ಮಡಿಕೇರಿ, ಮೇ.೨೭; ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ತಲೆ ಎತ್ತುತ್ತಿರುವ ತಾತ್ಕಾಲಿಕ ವಾಣಿಜ್ಯ ಮಳಿಗೆಗಳಿಗೆ ನೆಲ ಬಾಡಿಗೆ ಹೆಚ್ಚಳ ಮಾಡುವದು, ನಗರದಲ್ಲಿ ಕೈಗೊಳ್ಳ ಲಾಗಿರುವ ವಿದ್ಯುತ್ ಕಾಮಗಾರಿ ಗಳಲ್ಲಾಗಿರುವ ಅವ್ಯವಹಾರದ ಬಗ್ಗೆ ತನಿಖೆ ನಡೆಸುವಂತೆ ಮಡಿಕೇರಿ ನಗರಸಭೆ ತೀರ್ಮಾನ ಕೈಗೊಂಡಿದೆ.

ನಗರಸಭಾ ಕಚೇರಿ ಸಭಾಂಗಣ ದಲ್ಲಿಂದು ಅಧ್ಯಕ್ಷೆ ಅನಿತಾ ಪೂವಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಸಭೆಯಲ್ಲಿ ನಗರದಲ್ಲಿ ಹಲವಷ್ಟು ತಾತ್ಕಾಲಿಕ ಮಳಿಗೆಗಳಿವೆ. ಇದಕ್ಕೆ ವಿಧಿಸುತ್ತಿರುವ ನೆಲಬಾಡಿಗೆ ತೀರಾ ಕಡಿಮೆಯಾಗಿದ್ದು, ಬಾಡಿಗೆ, ತೆರಿಗೆ ಹೆಚ್ಚಳ ಮಾಡಬೇಕಿದೆ. ಹೆಸರಿಗೆ ಮಾತ್ರ ತಾತ್ಕಾಲಿಕವಾಗಿದ್ದು, ಎಲ್ಲ ಮಳಿಗೆಗಳು ಶಾಶ್ವತವಾಗಿ ಉಳಿದು ಕೊಂಡಿವೆ. ಇದರಿಂದ ನಗರಸಭೆಗೆ ನಷ್ಟವುಂಟಾಗುತ್ತಿದೆ. ಅಲ್ಲದೆ, ನಿಯಮಾನುಸಾರ ತೆರಿಗೆ ಪಾವತಿಸಿ ವ್ಯಾಪಾರ ಮಾಡುತ್ತಿರುವ ಸ್ವಂತ ಕಟ್ಟಡವಿರುವ ಹಾಗೂ ನಗರಸಭೆಗೆ ಬಾಡಿಗೆ ಪಾವತಿಸುತ್ತಾ ವ್ಯಾಪಾರ ಮಾಡುತ್ತಿರುವವರಿಗೂ ನಷ್ಟ ಉಂಟಾಗುತ್ತಿದೆ ಎಂದು ಆಡಳಿತಾರೂಢ ಬಿಜೆಪಿ ಪಕ್ಷದ ಸದಸ್ಯ ಕೆ.ಎಂ.ಅಪ್ಪಣ್ಣ ಸಭೆಯ ಗಮನಕ್ಕೆ ತಂದರು. ಅಲ್ಲದೆ, ತಾತ್ಕಾಲಿಕ ಮಳಿಗೆಗಳಿಗೆ ವಿದ್ಯುತ್ ಸಂಪರ್ಕಕ್ಕೆ ನಿರಾಕ್ಷೇಪಣಾ ಪತ್ರ ನೀಡುವ ಸಂದರ್ಭ ಎಚ್ಚರ ವಹಿಸಬೇಕಿದೆ, ಅನಾಹುತ ಉಂಟಾದಲ್ಲಿ ನಗರಸಭೆ ಹೊಣೆಯಾಗಬೇಕಾಗುತ್ತದೆ ಎಂದು ಹೇಳಿದರು. ದನಿಗೂಡಿಸಿದ ಸ್ಥಾಯಿ ಸಮಿತಿ ಅಧ್ಯಕ್ಷ ಉಮೇಶ್ ಸುಬ್ರಮಣಿ ತಾತ್ಕಾಲಿಕ ಮಳಿಗೆಗಳಿಗೆ ವಿದ್ಯುತ್‌ಗೆ ನಿರಾಕ್ಷೇಪಣಾ ಪತ್ರ ನೀಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರಲ್ಲದೆ, ತಾತ್ಕಾಲಿಕ ಅನುಮತಿ ಪಡೆದು ವರ್ಷವಿಡೀ ವ್ಯಾಪಾರ ನಡೆಸುತ್ತಾರೆ. ತೆರಿಗೆ ವಿಧಿಸುವಂತೆ ಸಲಹೆ ಮಾಡಿದರು. ಸದಸ್ಯ ಅರುಣ್ ಶೆಟ್ಟಿ ಮಾತನಾಡಿ, ತಾತ್ಕಾಲಿಕ ಅನುಮತಿ ಪಡೆದು ಗ್ಯಾಸ್ ಸಿಲಿಂಡರ್ ಇಟ್ಟುಕೊಂಡು ಸ್ಟೌ, ಗೀಸರ್ ದುರಸ್ತಿ ಮಾಡುತ್ತಾರೆ. ಅನಾಹುತ ಸಂಭವಿಸಿದಲ್ಲಿ ಯಾರು ಹೊಣೆ ಎಂದು ಪ್ರಶ್ನಿಸಿದರು.

