*ಗೋಣಿಕೊಪ್ಪ, ಮೇ ೨೮: ಕಾವೇರಿ ನೀರಾವರಿ ನಿಗಮದ ವತಿಯಿಂದ ಜಿಲ್ಲೆಯಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಹನ್ನೊಂದೂವರೆ ಕೋಟಿ ಅನುದಾನವನ್ನು ಬಳಸಲಾಗಿದೆ ಎಂದು ರಾಜ್ಯ ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷ, ಶಾಸಕ ಕೆ.ಜಿ. ಬೋಪಯ್ಯ ತಿಳಿಸಿದರು.

ಬಿ.ಶೆಟ್ಟಿಗೇರಿ ಮತ್ತು ಬಿಟ್ಟಂಗಾಲ ಗ್ರಾಮ ಪಂಚಾಯಿತಿ ಸಂಪರ್ಕ ರಸ್ತೆಯ ಗುಡ್ಡಮಾಡು ಎಸ್.ಟಿ. ಕಾಲೋನಿಗೆ ಸಂಪರ್ಕ ಬೆಸೆಯುವ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.

೯೯ ಲಕ್ಷ ಅನುದಾನದಲ್ಲಿ ೧೨೦೦ ಮೀಟರ್ ಕಾಂಕ್ರೀಟ್ ರಸ್ತೆ ನಿರ್ಮಾಣವಾಗುತ್ತಿದೆ. ಇದೇ ರೀತಿಯಲ್ಲಿ ನೀರಾವರಿ ನಿಗಮದಿಂದ ಜಿಲ್ಲೆಯ ಆಯ್ದ ಕೆಲವು ಭಾಗಗಳಲ್ಲಿ ೧೧.೫೦ ಕೋಟಿಯಲ್ಲಿ ಕಾಮಗಾರಿ ನಡೆಯಲಿದೆ. ತಲಕಾವೇರಿಯ ಅಭಿವೃದ್ದಿಗಾಗಿ ನಿಗಮದಿಂದ ೫೦ ಲಕ್ಷ ಅನುದಾನವನ್ನು ಒದಗಿಸಲಾಗಿದೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ತಾಲೂಕು ಬಗರ್‌ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಅಧ್ಯಕ್ಷ ಕಾಡ್ಯಮಾಡ ಗಿರೀಶ್‌ಗಣಪತಿ, ಸದಸ್ಯ ತೀತಮಾಡ ಲಾಲ ಭೀಮಯ್ಯ, ಬಿ.ಶೆಟ್ಟಿಗೇರಿ ಗ್ರಾ.ಪಂ.ನ ನೇತ್ರಾವತಿ, ಉಪಾಧ್ಯಕ್ಷ ಮದ್ರೀರ ಗಿರೀಶ್, ಸದಸ್ಯ ಜಗದೀಶ್, ಕಾವೇರಮ್ಮ, ಪ್ರಮುಖರಾದ ತೀತಮಾಡ ಕಿಟ್ಟು, ಶಕ್ತಿ ಕೇಂದ್ರದ ಸಹ ಪ್ರಮುಖ್ ರಂಜಿ ಪೂಣಚ್ಚ, ಕಾವೇರಿ ನೀರಾವರಿ ನಿಗಮದ ಹಿರಿಯ ಇಂಜಿನಿಯರ್ ನವೀನ್, ಜಿ.ಪಂ. ಇಂಜಿನಿಯರ್ ಮಹಾದೇವ್, ಶಾಸಕರ ಆಪ್ತ ಕಾರ್ಯದರ್ಶಿ ಮಲ್ಲಂಗಡ ಮಧುದೇವಯ್ಯ ಇದ್ದರು.