ಮಡಿಕೇರಿ, ಮೇ ೨೪: ಮಡಿಕೇರಿ ನಗರಸಭೆ ಹಾಗೂ ಮಿಸ್ಟಿಹಿಲ್ಸ್ ವತಿಯಿಂದ ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದ ಬಳಿ ಪ್ರವಾಸಿಗರಿಗೆ ಮಾಹಿತಿ ಫಲಕ ಅನಾವರಣಗೊಳಿಸಲಾಯಿತು.
ರೋಟರಿ ಜಿಲ್ಲಾ ರಾಜ್ಯಪಾಲ ರವೀಂದ್ರ ಭಟ್ ಮಾಹಿತಿ ಫಲಕ ಅನಾವರಣಗೊಳಿಸಿ ಮಾತನಾಡಿ, ಮಡಿಕೇರಿಗೆ ಅತ್ಯಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದು ಈ ನಿಟ್ಟಿನಲ್ಲಿ ಪ್ರವಾಸಿಗರಿಗೆ ಸೂಕ್ತ ಮಾಹಿತಿ ನೀಡುವ ಕಾರ್ಯ ಶ್ಲಾಘನೀಯ. ಮಡಿಕೇರಿಯನ್ನು ಸ್ವಚ್ಛ, ಸುಂದರವಾಗಿಸಿಕೊಳ್ಳಬೇಕು, ಮಾಲಿನ್ಯರಹಿತವಾಗಿಸಬೇಕೆಂಬ ಮಾಹಿತಿಯನ್ನು ಮಿಸ್ಟಿ ಹಿಲ್ಸ್ ಕನ್ನಡ, ಇಂಗ್ಲೀಷ್, ಹಿಂದಿ ಭಾಷೆಗಳಲ್ಲಿ ನೀಡುವ ಮೂಲಕ ಎಲ್ಲಾ ಪ್ರವಾಸಿಗರಿಗೆ ಮಾಹಿತಿ ನೀಡುವ ಪ್ರಯತ್ನವನ್ನು ಮಿಸ್ಟಿ ಹಿಲ್ಸ್ ನಗರಸಭೆಯ ನೆರವಿನೊಂದಿಗೆ ಮಾಡಿದೆ ಎಂದರು.
ಮಡಿಕೇರಿ ನಗಸಭೆಯ ಅಧ್ಯಕ್ಷೆ ಅನಿತಾಪೂವಯ್ಯ, ಪೌರಾಯುಕ್ತ ರಾಮದಾಸ್, ಮಿಸ್ಟಿ ಹಿಲ್ಸ್ ಕಾರ್ಯದರ್ಶಿ ಪಿ.ಆರ್.ರಾಜೇಶ್, ರೋಟರಿ ಉಪರಾಜ್ಯಪಾಲ ಅನಿಲ್ ಎಚ್.ಟಿ., ವಲಯ ಕಾರ್ಯದರ್ಶಿ ಎಚ್.ಎಸ್. ವಸಂತಕುಮಾರ್, ವಲಯ ಸೇನಾನಿ ಜಗದೀಶ್ ಪ್ರಶಾಂತ್, ಮಿಸ್ಟಿಹಿಲ್ಸ್ ಸದಸ್ಯರು ಹಾಜರಿದ್ದರು.