ಸೋಮವಾರಪೇಟೆ, ಮೇ ೨೪: ಪಟ್ಟಣ ಪಂಚಾಯಿತಿ ವತಿಯಿಂದ ನಿವೇಶನ ರಹಿತರಿಗೆ ನೀಡಿರುವ ಜಾಗಗಳು ಪರಭಾರೆಯಾಗಿದ್ದರೆ ಪ.ಪಂ.ಗೆ ಮುಟ್ಟುಗೋಲು ಹಾಕಿ ಕೊಳ್ಳಲಾಗುವುದು. ಇದರೊಂದಿಗೆ ಮನೆಗಳನ್ನು ನಿರ್ಮಿಸಿ ಬಾಡಿಗೆ ನೀಡಿದ್ದರೂ ಸಹ ಕ್ರಮ ಕೈಗೊಳ್ಳಲಾಗು ವುದು ಎಂದು ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದರು.

ಇಲ್ಲಿನ ಪ.ಪಂ. ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪಟ್ಟಣ ಪಂಚಾಯಿತಿ ವತಿಯಿಂದ ಹೊಸ ಬಡಾವಣೆಯಲ್ಲಿ ನಿವೇಶನ ರಹಿತರಿಗೆ ನಿವೇಶನ ನೀಡಿದ್ದು, ಇದರಲ್ಲಿ ಹಲವಷ್ಟು ಮಂದಿ ಮನೆ ಕಟ್ಟಿಕೊಂಡಿಲ್ಲ. ಅದೂ ಅಲ್ಲದೆ ಕೆಲವರು ಜಾಗವನ್ನು ಮಾರಾಟ ಮಾಡಿರುವ ಬಗ್ಗೆ ದೂರುಗಳು ಬಂದಿದ್ದು, ಈ ಬಗ್ಗೆ ಪರಿಶೀಲನೆ ನಡೆಸಿ ನಿವೇಶನಗಳನ್ನು ಪಂಚಾಯಿತಿಗೆ ಮುಟ್ಟುಗೋಲು ಹಾಕಿಕೊಳ್ಳಲು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ನಿವೇಶನಗಳನ್ನು ಪಡೆದ ಕೆಲವರು ಇದೀಗ ಊರಿನಲ್ಲಿಯೇ ಇಲ್ಲ, ಇನ್ನು ಕೆಲವರು ಮನೆಗಳನ್ನು ಕಟ್ಟಿಲ್ಲ. ಹಲವಷ್ಟು ಮಂದಿ ಮನೆಗಳನ್ನು ಬಾಡಿಗೆ ನೀಡಿ ಬೇರೆ ಊರಿಗೆ ತೆರಳಿದ್ದಾರೆ. ಇಂತಹ ಪ್ರಕರಣಗಳನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳಬೇಕೆಂದು ಸದಸ್ಯರು ಸಭೆಯ ಗಮನ ಸೆಳೆದರು.

ಹೊಸ ಬಡಾವಣೆಯಲ್ಲಿ ಉಳಿಕೆಯಾಗಿರುವ ನಿವೇಶನಗಳನ್ನು ನಿವೇಶನ ರಹಿತ ಪೌರ

ಕಾರ್ಮಿಕರಿಗೆ ನೀಡಲು ಕ್ರಮವಹಿಸಲಾಗಿದ್ದು, ಈಗಾಗಲೇ ಫಲಾನುಭವಿಗಳನ್ನು ಗುರುತಿಸಲಾಗಿದೆ ಎಂದು ಮುಖ್ಯಾಧಿಕಾರಿ ನಾಚಪ್ಪ ಹೇಳಿದರು.

