ಕಣಿವೆ, ಮೇ ೨೭: ಕೊಡಗು ಜಿಲ್ಲೆಯ ಅತ್ಯಂತ ಪ್ರಮುಖ ಪ್ರವಾಸಿ ತಾಣ ದುಬಾರೆಯ ಸಾಕಾನೆಯ ಶಿಬಿರವನ್ನು ನೋಡಿ ಆನಂದಿಸಲು ಬಹಳ ದೂರದಿಂದ ನಿತ್ಯವೂ ಧಾವಿಸುವ ಸಹಸ್ರಾರು ಮಂದಿ ಪ್ರವಾಸಿಗರಿಗೆ ಸಂಬAಧಿತ ಅರಣ್ಯ ಇಲಾಖೆ ಸೂಕ್ತವಾದ ಅನುಕೂಲ ಒದಗಿಸಲು ವಿಫಲವಾಗಿರುವ ಬಗ್ಗೆ ಪ್ರವಾಸಿಗರಿಂದ ವ್ಯಾಪಕ ದೂರುಗಳು ಕೇಳಿ ಬರುತ್ತಿವೆ.
ವಾರಾಂತ್ಯದ ದಿನಗಳಲ್ಲಿ ಸಹಸ್ರ ಸಂಖ್ಯೆಯಲ್ಲಿ ದುಬಾರೆಗೆ ಪ್ರವಾಸಿಗರು ಧಾವಿಸುತ್ತಾರೆ. ಅಂದರೆ ದುಬಾರೆಗೆ ಪ್ರವಾಸಿಗರು ಬರುವ ಉದ್ದೇಶವೇ ಸಾಕಾನೆಗಳನ್ನು ನೋಡಲು ಹಾಗೂ ಅವುಗಳಿಗೆ ಕಾವೇರಿ ನದಿಯಲ್ಲಿ ಸ್ನಾನ ಮಾಡಿಸಿ ಅವುಗಳ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳುವ ಧಾವಂತ ಬಹಳಷ್ಟು ಪ್ರವಾಸಿಗರಿಗೆ ಇರುತ್ತದೆ.
ಆದರೆ, ಬೆಳಿಗ್ಗೆ ೮ ಗಂಟೆಯಿAದ ದುಬಾರೆಯ ಕಾವೇರಿ ನದಿ ದಂಡೆಯಲ್ಲಿ ಸರತಿ ಸಾಲಿನಲ್ಲಿ ನೂರಾರು ಮೀಟರ್ಗಳ ದೂರದಲ್ಲಿ ನಿಂತು ಕಾಯುವ ಪ್ರವಾಸಿಗರಿಗೆ ಅರಣ್ಯ ಇಲಾಖೆ ಸೂಕ್ತ ಅನುಕೂಲಗಳನ್ನು ಒದಗಿಸಿಲ್ಲ. ಅಂದರೆ ತನ್ನ ಸುಪರ್ದಿಯಲ್ಲಿ ಇರುವ ಯಾಂತ್ರಿಕ ದೋಣಿಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವಲ್ಲಿ ಇಲಾಖೆ ಸೋತಿದೆ ಎಂಬ ದೂರುಗಳು ಕೇಳಿ ಬರುತ್ತಿವೆ.
ಸ್ಥಗಿತಗೊಂಡ ಯಾಂತ್ರಿಕ ದೋಣಿಗಳು
ದುಬಾರೆಯ ಅರಣ್ಯದೊಳಗಿನ ಸಾಕಾನೆ ಶಿಬಿರಕ್ಕೆ ಪ್ರವಾಸಿಗರನ್ನು ಒಯ್ದು ಮರಳಿಸಲು ಇಲಾಖೆಯ ವತಿಯಿಂದಲೇ ಯಾಂತ್ರಿಕ ದೋಣಿಯ ವ್ಯವಸ್ಥೆ ಇದೆ. ಆದರೆ ಇದೀಗ ನದಿಯಲ್ಲಿ ನೀರಿನ ಹರಿವು ಕ್ಷೀಣಿಸಿದೆ ಎಂಬ ಕಾರಣಕ್ಕೆ ಯಾಂತ್ರಿಕ ದೋಣಿಯ ತಳಪಾಯ ನದಿಯೊಳಗಿನ ಕಲ್ಲು ಬಂಡೆಗಳಿಗೆ ತಾಗಿ ಹಾನಿಯಾಗುತ್ತದೆ. ಈಗಾಗಲೇ ಮೂರು ದೋಣಿಗಳ ಪೈಕಿ ಒಂದು ದೋಣಿಯ ತಳ ಭಾಗ ನದಿಯೊಳಗಿನ ಕಲ್ಲು ತಾಗಿ ಹಾನಿಯಾಗಿದೆ ಎಂದು ಅರಣ್ಯ ಇಲಾಖೆ ಸಿಬ್ಬಂದಿಯೊಬ್ಬರು ಸ್ಥಳಕ್ಕೆ ತೆರಳಿದ್ದ ‘ಶಕ್ತಿ'ಗೆ ಮಾಹಿತಿ ನೀಡಿದರು. ಹಾಗಾಗಿ ಮೂರು ಯಾಂತ್ರಿಕ ದೋಣಿಗಳನ್ನು ನದಿ ದಂಡೆಯಲ್ಲಿ ನಿಲ್ಲಿಸಲಾಗಿದೆ. ರ್ಯಾಫ್ಟ್ಗಳಲ್ಲಿ ಪ್ರವಾಸಿಗರ ಸಾಗಾಟ
ಯಾಂತ್ರಿಕ ದೋಣಿಗಳ ಸಂಚಾರವನ್ನು ಸ್ಥಗಿತಗೊಳಿಸಿರುವ ಕಾರಣ ಶುಕ್ರವಾರ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ದುಬಾರೆಯ ರ್ಯಾಫ್ಟಿಂಗ್ ಅಸೋಸಿಯೇಷನ್ ವತಿಯಿಂದ ೨೦ ರ್ಯಾಫ್ಟರ್ಗಳ ಮೂಲಕ ಪ್ರವಾಸಿಗರನ್ನು ನದಿಯ ಈ ದಂಡೆಯಿAದ ಆ ದಂಡೆಗೆ ಸಾಗಿಸಿ ಕರೆ ತರಲು ತಲಾ ೫೦ ರೂಗಳ ಶುಲ್ಕ ವಿಧಿಸಲಾಗುತ್ತಿದೆ.
(ಮೊದಲ ಪುಟದಿಂದ) ಅಂದರೆ ನದಿಯನ್ನು ದಾಟಿ ಸಾಕಾನೆ ಶಿಬಿರವನ್ನು ಪ್ರವೇಶಿಸಲು ಮತ್ತೆ ಅರಣ್ಯ ಇಲಾಖೆಗೆ ತಲಾ ರೂ. ೫೦ ಹಾಗೂ ಸಾಕಾನೆಗಳಿಗೆ ನದಿಯೊಳಗೆ ಸ್ನಾನ ಮಾಡಿಸಲು ತಲಾ ರೂ. ೨೦೦ ಶುಲ್ಕ ವಿಧಿಸಲಾಗುತ್ತಿದೆ.
ಆದರೆ ಸಾಕಾನೆ ಶಿಬಿರ ಬೆಳಿಗ್ಗೆ ೮ ರಿಂದ ೧೧ ಗಂಟೆಗೆ ಮುಕ್ತಾಯಗೊಳ್ಳುವ ಕಾರಣ ಬೆಳಿಗ್ಗೆ ಸರಿಯಾಗಿ ೧೧ ಗಂಟೆಯಾಗುತ್ತಿದ್ದ ಹಾಗೆಯೇ ಸಾಕಾನೆ ಶಿಬಿರಕ್ಕೆ ಪ್ರವಾಸಿಗರ ಸಂಚಾರವನ್ನು ಸ್ಥಗಿತಗೊಳಿಸಿರುವ ಕಾರಣ ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ನಿಂತು ನದಿ ದಾಟಿ ಸಾಕಾನೆಗಳನ್ನು ಕಂಡು ಬರಲು ಹರಸಾಹಸ ಪಡುವಂತಹ ದುಸ್ಥಿತಿ ಒದಗಿ ಬಂದಿದೆ.
ನೆನೆಗುದಿಗೆ ಬಿದ್ದ ತೂಗು ಸೇತುವೆ ನಿರ್ಮಾಣ ಕಾಮಗಾರಿ
ದುಬಾರೆಯಲ್ಲಿರುವ ಸಾಕಾನೆ ಶಿಬಿರಕ್ಕೆ ಸಂಪರ್ಕ ಕಲ್ಪಿಸಲು ಈ ಹಿಂದೆಯೇ ಯೋಜಿಸಿದ್ದ ತೂಗು ಸೇತುವೆ ನಿರ್ಮಾಣ ಕಾಮಗಾರಿ ವಿವಿಧ ಕಾರಣಗಳಿಂದ ಅಡ್ಡಿಯಾಗುತ್ತಿರುವ ಬಗ್ಗೆಯೂ ದೂರುಗಳು ಕೇಳಿ ಬರುತ್ತಿವೆ.
