ಸೋಮವಾರಪೇಟೆ, ಮೇ ೨೮: ತಾಲೂಕು ಒಕ್ಕಲಿಗರ ಸಂಘದ ಸುವರ್ಣ ಮಹೋತ್ಸವ ಪ್ರಯುಕ್ತ ಯಡೂರು ಗ್ರಾಮದ ಬಿಟಿಸಿಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಕ್ರೀಡಾಕೂಟವನ್ನು ಸಂಘದ ತಾಲೂಕು ಅಧ್ಯಕ್ಷ ಎ.ಆರ್.ಮುತ್ತಣ್ಣ ಉದ್ಘಾಟಿಸಿದ್ದರು.
ನಂತರ ಮಾತನಾಡಿದ ಅವರು, ಕ್ರೀಡೆ ಶಾರೀರಿಕ ಹಾಗೂ ಮಾನಸಿಕ ಸದೃಢತೆಗೆ ಸಹಕಾರಿಯಾಗಿದೆ. ಕೃಷಿಕಾಯಕ ಮಾಡುವ ಒಕ್ಕಲಿಗರಲ್ಲಿ ಕ್ರೀಡೆ ರಕ್ತಗತವಾಗಿದೆ. ಗ್ರಾಮೀಣ ಕ್ರೀಡಾಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವನ್ನು ನಾವೆಲ್ಲರು ಮಾಡಬೇಕಾಗಿದೆ ಎಂದರು.
ತಾಲೂಕು ಒಕ್ಕಲಿಗರ ಸಂಘಕ್ಕೆ ಐವತ್ತು ವರ್ಷಗಳು ತುಂಬಿವೆ. ಈ ನಿಟ್ಟಿನಲ್ಲಿ ಜೂ.೧೪ರಂದು ಸುವರ್ಣ ಮಹೋತ್ಸವ ಕಾರ್ಯಕ್ರಮ ನಡೆಯಲಿದ್ದು, ಇದು ನಮಗೆಲ್ಲರಿಗೂ ಸಡಗರದ ಹಬ್ಬವಾಗಿವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷ ಬಿ.ಜೆ.ದೀಪಕ್, ಒಕ್ಕಲಿಗರ ಪ್ರಗತಿಪರ ಮಹಿಳಾ ವೇದಿಕೆ ಅಧ್ಯಕ್ಷೆ ಲೋಕೇಶ್ವರಿ ಗೋಪಾಲ್, ನಗರ ಗೌಡ ವೇದಿಕೆಯ ಅಧ್ಯಕ್ಷ ಎಂ.ಎA. ಪ್ರಕಾಶ್ಕುಮಾರ್, ಒಕ್ಕಲಿಗರ ಸಂಘದ ಪದಾಧಿಕಾರಿಗಳಾದ ಕೆ.ಟಿ.ಪರಮೇಶ್ ಎನ್.ಬಿ.ಗಣಪತಿ, ನಂದಕುಮಾರ್, ನಿರ್ಮಲ ಪ್ರಕಾಶ್, ಪಿ.ಕೆ.ರವಿ, ವಿನೋದ್, ಲಾವಣ್ಯ ಮೋಹನ್, ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರಕಾಶ್, ನತೀಶ್ ಮಂದಣ್ಣ, ಮಹಿಳಾ ವೇದಿಕೆಯ ಕಾರ್ಯದರ್ಶಿ ಕವಿತಾ ಉಪಸ್ಥಿತರಿದ್ದರು.
೧೬ ತಂಡಗಳು ಟೆನ್ನಿಸ್ಬಾಲ್ ಕ್ರಿಕೆಟ್ ಪಂದ್ಯಾವಳಿ ಭಾಗವಹಿಸಿದ್ದವು. ವಾಲಿಬಾಲ್ನಲ್ಲಿ ಹತ್ತು ತಂಡಗಳು ಸೆಣಸಿದವು. ತಾ. ೨೯ರಂದು (ಇಂದು) ಸೆಮಿಫೈನಲ್ ಹಾಗೂ ಮಹಿಳೆಯರಿಗೆ ಕ್ರೀಡಾಸ್ಪರ್ಧೆಗಳು ನಡೆಯಲಿವೆ.