ಸಿದ್ದಾಪುರ, ಮೇ ೨೩: ನದಿ ತೀರದ ನಿವಾಸಿಗಳಿಗೆ ಕಂದಾಯ ಇಲಾಖೆಯ ವತಿಯಿಂದ ಮುಂಜಾಗ್ರತಾ ಕ್ರಮವಾಗಿ ನೋಟೀಸ್ ಜಾರಿ ಮಾಡಲಾಯಿತು. ಪ್ರವಾಹ ಪೀಡಿತ ಪ್ರದೇಶಗಳಾದ ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯ ಕರಡಿಗೋಡು ಹಾಗೂ ಗುಹ್ಯ ಗ್ರಾಮದ ನದಿ ತೀರದ ನೂರಾರು ಮನೆಗಳಿಗೆ ಕಂದಾಯ ಇಲಾಖಾಧಿಕಾರಿಗಳು ತೆರಳಿ ಮುಂಜಾಗ್ರತಾ ಕ್ರಮವಾಗಿ ಮಳೆಗಾಲದಲ್ಲಿ ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚನೆ ನೀಡಿದರು. ಅಮ್ಮತ್ತಿ ಹೋಬಳಿ ಕಂದಾಯ ಪರಿವೀಕ್ಷಕ ಅನಿಲ್‌ಕುಮಾರ್ ನೇತೃತ್ವದಲ್ಲಿ ಗ್ರಾಮಲೆಕ್ಕಿಗರಾದ ಓಮಪ್ಪ ಬಣಾಕರ್, ಮುತ್ತಪ್ಪ, ಗ್ರಾಮ ಸಹಾಯಕರಾದ ಕೃಷ್ಣನ್ ಕುಟ್ಟಿ, ಮಂಜು ಹಾಜರಿದ್ದರು.
ಸಿ.ಇ.ಓ. ಭೇಟಿ: ಪ್ರವಾಹ ಪೀಡಿತ ಪ್ರದೇಶಗಳಾದ ನೆಲ್ಯಹುದಿಕೇರಿ ಹಾಗೂ ಸಿದ್ದಾಪುರದ ಕರಡಿಗೋಡು ಗ್ರಾಮಕ್ಕೆ ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಂವರ್‌ಸಿAಗ್ ಮೀನಾ ಭೇಟಿ ನೀಡಿ ಪರಿಶೀಲಿಸಿದರು. ನಂತರ ಕಂದಾಯ ಇಲಾಖಾಧಿಕಾರಿಗಳ ಬಳಿ ಮಾಹಿತಿ ಪಡೆದುಕೊಂಡರು. ಇದಾದ ಬಳಿಕ ಗುಹ್ಯ ಗ್ರಾಮದಲ್ಲಿ ಒತ್ತುವರಿ ಮಾಡಿಕೊಂಡಿರುವ ಜಾಗಕ್ಕೆ ತೆರಳಿ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಿಕೊಡುವ ಬಗ್ಗೆ ಚರ್ಚಿಸಿದರು. ನಂತರ ಅರೆಕಾಡು ಬಳಿ ನೆಲ್ಯಹುದಿಕೇರಿ ಗ್ರಾಮದ ಸಂತ್ರಸ್ತರಿಗೆ ಪುನರ್ವಸತಿಗೆ ಗುರುತಿಸಿದ ಜಾಗವನ್ನು ಪರಿಶೀಲನೆ ಮಾಡಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧಿಕಾರಿಗಳು, ಕಂದಾಯ ಇಲಾಖಾಧಿಕಾರಿಗಳು ಹಾಜರಿದ್ದರು.