ಸದಸ್ಯ ಕವನ್ ಕಾವೇರಪ್ಪ ಮಾತನಾಡಿ, ಯಾವ ಮಾನದಂಡದ ಆಧಾರದಲ್ಲಿ ತಾತ್ಕಾಲಿಕ ಮಳಿಗೆಗಳಿಗೆ ಅನುಮತಿ ನೀಡಲಾಗುತ್ತಿದೆ. ತಾತ್ಕಾಲಿಕ ಎಂದರೆ ಏನಾದರೂ ಸಾಮಗ್ರಿಗಳನ್ನು ದಾಸ್ತಾನಿಡುವ ಗೋದಾಮು ಗಳಾಗಿರುತ್ತವೆ. ವ್ಯಾಪಾರ ಮಳಿಗೆ ತೆರೆಯಲು ಅವಕಾಶವಿದೆಯೇ ಎಂದು ಪ್ರಶ್ನಿಸಿದರು. ಸದಸ್ಯ ಬಿ.ಕೆ.ಅರುಣ್‌ಕುಮಾರ್ ತಾತ್ಕಾಲಿಕ ಮಳಿಗೆಗಳಿಗೆ ಅನುಮತಿ ನೀಡುವ ಸಂದರ್ಭ ಯಾವ ಉದ್ದೇಶಕ್ಕಾಗಿ ಎಂದು ಅಧಿಕಾರಿಗಳು ನಮೂದಿಸುವದಿಲ್ಲ, ಹಾಗಾಗಿ ಕಂಡ ಕಂಡಲ್ಲಿ ವಾಣಿಜ್ಯ ಮಳಿಗೆಗಳು ತಲೆ ಎತ್ತುತ್ತಿವೆ. ಹೀಗೇ ಹೋದರೆ ಮಡಿಕೇರಿ ಡಬ್ಬ ಅಂಗಡಿಗಳ ನಗರವಾಗುತ್ತದೆ ಎಂದು ಲೇವಡಿಯಾಡಿದರಲ್ಲದೆ, ಚದರ ಅಡಿ ಲೆಕ್ಕದಲ್ಲಿ ಹೆಚ್ಚಿಗೆ ಬಾಡಿಗೆ ವಿಧಿಸುವಂತೆ ಒತ್ತಾಯಿಸಿದರು.