ದುಬಾರೆ ಕಾವೇರಿ ನದಿಯ ಮೇಲೆ ತೂಗು ಸೇತುವೆ ನಿರ್ಮಾಣವಾದರೆ ಮಳೆಗಾಲದಲ್ಲಿ ನದಿ ದಾಟಲು ಅಲ್ಲಿನ ಗಿರಿಜನ ಕುಟುಂಬಗಳ ಸದಸ್ಯರಿಗೂ ಅನುಕೂಲವಾಗಲಿದೆ. ಏಕೆಂದರೆ ಇಲ್ಲಿನ ಶ್ರಮಿಕ ಗಿರಿಜನ ಮಂದಿ ಕೂಲಿಯನ್ನು ಅರಸಿ ನಂಜರಾಯಪಟ್ಟಣ, ರಂಗಸಮುದ್ರ, ಸಿದ್ದಾಪುರ ಮತ್ತಿತರ ಕಡೆಗಳಲ್ಲಿ ತೆರಳಲು ತೂಗುಸೇತುವೆ ಅತೀ ಅಗತ್ಯವಾಗಿದೆ.
ಕೈ ಕೈ ಹಿಡಿದು ನದಿಯೊಳಗೆ ಸಂಚಾರ
ಯಾAತ್ರಿಕ ದೋಣಿಗಳಿಲ್ಲದ ಕಾರಣ ಕೆಲವು ಪ್ರವಾಸಿಗರು ನದಿಯಲ್ಲಿ ನೀರಿನ ಹರಿವು ಕ್ಷೀಣಿಸಿದ ಸಂದರ್ಭಗಳಲ್ಲಿ ಸ್ವಾಭಾವಿಕವಾಗಿ ರೂಪುಗೊಂಡಿರುವ ಕಲ್ಲು ಬಂಡೆಗಳ ಹಾದಿಯಲ್ಲಿ ನೀರೊಳಗೆ ಕೈ-ಕೈ ಹಿಡಿದು ಸಾಗುವ ಚಿತ್ರಣವೂ ಸಾಮಾನ್ಯವಾಗಿ ಕಂಡು ಬರುತ್ತದೆ.
ಅರಣ್ಯ ಇಲಾಖೆ ಗ್ರಾ.ಪಂ. ಎಚ್ಚರಿಕೆ
ದುಬಾರೆಗೆ ಆಗಮಿಸುವ ಪ್ರವಾಸಿಗರಿಗೆ ಸೂಕ್ತ ಸಂಚಾರದ ವ್ಯವಸ್ಥೆ ಕಲ್ಪಿಸುವಲ್ಲಿ ಬೇಜವಾಬ್ದಾರಿ ತಾಳಿರುವ ಅರಣ್ಯ ಇಲಾಖೆಯ ಧೋರಣೆಯ ಬಗ್ಗೆ ಅಸಮಧಾನ ವ್ಯಕ್ತಪಡಿಸಿರುವ ಸ್ಥಳೀಯ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷ ಚೆಟ್ಟಡ್ಕ ವಿಶ್ವ ಪ್ರವಾಸಿಗರ ಅನುಕೂಲಕ್ಕೆ ಪಂಚಾಯಿತಿ ವತಿಯಿಂದಲೇ ಯಾಂತ್ರಿಕ ದೋಣಿ ಅಳವಡಿಸಬೇಕಾಗುತ್ತದೆ ಎಂದಿದ್ದಾರೆ.
ಒಟ್ಟಾರೆ, ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುವ ದುಬಾರೆ ಸಾಕಾನೆ ಶಿಬಿರಕ್ಕೆ ಹೊರ ರಾಜ್ಯ ಹಾಗೂ ಹೊರ ದೇಶಗಳಿಂದ ಆಗಮಿಸುವ ಪ್ರವಾಸಿಗರಿಗೆ ಎಲ್ಲಾ ರೀತಿಯ ಅನುಕೂಲ ಮಾಡಿಕೊಡಬೇಕಾದುದು ಅರಣ್ಯ ಇಲಾಖೆಯ ಬದ್ಧತೆಯಾಗಬೇಕಿದೆ. ಏಕೆಂದರೆ ಪ್ರವಾಸಿಗರ ಆಗಮನದಿಂದಲೇ ವಾರ್ಷಿಕ ಕೋಟ್ಯಾಂತರ ರೂಪಾಯಿ ಆದಾಯ ಗಳಿಸುವ ಅರಣ್ಯ ಇಲಾಖೆ ಹಾಗೂ ಲಕ್ಷಾಂತರ ರೂಪಾಯಿ ಆದಾಯ ಗಳಿಸುವ ಸ್ಥಳೀಯ ಗ್ರಾಮ ಪಂಚಾಯಿತಿ ಆಡಳಿತ ಸಮನ್ವಯ ಸಾಧಿಸುವ ಮೂಲಕ ಪ್ರವಾಸಿಗರ ಹಿತ ಕಾಯಬೇಕಿದೆ.
(ವಿಶೇಷ ವರದಿ : ಕೆ.ಎಸ್. ಮೂರ್ತಿ)