(ಹೆಚ್.ಕೆ.ಜಗದೀಶ್)

ಗೋಣಿಕೊಪ್ಪಲು, ಮೇ ೨೫: ಅದೊಂದು ಪುಟ್ಟ ಸಂಸಾರ, ಗ್ರಾಮೀಣ ಭಾಗದ ಬಿ.ಶೆಟ್ಟಿಗೇರಿ ಗ್ರಾಮದಲ್ಲಿ ನೆಲೆ ಕಂಡುಕೊAಡು ಸುಖ ಜೀವನ ನಡೆಸುತ್ತಿದ್ದರು. ವರ್ಷ ಕಳೆಯುತ್ತಿದ್ದಂತೆಯೇ ಆ ಸಂಸಾರಕ್ಕೆ ಮುದ್ದಾದ ಹೆಣ್ಣು ಮಗಳು ಜನಿಸಿದಳು. ಮನೆಯ ಸಂಸಾರವು ಮಗಳೊಂದಿಗೆ ಉತ್ತಮವಾಗಿಯೇ ನಡೆಯುತ್ತಿತ್ತು. ವರ್ಷಗಳು ಕಳೆಯುತ್ತಿದ್ದಂತೆ ಮಗಳಲ್ಲಿ ಕಾಣಿಸಿಕೊಂಡ ಸಣ್ಣ ಸಮಸ್ಯೆಯು ಉಲ್ಬಣವಾಗುತ್ತಲೇ ಸಾಗಿದವು. ಇರುವ ಏಕೈಕ ಮಗಳನ್ನು ಚಿಕಿತ್ಸೆಗಾಗಿ ಅದೆಷ್ಟೋ ಆಸ್ಪತ್ರೆಗಳನ್ನು ಹತ್ತಿ ಇಳಿದಿದ್ದರು. ಆದರೆ ಆಕೆಯಲ್ಲಿ ಯಾವ ಚೇತರಿಕೆಯೂ ಕಾಣಲಿಲ್ಲ.

ಹಾಗಂದ ಮಾತ್ರಕ್ಕೆ ಹೆತ್ತವರು ತಮ್ಮ ಮಗಳನ್ನು ಸುಮ್ಮನೆ ಬಿಡಲಿಲ್ಲ. ಅವಳ ಆರೈಕೆಯಲ್ಲಿಯೇ ಜೀವನ ಸಾಗಿಸುತ್ತ ಸರಿಸುಮಾರು೨೦ ವರ್ಷಗಳು ಕಳೆದರು. ಕಳೆದ ಎರಡು ವರ್ಷಗಳ ಹಿಂದೆ ಮನೆಯ ಆಧಾರ ಸ್ತಂಭವಾಗಿದ್ದ ರಶ್ಮಿಯ ತಂದೆ ಅನಾರೋಗ್ಯಕ್ಕೆ ತುತ್ತಾಗಿ ಜೀವ ಕಳೆದುಕೊಂಡಿದ್ದರು. ಇದಾದ ಕೆಲವೇ ವರ್ಷಗಳಲ್ಲಿ ಮಗಳ ಆರೈಕೆಯಲ್ಲಿದ್ದ ತಾಯಿ ಕೂಡ ಇಹಲೋಕ ತ್ಯಜಿಸಿದಳು. ಇದರಿಂದ ಮಗಳು ಒಂಟಿ ಜೀವನ ಆರಂಭಿಸಿದಳು. ಈ ವೇಳೆ ಕುಟುಂಬಸ್ಥರು ಈಕೆಯ ಆರೈಕೆಯಲ್ಲಿ ಕೈ ಜೋಡಿಸಿದರು. ಸಾಧ್ಯವಾದಷ್ಟು ಆಕೆಯ ಕಷ್ಟಕ್ಕೆ ಸ್ಪಂದಿಸಿದರು.