ಕೆಲವರು ಮಳಿಗೆಗಳ ಸುತ್ತಲಿನ ಜಾಗವನ್ನೂ ಕೂಡ ವಾಹನ ನಿಲುಗಡೆಗೆ ಬಳಸಿಕೊಳ್ಳುತ್ತಿದ್ದಾರೆ. ಅಲ್ಲದೆ, ಪಕ್ಕದಲ್ಲೇ

(ಮೊದಲ ಪುಟದಿಂದ) ಒಂದೊAದಾಗಿ ಸೇರಿಸಿಕೊಂಡು ಹೋಗುತ್ತಿದ್ದಾರೆ. ಹಾಗಾಗಿ ಉಪಯೋಗಿಸಲ್ಪಡುವ ಒಟ್ಟು ಜಾಗಕ್ಕೆ ಸೇರಿಸಿ ಬಾಡಿಗೆ, ತೆರಿಗೆ ನಿಗದಿಪಡಿಸಬೇಕೆಂದು ಸದಸ್ಯೆ ಶ್ವೇತಾ ಪ್ರಶಾಂತ್ ಆಗ್ರಹಿಸಿದರು. ದನಿಗೂಡಿಸಿದ ಉಮೇಶ್ ಸುಬ್ರಮಣಿ, ಕೆ.ಎಸ್. ರಮೇಶ್ ಅವರುಗಳು; ನ್ಯಾಯಯುತವಾಗಿ ದಾಖಲೆಗಳಿದ್ದವರು ಅನುಮತಿಗಾಗಿ ಅರ್ಜಿ ಸಲ್ಲಿಸಿದರೆ ಅವರಿಗೆ ಅನುಮತಿ ಸಿಗುವದಿಲ್ಲ, ತಾತ್ಕಾಲಿಕ ಮಳಿಗೆಗಳಿಗೆ ಬೇಗನೇ ಸಿಗುತ್ತದೆ. ಸಾರಿಗೆ ಸಂಸ್ಥೆಯ ಡಿಪೋ ಬಳಿ ಒಂದು ಸಣ್ಣ ಮಳಿಗೆ ಇದ್ದದ್ದು ಇದೀಗ ವಿಸ್ತಾರಗೊಂಡಿದೆ, ಇದಕ್ಕೆಲ್ಲ ಸೇರಿಸಿ ವಿಧಿಸಬೇಕೆಂದರು. ಸದಸ್ಯ ಮಹೇಶ್ ಜೈನಿ ಮಾತನಾಡಿ, ಪ್ರಸ್ತುತ ಇರುವ ಮಳಿಗೆಗಳಿಗೆ ಬಾಡಿಗೆ ಹೆಚ್ಚಳ ಮಾಡಿ ಇನ್ನು ಮುಂದಕ್ಕೆ ಹೊಸದಕ್ಕೆ ಅವಕಾಶ ನೀಡಬಾರದೆಂದು ಸಲಹೆ ಮಾಡಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಕಿರಿಯ ಅಭಿಯಂತರ ಶಮಂತ್, ಪ್ರಸ್ತುತ ಐದು ಚದರ ಅಡಿಗೆ ರೂ. ೫೦೦ರಂತೆ ವಿಧಿಸುತ್ತಿರುವದಾಗಿ ಮಾಹಿತಿ ನೀಡಿದರು. ಹಾಗಾಗಿ ವಾಣಿಜ್ಯ ಮಳಿಗೆಗಳಿಗೆ ಪ್ರಸ್ತುತ ದರವನ್ನು ದುಪ್ಪಟ್ಟು ಮಾಡುವಂತೆ ಸದಸ್ಯರುಗಳು ಆಗ್ರಹಿಸಿದರು. ಅಂತಿಮವಾಗಿ ಅಧ್ಯಕ್ಷೆ ಅನಿತಾ ಪೂವಯ್ಯ ದರವನ್ನು ದುಪ್ಪಟ್ಟು ಮಾಡುವಂತೆ ನಿರ್ಣಯ ಕೈಗೊಂಡರು.

ವಿದ್ಯುತ್ ಕಾಮಗಾರಿ ತನಿಖೆಗೆ

ನಗರದಲ್ಲಿ ಕಳೆದ ಎರಡೂವರೆ ವರ್ಷಗಳಿಂದ ವಿದ್ಯುತ್ ದಿಪ ಸೇರಿದಂತೆ ವಿದ್ಯುತ್‌ಗೆ ಸಂಬAಧಿಸಿದAತೆ ನಡೆÀಸಲಾಗಿರುವ ಕಾಮಗಾರಿಗಳಲ್ಲಿ ಭಾರೀ ಅವ್ಯವವಹಾರಗಳಾಗಿದ್ದು, ಈ ಸಂಬAಧ ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸುವದರೊಂದಿಗೆ ಕಾಮಗಾರಿ ಬಗ್ಗೆ ತನಿಖೆಗೆ ಒಳಪಡಿಸಲು ನಿರ್ಣಯ ಕ್ರಮಗೊಳ್ಳಲಾಯಿತು.

ಸಭೆೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ಕವನ್ ಕಾವೇರಪ್ಪ; ಕಳೆದ ಎರಡು ವರ್ಷಗಳಿಂದ ಆಡಳಿತ ಮಂಡಳಿ ಇಲ್ಲದಿದ್ದ ಸಂದರ್ಭದಲ್ಲಿ ಹಲವಷ್ಟು ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಈ ಪೈಕಿ ಬೇರೆ ಗುತ್ತಿಗೆದಾರರು ಟೆಂಡರ್ ಹಾಕಿದ್ದರೂ ಅದನ್ನು ರದ್ದುಪಡಿಸಿ, ಮರು ಟೆಂಡರ್ ಆಹ್ವಾನಿಸಿ ಸಮೀವುಲ್ಲ ಎಂಬವರಿಗೆ ಗುತ್ತಿಗೆ ನೀಡಲಾಗಿದೆ. ಈ ಗುತ್ತಿಗೆದಾರ ಗುಣಮಟ್ಟವಲ್ಲದ ಕಡಿಮೆ ಬೆಲೆಯ ಉಪಕರಣಗಳನ್ನು ಬಳಸಿ ಹೆಚ್ಚಿಗೆ ಮೊತ್ತ ನಮೂದಿಸಿರುವದು ಕಂಡು ಬಂದಿದೆ. ಇದಕ್ಕೆ ಅಭಿಯಂತರ ನಾಗರಾಜು ಅನುಮೋದನೆ ಮಾಡಿದ್ದಾರೆ. ಬೀದಿ ದೀಪ, ಕೊಳವೆ ಬಾವಿ, ಟ್ರಾನ್ಸ್ಫಾರ್ಮರ್ ಅಳವಡಿಕೆಯಲ್ಲಿಯೂ ಅವ್ಯವಹಾರವಾಗಿದೆ. ಪಂಪ್ ಹೌಸ್‌ಗಳಲ್ಲಿ ಕೆಲಸ ಮಾಡದೆ ಬಿಲ್ ಪಾವತಿಯಾಗಿದೆ. ಹೆಚ್ಚುವರಿಯಾಗಿದ್ದ ಮೋಟಾರ್‌ಗಳು ಕಾಣೆಯಾಗಿವೆ. ಹಾಗಾಗಿ ಇದುವರೆಗಿನ ಎಲ್ಲ ಕಾಮಗಾರಿಗಳ ಬಗ್ಗೆ ತನಿಖೆಯಾಗಬೇಕು. ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸಿ, ಇದೀಗ ವರ್ಗವಾಗಿರುವ ಅಭಿಯಂತರ ನಾಗರಾಜ್ ಅವರನ್ನು ಕಳುಹಿಸದೆ, ಬಿಲ್ ತಡೆಹಿಡಿಯಬೇಕೆಂದು ಒತ್ತಾಯಿಸಿದರು. ಸದಸ್ಯ ಮಹೇಶ್ ನಗರ ಸಭೆಯ ಕಾಮಗಾರಿಗಳ ಜಾಹೀರಾತುಗಳನ್ನು ಅಧಿಕ ಪ್ರಚಾರವಿರುವ ಪತ್ರಿಕೆಗಳಿಗೆ ನೀಡದೆ ಯಾರಿಗೂ ತಿಳಿಯದಂತೆ ಮಾಡಿ ಸಮೀವುಲ್ಲಗೆ ಗುತ್ತಿಗೆ ಸಿಗುವ ಹಾಗೆ ಮಾಡುತ್ತಿರುವದಾಗಿ ನಾಗರಾಜ್ ವಿರುದ್ಧ ಆರೋಪ ಮಾಡಿದರು. ಆಡಳಿತಾರೂಢ ಸದಸ್ಯರುಗಳೆಲ್ಲರೂ ಇದಕ್ಕೆ ದನಿಗೂಡಿಸಿದರು.

