ ಸಿಲ್ವರ್ ಮರದ ದಿಮ್ಮಿಗಳನ್ನು ಮನೆಯ ಕಣಕ್ಕೆ ಸಾಗಿಸುತ್ತಿದ್ದಾಗ ಘಟನೆ ನಡೆದಿದೆ.
ಶಬ್ಧ ಕೇಳಿ ಸ್ಥಳಕ್ಕೆ ಮರ ಅಳತೆ ಮಾಡುತ್ತಿದ್ದ ವಿನೋದ್ ಎಂಬವರು ಬಂದ ತಕ್ಷಣ ಕಾರ್ಮಿಕರು ಗಾಯಾಳು ವಸಂತಕುಮಾರನನ್ನು ವಾಹನದಲ್ಲಿ ಕರೆದೊಯ್ದು ಹಾಸನದ ಮಂಜುನಾಥ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮೇಸ್ತಿç ಶಿವಣ್ಣ ಹಾಗೂ ತೋಟ ಮಾಲೀಕ ಆನಂದ್ ಅವರ ವಿರುದ್ಧ ಕಾರ್ಮಿಕ ಬಿ.ಎಚ್. ಆದರ್ಶ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಪೊಲೀಸ್ ಇನ್ಸ್ಪೆಕ್ಟರ್ ಎಸ್. ಪರಶಿವಮೂರ್ತಿ, ಹೆಡ್ ಕಾನ್ಸ್ಟೇಬಲ್ ಶಶಿಕುಮಾರ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.