ಸುತ್ತ ಮುತ್ತಲಿನ ಗ್ರಾಮಸ್ಥರು ಈಕೆಯ ಸಂಕಷ್ಟವನ್ನುಅರಿತು ಸಾಧ್ಯವಾದಷ್ಟು ಸಹಕಾರ ನೀಡಿದ್ದರು. ಗ್ರಾಮದ ಹೆಣ್ಣುಮಗಳು ಅನುಭವಿಸುತ್ತಿರುವ ನಿರಂತರ ಸಮಸ್ಯೆಯನ್ನು ಗಮನಿಸಿದ ಗ್ರಾಮದ ಪ್ರಮುಖರಾದ ಕೊಲ್ಲೀರ ಬೋಪಣ್ಣ, ಕಡೇಮಾಡ ಕುಸುಮಾ ಜೋಯಪ್ಪ, ಹಾಗೂ ಉಮೇಶ್ ಕೇಚಮಯ್ಯ, ಈ ಮಹಿಳೆಗೆ ಉತ್ತಮ ಚಿಕಿತ್ಸೆ ನೀಡುವ ಕುರಿತು ಚರ್ಚೆ ನಡೆಸಿದರು. ಬೆಂಗಳೂರಿನ ಆಸ್ಪತ್ರೆಯಲ್ಲಿ ಮಹಿಳೆಯನ್ನು ಸೇರಿಸುವ ನಿರ್ಧಾರಕ್ಕೆ ಬಂದರು. ಈ ವಿಷಯವನ್ನು ಆತ್ಮೀಯರಾದ ಹಿರಿಯ ವಕೀಲರಾದ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣನವರ ಗಮನಕ್ಕೆ ತಂದರು.

ಈ ಸಂದರ್ಭ ಗ್ರಾಮಸ್ಥರ ಕೋರಿಕೆಯನ್ನು ಗಂಭೀರವಾಗಿ ಪರಿಗಣಿಸಿದ ಪೊನ್ನಣ್ಣ ಈ ವಿಶೇಷ ಚೇತನ ಮಹಿಳೆಯ ಮನೆಗೆ ತೆರಳಿ ವಿಚಾರಿಸಿದರು. ಈಕೆಯ ಜೀವನಕ್ಕೆ ಹೊಸ ರೂಪು ನೀಡಲು ಆಲೋಚಿಸಿದರು. ಈ ವಿಷಯವನ್ನು ಆತ್ಮೀಯರಾದ ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯ ನಿರ್ದೇಶಕ ಡಾ.ರಾಮಚಂದ್ರ ಬಳಿ ಚರ್ಚಿಸಿ ಮಹಿಳೆಗೆ ಉತ್ತಮ ಚಿಕಿತ್ಸೆ ನೀಡಲು ಮನವಿ ಮಾಡಿದರು. ಪೊನ್ನಣ್ಣನವರ ಆತ್ಮೀಯತೆಗೆ ಮನ್ನಣೆ ನೀಡಿದ ಡಾ.ರಾಮಚಂದ್ರ ವಿಶೇಷ ಚೇತನ ಮಹಿಳೆಯ ಚಿಕಿತ್ಸೆಗೆ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಡಾ.ರಾಮಚಂದ್ರ ನೀಡಿದ ಭರವಸೆ ಹಿನ್ನೆಲೆಯಲ್ಲಿ ತನ್ನ ಹೆತ್ತವರಾದ ಚೇಂದಿರ ಬೆಳ್ಯಪ್ಪ ಹಾಗೂ ರಾಣಿಯನ್ನು ಕಳೆದುಕೊಂಡು ದಿನನಿತ್ಯ ಸಂಕಷ್ಟ ಎದುರಿಸುತ್ತಿರುವ ವಿಶೇಷ ಚೇತನ ಮಹಿಳೆ ರಶ್ಮಿಯ ಮನೆಯಾದ ಬಿ.ಶೆಟ್ಟಿಗೇರಿಗೆ ಪೊನ್ನಣ್ಣ ತೆರಳಿ ಅಲ್ಲಿದ್ದ ಗ್ರಾಮಸ್ಥರ ಸಮ್ಮುಖದಲ್ಲಿ ಮನೆಯವರಿಗೆ ಧೈರ್ಯ ತುಂಬಿದರು. ವಿಶೇಷ ಚೇತನ ಮಹಿಳೆ ರಶ್ಮಿಯನ್ನು ಗ್ರಾಮಸ್ಥರ ಸಮ್ಮುಖದಲ್ಲಿ ಚಿಕಿತ್ಸೆಗಾಗಿ ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಗೆ ಕರೆದೊಯ್ಯುವ ಮೂಲಕ ಮಾನವೀಯತೆ ತೋರಿದರು. ಈ ವೇಳೆ ಮಾತನಾಡಿದ ಪೊನ್ನಣ್ಣ ಹೆತ್ತವರನ್ನು ಕಳೆದುಕೊಂಡು ವಿಶೇಷಚೇತನ ಮಹಿಳೆ ಅನುಭವಿಸುತ್ತಿರುವ ದಿನನಿತ್ಯದ ಕಷ್ಟವನ್ನು ಗ್ರಾಮಸ್ಥರು ಹೇಳಿಕೊಂಡಿದ್ದರು. ಹೀಗಾಗಿ ಮಾನವೀಯತೆ ನೆಲೆಗಟ್ಟಿನಲ್ಲಿ ಆಕೆಯನ್ನು ಕಿದ್ವಾಯಿ ಆಸ್ಪತ್ರೆಯ ನಿರ್ದೇಶಕರ ಸಲಹೆಯಂತೆ ಉತ್ತಮ ಸೇವಾ ಕೇಂದ್ರಕ್ಕೆ ಸೇರಿಸುವ ಮೂಲಕ ಆಕೆಯನ್ನು ನೋಡಿಕೊಳ್ಳಲಾಗುವುದು ಎಂದರು.

