ಸೋಮವಾರಪೇಟೆ, ಮೇ ೨೬: ತಾಲೂಕಿನ ಅರೆಯೂರು ಗ್ರಾಮದಲ್ಲಿರುವ ಶ್ರೀ ಸೋಮೇಶ್ವರ ದೇವಾಲಯದಲ್ಲಿ ಕಾಣಿಕೆ ಹುಂಡಿಯ ಕಳ್ಳತನ ನಡೆದಿದೆ.

ನಿನ್ನೆ ರಾತ್ರಿ ದೇವಾಲಯಕ್ಕೆ ಆಗಮಿಸಿರುವ ಕಳ್ಳರು, ಮುಂಬಾಗಿಲ ಬೀಗವನ್ನು ಒಡೆದು ಒಳನುಗ್ಗಿ, ದೇವಾಲಯ ಆವರಣದಲ್ಲಿ ಇಟ್ಟಿದ್ದ ಕಾಣಿಕೆ ಹುಂಡಿಯನ್ನು ಹೊತ್ತೊಯ್ದಿದ್ದಾರೆ. ಇಂದು ಬೆಳಿಗ್ಗೆ ಅರ್ಚಕರು ಪೂಜೆಗಾಗಿ ದೇವಾಲಯಕ್ಕೆ ಆಗಮಿಸಿದ ಸಂದರ್ಭ ಕಾಣಿಕೆ ಹುಂಡಿ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.

ತಕ್ಷಣ ದೇವಾಲಯ ಆಡಳಿತ ಮಂಡಳಿಗೆ ಮಾಹಿತಿ ನೀಡಿದ್ದು, ಆಡಳಿತ ಮಂಡಳಿಯ ಪದಾಧಿಕಾರಿಗಳು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇಂದು ಮಧ್ಯಾಹ್ನದ ಹೊತ್ತಿಗೆ ದೇವಾಲಯದಿಂದ ೩೦ ಮೀಟರ್ ದೂರದಲ್ಲಿರುವ ಪ್ರಕಾಶ್ ಅವರ ಕಾಫಿ ತೋಟದಲ್ಲಿ ಹುಂಡಿ ಪತ್ತೆಯಾಗಿದೆ. ಹುಂಡಿಯನ್ನು ಒಡೆದು ಕಾಣಿಕೆ ಹಣವನ್ನು ಸಂಪೂರ್ಣವಾಗಿ ತೆಗೆದುಕೊಂಡು ಕಳ್ಳರು ಪರಾರಿಯಾಗಿದ್ದಾರೆ.

ಘಟನೆಯ ಬಗ್ಗೆ ಬೆಳಿಗ್ಗೆ ೧೦ ಗಂಟೆಗೆ ಸೋಮವಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಸಹ ಸಂಜೆ ೭ ಗಂಟೆಯವರೆಗೂ ಪೊಲೀಸರು ಸ್ಥಳಕ್ಕೆ ಆಗಮಿಸದ ಬಗ್ಗೆ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಳೆದ ೫ ತಿಂಗಳಿನಿAದಲೂ ಹುಂಡಿಯ ಹಣವನ್ನು ತೆಗೆದಿರಲಿಲ್ಲ. ಅಂದಾಜು ೨೫ ಸಾವಿರದಷ್ಟು ಕಾಣಿಕೆ ಹಣ ಇದ್ದಿರಬಹುದು ಎಂದು ದೇವಾಲಯ ಸಮಿತಿ ಪ್ರಮುಖರು ತಿಳಿಸಿದ್ದಾರೆ.