ಚಿತ್ರ, ವರದಿಗಳು : ಎ.ಎನ್. ವಾಸು, ಉಷಾ ಪ್ರೀತಂ, ಕಿಶೋರ್‌ಕುಮಾರ್ ಶೆಟ್ಟಿ ಮಡಿಕೇರಿ, ಮೇ ೨೪: ಇಂದು ಬೆಳಿಗ್ಗೆ ಲಾರಿಯೊಂದು ನೆಲ್ಲಿಹುದಿಕೇರಿ ಬಳಿ ತೆರಳುತ್ತಿದ್ದಾಗ ಎದುರುಗಡೆಯಿಂದ ಬರುತ್ತಿದ್ದ ಬಸ್‌ಗೆ ಸ್ಥಳಾವಕಾಶ ಕಲ್ಪಿಸಲು ಪ್ರಯತ್ನಿಸಿದ್ದ ಲಾರಿ ಚಾಲಕ ಅನಿವಾರ್ಯವಾಗಿ ತೀರಾ ಬದಿಗೆ ಚಾಲಿಸಿದಾಗ ಲಾರಿಯಲ್ಲಿದ್ದ ದ್ರಾವಣಗಳ ಬ್ಯಾರಲ್‌ವೊಂದು ಹಾನಿಗೀಡಾಗಿ ಸೋರಿಕೆಯುಂಟಾಯಿತು. ಸುಮಾರು ೨೨ ಬ್ಯಾರಲ್‌ಗಳಿದ್ದ ದ್ರಾವಣದಲ್ಲಿ ಒಂದು ಬ್ಯಾರಲ್‌ಗೆ ಉಂಟಾದ ಹಾನಿಯಿಂದ ರಸ್ತೆಯಿಡಿ ಕೆಂಪು ದ್ರಾವಣ ಸೋರಿಕೆಯಾಗತೊಡಗಿತ್ತು. ಲಾರಿ ಚಾಲಕ ಕೇರಳದ ಕೂಟುಪೊಳೆಯ ಸುಸ್ತಿçತ್ (೩೨) ಎಂಬಾತ ಅದನ್ನು ಸರಿಪಡಿಸಲು ವಿಫಲನಾದ. ಅಂತು ಬೆಳಿಗ್ಗೆ ಕ್ಯಾಂಟೀನ್‌ವೊAದರ ಬಳಿ ಚಹ ಕುಡಿದು ಅಲ್ಲಿಂದ ಲಾರಿಯನ್ನು ಚಾಲನೆಗೈದ, ಅಷ್ಟರಲ್ಲಿ ಆ ದ್ರಾವಣದ ಘಾಟು ಎಲ್ಲೆಡೆ ಪಸರಿಸಿ ಇಡೀ ಪ್ರದೇಶದಲ್ಲಿ ಜನರಿಗೆ ದಿಗ್ಭçಮೆ ಉಂಟು ಮಾಡಿತು. ವಿದ್ಯಾರ್ಥಿಗಳು ಸೇರಿದಂತೆ ವರ್ತಕರು, ನಾಗರಿಕರು ಕಸಿಮಿಸಿಗೊಂಡು ಅಸ್ವಸ್ಥರಾದ ಕೆಲವು ವಿದ್ಯಾರ್ಥಿಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ನೀಡಲಾಯಿತು.