(ಮೊದಲ ಪುಟದಿಂದ) ಪಟ್ಟಣದ ಹೈಟೆಕ್ ಮಾರುಕಟ್ಟೆ ಮಳೆಗೆ ಸೋರುತ್ತಿದ್ದು, ವ್ಯಾಪಾರ ವಹಿವಾಟು ನಡೆಸಲು ಅಸಾಧ್ಯವಾಗಿದೆ. ಈ ನಿಟ್ಟಿನಲ್ಲಿ ತುರ್ತು ದುರಸ್ತಿ ಕಾರ್ಯ ಕೈಗೊಳ್ಳಬೇಕು. ಮುಂದಿನ ಸೋಮವಾರದ ಒಳಗೆ ಕಾಮಗಾರಿ ಪೂರ್ಣಗೊಳಿಸಬೇಕೆಂದು ಶಾಸಕರು, ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಕಾಮಗಾರಿ ನಡೆಸದೇ ಬಿಲ್ ಪಾವತಿ: ಸಭೆಯಲ್ಲಿ ಮಾತನಾಡಿದ ನಾಮನಿರ್ದೇಶಿತ ಸದಸ್ಯ ಎಸ್. ಮಹೇಶ್ ಅವರು, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆಲವೊಂದು ಕಾಮಗಾರಿಗಳು ಅಪೂರ್ಣ ವಾಗಿದ್ದರೂ ಬಿಲ್ ನೀಡಲಾಗಿದೆ. ಈ ಬಗ್ಗೆ ಸಭೆಯಲ್ಲಿ ಪ್ರಶ್ನಿಸಿ ಹೊರ ತೆರಳಿದರೆ ರೌಡಿಸಂ ಮಾಡುತ್ತಾರೆ ಎಂದು ಶಾಸಕರೆದುರು ಹೇಳಿದರು. ಇದಕ್ಕೆ ಸದಸ್ಯ ಶುಭಕರ್ ಸಹ ದನಿಗೂಡಿಸಿದರು.

ಸದಸ್ಯೆ ಮೋಹಿನಿ ಮಾತನಾಡಿ, ತಮ್ಮ ವಾರ್ಡ್ನಲ್ಲಿ ಚರಂಡಿಯಲ್ಲಿದ್ದ ಮಣ್ಣನ್ನು ತೆಗೆದು ರಸ್ತೆಯ ಮೇಲೆ ಹಾಕಿ ಅದನ್ನು ವಿಲೇ ಮಾಡದೇ ಗುತ್ತಿಗೆದಾರ ತೆರಳಿದ್ದಾರೆ. ಈ ಬಗ್ಗೆ ಕೇಳಿದರೆ ಸಮರ್ಪಕ ಸ್ಪಂದನೆ ನೀಡುವುದಿಲ್ಲ. ಕೆಲಸ ಆಗದಿದ್ದರೂ ಪಂಚಾಯಿತಿ ಅಧಿಕಾರಿಗಳು ಬಿಲ್ ಮಾಡಿದ್ದಾರೆ ಎಂದು ಆರೋಪಿಸಿದರು.

ಈ ಸಂದರ್ಭ ಮಾತನಾಡಿದ ಶಾಸಕ ರಂಜನ್, ಕಾಮಗಾರಿ ಪೂರ್ಣಗೊಳ್ಳದೇ ಯಾವುದೇ ಕಾರಣಕ್ಕೂ ಬಿಲ್ ಮಾಡಬಾರದು. ಅದು ಯಾವ ಪಕ್ಷದ ಗುತ್ತಿಗೆದಾರನೇ ಆಗಿದ್ದರೂ ಕ್ರಮ ಕೈಗೊಳ್ಳಲಾಗುವುದು. ಇಂತಹ ಪ್ರಕರಣಗಳು ಮುಂದುವರೆದರೆ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಅರ್ಧಂಬರ್ಧ ಕಾಮಗಾರಿ: ಪಟ್ಟಣದ ಹೈಟೆಕ್ ಮಾರುಕಟ್ಟೆ ದುರಸ್ತಿಗೆ ಪೂರ್ಣ ಪ್ರಮಾಣದ ಬಿಲ್ ನೀಡಿದ್ದರೂ ಅಪೂರ್ಣ ಕೆಲಸ ಮಾಡಲಾಗಿದೆ. ತಿಂಗಳ ಹಿಂದಷ್ಟೇ ೫ ಲಕ್ಷ ವ್ಯಯಿಸಲಾಗಿದೆ. ಆದರೂ ಮಳೆ ಬಂದರೆ ಮಾರುಕಟ್ಟೆ ಕೆರೆಯಂತಾಗುತ್ತಿದೆ. ಇನ್ನೂ ೨ಲಕ್ಷದಷ್ಟು ಕೆಲಸ ಬಾಕಿಯಿದ್ದರೂ ಗುತ್ತಿಗೆದಾರನಿಗೆ ಹಣ ನೀಡಲಾಗಿದೆ ಎಂದು ಸದಸ್ಯೆ ಶೀಲಾ ಡಿಸೋಜ ಆರೋಪಿಸಿದರು.

