ಸಿದ್ದಾಪುರ, ಮೇ ೨೮: ಅಮ್ಮತ್ತಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ಕುಡಿಯುವ ನೀರಿನ ಯೋಜನೆಗೆ ಶಾಸಕ ಕೆ.ಜಿ. ಬೋಪಯ್ಯ ಚಾಲನೆ ನೀಡಿದರು.

ಈ ಸಂದರ್ಭ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮುತುವರ್ಜಿಯಿಂದ ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ಮುಂದಿನ ೨೦೨೪ ರೊಳಗೆ ಪ್ರತಿ ಮನೆಗಳಿಗೆ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದರು.

ವೀರಾಜಪೇಟೆ ಕ್ಷೇತ್ರದಲ್ಲಿ ಮೊದಲ ಹಂತದಲ್ಲಿ ರೂ. ೨೫ ಕೋಟಿ ಹಾಗೂ ಎರಡನೆಯ ಹಂತದಲ್ಲಿ ರೂ. ೫೫ ಕೋಟಿ ವೆಚ್ಚದಲ್ಲಿ ಕುಡಿಯುವ ನೀರಿನ ಯೋಜನೆಗೆ ಅನುದಾನ ಬಿಡುಗಡೆ ಮಾಡಲಾಗಿದೆ. ಅಮ್ಮತ್ತಿ ಗ್ರಾ.ಪಂ. ವ್ಯಾಪ್ತಿಯಲ್ಲಿ ರೂ. ೫೫ ಲಕ್ಷ ವೆಚ್ಚದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದ್ದು, ಇದೀಗ ೧೨೫ ಮನೆಗಳಿಗೆ ನಲ್ಲಿ ನೀರಿನ ಸಂಪರ್ಕವನ್ನು ಒದಗಿಸಿ ಕೊಡಲಾಗಿದ್ದು, ಗ್ರಾಮಸ್ಥರು ಸದುಪಯೋಗಪಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಅಮ್ಮತ್ತಿ ಗ್ರಾ.ಪಂ. ಅಧ್ಯಕ್ಷೆ ವೈ. ಜಾನು, ಉಪಾಧ್ಯಕ್ಷೆ ಶಾಂತ, ಸದಸ್ಯರುಗಳಾದ ಪ್ರಶಾಂತ್, ನಿತೀಶ್, ಸುಗುಣ, ಕೇಚಂಡ ಅಶ್ವಿನಿ, ನಿತೇಶ್ ನಾಚಪ್ಪ, ಪಿಡಿಓ ಮೇದಪ್ಪ ಹಾಗೂ ಗ್ರಾಮಸ್ಥರಾದ ಬೊಮ್ಮಂಡ ನಾಚಪ್ಪ, ವೆಂಕಪ್ಪ ರೈ ಇನ್ನಿತರರು ಹಾಜರಿದ್ದರು.