ಗ್ರಾಮದ ಹಿರಿಯರಾದ ಕೊಲ್ಲೀರ ಬೋಪಣ್ಣ ಮಾತನಾಡಿ ಗ್ರಾಮದಲ್ಲಿ ಮಹಿಳೆ ಅನುಭವಿಸುವ ನೋವು ಸಾಮಾನ್ಯದಲ್ಲ ಹಾಗಾಗಿ ಈಕೆಯನ್ನು ಉತ್ತಮ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲು ಮುಂದಾಗಿದ್ದೇವೆ. ಕಾಂಗ್ರೆಸ್‌ನ ಮುಖಂಡರಾದ ಅಜ್ಜಿಕುಟ್ಟೀರ ಪೊನ್ನಣ್ಣ ಈ ಕಾರ್ಯಕ್ಕೆ ಸಹಕರಿಸಿ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ ಎಂದರು. ವಿಶೇಷ ಚೇತನ ಮಹಿಳೆಯನ್ನು ಬೆಂಗಳೂರಿಗೆ ಕಳುಹಿಸುವ ವೇಳೆ ಮಿದೇರಿರ ನವೀನ್, ಗ್ರಾಮದ ಪ್ರಮುಖರಾದ ಉಮೇಶ್ ಕೇಚಮಯ್ಯ, ಕಡೆಮಾಡ ಕುಸುಮಜೋಯಪ್ಪ, ಚೇಂದಿರ ಪ್ರಭಾ ಮಹೇಶ್, ಚೇಂದೀರ ಪ್ರಕಾಶ್, ತೀತಿಮಾಡ ಸದನ್, ಚೇರಂಡ ಜಗನ್, ಮೋಹನ್, ಚೇಂದೀರ ರಾಯ್, ಕಡೆಮಾಡ ನಂದ, ರೀನಾ, ವಿಶ್ವನಾಥ್ ಮತ್ತಿತರರು ಉಪಸ್ಥಿತರಿದ್ದರು.