ಎಲ್ಲರಿಗೂ ಈ ರಾಸಾಯನಿಕ ಏನು ಎಂಬ ಕಳವಳ ಉಂಟು ಮಾಡಿತು. ಈ ನಡುವೆ ಲಾರಿಯು ವೀರಾಜಪೇಟೆಯತ್ತ ತೆರಳಿತ್ತು. ವೀರಾಜಪೇಟೆ ಖಾಸಗಿ ಬಸ್ ನಿಲ್ದಾಣದ ಬಳಿ ಮತ್ತೆ ಚಾಲಕ ಚಹಕ್ಕಾಗಿ ಇಳಿದಾಗ ಲೀಟರ್‌ಗಟ್ಟಲೆ ದ್ರಾವಣ ಅಲ್ಲಿಯೂ ರಸ್ತೆ ಬದಿಯಲ್ಲಿ ಸುರಿಯಿತು. ಆ ಸಂದರ್ಭ ಸುತ್ತಲಿನಲ್ಲಿ ತೆರಳುತ್ತಿದ್ದ ಜನರಿಗೆ ಘಾಟಿನೊಂದಿಗೆ ಕಣ್ಣುಉರಿ, ಶೀತ, ನೆಗಡಿ, ಕೆಮ್ಮು ಮುಂತಾದ ಅನಾರೋಗ್ಯಕರ ದುಷ್ಪರಿಣಾಮ ಉಂಟು ಮಾಡಿತು. ಜನರು ಗಾಬರಿಯಾಗಿ ಸಾಮಾಜಿಕ ಜಾಲತಾಣದಲ್ಲಿ ಸಂದೇಶಗಳನ್ನು ಕಳುಹಿಸಲು ಪ್ರಾರಂಭಿಸಿ ನಾಗರಿಕರು ರಸ್ತೆಗಿಳಿಯದೇ ಕೆಲಕಾಲ ಮನೆಯಲ್ಲಿ ಕೂರುವಂತೆ ಮಾಡಿತು.

ಈ ನಡುವೆ ವೀರಾಜಪೇಟೆ ಗ್ರಾಮಾಂತರ ಪೊಲೀಸರು ಮಾಕುಟ್ಟದ ಬಳಿ ಆ ಲಾರಿಯನ್ನು ನಿಲ್ಲಿಸಿ ತಪಾಸಣೆಗೆ ಒಳಪಡಿಸಿದಾಗಲೇ ಗೊತ್ತಾಗಿದ್ದು, ಅದು ರಾಸಾಯನಿಕ ಪದಾರ್ಥವಲ್ಲ ಎಂಬ ವಿಚಾರ. ಬದಲು ಅದರಲ್ಲಿ ಇದ್ದಿದ್ದು, ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕು ಸರಾಸು ಎಂಬ ಸ್ಥಳದಲ್ಲಿನ ಕೈಗಾರಿಕಾ ಘಟಕದಿಂದ ತರಲ್ಪಡುತ್ತಿದ್ದ ಬ್ಯಾಡಗಿ ಮೆಣಸಿನ ಸಾಸ್ ದ್ರಾವಣವಾಗಿದೆ ಎಂಬದು ಖಚಿತವಾಯಿತು. ಇದರಿಂದ ಎಲ್ಲರಲ್ಲೂ ಮೂಡಿದ ಆತಂಕ ಮಾಯವಾದರೂ ಕೊಡಗಿನಲ್ಲಿ ಇಂತಹ ಘಟನೆಯೊಂದು ಪ್ರಥಮ ಬಾರಿಗೆ ನಡೆದಿದೆ ಎಂಬ ಮಾತುಗಳು ಕೇಳಿಬಂದಿತು. ಕೇರಳದ ಆಕಾಯ್ ನ್ಯಾಚುರಲ್ ಇನ್‌ಗ್ರೆಡಿಯೆಂಟ್ಸ್ ಪ್ರೆöÊವೇಟ್ ಲಿಮಿಟೆಡ್ ಕಂಪೆನಿಗೆ ಸೇರಿದ ಲಾರಿ ಇದು ಎಂಬದು ಪೊಲೀಸ್ ತನಿಖೆಯಿಂದ ಪತ್ತೆಯಾಯಿತು. ಹಾವೇರಿ ಜಿಲ್ಲೆಯಿಂದ ಕೊಡಗಿನ ಮೂಲಕ ಕೇರಳದ ಎರ್ನಾಕುಲಂಗೆ ಈ ದ್ರಾವಣವನ್ನು ಸಾಗಿಸಲಾಗುತ್ತಿತ್ತು. ಆಹಾರ ಪದಾರ್ಥಗಳಿಗೆ ಬಳಸಲು ಈ ದ್ರಾವಣವನ್ನು ಉಪಯೋಗಿಸಲಾಗುತ್ತದೆ. ಕಂಪೆನಿಯ ಶಾಖಾ ಘಟಕವು ಕೂಡ ಕರ್ನಾಟಕದ ಬ್ಯಾಡಗಿ ಬಳಿ ಅಸ್ತಿತ್ವದಲ್ಲಿದ್ದು, ಅಲ್ಲಿಂದ ಕೇರಳದ ಮುಖ್ಯ ಕೈಗಾರಿಕಾ ವಿಭಾಗಕ್ಕೆ ಈ ದ್ರಾವಣವನ್ನು ಸಾಗಿಸಲಾಗುತ್ತಿತ್ತು ಎಂದು ಗೊತ್ತಾಗಿದೆ. ಇದರಲ್ಲಿ ಯಾವುದೇ ಕಾನೂನು ಬಾಹಿರ ವ್ಯವಹಾರ ಇಲ್ಲ

