ಮುಳ್ಳೂರು, ಮೇ ೨೬: ಸಮೀಪದ ದುಂಡಳ್ಳಿ ಗ್ರಾ.ಪಂ.ಯ ಸಾರ್ವಜನಿಕ ಡಿಜಿಟಲ್ ಗ್ರಂಥಾಲಯದಲ್ಲಿ ‘ರೀಡ್ ಅಲೋಡ್ ಸೀಸನ್’ ಕಾರ್ಯಕ್ರಮ ನಡೆಯಿತು. ಶಾಲಾ ಮಕ್ಕಳು ಮತ್ತು ಪುಸ್ತಕ ಓದುಗರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕೇಂದ್ರ ಗ್ರಂಥಾಲಯ ಅಧಿಕಾರಿ ಲೀಲಾವತಿ ಮಾತನಾಡಿ, ಪುಸ್ತಕ ಓದುವುದರಿಂದ ಜ್ಞಾನಾರ್ಜನೆ ಹೆಚ್ಚುತ್ತದೆ. ವಿದ್ಯಾರ್ಥಿ ಗಳು ಪಠ್ಯ ವಿಷಯಗಳ ಜೊತೆಯಲ್ಲಿ ಬಿಡುವಿನಲ್ಲಿ ಗ್ರಂಥಾಲಯಕ್ಕೆ ಬಂದು ಲಭ್ಯ ಇರುವ ವಿವಿಧ ಪುಸ್ತಕ, ಕೃತಿಗಳನ್ನು ಓದುವ ಮೂಲಕ ಹೆಚ್ಚಿನ ಜ್ಞಾನ ಪಡೆಯಬೇಕೆಂದರು. ವಿದ್ಯಾರ್ಥಿಗಳು, ವಿದ್ಯಾವಂತ ಓದುಗರು ಡಿಜಿಟಲ್ ಗ್ರಂಥಾಲಯ ದಲ್ಲಿರುವ ಮಾಹಿತಿ ತಂತ್ರಜ್ಞಾನ ಒಳಗೊಂಡಿರುವ ಸೇವೆ ಸೌಲಭ್ಯಗ ಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.

ರೀಡ್ ಅಲೋಡ್ ಕಾರ್ಯ ಕ್ರಮದ ವ್ಯವಸ್ಥಾಪಕಿ ಸಬಿತಾ ಮಾಹಿತಿ ನೀಡಿ, ಗ್ರಂಥಾಲಯದಲ್ಲಿ ಮಕ್ಕಳು, ವಿದ್ಯಾರ್ಥಿಗಳು ಸೇರಿದಂತೆ ಯುವ ಸಮೂಹ ಹೆಚ್ಚಿನ ಸಂಖ್ಯೆಯಲ್ಲಿ ಓದುಗರಾಗಬೇಕಿದ್ದು, ಈ ನಿಟ್ಟಿನಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆ ‘ರೀಡ್ ಅಲೋಡ್ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡು ಓದುಗರನ್ನು ಮತ್ತು ಸಾರ್ವಜನಿಕರನ್ನು ಜಾಗೃತಿಗೊಳಿಸುತ್ತಿದೆ ಎಂದರು. ಮಕ್ಕಳು ಗ್ರಂಥಾಲಯಕ್ಕೆ ಬಂದು ತಮಗೆ ಬೇಕಾದ ಸುಲಭವಾಗಿ ಓದಬಹುದಾದ ಪುಸ್ತಕಗಳನ್ನು ಆಯ್ಕೆ ಮಾಡಿಕೊಂಡು ಓದುವ ಅಭ್ಯಾಸ ಬೆಳೆಸಿಕೊಂಡರೆ ವಾಕ್ಯ ಮತ್ತು ಅಕ್ಷರಗಳನ್ನು ಸ್ಪಷ್ಟವಾಗಿ ಓದಲು ಮತ್ತು ಮಾತನಾಡಲು ಸಾಧ್ಯವಾಗುತ್ತದೆ ಈ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ದುಂಡಳ್ಳಿ ಗ್ರಾ.ಪಂ. ಪಿಡಿಒ ರಾಜೇಂದ್ರ ಮಾತನಾಡಿದರು. ಗ್ರಂಥಾಲಯ ಮೇಲ್ವಿಚಾರಕಿ ಎಸ್.ಪಿ.ದಿವ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಗ್ರಾ.ಪಂ.ಸದಸ್ಯೆ ಎಸ್.ಪಿ.ಭಾಗ್ಯ, ವಿವಿಧ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು, ಓದುಗರು ಹಾಜರಿದ್ದರು. -ಭಾಸ್ಕರ್ ಮುಳ್ಳೂರು