ಸುಲಭ್ ಶೌಚಾಲಯ ನಿರ್ಮಿಸಿ: ಪಟ್ಟಣದ ಬಹುತೇಕ ಅಂಗಡಿ ಮುಂಗಟ್ಟುಗಳಲ್ಲಿ ಯುವತಿಯರು ಹಾಗೂ ಮಹಿಳೆಯರೇ ಕೆಲಸ ನಿರ್ವಹಿಸುತ್ತಿದ್ದು, ಸುಲಭ್ ಶೌಚಾಲಯದ ಕೊರತೆ ಕಂಡುಬರುತ್ತಿದೆ. ಈಗಿರುವ ಶೌಚಾಲಯಗಳು ನಿರ್ವಹಣೆ ಇಲ್ಲದೇ ಇರುವುದರಿಂದ ಮಹಿಳೆಯರು ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆ ಮಹಿಳೆಯರಿಗೆ ಪ್ರತ್ಯೇಕವಾಗಿ ಸುಲಭ್ ಶೌಚಾಲಯ ನಿರ್ಮಿಸಲು ಕ್ರಮ ಕೈಗೊಳ್ಳಬೇಕೆಂದು ಸದಸ್ಯ ಮೃತ್ಯುಂಜಯ ಸಲಹೆ ನೀಡಿದರು.

ಪಟ್ಟಣದಲ್ಲಿ ಮುಂದಿನ ದಿನಗಳಲ್ಲಿ ಯಾವುದೇ ಅಂಗಡಿ ಮುಂಗಟ್ಟುಗಳು, ವಾಣಿಜ್ಯ ಸಂಕೀರ್ಣಗಳು ನಿರ್ಮಾಣವಾದರೂ ಶೌಚಾಲಯ ವ್ಯವಸ್ಥೆ ಇರುವಂತೆ ಅಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ಶಾಸಕರು ಹೇಳಿದರು.

ಪಟ್ಟಣದ ಬಸವೇಶ್ವರ ರಸ್ತೆಯಲ್ಲಿ ಶಿಥಿಲಾವಸ್ಥೆಯ ಮನೆಯಲ್ಲಿದ್ದ ಅಂಗನವಾಡಿಯನ್ನು ಸದ್ಯದ ಮಟ್ಟಿಗೆ ಮಹಿಳಾ ಸಮಾಜಕ್ಕೆ ಸ್ಥಳಾಂತರಿಸಲಾಗಿದೆ. ಆದರೆ ಮಹಿಳಾ ಸಮಾಜದಲ್ಲಿ ಮಕ್ಕಳ ಕಲಿಕೆ ಹಾಗೂ ಆಟೋಟಕ್ಕೆ ಸಮಸ್ಯೆಯಾಗುತ್ತಿದೆ. ಬಸವೇಶ್ವರ ರಸ್ತೆಯಲ್ಲಿ ಅಂಗನವಾಡಿ ನಿರ್ಮಾಣಕ್ಕೆ ಸೂಕ್ತ ಸ್ಥಳಾವಕಾಶವಿದ್ದು, ಜಾಗದ ದಾಖಲಾತಿ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸಬೇಕೆಂದು ಮನವಿ ಮಾಡಿದರು.

ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ದಾಖಲಾತಿ ಸಮಸ್ಯೆಯಿಂದ ಪಂಚಾಯಿತಿ ಆದಾಯ ಖೋತಾ ಆಗುತ್ತಿದೆ. ಪಂಚಾಯಿತಿಯಿAದ ರಸ್ತೆ, ನೀರು, ವಿದ್ಯುತ್ ನೀಡಿದ್ದರೂ ಕಟ್ಟಡ ನಿರ್ಮಾಣ ಸಂದರ್ಭ ನೆರೆಯ ಗ್ರಾಮ ಪಂಚಾಯಿತಿಗಳಿAದ ಪರವಾನಗಿ ಪಡೆಯಲಾಗುತ್ತಿದೆ. ಈ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ಸದಸ್ಯ ಮಹೇಶ್ ಹೇಳಿದರು.

ಪಶು ವೈದ್ಯಕೀಯ ಇಲಾಖೆಯ ಸುತ್ತಮುತ್ತ ಇರುವ ಜಾಗವನ್ನು ಒತ್ತುವರಿ ಮಾಡಿಕೊಳ್ಳುವ ಸಂಭವವಿದ್ದು, ಇದನ್ನು ಸರ್ಕಾರದ ಮಟ್ಟದಲ್ಲಿ ಕಾಯ್ದಿರಿಸಿಕೊಳ್ಳಲು ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಸರ್ವೆ ನಡೆಸಿ ಜಾಗವನ್ನು ಸರ್ಕಾರಿ ಉದ್ದೇಶಗಳಿಗೆ ಕಾಯ್ದಿರಿಸಿಕೊಳ್ಳಲು ತಹಶೀಲ್ದಾರ್ ಗಮನ ಹರಿಸಬೇಕೆಂದು ಶಾಸಕರು ಸೂಚಿಸಿದರು.

ಪಟ್ಟಣ ವ್ಯಾಪ್ತಿಯ ರಸ್ತೆ, ಚರಂಡಿಗಳ ಮಧ್ಯೆ, ಮನೆಗಳ ಮುಂಭಾಗ ವಿದ್ಯುತ್ ಕಂಬ ಹಾಗೂ ಟ್ರಾನ್ಸ್ಫಾರ್ಮರ್‌ಗಳನ್ನು ಅಳವಡಿಸಲಾಗಿದ್ದು, ಇದರಿಂದ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಿದೆ. ಇಂತಹ ಕಂಬಗಳನ್ನು ತೆರವುಗೊಳಿಸುವಂತೆ ಸೆಸ್ಕಾಂಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ ಎಂದು ಉಪಾಧ್ಯಕ್ಷ ಸಂಜೀವ, ಸದಸ್ಯ ಜೀವನ್ ದೂರಿದರು. ಇದಕ್ಕೆ ಸ್ಪಂದಿಸಿದ ಶಾಸಕರು, ಇಲಾಖೆಯ ಅಭಿಯಂತರರಿಗೆ ದೂರವಾಣಿ ಕರೆ ಮಾಡಿ, ತಕ್ಷಣ ಕಂಬಗಳನ್ನು ತೆರವುಗೊಳಿಸಬೇಕೆಂದು ಸೂಚಿಸಿದರು.

ಪಂಚಾಯಿತಿಯಲ್ಲಿ ಸಿಬ್ಬಂದಿಗಳ ಕೊರತೆ ಇರುವುದರಿಂದ ಸಾರ್ವಜನಿಕ ಕೆಲಸ ಕಾರ್ಯಗಳು ನಿಗದಿತ ಸಮಯದಲ್ಲಿ ಆಗುತ್ತಿಲ್ಲ ಎಂದು ಸದಸ್ಯ ಮಹೇಶ್ ಹೇಳಿದರು. ಹೊರ ಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿಗಳನ್ನು ನಿಯೋಜಿಸಲು ಕ್ರಮಕೈಗೊಳ್ಳಲಾಗುವುದು ಎಂದು ರಂಜನ್ ಹೇಳಿದರು.

ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಮುಂಭಾಗ ಪಟ್ಟಣ ಪಂಚಾಯಿತಿಗೆ ಸೇರಿದ ಜಾಗವಿದ್ದು, ಇದನ್ನು ಸಾರ್ವಜನಿಕರ ಉಪಯೋಗಕ್ಕೆ ಬಳಸಿಕೊಳ್ಳಲು ಪಂಚಾಯಿತಿ ಮುಂದಾಗಬೇಕೆAದು ಸದಸ್ಯ ಬಿ.ಆರ್. ಶುಭಕರ್ ಸಭೆಗೆ ತಿಳಿಸಿದರು.

ಪಟ್ಟಣದಲ್ಲಿ ವಾಲ್ಮೀಕಿ ಭವನ ನಿರ್ಮಾಣ ಸಂಬAಧ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸದಸ್ಯ ಜೀವನ್ ಅಸಮಾಧಾನ ವ್ಯಕ್ತಪಡಿಸಿದರು. ಹೊಸ ಬಡಾವಣೆಯಲ್ಲಿ ಹೊಳೆಯ ಜಾಗವನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ ಎಂದು ಮಹೇಶ್ ಹೇಳಿದರು. ಹೊಳೆ ಜಾಗ ಒತ್ತುವರಿಯನ್ನು ತಕ್ಷಣ ಖುಲ್ಲಾ ಪಡಿಸಬೇಕು. ವಾಲ್ಮೀಕಿ ಭವನಕ್ಕೆ ಸೂಕ್ತ ಜಾಗ ಗುರುತಿಸಿದರೆ ಅನುದಾನ ಒದಗಿಸಲಾಗುವುದು ಎಂದು ರಂಜನ್ ತಿಳಿಸಿದರು.

ವಾರ್ಡ್ಗಳಿಗೆ ತಲಾ ೧೨ ಬೀದಿ ದೀಪಗಳ ಅಳವಡಿಕೆಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದರೂ ಈವರೆಗೆ ಬೀದಿ ದೀಪ ಅಳವಡಿಸಿಲ್ಲ. ವಾರ್ಡ್ನಲ್ಲಿ ಓಡಾಡಲು ನಾಚಿಕೆಯಾಗುತ್ತಿದೆ ಎಂದು ಶುಭಕರ್ ಹೇಳಿದರು. ವಾರ್ಡ್ಗಳಿಗೆ ಬೀದಿ ದೀಪ ಅಳವಡಿಸಲು ೧೨ ಲಕ್ಷ ಅನುದಾನ ಬೇಕಿದೆ. ಹೀಗಾಗಿ ತಡವಾಗುತ್ತಿದೆ ಎಂದು ಮುಖ್ಯಾಧಿಕಾರಿ ನಾಚಪ್ಪ ಸಭೆಯ ಗಮನಕ್ಕೆ ತಂದರು. ಎಸ್‌ಎಫ್‌ಸಿ ಅನುದಾನ ಬಳಸಿಕೊಂಡು ವಿದ್ಯುತ್ ದೀಪಗಳ ಅಳವಡಿಕೆಗೆ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗೆ ಸಭೆ ಸೂಚಿಸಿತು.

ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಂತಿ ಶಿವಕುಮಾರ್, ತಹಶಿಲ್ದಾರ್ ಗೋವಿಂದರಾಜು, ಅಭಿಯಂತರರಾದ ಹೇಮಕುಮಾರ್, ವೆಂಕಟೇಶ್ ನಾಯಕ್, ಸದಸ್ಯರುಗಳಾದ ಶೀಲಾ ಡಿಸೋಜ, ನಾಗರತ್ನ, ಎಸ್.ಆರ್. ಸೋಮೇಶ್, ಬಿ.ಆರ್. ಮಹೇಶ್, ಶರತ್‌ಚಂದ್ರ ಸೇರಿದಂತೆ ಸಿಬ್ಬಂದಿಗಳು ಉಪಸ್ಥಿತರಿದ್ದರು.