*ಸಿದ್ದಾಪುರ ಮೇ ೨೩ : ವಾಲ್ನೂರು- ತ್ಯಾಗತ್ತೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಖಾಸಗಿ ವ್ಯಕ್ತಿಗಳ ವಶದಲ್ಲಿದ್ದ ೨೫ ಸೆಂಟ್ ಜಾಗವನ್ನು ಕಂದಾಯ ಇಲಾಖೆ ತನ್ನ ವಶಕ್ಕೆ ಪಡೆದಿದೆ.
ಗ್ರಾಮದ ಸರ್ವೆ ಸಂಖ್ಯೆ ೧೦೪/೧ ರಲ್ಲಿದ್ದ ೨೫ ಸೆಂಟ್ ಪೈಸಾರಿ ಜಾಗಕ್ಕೆ ಖಾಸಗಿ ವ್ಯಕ್ತಿಯೊಬ್ಬರು ಬೇಲಿ ನಿರ್ಮಿಸಿ ತಮ್ಮ ಅಧೀನದಲ್ಲಿಟ್ಟುಕೊಂಡಿದ್ದರು. ಇದಕ್ಕೆ ಗ್ರಾಮಸ್ಥರು ಹಾಗೂ ಮಹಿಳಾ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿ
(ಮೊದಲ ಪುಟದಿಂದ) ಕಂದಾಯ ಇಲಾಖೆಗೆ ದೂರು ನೀಡಿದ್ದರು. ಅಲ್ಲದೆ ಬೇಲಿಯನ್ನು ಮಹಿಳೆಯರೇ ಕಿತ್ತೆಸೆದಿದ್ದರು. ಆದರೆ ವ್ಯಕ್ತಿ ಮತ್ತೆ ಬೇಲಿ ನಿರ್ಮಿಸಿ ವಿವಾದ ಸೃಷ್ಟಿಯಾಗಿತ್ತು.
ಜಾಗದ ಸರ್ವೆ ಕಾರ್ಯಕ್ಕೆ ಗ್ರಾಮಸ್ಥರು ಒತ್ತಾಯಿಸಿದ ಹಿನ್ನೆಲೆ ಕುಶಾಲನಗರ ತಹಶೀಲ್ದಾರ್ ಪ್ರಕಾಶ್ ಸೂಚನೆ ಮೇರೆಗೆ ಕಂದಾಯ ನಿರೀಕ್ಷಕ ಸಂತೋಷ್ ಹಾಗೂ ಸರ್ವೆಯರ್ ಮಹೇಶ್ ಸರ್ವೆ ಕಾರ್ಯ ನಡೆಸಿದರು. ಈ ಸಂದರ್ಭ ೨೫ ಸೆಂಟ್ ಜಾಗ ಸರಕಾರಕ್ಕೆ ಸೇರಿದ್ದು ಎಂದು ಖಾತ್ರಿಯಾಗಿದೆ. ನಂತರ ಕಂದಾಯ ಅಧಿಕಾರಿಗಳು ಬೇಲಿ ನಿರ್ಮಿಸಿ ಜಾಗವನ್ನು ಇಲಾಖೆ ವಶಕ್ಕೆ ಪಡೆದರು.
ಗ್ರಾ.ಪಂ. ಅಧ್ಯಕ್ಷೆ ಬಿ.ಎಸ್. ಅನಿತಾ, ಉಪಾಧ್ಯಕ್ಷೆ ಪಿ.ಎಸ್. ಸುಧಾ, ಸದಸ್ಯ ಸತೀಶ್, ಗ್ರಾಮ ಲೆಕ್ಕಿಗ ಸಚಿನ್, ಅಭಿವೃದ್ಧಿ ಅಧಿಕಾರಿ ಲೋಕೇಶ್ ಮತ್ತಿತರರು ಹಾಜರಿದ್ದರು.