(ಮೊದಲ ಪುಟದಿಂದ) ಎಂಬದು ಕೂಡ ಪೊಲೀಸ್ ತನಿಖೆಯಿಂದ ಖಚಿತಗೊಂಡಿದೆ. ಆದರೂ ಸಾರ್ವಜನಿಕರಿಗೆ ತೊಂದರೆಯಾದ ಪ್ರಕರಣವೆಂದು ಎಫ್‌ಐಆರ್ ದಾಖಲಿಸಲಾಗಿದೆ. ಘಟನೆಯ ವಿವರ ಮಾಹಿತಿ ಈ ಕೆಳಗಿನಂತಿದೆ

ಸಿದ್ದಾಪುರದಲ್ಲಿನ ಚಿತ್ರಣ

ಮುಖ್ಯ ರಸ್ತೆಯುದ್ದಕ್ಕೂ ಕೆಂಪು ಬಣ್ಣದ ದ್ರವವೊಂದು ಸೋರಿಕೆಯಾಗಿದ್ದು, ಸ್ಥಳೀಯರಿಗೆ ಶೀತ, ಕೆಮ್ಮು ಕಂಡುಬAದಿದ್ದು, ಶಾಲಾ ಮಕ್ಕಳು ಅಸ್ವಸ್ಥಗೊಂಡ ಘಟನೆ ಸಿದ್ದಾಪುರದಲ್ಲಿ ಆತಂಕ ಮೂಡಿಸಿತ್ತು.

