ಕುಶಾಲನಗರ, ಮೇ ೨೪: ಸರಕಾರ ಮತ್ತು ಜನಪ್ರತಿನಿಧಿಗಳಿಗೆ ಜನಸಾಮಾನ್ಯರ ಸಮಸ್ಯೆ ತಿಳಿಸುವ ಕೆಲಸ ಪತ್ರಕರ್ತರಿಂದ ಆಗಬೇಕು ಎಂದು ಮಡಿಕೇರಿ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಹೇಳಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕುಶಾಲನಗರ ತಾಲೂಕು ಘಟಕ ಉದ್ಘಾಟಿಸಿ ಮಾತನಾಡಿದರು.

ಪತ್ರಿಕಾ ರಂಗವೂ ಸಂವಿಧಾನದ ಒಂದು ಕಂಬ ಎಂದು ಗುರುತಿಸಲಾಗುತ್ತಿದೆ. ಸರಕಾರ ದಾರಿ ತಪ್ಪಿದಾಗ ಸರಿದಾರಿಗೆ ತರುವ ಕೆಲಸ ಮಾಧ್ಯಮಗಳಿಂದ ಆಗಬೇಕು. ಸಮಸ್ಯೆಗಳತ್ತ ಕಣ್ಣು ತೆರೆಸುವ ಕೆಲಸ ಪತ್ರಿಕೆಗಳು ಮಾಡಬೇಕು ಎಂದರು. ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದ ಜಿಲ್ಲಾಡಳಿತದ ಕಾನೂನು ಸಲಹೆಗಾರ ಎ. ಲೋಕೇಶ್ ಕುಮಾರ್ ಮಾತನಾಡಿ, ಸಂಸ್ಥೆಗಳಿಗೆ ಬೈಲಾ ಇರಬೇಕು. ನಿಯಮಗಳಂತೆ ಕಾರ್ಯನಿರ್ವಹಿಸಿದಾಗ ಉತ್ತಮ ಬೆಳವಣಿಗೆ ಕಾಣಬಹುದು ಎಂದು ಹೇಳಿದರು.

ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ರಾಜ್ಯ ವೈಜ್ಞಾನಿಕ ಪರಿಷತ್ತು ಅಧ್ಯಕ್ಷ ಡಾ. ಹುಲಿಕಲ್ ನಟರಾಜ್ ಮಾತನಾಡಿ ಮಾಧ್ಯಮ ಜಗತ್ತಿನ ಅದ್ಭುತ ಕಣ್ಣು. ಜಗತ್ತಿನ ಕಸ ತೊಳೆಯುತ್ತಿರುವ ಕೆಲಸ ಮಾಧ್ಯಮದಿಂದ ಆಗುತ್ತಿದೆ. ಪ್ರಜ್ಞಾವಂತರು ಮತ್ತು ಸಮಾಜದ ಸರಕು ಆಗಬೇಕಿದ್ದ ಮಾಧ್ಯಮದವರು ಇವತ್ತು ಮಾರುಕಟ್ಟೆಯ ಸರಕಾಗಿರುವುದು ವಿಷಾದನೀಯ ಎಂದರು. ಪತ್ರಕರ್ತನಿಗೆ ಮೌನ ಮತ್ತು ತಾಳ್ಮೆ ಬೇಕು. ವಿಚಾರದ ಆಳವಾದ ಚಿಂತನೆ ನಡೆಯಬೇಕು. ವಿವೇಚನೆ, ಆಲೋಚನೆ, ವಿಮರ್ಶೆ ಇರಬೇಕು. ಆದರೆ ಇಂದು ಜಗತ್ತು ಬೆರಳ ತುದಿಯಲ್ಲಿ ಇದ್ದರೂ ಮಾನವೀಯ ಮೌಲ್ಯ ಹೊರಟು ಹೋಗಿದೆ ಎಂದು ಹೇಳಿದರು.

ಕೊಡ್ಲಿಪೇಟೆ ಕಿರಿಕೊಡ್ಲಿಮಠದ ಶ್ರೀ ಸದಾಶಿವ ಸ್ವಾಮೀಜಿ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷೆ ಸವಿತಾ ರೈ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುಶಾಲನಗರ ಪ.ಪಂ. ಅಧ್ಯಕ್ಷ ಜಯವರ್ಧನ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ರಾಷ್ಟಿçÃಯ ಸಮಿತಿ ಸದಸ್ಯ ಸುನಿಲ್ ಪೊನ್ನೇಟಿ, ನಿರ್ದೇಶಕ ಮಂಜುನಾಥ, ಕುಶಾಲನಗರ ತಾಲೂಕು ಘಟಕದ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್, ಸೋಮವಾರಪೇಟೆ ತಾಲೂಕು ಘಟಕದ ಅಧ್ಯಕ್ಷ ವಿಜಯ್ ಹಾನಗಲ್, ವೀರಾಜಪೇಟೆ ತಾಲೂಕು ಘಟಕದ ಅಧ್ಯಕ್ಷ ರೆಜಿತ್ ಕುಮಾರ್ ಗುಹ್ಯ ಮಾತನಾಡಿದರು.

ಸಂಘದ ಜಿಲ್ಲಾ ನಿರ್ದೇಶಕ ಟಿ.ಆರ್. ಪ್ರಭುದೇವ್ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು. ಪ್ರಧಾನ ಕಾರ್ಯದರ್ಶಿ ವನಿತ ಚಂದ್ರಮೋಹನ್, ಖಜಾಂಚಿ ಕುಡೆಕಲ್ ಗಣೇಶ್, ಉಪಾಧ್ಯಕ್ಷ ರಾಜು ರೈ, ಕಾರ್ಯದರ್ಶಿ ನಾಗರಾಜಶಟ್ಟಿ, ನಿರ್ದೇಶಕರಾದ ಶಿವರಾಜ್, ಮಹಮ್ಮದ್ ಮುಸ್ತಫಾ ವಿನೋದ್, ರಘು ಹೆಬ್ಬಾಲೆ, ಶಶಿಕುಮಾರ್ ರೈ, ಮತ್ತಿತರರು ಇದ್ದರು.