ವಿಶೇಷಚೇತನ ಮಗುವಿಗೆ ವಿಮಾನ ಹತ್ತಲು ಬಿಡದ ಇಂಡಿಗೋ ಸಂಸ್ಥೆಗೆ ರೂ. ೫ ಲಕ್ಷ ದಂಡ ವಿಧಿಸಿದ ಡಿಜಿಸಿಎ
ನವದೆಹಲಿ, ಮೇ ೨೮: ರಾಂಚಿ ವಿಮಾನ ನಿಲ್ದಾಣದಲ್ಲಿ ಗಾಬರಿಯ ಸ್ಥಿತಿಯಲ್ಲಿದ್ದ ವಿಶೇಷ ಚೇತನ ಮಗು ವಿಮಾನ ಹತ್ತುವುದನ್ನು ನಿರ್ಬಂಧಿಸಿದ್ದ ಇಂಡಿಗೋ ವಿಮಾನ ಸಂಸ್ಥೆಗೆ ಪ್ರಯಾಣಿಕ ವಿಮಾನಯಾನದ ಪ್ರಧಾನ ನಿರ್ದೇಶನಾಲಯ (ಡಿಜಿಸಿಎ) ೫ ಲಕ್ಷ ರೂಪಾಯಿ ದಂಡ ವಿಧಿಸಿದೆ. ತಾ. ೭ ರಂದು ಈ ಘಟನೆ ನಡೆದಿತ್ತು. ಈ ಬಗ್ಗೆ ತಾ. ೯ ರಂದು ಸ್ಪಷ್ಟನೆ ನೀಡಿದ್ದ ಇಂಡಿಗೋ ಸಂಸ್ಥೆ ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ, ವಿಶೇಷಚೇತನ ಮಗುವು ಭಯಭೀತವಾಗಿದ್ದರಿಂದ ತನ್ನ ಕುಟುಂಬದೊAದಿಗೆ ತಾ. ೭ ರಂದು ವಿಮಾನವನ್ನು ಹತ್ತಲು ಸಾಧ್ಯವಾಗಲಿಲ್ಲ. ವಿಮಾನ ಸಿಬ್ಬಂದಿ ಕೊನೆಯ ಕ್ಷಣದವರೆಗೂ ಮಗು ಶಾಂತವಾಗುತ್ತದೆ ಎಂದು ಕಾದರು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಹೇಳಿತ್ತು. ಘಟನೆ ಬಗ್ಗೆ ತನಿಖೆ ನಡೆಸಲು ಡಿಜಿಸಿಎ ತ್ರಿಸದಸ್ಯ ಸಮಿತಿಯನ್ನು ರಚಿಸಿತ್ತು. ವಿಶೇಷಚೇತನ ಮಗುವನ್ನು ನಿಭಾಯಿಸುವುದರಲ್ಲಿ ಇಂಡಿಗೋ ಸಿಬ್ಬಂದಿಗಳ ಕೊರತೆ ಇದ್ದು, ಪರಿಸ್ಥಿತಿಯನ್ನು ಉಲ್ಬಣಗೊಳಿಸಲಾಗಿತ್ತು ಎಂದು ಡಿಜಿಸಿಎ ಹೇಳಿತ್ತು.
ತುಂಬು ಗರ್ಭಿಣಿಯರು ಸೇರಿ ಇಬ್ಬರು ಮಕ್ಕಳ ಶವ ಬಾವಿಯಲ್ಲಿ ಪತ್ತೆ!
ಜೈಪುರ, ಮೇ ೨೮: ಜೈಪುರ ಜಿಲ್ಲೆಯ ದುಡು ಪಟ್ಟಣದ ಬಾವಿಯಲ್ಲಿ ಮೂವರು ಮಹಿಳೆಯರು ಮತ್ತು ಇಬ್ಬರು ಮಕ್ಕಳ ಶವ ಪತ್ತೆಯಾಗಿದ್ದು, ಇದು ವರದಕ್ಷಿಣೆ ಕಿರುಕುಳ ಹತ್ಯೆ ಎಂದು ಶಂಕಿಸಲಾಗಿದೆ. ಹತ್ಯೆಗೀಡಾದ ಮಹಿಳೆಯರನ್ನು ಕಲುದೇವಿ, ಮಮತಾ ಮತ್ತು ಕಮಲೇಶ್ ಎಂದು ಗುರುತಿಸಲಾಗಿದೆ. ಇಬ್ಬರು ಮಕ್ಕಳಲ್ಲಿ ಒಬ್ಬರು ನಾಲ್ಕು ವರ್ಷ ವಯಸ್ಸಿನವರು ಮತ್ತು ಇನ್ನೊಬ್ಬ ಮಗುವಿಗೆ ಕೇವಲ ೨೭ ದಿನಗಳು. ಇವರು ಕಲು ದೇವಿಯ ಮಕ್ಕಳು ಎಂದು ತಿಳಿದು ಬಂದಿದೆ. ಮಮತಾ ದೇವಿ ಮತ್ತು ಕಮಲೇಶ್ ಇಬ್ಬರೂ ತುಂಬು ಗರ್ಭಿಣಿಯಾಗಿರುವುದು ಈ ಕೃತ್ಯದ ಬಗ್ಗೆ ಹಲವು ಅನುಮಾನಗಳು ಮೂಡುವಂತೆ ಮಾಡಿದೆ. ಅವರ ದೇಹಗಳು ಪತ್ತೆಯಾದ ಬಾವಿ ಅವರ ಮನೆಯಿಂದ ಸುಮಾರು ೨ ಕಿ.ಮೀ ದೂರದಲ್ಲಿದೆ. ವರದಕ್ಷಿಣೆ ಬೇಡಿಕೆಯ ಮೇರೆಗೆ ಅತ್ತೆಯಂದಿರು ಅವರನ್ನು ಕೊಂದಿದ್ದಾರೆ ಎನ್ನಲಾಗುತ್ತಿದೆ. ಪೊಲೀಸ್ ತನಿಖೆ ಮುಂದುವರೆದಿದೆ.
