ಮಡಿಕೇರಿ, ಮೇ ೨೩: ಮಡಿಕೇರಿ ನಗರದ ಪ್ರಮುಖ ಪ್ರದೇಶಗಳಲ್ಲಿ ಒಂದಾದ ಗಣಪತಿ ಬೀದಿಯಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಾಣ ಸ್ವಾಗತಾರ್ಹವಾಗಿದೆ. ಆದರೆ ಈ ಸಂದರ್ಭ ಗಣಪತಿ ಬೀದಿ ಎಂಬ ನಾಮಫಲಕ ತೆರವುಗೊಳಿಸಿದ್ದು, ಇದನ್ನು ಮತ್ತೆ ಅಳವಡಿಸುವಂತೆ ಮಡಿಕೇರಿ ಕೊಡವ ಸಮಾಜ ಆಗ್ರಹಿಸಿದೆ. ಈ ಕುರಿತು ಹೇಳಿಕೆ ನೀಡಿರುವ ಸಮಾಜದ ಅಧ್ಯಕ್ಷ ಕೊಂಗAಡ ಎಸ್. ದೇವಯ್ಯ ಅವರು, ಹಲವಾರು ವರ್ಷಗಳ ಹಿಂದೆ ಇಡೀ ಮಡಿಕೇರಿ ನಗರಕ್ಕೆ ಸಮೃದ್ಧವಾಗಿ ನೀರು ಸರಬರಾಜು ಮಾಡಲು ಈ ಪ್ರದೇಶವನ್ನು ಬಿಟ್ಟುಕೊಟ್ಟ ಹಾಗೂ ಪೈಪ್‌ಲೈನ್ ಅಳವಡಿಸಿಕೊಟ್ಟ ಮಹಾದಾನಿಗಳಾದ ಕೊಂಗAಡ ದಿ. ಗಣಪತಿಯವರ ಹೆಸರನ್ನು ಭವಿಷ್ಯದಲ್ಲೂ ನೆನಪಿಸಿಕೊಳ್ಳಬೇಕಿದೆ. ಹಾಗಾಗಿ ಗಣಪತಿಯವರ ಹೆಸರು ಅಜರಾಮರವಾಗಿ ಉಳಿಯಲು ಈ ಬೀದಿಗೆ ‘ಗಣಪತಿ ಬೀದಿ’ ಎಂದು ಹೆಸರಿಟ್ಟು ನಾಮಫಲಕ ಅಳವಡಿಸಲಾಗಿತ್ತು.

ಆದರೆ ರಸ್ತೆ ಅಭಿವೃದ್ಧಿ ಸಂದರ್ಭದಲ್ಲಿ ಅಲ್ಲಿ ಇದ್ದ ‘ಗಣಪತಿ ಬೀದಿ’ ಎಂಬ ನಾಮಫಲಕವನ್ನು ತೆರವುಗೊಳಿಸಿರುವುದು ಹಾಗೂ ರಸ್ತೆ ಸಂಚಾರಕ್ಕೆ ಮುಕ್ತವಾಗಿ ಇದೀಗ ಬಹಳ ದಿನಗಳು ಕಳೆದಿದ್ದರೂ ಇದುವರೆಗೂ ನಾಮಫಲಕವನ್ನು ಅಳವಡಿಸದೇ ಇರುವುದು ಗಮನಕ್ಕೆ ಬಂದಿರುತ್ತದೆ. ಆದುದರಿಂದ ‘ಗಣಪತಿ ಬೀದಿ’ ಎಂಬ ನಾಮಫಲಕವನ್ನು ಗಣಪತಿಯವರ ಭಾವಚಿತ್ರದೊಂದಿಗೆ ಆದಷ್ಟು ಶೀಘ್ರವಾಗಿ ಅಳವಡಿಸಬೇಕಾಗಿ ಕೊಡವ ಸಮಾಜ ಮಡಿಕೇರಿ ಆಗ್ರಹಿಸುತ್ತದೆ ಎಂದು ತಿಳಿಸಿದ್ದಾರೆ.