ಮಂಗಳವಾರ ಬೆಳಗ್ಗಿನ ಜಾವ ನೆಲ್ಯಹುದಿಕೇರಿ, ಸಿದ್ದಾಪುರದ ಮೂಲಕ ವೀರಾಜಪೇಟೆ ಕಡೆಗೆ ತೆರಳಿದ ಲಾರಿಯೊಂದರಿAದ ಕೆಂಪು ಬಣ್ಣದ ದ್ರವವೊಂದು ರಸ್ತೆಯುದ್ದಕ್ಕೂ ಸೋರಿಕೆಯಾಗಿದ್ದು, ರಸ್ತೆಯ ಮೂಲಕ ಚಲಿಸುತ್ತಿದ್ದ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ಅಸ್ವಸ್ಥತೆ ಉಂಟಾಯಿತು. ಪಟ್ಟಣದಲ್ಲಿ ಸಾರ್ವಜನಿಕರಿಗೆ ಏಕಾಏಕಿ ಶೀತ, ಕೆಮ್ಮು, ಮೈ ಹಾಗೂ ಮೂಗು ಉರಿ ಸಂಭವಿಸಿದ್ದು, ಶಾಲೆಗೆ ತೆರಳಿದ ಮಕ್ಕಳಿಗೂ ಸಮಸ್ಯೆ ಉಂಟಾಯಿತು. ಈ ಸಂದರ್ಭ ಕೆಲವರು ರಸ್ತೆಯಲ್ಲಿ ಸೋರಿಕೆಯಾಗಿರುವುದು ಕೆಮಿಕಲ್ ಎಂಬುದಾಗಿ ಮಾತನಾಡಿಕೊಂಡಿದ್ದು, ಗ್ರಾಮಸ್ಥರಲ್ಲಿ ಭಯದ ವಾತಾವರಣ ಎದುರಾಯಿತು. ಸಾಮಾಜಿಕ ಜಾಲತಾಣದಲ್ಲಿ ಸಿದ್ದಾಪುರ ಪಟ್ಟಣದಲ್ಲಿ ಕೆಮಿಕಲ್ ಸೋರಿಕೆಯಾಗಿರುವ ಬಗ್ಗೆ ಸುದ್ದಿ ಹರಿದಾಡಿದ್ದು, ಹಲವು ಮಂದಿ ಪಟ್ಟಣಕ್ಕೆ ಬರಲು ಹಿಂದೇಟು ಹಾಕಿದರು. ಪರಸ್ಪರ ಕರೆ ಮಾಡಿ ಏನಾದರೂ ತೊಂದರೆಗಳಿದೆಯೇ ಎಂದು ವಿಚಾರಿಸಿದ್ದು, ನನಗೆ ಶೀತ ಆಗಿದೆ, ನೆಗಡಿ ಇದೆ ಎಂದು ಹೇಳಿಕೊಂಡರು. ಇದರಿಂದಾಗಿ ಮತ್ತಷ್ಟು ಗಾಬರಿಯ ವಾತಾವರಣ ಸೃಷ್ಟಿಯಾಯಿತು.

ಇದಲ್ಲದೇ ಪಟ್ಟಣದ ವರ್ತಕರು ಕೂಡ ತಡವಾಗಿ ಅಂಗಡಿಗಳನ್ನು ತೆರೆದರು. ವಿಷಯ ತಿಳಿಯುತ್ತಿದ್ದಂತೆ ಗ್ರಾ.ಪಂ ಸಿಬ್ಬಂದಿಗಳು, ಸದಸ್ಯರು ನೀರಿನಿಂದ ರಸ್ತೆಯನ್ನು ತೊಳೆದು ಶುಚಿಗೊಳಿಸಿದರು. ಕೊರೊನಾ ಕಳೆದು ಇದೇ ಮೊದಲ ಬಾರಿ ಸಾರ್ವಜನಿಕರು ಸಾಮೂಹಿಕವಾಗಿ ಮಾಸ್ಕ್ ಧರಿಸಿದ್ದು ಕಂಡು ಬಂತು. ಅಂಗಡಿಗಳಿAದ ಮಾಸ್ಕ್ ಖರೀದಿಸಿದ್ದು, ಪೊಲೀಸ್, ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಮಾಸ್ಕ್ ಧರಿಸಿದ್ದರು.

