ಸೋಮವಾರಪೇಟೆ, ಮೇ ೨೪: ವಿಶ್ವ ತಂಬಾಕು ರಹಿತ ದಿನಾಚರಣೆ ತಾ. ೩೧ ರಂದು ನಡೆಯಲಿದ್ದು, ಜಿಲ್ಲೆಯ ತಂಬಾಕು ಬಳಕೆದಾರರಲ್ಲಿ ತಂಬಾಕಿನ ದುಷ್ಪರಿಣಾಮದ ಬಗ್ಗೆ ಅರಿವು ಮೂಡಿಸುವ ಜಾಗೃತಿ ಕಾರ್ಯಕ್ರಮಕ್ಕೆ ಶಾಸಕ ಅಪ್ಪಚ್ಚು ರಂಜನ್ ತಮ್ಮ ಕಚೇರಿಯಲ್ಲಿ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ತಂಬಾಕು ಮುಕ್ತ ಕೊಡಗು ಜಿಲ್ಲೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಜಿಲ್ಲಾ ಆರೋಗ್ಯ ಇಲಾಖೆ ಮುಂದಾಗಿದೆ. ಇದಕ್ಕೆ ಜನತೆಯ ಸಹಕಾರ ಮುಖ್ಯ. ತಂಬಾಕು ಬಳಕೆ ಆರೋಗ್ಯಕ್ಕೆ ಹಾನಿಕರ. ಇದರ ಬಳಕೆಯಿಂದಲೇ ಸಾಕಷ್ಟು ಜನರು ಕ್ಯಾನ್ಸರ್ ಪೀಡಿತರಾಗಿರುವುದನ್ನು ಕಾಣಬಹುದು. ಈ ನಿಟ್ಟಿನಲ್ಲಿ ಜಿಲ್ಲಾ ಆರೋಗ್ಯ ಇಲಾಖೆಯಿಂದ ಹಾಡಿಗಳು ಸೇರಿದಂತೆ ಹಲವೆಡೆ ತೆರಳಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಜಿಲ್ಲಾ ಆರೋಗ್ಯಾಧಿಕಾರಿ ವೆಂಕಟೇಶ್ ಮಾತನಾಡಿ, ತಾ. ೨೩ ರಿಂದ ೩೧ರ ವರೆಗೆ ಜನರಲ್ಲಿ ತಂಬಾಕಿನ ಬಳಕೆಯಿಂದಾಗುವ ಅಡ್ಡ ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಈಗಾಗಲೇ ಸಿಗರೇಟ್ ಮಾರುವ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗುತ್ತಿದೆ. ಶಾಲಾ ಆವರಣದಿಂದ ೧೦೦ ಮೀಟರ್ ಒಳಗೆ ಸಿಗರೇಟ್ ಮಾರುವಂತಿಲ್ಲ. ಅಂಗಡಿಗಳಲ್ಲಿ ೧೮ ವರ್ಷಕ್ಕಿಂತ ಕೆಳಗಿನ ವಯೋಮಾನದವರಿಗೆ ತಂಬಾಕು ಉತ್ಪನ್ನಗಳನ್ನು ಮಾರುವಂತಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಯಾರೂ ಧೂಮಪಾನ ಮಾಡಬಾರದು. ಅಂತಹ ಘಟನೆಗಳು ಕಂಡುಬAದಲ್ಲಿ ಮಾರುವವರು ಮತ್ತು ಉಪಯೋಗಿಸುವವರ ವಿರುದ್ಧ ದಂಡ ವಿಧಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭ ಆರೋಗ್ಯ ಸಮಿತಿ ಸದಸ್ಯ ಕೆ.ಜಿ. ಸುರೇಶ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿ, ಇಲಾಖೆಯ ಸಿಬ್ಬಂದಿಗಳಾದ ಮಂಜುನಾಥ್ ಹಾಗೂ ಪುನೀತ ಇದ್ದರು.