ಪ್ರಚೋದನಕಾರಿ ಘೋಷಣೆ ಕೂಗಿದ ತಂದೆ - ಮಗನನ್ನು ವಶಕ್ಕೆ ಪಡೆದ ಕೇರಳ ಪೊಲೀಸರು!
ಕೊಚ್ಚಿ, ಮೇ ೨೮: ಕೆಲವು ದಿನಗಳ ಹಿಂದೆ ಆಲಪ್ಪುಳದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಆಯೋಜಿಸಿದ್ದ ಮೆರವಣಿಗೆಯಲ್ಲಿ ಪ್ರಚೋದನಕಾರಿ ಘೋಷಣೆಗಳನ್ನು ಕೂಗಿದ ಬಾಲಕ ಹಾಗೂ ಆತನ ತಂದೆಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಮೆರವಣಿಗೆ ವೇಳೆ ವ್ಯಕ್ತಿಯ ಭುಜದ ಮೇಲೆ ಕುಳಿತು ಬಾಲಕ ಪ್ರಚೋದನಕಾರಿ ಘೋಷಣೆಗಳನ್ನು ಕೂಗಿದ್ದು ಬಾಲಕನ ಪೋಷಕರ ವಿವರಗಳನ್ನು ಸಂಗ್ರಹಿಸಲು ಕೊಚ್ಚಿಯಲ್ಲಿ ಮೊಕ್ಕಾಂ ಹೂಡಿದ್ದ ಆಲಪ್ಪುಳದ ಪೊಲೀಸ್ ತಂಡವು ಬಾಲಕ ಮತ್ತು ಆತನ ತಂದೆಯನ್ನು ವಶಕ್ಕೆ ಪಡೆದಿದ್ದಾರೆ. ಬಾಲಕನನ್ನು ಕೌನ್ಸೆಲಿಂಗ್‌ಗೆ ಕರೆದೊಯ್ಯಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ಎರಡು ದಿನಗಳಿಂದ ಕೊಚ್ಚಿಯಲ್ಲಿ ಮೊಕ್ಕಾಂ ಹೂಡಿದ್ದ ಪೊಲೀಸರು ಬಾಲಕನ ಕುಟುಂಬವನ್ನು ಪಲ್ಲೂರುತಿಯಲ್ಲಿ ಪತ್ತೆ ಹಚ್ಚಿದ್ದರೂ ಮನೆಗೆ ಬೀಗ ಹಾಕಿರುವುದು ಕಂಡು ಬಂದಿದ್ದರಿAದ ಯಾರನ್ನೂ ವಶಕ್ಕೆ ಪಡೆಯಲು ಸಾಧ್ಯವಾಗಿರಲಿಲ್ಲ. ಶುಕ್ರವಾರ ರಾತ್ರಿಯಷ್ಟೇ ಕುಟುಂಬಸ್ಥರು ಮನೆಗೆ ಮರಳಿದ್ದರು. ಕುಟುಂಬವು ವಿಹಾರಕ್ಕೆ ಬಂದಿದ್ದು, ಘಟನೆಗೆ ಸಂಬAಧಿಸಿದAತೆ ದಾಖಲಾಗಿರುವ ಪ್ರಕರಣದ ಬಗ್ಗೆ ತಮಗೆ ತಿಳಿದಿಲ್ಲ ಎಂದು ಹೇಳಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಬಾಲಕನ ತಂದೆಯನ್ನು ವಶಕ್ಕೆ ಪಡೆಯುವುದನ್ನು ವಿರೋಧಿಸಿ ಪಿಎಫ್‌ಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರಿಂದ ಬಾಲಕನ ಮನೆ ಮುಂಭಾಗದ ರಸ್ತೆಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.