೬ ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು: ಸಿದ್ದಾಪುರ ಪಟ್ಟಣದ ಮೂಲಕ ಲಾರಿ ಹಾದು ಹೋಗಿದ್ದು, ವೀರಾಜಪೇಟೆ ರಸ್ತೆಯಲ್ಲಿರುವ ಸೆಂಟ್ ಆ್ಯನ್ಸ್ ಶಾಲೆಗೆ ತೆರಳಿದ ವಿದ್ಯಾರ್ಥಿಗಳಲ್ಲಿ ಅಸ್ವಸ್ಥತೆ ಕಂಡುಬAದಿತ್ತು. ಶಾಲೆಗೆ ತೆರಳಿದ ವಿದ್ಯಾರ್ಥಿಗಳಲ್ಲಿ ಕೆಮ್ಮು, ಉಸಿರಾಟದ ತೊಂದರೆ ಕಂಡು ಬಂದ ಹಿನ್ನೆಲೆಯಲ್ಲಿ ಶಾಲೆಯ ಶಿಕ್ಷಕರು ಕೂಡಲೇ ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಾಖಲಿಸಿದರು. ಆರೋಗ್ಯ ವೈದ್ಯಾಧಿಕಾರಿ ಡಾ. ರಾಘವೇಂದ್ರ ನೇತೃತ್ವದಲ್ಲಿ ಸಿಬ್ಬಂದಿಗಳು ವಿದ್ಯಾರ್ಥಿಗಳಿಗೆ ಚಿಕಿತ್ಸೆ ನೀಡಿದರು. ಈ ಸಂದರ್ಭ ಕೆಲವು ಪೋಷಕರು ಗಾಬರಿಯಿಂದ ಆಸ್ಪತ್ರೆಯತ್ತ ದೌಡಾಯಿಸಿದ್ದು, ಕೆಲಕಾಲ ಆತಂಕ ಮನೆ ಮಾಡಿತ್ತು. ಸ್ಥಳಕ್ಕೆ ಜಿಲ್ಲಾ ಆರೋಗ್ಯ ವೈದ್ಯಾಧಿಕಾರಿ ಡಾ.ವೆಂಕಟೇಶ್, ತಾಲೂಕು ಆರೋಗ್ಯ ನಿರೀಕ್ಷಕ ಶಶಿಕಾಂತ್ ಭೇಟಿ ನೀಡಿ ಮಾಹಿತಿ ಪಡೆದು ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ಮಾಹಿತಿ ಪಡೆದರು. ಈ ಸಂದರ್ಭ ಮಾತನಾಡಿದ ಡಾ. ವೆಂಕಟೇಶ್, ೬ ಮಂದಿ ವಿದ್ಯಾರ್ಥಿಗಳು ಆರೋಗ್ಯವಾಗಿದ್ದು, ಗಾಬರಿಯಾಗುವ ಅಗತ್ಯವಿಲ್ಲ. ಈ ಬಗ್ಗೆ ಜಿಲ್ಲಾ ಆಹಾರ ನಿರೀಕ್ಷಕರಿಗೆ ಮಾಹಿತಿ ನೀಡಿದ್ದು, ರಸ್ತೆಯಲ್ಲಿ ಚೆಲ್ಲಿರುವ ಪದಾರ್ಥವನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದರು. ಕೇರಳ ಗಡಿಯ ಪೆರುಂಬಾಡಿಯಲ್ಲಿ ಲಾರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು.ರಸ್ತೆಯಲ್ಲಿ ಚೆಲ್ಲಿರುವುದು ರಾಸಾಯನಿಕವೇ ಅಥವಾ ಮೆಣಸಿನ ಸಾಸ್ ಇರಬಹುದೇ ಎಂಬ ಗೊಂದಲ ಸಾರ್ವಜನಿಕರಲ್ಲಿ ನಿರ್ಮಾಣವಾಗಿ ಒಟ್ಟಾರೆ ಒಂದಷ್ಟು ಗಂಟೆಗಳ ಕಾಲ ಪಟ್ಟಣದ ಜನರ ಆರೋಗ್ಯದಲ್ಲಿ ಏರುಪೇರುಂಟಾಗಿ, ಜನರಲ್ಲಿ ಗೊಂದಲ ಏರ್ಪಟ್ಟಿತ್ತು.

