ಶನಿವಾರಸಂತೆ, ಮೇ ೨೪: ಪಟ್ಟಣದ ವಿಶ್ವಕರ್ಮ ಸಮಾಜದ ವತಿಯಿಂದ ಶ್ರೀಕಾಳಿಕಾಂಬದೇವಿ ವಾರ್ಷಿಕೋತ್ಸವ ಸಾಮೂಹಿಕ ಉಪನಯನ, ದೇವಿಗೆ ಸಾಮೂಹಿಕ ಕುಂಕುಮಾರ್ಚನೆ ಕಾರ್ಯಕ್ರಮ ಶ್ರೀಕಾಳಿಕಾಂಬ ದೇವಾಲಯ ಆವರಣದಲ್ಲಿ ನಡೆಯಿತು. ಅರಕಲಗೂಡು ಸುಜ್ಞಾನಪೀಠದ ವಿಶ್ವಕರ್ಮ ಜಗದ್ಗುರು ಶಿವಸುಜ್ಞಾನತೀರ್ಥ ಸ್ವಾಮೀಜಿ, ಕಿರಿಕೊಡ್ಲಿಮಠದ ಸದಾಶಿವ ಸ್ವಾಮೀಜಿ, ಕಲ್ಲುಮಠದ ಮಹಾಂತಸ್ವಾಮೀಜಿ ಸಾನಿಧ್ಯದಲ್ಲಿ ಮಹಾಗಣಪತಿ ಪೂಜೆ, ಪುಣ್ಯಾಹವಾಚನ, ಮಾತೃಕಾನಂದಿ, ನವಗ್ರಹರಾಧನ, ಅಗ್ನಿಪ್ರತಿಷ್ಠಾಪನಾ, ಮಹಾಗಣಪತಿ ಹೋಮ, ದುರ್ಗಾ ಹೋಮ, ಸಾಹಿತ್ಯ ಯದೂಶಹೋಮ, ಚೌಲಹೋಮ, ಚೌಲಕರ್ಮ, ಶುದ್ಧಿ, ಮಾತೃಸಹಭೋಜನ, ಯಜ್ಞೋಪವೀತ ಧಾರಣೆ, ಮಹಾ ಮಂಗಳಾರತಿ ಧಾರ್ಮಿಕ ಕಾರ್ಯಗಳು ನಡೆದವು.
ಮೈಸೂರಿನ ದಯಾನಂದ ಶರ್ಮ ಮತ್ತು ಸಂಗಡಿಗರ ಪೌರೋಹಿತ್ಯದಲ್ಲಿ ಬ್ರಹ್ಮೋಪದೇಶ, ಮಹಿಳೆಯರಿಂದ ದೇವಿಗೆ ಸಾಮೂಹಿಕ ಕುಂಕುಮಾರ್ಚನೆ ನೆರವೇರಿತು. ಭಕ್ತರು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡಿದ್ದರು. ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ವಿಶ್ವಕರ್ಮ ಸಮಾಜದ ಪ್ರಮುಖರು, ಆಡಳಿತ ಮಂಡಳಿ ಪದಾಧಿಕಾರಿಗಳು ಹಾಜರಿದ್ದರು.