ಸೋಮವಾರಪೇಟೆ, ಮೇ ೨೫: ಲೋಕೋಪಯೋಗಿ ಇಲಾಖೆ ವತಿಯಿಂದ ರೂ. ೧.೫೦ ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲು ಉದ್ದೇಶಿಸಿರುವ ತಾಲೂಕಿನ ತಾಕೇರಿ-ಕಿಕ್ಕರಳ್ಳಿ ಮುಖ್ಯರಸ್ತೆ ಕಾಮಗಾರಿಗೆ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರು ಭೂಮಿಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.

ಲೋಕೋಪಯೋಗಿ ಇಲಾಖೆಯ ಓ.ಆರ್.ಎಫ್. ಯೋಜನೆಯಡಿ ರೂ. ೧.೫೦ ಕೋಟಿ ಅನುದಾನ ಬಿಡುಗಡೆ ಯಾಗಿದ್ದು, ತಾಕೇರಿ, ಬಾರ್ಲಗದ್ದೆ, ಹರಗ, ಕಿಕ್ಕರಳ್ಳಿ ಮುಖ್ಯರಸ್ತೆಯ ೧೭೦೦ ಮೀಟರ್ ರಸ್ತೆಯನ್ನು ಅಭಿವೃದ್ಧಿಪಡಿಸ ಲಾಗುತ್ತದೆ ಎಂದು ಶಾಸಕರು ತಿಳಿಸಿದರು.

ಕಾಮಗಾರಿ ನಡೆಯುವ ಸಂದರ್ಭ ಸ್ಥಳೀಯರು ಗುಣಮಟ್ಟದ ಬಗ್ಗೆ ಜಾಗ್ರತೆ ವಹಿಸಬೇಕು. ಕಳಪೆ ಕಾಮಗಾರಿ ಯಾಗದಂತೆ ಎಚ್ಚರಿಕೆ ವಹಿಸಬೇಕು. ಗ್ರಾಮೀಣ ಪ್ರದೇಶಗಳು ಅಭಿವೃದ್ಧಿಯಾದರೆ ಮಾತ್ರ ದೇಶದ ಅಭಿವೃದ್ಧಿ ಎಂಬುದನ್ನು ಮನಗಂಡು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಭಿವೃದ್ಧಿ ಕಾಮಗಾರಿಗೆ ಹಣ ಒದಗಿಸುತ್ತಿವೆ ಎಂದು ರಂಜನ್ ಹೇಳಿದರು.

ಉದ್ದೇಶಿತ ರಸ್ತೆಯು ೩.೭೫ ಮೀಟರ್ ಅಗಲವಿದ್ದು, ಅವಶ್ಯವಿರುವ ಕಡೆಗಳಲ್ಲಿ ೪ ಮೋರಿಗಳನ್ನು ಅಳವಡಿಸಲಾಗುವುದು. ಉಳಿಕೆ ಯಾಗುವ ರಸ್ತೆಯನ್ನು ಮುಂದಿನ ಅನುದಾನದಲ್ಲಿ ಕೈಗೊಂಡು ಸರ್ವಋತು ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸಲಾಗುವುದು. ಕಳೆದ ಸಾಲಿನಲ್ಲಿ ಭೂಮಿ ಪೂಜೆ ನೆರವೇರಿಸಿರುವ ರಸ್ತೆಗಳು ಆಗಿವೆಯೇ ಎಂಬ ಬಗ್ಗೆ ಸ್ಥಳೀಯರು ಗಮನಿಸಬೇಕು. ಒಂದು ವೇಳೆ ರಸ್ತೆ ಕಾಮಗಾರಿ ಆಗದಿದ್ದರೆ ತನ್ನ ಗಮನಕ್ಕೆ ತರಬೇಕು. ಆರ್‌ಡಿಪಿಆರ್ ನಿಂದಲೂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಸ್ತೆಗಳಿಗೆ ೩೦ ಲಕ್ಷ ಅನುದಾನ ಮೀಸಲಿಟ್ಟಿದ್ದು, ಮುಂದಿನ ದಿನಗಳಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.

ಈ ಸಂದರ್ಭ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ತಾ.ಪಂ. ಮಾಜಿ ಸದಸ್ಯರಾದ ಧರ್ಮಪ್ಪ, ಮುತ್ತಣ್ಣ, ಪ್ರಮುಖರಾದ ಎಂ.ಸಿ. ಮುದ್ದಪ್ಪ, ಎಂ.ಪಿ. ಗೋಪಾಲ್, ಕಿರಗಂದೂರು ಗ್ರಾ.ಪಂ. ಅಧ್ಯಕ್ಷ ರಘು, ಸದಸ್ಯ ತಿಮ್ಮಯ್ಯ, ಗ್ರಾಮಾಧ್ಯಕ್ಷ ಜೋಯಪ್ಪ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಮೋಹನ್‌ಕುಮಾರ್, ಅಭಿಯಂತರ ರಮಣಗೌಡ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.