ವೀರಾಜಪೇಟೆಯಲ್ಲಿನ ಚಿತ್ರಣ

ವೀರಾಜಪೇಟೆ ನಗರದಲ್ಲಿ ಬೆಳಿಗ್ಗೆ ಎಂಟು ಗಂಟೆ ಸಮಯದಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು. ನಗರದ ಪ್ರಮುಖ ಬೀದಿಯಲ್ಲಿ ಸಂಚಾರ ಮಾಡಿದವರಿಗೆ, ರಸ್ತೆ ಬದಿ ಅಂಗಡಿ ಇರುವವರಿಗೆ ಕಣ್ಣು ಉರಿ, ಗಂಟಲ ಕೆರೆತ ಉಂಟಾಯಿತು. ಅನೇಕ ಮಂದಿ ರಸ್ತೆಯಲ್ಲಿ ಕೆಮಿಕಲ್ ಸೋರಿಕೆಯಾಗಿದೆ ಎಲ್ಲರೂ ಮಾಸ್ಕ್ ಧರಿಸಿ ಎನ್ನುವ ಸಂದೇಶಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊAಡರು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸ್ ವೃತ್ತ ನಿರೀಕ್ಷಕ ಶಿವರುದ್ರಪ್ಪ , ಗ್ರಾಮಾಂತರ ಪೊಲೀಸ್ ಎಸ್‌ಐ ರವಿಕುಮಾರ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಚಂದ್ರಕುಮಾರ್ ನಗರದ ಹೊರವಲಯದಲ್ಲಿ ನಾಕಾಬಂದಿ ಹಾಕಿ ಘಟನೆಗೆ ಕಾರಣವಾದ ಲಾರಿಗಾಗಿ ಹುಡುಕಾಟ ನಡೆಸಿದರು. ಲಾರಿಯು ಕೇರಳ ಕರ್ನಾಟಕ ಅಂತಾರಾಜ್ಯ ಹೆದ್ದಾರಿ ಮಾಕುಟ್ಟ ಚೆಕ್ ಪೋಸ್ಟ್ ಬಳಿ ಪತ್ತೆಯಾಯಿತು.

ಬೆಳಿಗ್ಗೆ ಎಂಟು ಗಂಟೆ ಸುಮಾರಿಗೆ ಕುಶಾಲನಗರ ಮಾರ್ಗವಾಗಿ ನೆಲ್ಲಿಹುದಿಕೇರಿಯಿಂದ ವೀರಾಜಪೇಟೆಗೆ ಆಗಮಿಸಿದ ಲಾರಿಯು ದಾರಿಯುದ್ದಕ್ಕೂ ಕೆಂಪು ಬಣ್ಣದ ದ್ರಾವಣವನ್ನು ಸೋರಿಕೆ ಮಾಡಿಕೊಂಡು ಬಂದಿತ್ತು. ದ್ರಾವಣ ಚೆಲ್ಲಿದ ರಸ್ತೆಯ ಅಕ್ಕಪಕ್ಕದವರಿಗೆ ಕೂಡಲೇ ಕೆಮ್ಮು, ಕಣ್ಣು ಉರಿ ಉಂಟಾಯಿತು. ಕೆಲವರು ಅಸ್ವಸ್ಥರಾದರು. ವೀರಾಜಪೇಟೆಯ ಗ್ರಾಮಾಂತರ ಠಾಣಾ ಪೊಲೀಸರು ನಾಕಾಬಂದಿ ಹಾಕಿ ಮಾಕುಟ್ಟ ಚೆಕ್ ಪೋಸ್ಟ್ ಬಳಿ ಲಾರಿಯನ್ನು ವಶಕ್ಕೆ ಪಡೆದರು. ದ್ರಾವಣ ಚೆಲ್ಲಿದ ನಗರದ ರಸ್ತೆಗಳನ್ನು ಮುಖ್ಯಾಧಿಕಾರಿ ನೀರು ಹಾಕಿಸಿ ಸ್ವಚ್ಛ ಮಾಡಲು ಆದೇಶಿಸಿದರು.