ಅಧ್ಯಕ್ಷೆ ಅನಿತಾ ಪೂವಯ್ಯ ಮಾತನಾಡಿ, ಆರೋಪಗಳಿರುವುದರಿಂದಲೇ ಅಭಿಯಂತರರನ್ನು ಇನ್ನೂ ಕಳುಹಿಸಿಲ್ಲ, ಇತ್ಯರ್ಥವಾದ ನಂತರ ಕಳುಹಿಸಲಾಗುವದೆಂದು ಹೇಳಿದರು.ಸದಸ್ಯ ಅಮೀನ್ ಮೊಹಿಸಿನ್ ಮಾತನಾಡಿ, ಎಲ್ಲೆಲ್ಲಿ ಕಾಮಗಾರಿಗಳಾಗಿವೆ ಎಂಬದನ್ನು ಅಧ್ಯಕ್ಷರಾದಿಯಾಗಿ ಅಧಿಕಾರಿಗಳು ತೆರಳಿ ಪರಿಶೀಲಿಸಿ. ಅವ್ಯವಹಾರ ಕಂಡು ಬಂದಲ್ಲಿ ಕ್ರಮ ಕೈಗೊಳ್ಳಿ ಎಂದು ಸಲಹೆ ಮಾಡಿದರು. ಸದಸ್ಯರುಗಳ ಆಗ್ರಹದಂತೆ ಅಧ್ಯಕ್ಷರು ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸಿ ತನಿಖೆಗೆ ಒಳಪಡಿಸಲು ನಿರ್ಣಯ ಕೈಗೊಂಡರು.

ಎಲ್ಲರಿಗೂ ಸಮಾನ ಅನುದಾನ

ನಗರಸಬಾ ವ್ಯಾಪ್ತಿಯ ಕೆಲವೊಂದು ವಾರ್ಡ್ಗಳಲ್ಲಿ ಕಾಮಗಾರಿಗಳಿಗಾಗಿ ಅನುದಾನ ಮೀಸಲಿಟ್ಟು ಅನುಮೋದನೆ ಬಯಸಿದ ಸಂದರ್ಭ ಸದಸ್ಯ ಮನ್ಸೂರ್ ಮಾತನಾಡಿ, ತನ್ನ ವಾರ್ಡ್ನಲ್ಲಿನ ಕಾಮಗಾರಿಗೆ ಅನುದಾನ ಒದಗಿಸದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಅರುಣ್ ಶೆಟ್ಟಿ ಕೂಡ ಅಸಮಾಧಾನಗೊಂಡರು. ಸದಸ್ಯ ರಮೇಶ್ ಎಲ್ಲ ಸದಸ್ಯರುಗಳಿಗೂ ಹಂಚಿಕೆ ಮಾಡಿ ಎಂದರು. ಈ ಸಂದರ್ಭದಲ್ಲಿ ಮಾತನಾಡಿದ ಸದಸ್ಯ ರಾಜೇಶ್ ಯಲ್ಲಪ್ಪ ತಾರತಮ್ಯ ಮಾಡದೆ ಎಲ್ಲ ಸದಸ್ಯರುಗಳ ವಾರ್ಡ್ಗಳಿಗೆ ಸಮಾನವಾಗಿ ಅನುದಾನ ಹಂಚಿಕೆ ಮಾಡಿ. ಸದಸ್ಯರುಗಳು ಅವರ ವಾರ್ಡ್ಗಳಲ್ಲಿನ ತುರ್ತು ಕಾಮಗಾರಿಗಳನ್ನು ಮಾಡಿಕೊಳ್ಳಲಿ ಎಂದು ಸಲಹೆ ಮಾಡಿದರು. ಸಭೆಯಲ್ಲಿ ಉಪಾಧ್ಯಕ್ಷೆ ಸವಿತಾ ರಾಖೇಶ್, ಪೌರಾಯುಕ್ತ ರಾಮದಾಸ್ ಉಪಸ್ಥಿತರಿದ್ದರು.