ಪೊಲೀಸರು, ಚಾಲಕನನ್ನು ವಿಚಾರಣೆಗೆ ಒಳಪಡಿಸಿದಾಗ ಈ ಲಾರಿಯು ಹಾವೇರಿ ಜಿಲ್ಲೆಯ ಬ್ಯಾಡಗಿಯಿಂದ ಕೇರಳದ ಎರ್ನಾಕುಲಂಗೆ ಲಾರಿಯಲ್ಲಿ ದ್ರಾವಣ ರೂಪಕ್ಕೆ ಬದಲಾಯಿಸಿದ ಮೆಣಸಿನಕಾಯಿ ದ್ರಾವಣವನ್ನು ಆಹಾರ ಪದಾರ್ಥಗಳಿಗಾಗಿ ಸಾಸ್ ಮಾಡುವ ಉದ್ದೇಶಕ್ಕೆ ತೆಗೆದುಕೊಂಡು ಸಾಗುತ್ತಿತ್ತು. ಅದನ್ನು ತೆಗೆದುಕೊಂಡು ಬರುವಾಗ ಸಿದ್ದಾಪುರ ಬಳಿ ಬಸ್ ಒಂದಕ್ಕೆ ಸ್ಥಳಾವಕಾಶ ಕೊಡುವ ಸಂದರ್ಭ ಬದಿಗೆ ಸರಿದ ಪರಿಣಾಮ ಲಾರಿಯೊಳಗಿದ್ದ ಒಂದು ಡ್ರಮ್ ಗೆ ಹಾನಿಯಾಗಿ ಅದರಿಂದ ಮೆಣಸಿನಕಾಯಿ ದ್ರಾವಣ ರಸ್ತೆ ಉದ್ದಕ್ಕೆ ಸೋರಿದೆ ಎನ್ನುವ ಮಾಹಿತಿಯನ್ನು ವೀರಾಜಪೇಟೆ ವೃತ್ತ ನಿರೀಕ್ಷಕರಾದ ಶಿವರುದ್ರಪ್ಪ ಪತ್ರಿಕೆಗೆ ಮಾಹಿತಿ ನೀಡಿದರು.

ಮೆಣಸಿನಕಾಯಿ ಘಾಟಿಗೆ ಜನರಿಗೆ ತೊಂದರೆಯಾಗಿದೆ. ಆದರೆ ಚಾಲಕನ ಬಳಿ ಎಲ್ಲಾ ದಾಖಲಾತಿಗಳು ಕಾನೂನಾತ್ಮಕವಾಗಿವೆ. ಕಮರ್ಷಿಯಲ್ ಟ್ಯಾಕ್ಸ್ ಆಫೀಸರ್, ಹೆಲ್ತ್ ಆಫೀಸರ್ ಎಲ್ಲರೂ ಬಂದು ಪರಿಶೀಲನೆ ನಡೆಸಿದ್ದಾರೆ ಎಲ್ಲವೂ ಸರಿಯಾಗಿದೆ. ಆದರೆ ದ್ರಾವಣ ಸೋರಿಕೆಯಿಂದ ಜನರಿಗೆ ತೊಂದರೆಯಾದ ಕಾರಣ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಸಿಐ ಶಿವರುದ್ರಪ್ಪ ಹಾಗೂ ಗ್ರಾಮಾಂತರ ಎಸ್‌ಐ ರವಿಕುಮಾರ್ ತಿಳಿಸಿದರು.

ಈ ಬಗ್ಗೆ ಜಿಲ್ಲಾ ಕೇಂದ್ರದ ಆರೋಗ್ಯ ಮತ್ತು ಸುರಕ್ಷತಾ ಅಧಿಕಾರಿ ಡಾ.ಅನಿಲ್ ಧವನ್ ಮಾತನಾಡಿ, ಕಾನೂನಾತ್ಮಕವಾಗಿ ದ್ರಾವಣದ ಸ್ಯಾಂಪಲ್ ಪಡೆದು ಹೆಚ್ಚಿನ ಪರಿಶೀಲನೆಗಾಗಿ ಮೈಸೂರಿನ ಡಿವಿಷನಲ್ ಲ್ಯಾಬ್‌ಗೆ ಪರೀಕ್ಷೆಗಾಗಿ ಕಳುಹಿಸಿಕೊಡಲಾಗುವುದು ಎನ್ನುವ ಮಾಹಿತಿ ನೀಡಿದರು.